Narasimha Jayanti: ನರಸಿಂಹ ಜಯಂತಿ ಯಾವತ್ತು? ದಿನಾಂಕ, ಮಹತ್ವದ ವಿವರ ಇಲ್ಲಿದೆ

ವೈದಿಕ ಪಂಚಾಂಗದ ಪ್ರಕಾರ, ನರಸಿಂಹ ಜಯಂತಿಯನ್ನು ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ.
ಈ ದಿನವು ವಿಷ್ಣುವಿನ ಉಗ್ರ ಮತ್ತು ರಕ್ಷಣಾತ್ಮಕ ಅವತಾರವಾದ ನರಸಿಂಹನಿಗೆ ಸಮರ್ಪಿತವಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಭಗವಾನ್ ನರಸಿಂಹನನ್ನು ಪೂಜಿಸುವುದರಿಂದ ಭಯದಿಂದ ಮುಕ್ತಿ ಸಿಗುತ್ತದೆ. ಶತ್ರುಗಳ ಮೇಲೆ ಗೆಲುವು ಸಾಧಿಸುವುದು ಸಾಧ್ಯವಾಗುತ್ತದೆ. ನಕಾರಾತ್ಮಕ ಶಕ್ತಿಗಳ ವಿರುದ್ಧ ರಕ್ಷಣೆ ದೊರೆಯುತ್ತದೆ. ಇದಲ್ಲದೆ, ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ನೆಲೆಯಾಗುತ್ತದೆ ಎನ್ನಲಾಗಿದೆ.

ನರಸಿಂಹ ಜಯಂತಿ 2026 ಯಾವಾಗ?

ವೈಶಾಖ ಮಾಸದ ಶುಕ್ಲ ಪಕ್ಷದ ಚತುರ್ದಶಿ ತಿಥಿ ಏಪ್ರಿಲ್ 29, ಸಂಜೆ 7:51 ಕ್ಕೆ ಆರಂಭವಾಗುತ್ತದೆ.

ಚತುರ್ದಶಿ ತಿಥಿಯು ಏಪ್ರಿಲ್ 30, ರಾತ್ರಿ 9:12 ಕ್ಕೆ ಕೊನೆಯಾಗುತ್ತದೆ.
ಉದಯ ತಿಥಿ ಆಧರಿಸಿ, ನರಸಿಂಹ ಜಯಂತಿ ಹಬ್ಬವನ್ನು ಏಪ್ರಿಲ್ ಆಚರಿಸಲಾಗುತ್ತದೆ.

Narasimha Jayanti

ಪೂಜೆಗೆ ಶುಭ ಸಮಯ

ಏಪ್ರಿಲ್ 30, ಸಂಜೆ 4:17 ರಿಂದ 6:56 ರವರೆಗೆ.

ಭಕ್ತ ಪ್ರಹ್ಲಾದನ ಕತೆ

ರಾಕ್ಷಸ ಹಿರಣ್ಯಕಶಿಪು ಬಹಳ ಶಕ್ತಿಶಾಲಿಯಾಗಿದ್ದನು.ವಿಷ್ಣು ವರಾಹ ಅವತಾರದಲ್ಲಿ ತನ್ನ ಕಿರಿಯ ಸಹೋದರ ಹಿರಣ್ಯಾಕ್ಷನನ್ನು ಕೊಂದ ನಂತರ ವಿಷ್ಣುವಿನ ಮೇಲಿನ ಅವನ ದ್ವೇಷ ತೀವ್ರಗೊಳ್ಳುತ್ತದೆ. ತಾನು ಸಾವನ್ನೇ ಜಯಿಸುವ ಮೂಲಕ ವಿಷ್ನುವನ್ನು ಸೋಲಿಸಿ ನಾಲ್ಕು ಲೋಕಕ್ಕೂ ತಾನೇ ಅಧಿಪತಿಯಾಗಬೇಕೆನ್ನುವ ಹಠಕ್ಕೆ ಬೀಳುತ್ತಾನೆ.ಇದಕ್ಕಾಗಿ ಹಿರಣ್ಯಕಶಿಪು ಕಠಿಣ ತಪಸ್ಸನ್ನು ಕೈಗೊಳ್ಳುತ್ತಾನೆ. ಸುಡುವ ಬಿಸಿಲು, ಕೊರೆಯುವ ಚಳಿ ಮತ್ತು ನಿರಂತರ ಬಿರುಗಾಳಿಗಳನ್ನು ಸಹಿಸಿಕೊಂಡು ಒಂದೇ ಸಮನೆ ತಪ್ಪಸ್ಸಿನಲ್ಲಿ ನಿರತನಾಗುತ್ತಾನೆ.ತಪ್ಪಸ್ಸಿನ ಫಲವಾಗಿ ಬ್ರಹ್ಮನು ಪ್ರತ್ಯಕ್ಷನಾಗಿ ವರ ನೀಡುತ್ತಾನೆ.

