keyboard_backspace

ಕಲ್ಯಾಣ ಕರ್ನಾಟಕದಲ್ಲಿ 20 ವರ್ಷಗಳಿಂದ ಕಂಪಿಸುತ್ತಿದೆ ಭೂಮಿ: ಕಾರಣವೇನು?

Google Oneindia Kannada News

ಬೆಂಗಳೂರು, ಅ.13: ಕಲ್ಯಾಣ ಕರ್ನಾಟಕದಲ್ಲಿ ಭೂಮಿ ಕಂಪಿಸುತ್ತಿದೆ. ಅಲ್ಲಿನ ಜನರು ಧ್ವನಿ ಎತ್ತಿದ ಬಳಿಕ ಸರ್ಕಾರ ಎಚ್ಚೆತ್ತುಕೊಂಡು ಪರಿಹಾರ ನೀಡುವ ಬಗ್ಗೆ ಮತನಾಡಿದೆ. ಆದರೆ, ಭೂಮಿ ಈ ರೀತಿ ಕಂಪಿಸುತ್ತಿರುವುದು ಇದೇ ಮೊದಲಲ್ಲ. 20 ವರ್ಷಗಳಿಂದ ಜನ ಇದನ್ನು ಅನುಭವಿಸುತ್ತಲೇ ಬಂದಿದ್ದಾರೆ.

ಕಲಬುರ್ಗಿ ಜಿಲ್ಲೆಯ ವಿವಿಧೆಡೆ ಕಳೆದೊಂದು ವಾರದಿಂದ ನಿರಂತರವಾಗಿ ಭೂಮಿ ಕಂಪಿಸುತ್ತಿರುವುದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕರಣವನ್ನು ಸ್ವೀಕರಿಸಿ ಕಲಬುರ್ಗಿ ಜಿಲ್ಲೆಗಳ ಜಿಲ್ಲಾಡಳಿತ ಹಾಗೂ ಪ್ರಕೃತಿ ವಿಕೋಪ ನಿರ್ವಹಣೆ ಕೇಂದ್ರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಅಲ್ಲದೆ, ಚಿಂಚೋಳಿ ಹಾಗೂ ಸೇಡಂ ತಾಲ್ಲೂಕುಗಳಲ್ಲಿ ತುರ್ತಾಗಿ ಪರಿಹಾರ ಕೇಂದ್ರಗಳನ್ನು ಆರಂಭಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಕಲಬುರಗಿ; ಸಿದ್ದರಾಮಯ್ಯ ಸಭೆ ವೇಳೆ ಕಂಪಿಸಿದ ಭೂಮಿ! ಕಲಬುರಗಿ; ಸಿದ್ದರಾಮಯ್ಯ ಸಭೆ ವೇಳೆ ಕಂಪಿಸಿದ ಭೂಮಿ!

ಲಘು ಭೂಕಂಪನದಿಂದ ಕೆಲವು ಮನೆಗಳು ಬಿರುಕು ಬಿಟ್ಟು ಹಾನಿಗೀಡಾಗಿವೆ. ಹಾನಿಯ ಬಗ್ಗೆ ಕೂಡಲೇ ವರದಿ ನೀಡಬೇಕು. ಹಾನಿಗೀಡಾದ ಮನೆಗಳಿಗೆ ಕೂಡಲೇ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

In Kalyana Karnataka Vibrating Earth for 20 Years: What Causes It?

ಮುಖ್ಯಮಂತ್ರಿ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ವಸತಿ ಸಚಿವಿ ವಿ.ಸೋಮಣ್ಣ, ಆಹಾರ ಮತ್ತು ನಾಗರಿಕ ಪೂರೈಕ ಸಚಿವ ಕೆ. ಗೋಪಾಲಯ್ಯ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹಾಗೂ ಯೋಜನಾ ಸಚಿವ ಮುನಿರತ್ನ ಅವರರಗಳು ಪಾಲ್ಗೊಂಡಿದ್ದರು. ಆಯಾ ಇಲಾಖೆಗೆ ಸಂಬಂಧಿಸಿದಂತೆ ಏನೇನು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಪರಿಶೀಲಿಸಿ ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಿದ್ದಾರೆ.

