SN Subrahmanyan: ವಾರಕ್ಕೆ 90 ಗಂಟೆ ಕೆಲಸ, ಎಲ್&ಟಿ ಹೆಚ್‌ಆರ್ ಪೋಸ್ಟ್
ಬೆಂಗಳೂರು, ಜನವರಿ 14: ವಾರದಲ್ಲಿ 90 ಗಂಟೆ ಕೆಲಸ ಮಾಡಬೇಕು ಎಂದು ಹೇಳಿಕೆ ನೀಡಿ ಎಲ್ & ಟಿ ಅಧ್ಯಕ್ಷ ಎಸ್. ಎನ್. ಸುಬ್ರಹ್ಮಣ್ಯನ್ ಭಾರೀ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ. ಈ ಕುರಿತು ದೇಶಾದ್ಯಂತ ಚರ್ಚೆಗಳು ನಡೆಯುತ್ತಿದ್ದು, ವಿವಿಧ ಉದ್ಯಮಿಗಳು ಸಹ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಹೇಳಿಕೆ ಮುಂದಿಟ್ಟುಕೊಂಡು ಟೀಕೆಗಳನ್ನು ಮಾಡಲಾಗುತ್ತಿದೆ. ಟ್ರಾಲ್, ಮೀಮ್ಸ್‌ಗಳು ತುಂಬಿ ಹೋಗಿವೆ.
ತಮ್ಮ ಅಧ್ಯಕ್ಷರು ನೀಡಿರುವ ಹೇಳಿಕೆ ಕುರಿತು ಲಾರ್ಸೆನ್ & ಟೂಬ್ರೊ ಲಿಮಿಟೆಡ್ (ಎಲ್ & ಟಿ) ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಸೋನಿಕಾ ಮುರಳೀಧರನ್ ಸ್ಪಷ್ಟನೆಯನ್ನು ನೀಡಿದ್ದಾರೆ. ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಅವರು ಅಧ್ಯಕ್ಷರ ಹೇಳಿಕೆಯನ್ನು ಹೇಗೆ ತಪ್ಪಾಗಿ ಅರ್ಥೈಸಲಾಗಿದೆ ಎಂದು ವಿವರಣೆ ನೀಡಿದ್ದಾರೆ.

ಎಸ್. ಎನ್. ಸುಬ್ರಹ್ಮಣ್ಯನ್ ಅವರ ಹೇಳಿಕೆಯನ್ನು ಸಾಮಾನ್ಯವಾಗಿ ಅರ್ಥೈಸಬೇಕು. ಅದನ್ನು ಸರ್ವಾಧಿಕಾರಿ ಧೋರಣೆಯಲ್ಲಿ ನೋಡಬಾರದು. ಕಂಪನಿ ಮತ್ತು ವೈಯಕ್ತಿ ಬೆಳವಣಿಗೆಗೆ ಎಸ್. ಎನ್. ಸುಬ್ರಹ್ಮಣ್ಯನ್ ಅವರು ಹೇಗೆ ಪ್ರೋತ್ಸಾಹ ನೀಡುತ್ತಾರೆ, ಅವರ ನೀತಿಗಳು ಹೇಗಿವೆ? ಎಂದು ಸೋನಿಕಾ ಮುರಳೀಧರನ್ ವಿವರವಾದ ವಿವರಣೆಯನ್ನು ಕೊಟ್ಟಿದ್ದಾರೆ.
ಚರ್ಚೆಯ ಕುರಿತು ಅಸಮಾಧಾನ; ಸೋನಿಕಾ ಮುರಳೀಧರನ್ ಎಲ್ & ಟಿ ಅಧ್ಯಕ್ಷ ಎಸ್. ಎನ್. ಸುಬ್ರಹ್ಮಣ್ಯನ್ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ದಾರಿ ತಪ್ಪಿಸಲಾಗುತ್ತಿದೆ, ಅದನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಪೋಸ್ಟ್‌ನಲ್ಲಿ ವಿವರಣೆ ನೀಡಿದ್ದಾರೆ, ಈ ಕುರಿತು ನರಾತಾತ್ಮಕ ಚರ್ಚೆಗಳ ಬಗ್ಗೆ ಅವರು ಅಸಮಾಧಾನವನ್ನು ಹೊರಹಾಕಿದ್ದಾರೆ.