ಬ್ರಹ್ಮನಿಂದ ವರ ಪಡೆದ ಹಿರಣ್ಯಕಶಿಪು ತಾನು ದೇವರೆಂದು ಘೋಷಿಸಿಕೊಳ್ಳುತ್ತಾನೆ. ಎಲ್ಲರೂ ತನ್ನನ್ನೇ ಪೂಜಿಸಬೇಕು ಎಂದು ಆಜ್ಞೆ ಮಾಡುತ್ತಾನೆ. ವಿಷ್ಣುವಿನ ಪೂಜೆಯನ್ನು ನಿಷೇಧಿಸುತ್ತಾನೆ. ಎಲ್ಲಾ ದೇವಾಲಯಗಳನ್ನೂ ನಾಶಪಡಿಸುತ್ತಾನೆ. ಋಷಿಮುನಿಗಳನ್ನು ಹಿಂಸಿಸುತ್ತಾನೆ.

ಆದರೆ ತನ್ನ ತಂದೆಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿ, ಪ್ರಹ್ಲಾದನು ಭಕ್ತಿಯ ಸಂಕೇತವಾಗಿ ಹೊರಹೊಮ್ಮುತ್ತಾನೆ. ತಾಯಿ ಕಾಯಧುವಿನ ಗರ್ಭದಲ್ಲಿರುವಾಗಲೇ, ಪ್ರಹ್ಲಾದನು ಮುನಿ ನಾರದರಿಂದ ದೈವಿಕ ಬೋಧನೆಗಳನ್ನು ಆಲಿಸುತ್ತಾನೆ. ನಾರಾಯಣನ ಮಹಿಮೆ ತಿಳಿಯುತ್ತಾನೆ.
ಹೀಗಾಗಿ, ಪ್ರಹ್ಲಾದನು ವಿಷ್ಣುವಿನ ಮೇಲಿನ ಸಹಜ ಪ್ರೀತಿಯೊಂದಿಗೆ ಜನಿಸಿದವನು. ಹೆಜ್ಜೆ ಹೆಜ್ಜೆಗೂ ಹರಿನಾಮ ಸ್ತುತಿಸುತ್ತಿದ್ದವನು.

ತನ್ನ ಮಗನೇ ತನ್ನನ್ನು ಪೂಜಿಸಲು ನಿರಾಕರಿಸಿ ವಿಷ್ಣುವನ್ನು ಸ್ತುತಿಸುತ್ತಿದ್ದಾನೆ ಎನ್ನುವ ಸತ್ಯವನ್ನು ಅರಗಿಸಿಕೊಳ್ಳುವುದು ಹಿರಣ್ಯಕಶಿಪುವಿಗೆ ಸಾಧ್ಯವಾಗುವುದಿಲ್ಲ. ಪ್ರಹ್ಲಾದನಿಗೆ ಸಹಿಸಲು ಸಾಧ್ಯವಾಗದಷ್ಟು ಹಿಂಸೆ ನೀಡುತ್ತಾನೆ. ಪ್ರಹ್ಲಾದನಿಗೆ ವಿಷಪ್ರಾಶನ ಮಾಡಲಾಗುತ್ತದೆ. ಆನೆಗಳಿಂದ ತುಳಿಸಲಾಗುತ್ತದೆ. ಹಾವುಗಳನ್ನು ಹರಿ ಬಿಡಲಾಗುತ್ತದೆ. ಪ್ರಹ್ಲಾದನ ಮೇಲೆ ಬಂಡೆಗಳನ್ನು ಎಸೆಯಲಾಗುತ್ತದೆ. ಉರಿಯುತ್ತಿರುವ ಬೆಂಕಿಯಲ್ಲಿ ಪ್ರಹ್ಲಾದನನ್ನು ಕೂರಿಸಲಾಗುತ್ತದೆ. ಪ್ರತಿ ಬಾರಿಯೂ ವಿಷ್ಣುವಿನ ಅದೃಶ್ಯ ಕೃಪೆಯಿಂದ ಪ್ರಹ್ಲಾದ ಬದುಕಿ ಬರುತ್ತಾನೆ.