ಗ್ರಾಮ ತೊರೆಯುತ್ತಿರುವ ಜನರು:

ಚಿಂಚೋಳಿ ತಾಲ್ಲೂಕಿನ ವಿವಿಧೆಡೆ ನಿರಂತರವಾಗಿ ಭೂಮಿ ಕಂಪಿಸುತ್ತಿರುವುದರಿಂದ ಜನರು ಗ್ರಾಮಗಳನ್ನು ತೊರೆಯುತ್ತಿದ್ದಾರೆ. ರಾಜ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರದ ಶಿರಸಣಗಿ ಕೇಂದ್ರದ ಮಾಹಿತಿ ಪ್ರಕಾರ ಮಂಗಳವಾರ (ಅ.12) ಚಿಂಚೋಳಿ, ಕಾಳಗಿ, ಸೇಡಂ ಹಾಗೂ ಕಮಲಾಪುರ ತಾಲ್ಲೂಕುಗಳ ವಿವಿಧೆಡೆ ಒಂದು ವಾರದಲ್ಲಿ ಏಳು ಬಾರಿ ಭೂಮಿ ಕಂಪಿಸಿದೆ. ಹೀಗಾಗಿ ಗಡಿಕೇಶ್ವಾರ, ರದ್ನೂರು, ರಾಯಕೋಡ, ಕುಪನೂರು, ಬೆನಕನಹಳ್ಳಿ ಹೀಗೆ ಹಲವು ಗ್ರಾಮಗಳ ಜನರು ಭೂಕಂಪನದಿಂದ ಮನೆ ಕುಸಿಯಬಹುದು ಎಂದು ಮನೆಯಲ್ಲಿ ಇರಲು ಭಯಭೀತರಾಗಿದ್ದಾರೆ. ಮನೆಯಿಂದ ದೂರದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಜೀವನಸಾಗಿಸುತ್ತಿದ್ದಾರೆ. ಕೆಲವರು ಗ್ರಾಮಗಳನ್ನು ತೊರೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದು ಮೊದಲಲ್ಲ:

ಕಲಬುರ್ಗಿ ತಾಲ್ಲೂಕಿನ ಚಿಂಚೋಳಿ, ಸೇಡಂ ಹಾಗೂ ಆಲಮಟ್ಟಿ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಲ್ಲಿ ಭೂಮಿ ಕಂಪಿಸುತ್ತಿರುವುದು ಇದೇ ಮೊದಲೇನಲ್ಲ. ಪ್ರತಿ ವರ್ಷವೂ ಸಹ ಮಳೆಗಾಲ ಕಳೆದ ನಂತರ ಭೂಮಿ ನಡುಗುವುದು ಇದ್ದೇ ಇರುತ್ತದೆ. ಎಷ್ಟೋ ಬಾರಿ ಅದು ಜನರ ಗಮನಕ್ಕೆ ಬಾರದೆ ನಡೆಯುತ್ತಲೇ ಇರುತ್ತದೆ. ಕಂಪನದ ತೀವ್ರತೆ ಹೆಚ್ಚಾದಾಗ ಭೂಕಂಪ ಆಗಿರಬೇಕು ಎಂದು ಜನ ಬೆಚ್ಚಿಬೀಳುತ್ತಾರೆ.