ಈ ಹೇಳಿಕೆಯನ್ನು ಎಸ್. ಎನ್. ಸುಬ್ರಹ್ಮಣ್ಯನ್ ಅವರು ಆಂತರಿಕ ಚರ್ಚೆಯ ಸಂದರ್ಭದಲ್ಲಿ ನೀಡಿದರು ಎಂದು ಸೋನಿಕಾ ಮುರಳೀಧರನ್ ಸ್ಪಷ್ಟಪಡಿಸಿದ್ದಾರೆ. 90 ಗಂಟೆ ಕೆಲಸ ಮಾಡಬೇಕು ಎಂದು ಅವರು ಎಂದಿಗೂ ಸಲಹೆ ನೀಡಿಲ್ಲ, ಇದನ್ನು ನೀತಿಯಾಗಿಯೂ ಜಾರಿಗೊಳಿಸಲು ಸೂಚನೆ ನೀಡಿಲ್ಲ ಎಂದು ಪೋಸ್ಟ್‌ನಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
ಸಾಮಾನ್ಯವಾಗಿ ಇಂತಹ ಹೇಳಿಕೆ ನೀಡಲಾಗಿದೆ. ಇದನ್ನು ಉದ್ಯೋಗಿಗಳ ಮೇಲೆ ಹೇರುವಂತೆ ಅವರು ತಿಳಿಸಿಲ್ಲ. ಎಸ್. ಎನ್. ಸುಬ್ರಹ್ಮಣ್ಯನ್ ಅವರ ಆಡಳಿತ ನೀತಿಯನ್ನು ಟೀಕಿಸಲು ಇಂತಹ ಹೇಳಿಕೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ, ಅವರು ಎಷ್ಟು ಉದ್ಯೋಗಿಗಳ ಪರ, ಅವರ ಬೆಳವಣಿಗೆಗೆ ಎಷ್ಟು ಅವಕಾಶ ನೀಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಪೋಸ್ಟ್‌ನಲ್ಲಿ ವಿವರಣೆ ಕೊಟ್ಟಿದ್ದಾರೆ.
ಸುಮಾರು 5 ವರ್ಷಗಳಿಂದ ಸೋನಿಕಾ ಮುರಳೀಧರನ್ ಎಸ್. ಎನ್. ಸುಬ್ರಹ್ಮಣ್ಯನ್ ಕಾರ್ಯ ವೈಖರಿಯನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ, ಅವರ ಜೊತೆ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಒಬ್ಬ ಸಮರ್ಥನಾಯಕನಾಗಿ ಅವರು ಹೇಗೆ ಮುನ್ನಡೆಯುತ್ತಿದ್ದಾರೆ ಎಂದು ತಿಳಿದಿದೆ ಎಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ.
ದೂರದೃಷ್ಟಿಉಳ್ಳ ಒಬ್ಬ ಸಮರ್ಥ ಆಡಳಿತಗಾರ ಎಸ್. ಎನ್. ಸುಬ್ರಹ್ಮಣ್ಯನ್ ಉದ್ಯೋಗಿಗಳನ್ನು ತಮ್ಮ ಕುಟುಂಬದ ಸದಸ್ಯರು ಎಂಬಂತೆ ನೋಡಿಕೊಳ್ಳುತ್ತಾರೆ. ಸಂಸ್ಥೆಯ ಉದ್ಯೋಗಿಗಳ ಜೊತೆ ಅವರು ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಜವಾಬ್ದಾರಿಯುತ ಸ್ಥಾನವನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದಕ್ಕೆ ಎಸ್. ಎನ್. ಸುಬ್ರಹ್ಮಣ್ಯನ್ ಅವರ ಕಾರ್ಯ ವೈಖರಿ ಮಾದರಿಯಾಗಿದೆ ಎಂದು ಸೋನಿಕಾ ಮುರಳೀಧರನ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಹೊಸ ಆಲೋಚನೆಯನ್ನು ಉತ್ತೇಜಿಸುವ, ಕೌಶಲ್ಯ ಅಭಿವೃದ್ಧಿಗೆ ಬೆಂಬಲಿಸುವ, ವೈಯಕ್ತಿಕ ಅಭಿವೃದ್ಧಿಗೆ ಪ್ರೋತ್ಸಾಹಿಸುವ ಪರಿಸರವನ್ನು ಎಸ್. ಎನ್. ಸುಬ್ರಹ್ಮಣ್ಯನ್ ನಿರ್ಮಾಣ ಮಾಡಿದ್ದಾರೆ. ಸದಾ ಉದ್ಯೋಗಿಗಳ ಜೊತೆ ಸಂವಹನ ನಡೆಸುವ ಅವರು ಸಲಹೆಗಳನ್ನು ನೀಡುತ್ತಾರೆ. ಯಾವುದೇ ರೀತಿಯ ನಕಾರಾತ್ಮಕ ಹೇಳಿಕೆಗಳನ್ನು ನೀಡುವ ಮೊದಲು ಎಸ್. ಎನ್. ಸುಬ್ರಹ್ಮಣ್ಯನ್ ಕಾರ್ಯ ವೈಖರಿ ಬಗ್ಗೆ ತಿಳಿದುಕೊಳ್ಳಿ ಎಂದು ಸಲಹೆಯನ್ನು ನೀಡಿದ್ದಾರೆ.












Click it and Unblock the Notifications