ಒಂದು ಬಾರಿ ಹಿರಣ್ಯಕಶಿಪು ತನ್ನ ಮಗನ ನಂಬಿಕೆಯನ್ನು ಅಣಕಿಸಲು ಮುಂದಾಗುತ್ತಾನೆ. ವಿಷ್ಣು ಎಲ್ಲಿದ್ದಾನೆ ತೋರಿಸು ಎಂದು ಪದೇ ಪದೇ ಕೇಳುತ್ತಾನೆ. ಈ ಪ್ರಶ್ನೆಗೆ ಪ್ರಹ್ಲಾದನು ಪ್ರಶಾಂತವಾಗಿ ದೃಢನಿಶ್ಚಯದಿಂದ ಉತ್ತರಿಸುತ್ತಾನೆ. ಭಗವಂತ ಎಲ್ಲೆಡೆ ಇದ್ದಾನೆ. ಪ್ರತಿಯೊಂದು ಪರಮಾಣುವಿನಲ್ಲಿ ಇದ್ದಾನೆ. ಅರಮನೆಯ ಪ್ರತಿಯೊಂದು ಸ್ತಂಭದಲ್ಲಿಯೂ ಇದ್ದಾನೆ ಎಂದು ಉತ್ತರಿಸುತ್ತಾನೆ. ಇದರಿಂದ ಕೆರಳಿ ಕೆಂಡವಾದ ಹಿರಣ್ಯ ಕಶ್ಯಪು ಅರಮನೆಯ ಕಂಬದ ಮೇಲೆ ಗದಾ ಪ್ರಹಾರ ಮಾಡುತ್ತಾನೆ. ಆಗಲೇ ವಿಷ್ಣು ನರಸಿಂಹನ ಅವತಾರದಲ್ಲಿ ಹೊರ ಬರುತ್ತಾನೆ. ಹಿರಣ್ಯಕಶಿಪುವಿನ ಅಂತ್ಯವಾಗುತ್ತದೆ.

ನರಸಿಂಹ ಅವತಾರದ ಮಹತ್ವ

ನರಸಿಂಹ ಅವತಾರವು ಯಾವುದೇ ಶಕ್ತಿಯು ಎಷ್ಟೇ ಶಕ್ತಿಶಾಲಿಯಾಗಿದ್ದರೂ ದೈವಿಕ ನ್ಯಾಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಸಾರಿ ಹೇಳುತ್ತದೆ.ದುಷ್ಟತನ ಸ್ವಲ್ಪ ಸಮಯದವರೆಗೆ ಮಾತ್ರ ಮೆರೆಯಬಹುದು. ಕೊನೆಗೆ ಸತ್ಯಕ್ಕೆ ಜಯ ಸಿಗುವುದು. ಧರ್ಮವೇ ಮೇಲುಗೈ ಸಾಧಿಸುವುದು ಎನ್ನುವುದನ್ನು ಸಾರಿ ಹೇಳುತ್ತದೆ.

ಕರ್ನಾಟಕದ ಪ್ರಮುಖ ನರಸಿಂಹ ದೇವಾಲಯಗಳು

1. ಯೋಗ ನರಸಿಂಹ ದೇವಾಲಯ, ಮೇಲುಕೋಟೆ: ಈ ದೇವಾಲಯ ಮಂಡ್ಯ ಜಿಲ್ಲೆಯಲ್ಲಿದ್ದು, 1000 ವರ್ಷಗಳಷ್ಟು ಹಳೆಯದಾಗಿದೆ. ಈ ದೇವಸ್ಥಾನವು ಬೆಟ್ಟದ ಮೇಲಿದೆ.

2. ಗುಂಜಾ ನರಸಿಂಹಸ್ವಾಮಿ ದೇವಾಲಯ, ಟಿ. ನರಸೀಪುರ: ಈ ದೇವಾಲಯ ಮೈಸೂರು ಜಿಲ್ಲೆಯ ಕಪಿಲಾ ನದಿಯ ದಡದಲ್ಲಿದೆ. ಈ ದೇವಾಲಯ ತನ್ನ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ.

3. ಉಗ್ರ ನರಸಿಂಹ ದೇವಾಲಯ, ಮದ್ದೂರು: ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿರುವ ಉಗ್ರ ನರಸಿಂಹ ದೇವಾಲಯದಲ್ಲಿರುವ ನರಸಿಂಹ ವಿಗ್ರಹ ಅತಿ ದೊಡ್ಡ ವಿಗ್ರಹ ಎನ್ನುವ ಪ್ರಸಿದ್ದಿ ಪಡೆದಿದೆ.