2001ರಲ್ಲಿ ಇದೇ ರೀತಿ ಭೂಮಿ ಕಂಪಿಸಿದ ಬಗ್ಗೆ ಅಲ್ಲಿನ ಜನರು ಭಯಭೀತರಾದಾಗ ಸರ್ಕಾರಕ್ಕೂ ಏನು ಮಾಡಬೇಕು ಎಂದು ತೋಚಲಿಲ್ಲ. ಈಗಿನಂತಹ ಆಧುನಿಕ ವ್ಯವಸ್ಥೆಗಳೂ ಸಹ ಆಗ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಅಂದಿನ ಎಸ್.ಎಂ. ಕೃಷ್ಣ ಸರ್ಕಾರ ಅಂದಿನ ಬರ ನಿರ್ವಹಣಾ ಕೇಂದ್ರ (ಇಂದಿನ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ) ಮುಖ್ಯಸ್ಥರಾಗಿದ್ದ ವಿ.ಎಸ್. ಪ್ರಕಾಶ್ ಅವರಿಗೆ ಜವಾಬ್ದಾರಿ ನೀಡಿತು. ಬಳಿಕ ಪ್ರಕಾಶ್ ಅವರು ಕಲಬುರ್ಗಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ವೈಜ್ಞಾನಿಕ ಅಧ್ಯಯನ ನಡೆಸಿ ಸರ್ಕಾರಕ್ಕೆ ಆಗಿನ ಕಾರಣಗಳು, ಪರಿಹಾರಗಳನ್ನು ಸೂಚಿಸಿದ್ದರು. ಅಲ್ಲದೆ, ದೂರದೃಷ್ಟಿ ಆಲೋಚನೆಯಿಂದ ಮುಂದೆ ಸಂಭವಿಸಬಹುದಾದ ವಿಕೋಪಗಳ ಮುನ್ಸೂಚನೆ ಮತ್ತು ತೀವ್ತತೆಯನ್ನು ತಿಳಿಯಲು ಅತ್ಯಾಧುನಿಕ ಭೂಕಂಪ ಮಾಪನ ಕೇಂದ್ರ ಅಳವಡಿಸಿದರು. ಈ ವೈಜ್ಞಾನಿಕ ಸಹಾಯದಿಂದಲೇ ಈ ಜಿಲ್ಲೆಗಳಲ್ಲಿ ಇಂದಿನ ಅವಘಡಗಳ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗುತ್ತಿದೆ.

In Kalyana Karnataka Vibrating Earth for 20 Years: What Causes It?

ಭೂಮಿ ಕಂಪನಕ್ಕೆ ಕಾರಣವೇನು? ಎಂಬುದರ ಬಗ್ಗೆ ವಿ.ಎಸ್. ಪ್ರಕಾಶ್ ಅವರು 'ಒನ್ ಇಂಡಿಯಾ ಕನ್ನಡ' ಜೊತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

"ಅದು 2011ನೇ ಇಸ್ವಿ. ಚಿಂಚೋಳಿ ತಾಲ್ಲೂಕಿನ ಹಸರಗುಂಡಿಗೆ ಎಂಬ ಗ್ರಾಮದಲ್ಲಿ ಭೂಕಂಪನದಿಂದ ಜನರು ತೀವ್ರವಾಗಿ ಆತಂಕಗೊಂಡಿದ್ದರು. ಸರ್ಕಾರ ನನ್ನನ್ನು ಅಲ್ಲಿಗೆ ಕಳುಹಿಸಿತು. ಆಗಿನ ಸರ್ಕಾರ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಕ್ಯಾಬಿನೆಟ್ ಉಪಸಮಿತಿಯನ್ನು ರಚಿಸಿತ್ತು. ಭೂಮಿ ನಡುಗಿದ್ದರಿಂದ ಹಲವು ಮನೆಗಳು ಕುಸಿದಿದ್ದವು. ಪ್ರತಿ ಮನೆಮನೆಗೂ ಹೋಗಿ ತಿಳಿವಳಿಕೆ ನೀಡಿ ಅವರು ಮನೆ ಬಿಟ್ಟು ಸರ್ಕಾರ ನಿರ್ಮಿಸಿದ್ದ ತಾತ್ಕಾಲಿಕ ಶೆಡ್‌ಗಳಲ್ಲಿ ಇರುವಂತೆ ಮನವೊಲಿಕೆ ಮಾಡಲಾಗಿತ್ತು. ಮಹಾರಾಷ್ಟ್ರದ ಲಾತೂರ್‌ನಲ್ಲಿ 1993ರಲ್ಲಿ ಸಂಭವಿಸಿದ್ದ ಭಾರಿ ಭೂಕಂಪನದ ಚಿತ್ರಣ ಜನರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿತ್ತು. ಸರ್ಕಾರದ ನೆರವಿನಿಂದ ಸಂತ್ರಸ್ತರಿಗೆ ಆ ಸಂದರ್ಭದಲ್ಲಿ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಯಿತು'' ಎಂದು ನೆನಪಿಸಿಕೊಂಡರು.