4. ನರಸಿಂಹ ಜರ್ನ ದೇವಾಲಯ, ಬೀದರ್: ಗುಹೆಯೊಳಗೆ ನೀರಿನಲ್ಲಿ ನೆಲೆಸಿರುವ ಈ ದೇವಸ್ಥಾನವು ವಿಶಿಷ್ಟ ಅನುಭವವನ್ನು ನೀಡುತ್ತದೆ.

5. ಭೋಗ ಮತ್ತು ಯೋಗ ನರಸಿಂಹ ದೇವಾಲಯ, ದೇವನದುರ್ಗ: ತುಮಕೂರು ಜಿಲ್ಲೆಯಲ್ಲಿರುವ ದ್ದು, ದಟ್ಟ ಅರಣ್ಯದ ನಡುವೆ ಇರುವ ಸುಂದರ ಕ್ಷೇತ್ರ.

6. ಲಕ್ಷ್ಮೀ ನರಸಿಂಹ ದೇವಾಲಯ, ನುಗ್ಗೇಹಳ್ಳಿ: ಹಾಸನ ಜಿಲ್ಲೆಯಲ್ಲಿದ್ದು, ಹೊಯ್ಸಳ ಶೈಲಿಯ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ.

7. ಶ್ರೀ ಗುರುವ ನರಸಿಂಹ ದೇವಾಲಯ, ಸಾಲಿಗ್ರಾಮ: ಉಡುಪಿ ಜಿಲ್ಲೆಯಲ್ಲಿದ್ದು, ಇದು ಪುರಾತನ ಕ್ಷೇತ್ರವಾಗಿದೆ.

8. ಕುರುಮಗಡ ನರಸಿಂಹ ದೇವಸ್ಥಾನ, ಕಾರವಾರ: ಕರಾವಳಿಯ ವಿಶಿಷ್ಟ ದ್ವೀಪ ದೇವಸ್ಥಾನ ಇದಾಗಿದೆ.

ನರಸಿಂಹ ಜಯಂತಿ ಪೂಜಾ ವಿಧಾನ

* ಪೂಜಾ ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಪವಿತ್ರಗೊಳಿಸಿ.

* ಸ್ವಚ್ಛವಾದ ಮರದ ಆಸನದ ಮೇಲೆ ಕೆಂಪು ಅಥವಾ ಹಳದಿ ಬಟ್ಟೆಯನ್ನು ಹರಡಿ ಅದರ ಮೇಲೆನರಸಿಂಹ ದೇವರ ವಿಗ್ರಹ ಅಥವಾ ಚಿತ್ರವನ್ನು ಇಡಿ.

* ಸಂಕಲ್ಪ ಮಾಡುವ ಮೂಲಕ ಉಪವಾಸ ಪೂಜೆಯನ್ನು ಪ್ರಾರಂಭಿಸಿ.

* ಭಗವಂತನ ಮುಂದೆ ತುಪ್ಪದ ದೀಪ ಮತ್ತು ಧೂಪದ್ರವ್ಯವನ್ನು ಬೆಳಗಿಸಿ.

* ಹೂವು, ಅಕ್ಷತೆ, ತುಳಸಿ ಎಲೆಗಳನ್ನು ಭಗವಾನ್ ನರಸಿಂಹನಿಗೆ ಅರ್ಪಿಸಿ.

* ನಂತರ, "ಓಂ ನಮೋ ಭಗವತೇ ನರಸಿಂಹಾಯ" ಎಂಬ ಮಂತ್ರವನ್ನು ಭಕ್ತಿಯಿಂದ ಪಠಿಸಿ.

* ಭಗವಂತನಿಗೆ ಹಣ್ಣುಗಳು, ಸಿಹಿತಿಂಡಿಗಳು ನೈವೇದ್ಯ ಅರ್ಪಿಸಿ.

* ದಿನವಿಡೀ ಭಕ್ತಿಯಿಂದ ಉಪವಾಸವನ್ನು ಆಚರಿಸಿ ಸಂಜೆ ಪೂಜೆಯ ನಂತರ ಪ್ರಸಾದ ಸ್ವೀಕಾರದೊಂದಿಗೆ ಉಪವಾಸ ಬಿಡಬಹುದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+