ವೈಜ್ಞಾನಿಕ ಕಾರಣವಿತ್ತು

"ಕಲಬುರ್ಗಿ ಮತ್ತು ಬೀದರ್ ಜಿಲ್ಲೆಯ ಕೆಲವು ಕಡೆಗಳಲ್ಲಿ ನಿರಂತರವಾಗಿ ಭೂಮಿ ಕಂಪಿಸುವುದಕ್ಕೆ ವೈಜ್ಞಾನಿಕ ಕಾರಣಗಳೇನು ಎಂಬುದರ ಬಗ್ಗೆಯೂ ಆ ಸಂದರ್ಭದಲ್ಲಿ ವಿಶ್ಲೇಷಣೆ ಮಾಡಲಾಯಿತು. ಈ ಜಿಲ್ಲೆಗಳ ಭೂಗರ್ಭದಲ್ಲಿ ಸುಣ್ಣದ ಶಿಲೆಗಳಿವೆ. ಕರ್ನಾಟಕದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆಯಾದಾಗ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಗೆ ಸಾಕಷ್ಟು ನೀರು ಹರಿದು ಬರುತ್ತದೆ. ಅಲ್ಲದೆ, ಈ ಭಾಗದಲ್ಲಿ ಕೆನಾಲ್ ನೀರಾವರಿ ವ್ಯವಸ್ಥೆಯೂ ಸಾಕಷ್ಟು ಪ್ರಮಾಣದಲ್ಲಿದೆ. ನೀರು ಇಂಗಿ ಹೆಚ್ಚಿನ ಪ್ರಮಾಣದಲ್ಲಿ ಭೂಮಿಯೊಳಗೆ ಹೋದಾಗ ಸುಣ್ಣದ ಶಿಲೆಗಳು ಅರಳಿ ಸ್ವಲ್ಪ ಮಟ್ಟಿನ ಕಂಪನ ಉಂಟುಮಾಡುತ್ತವೆ. ಇದು ಭೂಮಿ ನಡುಗಿದಂತಾಗಿ ಜನರು ಭಯಬೀಳಲು ಕಾರಣವಾಗುತ್ತಿದೆ ಎಂಬ ಸತ್ಯವನ್ನು ಆಗ ಕಂಡುಕೊಳ್ಳಲಾಯಿತು" ಎಂದು ಪ್ರಕಾಶ್ ವಿವರಿಸಿದರು.

"ಇದು ನಿರಂತರ ಪ್ರಕ್ರಿಯೆ ಆಗಿದ್ದರಿಂದ ಈ ಜಿಲ್ಲೆಗಳ ವ್ಯಾಪ್ತಿಯಲ್ಲಿ ವೈಜ್ಞಾನಿಕ ಕೇಂದ್ರವೊಂದನ್ನು ಸ್ಥಾಪನೆ ಮಾಡುವ ಅಗತ್ಯದ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಲಾಯಿತು. ರಾಜ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರದ ಮೂಲಕ ಕಲಬುರ್ಗಿ ಜಿಲ್ಲೆಯ ಶರಣಶಿರಸಗಿಯಲ್ಲಿ ಅತ್ಯಾಧುನಿಕ ಭೂಕಂಪ ಮಾಪನ ಕೇಂದ್ರ ಸ್ಥಾಪಿಸಲಾಯಿತು" ಎಂದು ಹೇಳಿದರು.

ಕಳೆದ ಒಂದು ವಾರದಿಂದ ಕಲಬುರ್ಗಿ ತಾಲ್ಲೂಕಿನ ಗ್ರಾಮಗಳಲ್ಲಿ ಭೂಮಿ ಕಂಪಿಸುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಇದಕ್ಕೂ ಇದೇ ಕಾರಣವೇ ಆಥವಾ ಬೇರೆ ಏನಾದರೂ ಇದೆಯೇ ಎಂಬುದನ್ನು ಅಧ್ಯಯನ ಮಾಡಿ ಅಲ್ಲಿನ ಜನರಿಗೆ ನೆಮ್ಮದಿ ಕಲ್ಪಿಸಬೇಕು ಎಂದು ಪ್ರಕಾಶ್ ಹೇಳಿದರು.

English summary
In Kalyana Karnataka Vibrating Earth for 20 Years: What Causes It?
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X