Mysuru Dasara 2023: ಜಂಬೂಸವಾರಿಯಲ್ಲಿ ಹೆಜ್ಜೆ ಹಾಕುವ 9 ಆನೆಗಳ ಪಟ್ಟಿ ಹೀಗಿದೆ, ವಿವರ ಇಲ್ಲಿದೆ
ಮೈಸೂರು, ಆಗಸ್ಟ್, 09: ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದ್ದು, ಇದೀಗ ಅರಣ್ಯ ಇಲಾಖೆ ಜಂಬೂಸವಾರಿಯಲ್ಲಿ ಹೆಜ್ಜೆ ಹಾಕುವ 9 ಆನೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಸೌರಭ್ ಕುಮಾರ್ ಅವರು ವಿವಿಧ ಆನೆ ಶಿಬಿರಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿ ದಸರಾ ಆನೆಗಳ ವಿವರಗಳನ್ನು ಕಲೆ ಹಾಕಿದ್ದರು. ಇದೀಗ ಉನ್ನತ ಅಧಿಕಾರಿಗಳು ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಯಾವೆಲ್ಲಾ ಆನೆಗಳ ಆಗಮನ?
ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರದಿಂದ ಅಭಿಮನ್ಯು, ಭೀಮ, ಮಹೇಂದ್ರ, ಬಳ್ಳೆ ಶಿಬಿರದಿಂದ ಅರ್ಜುನ, ದುಬಾರೆ ಶಿಬಿರದಿಂದ ಧನಂಜಯ, ವಿಜಯ, ಗೋಪಿ, ರಾಮಪುರ ಶಿಬಿರದಿಂದ ಪಾರ್ಥ ಸಾರಥಿ, ಭೀಮನಕಟ್ಟೆ ಶಿಬಿರದಿಂದ ವರಲಕ್ಷ್ಮಿ ಆನೆಗಳು ಆಗಮಿಸುತ್ತಿವೆ. ಕ್ಯಾಪ್ಟನ್ ಅಭಿಮನ್ಯು ಜೊತೆ ಹಿರಿಯ, ಕಿರಿಯ ಹಾಗೂ ಎರಡು ಹೆಣ್ಣಾನೆಗಳು ಭಾಗಿಯಾಗಲಿವೆ. ಎರಡನೇ ಹಂತದಲ್ಲಿ ಮತ್ತೆ 5 ಆನೆಗಳು ಬರಲಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮೈಸೂರು ದಸರಾ ಮಹೋತ್ಸವದ ಗಜಪಯಣ ಸೆಪ್ಟೆಂಬರ್ 1ರಂದು ನಡೆಯಲಿದ್ದು, ನಾಗರಹೊಳೆಯ ಹೆಬ್ಬಾಗಿಲು ವೀರನ ಹೊಸಳ್ಳಿಯಲ್ಲಿ ಚಾಲನೆ ಸಿಗಲಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ನೇತೃತ್ವದಲ್ಲಿ ಇತ್ತೀಚಿಗೆ ಬೆಂಗಳೂರಿನಲ್ಲಿ ದಸರಾ ಉನ್ನತಮಟ್ಟದ ಸಭೆ ನಡೆದಿತ್ತು. ಸಭೆಯಲ್ಲಿ ಅದ್ಧೂರಿ ದಸರಾ ಆಚರಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಸದ್ಯ ಮೈಸೂರು ಜಿಲ್ಲಾಡಳಿತ ದಸರಾ ಮಹೋತ್ಸವಕ್ಕೆ ಸಿದ್ಧತೆ ಕೈಗೊಳ್ಳುತ್ತಿದ್ದು, ಮೊದಲ ಹಂತವಾಗಿ ಅರಣ್ಯ ಇಲಾಖೆ ಜಂಬೂಸವಾರಿಯಲ್ಲಿ ಭಾಗವಹಿಸುವ 9 ಆನೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪ್ರೆಗ್ನೆನ್ಸಿ ಟೆಸ್ಟ್ ಕಡ್ಡಾಯ
ಕಳೆದ ವರ್ಷ ದಸರಾ ಮಹೋತ್ಸವದಲ್ಲಿ ಗರ್ಭಿಣಿ ಆನೆ ತಂದು ತಾಲೀಮಿಗೆ ಬಳಸಿಕೊಂಡಿದ್ದು ವನ್ಯಜೀವಿ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಲಕ್ಷ್ಮಿ ಎಂಬ ಹೆಸರಿನ ಆನೆಯು ಅರಮನೆ ಅಂಗಳದಲ್ಲೇ ಗಂಡು ಮರಿಗೆ ಜನ್ಮ ನೀಡಿತ್ತು. ಇದರಿಂದ ಅರಣ್ಯ ಇಲಾಖೆ ಮುಜುಗರ ಅನುಭವಿಸಿತ್ತು.
ಹಾಗಾಗಿ ಈ ಬಾರಿ ಆನೆಗಳ ಆರೋಗ್ಯದತ್ತ ಕಾಳಜಿ ವಹಿಸುವ ಜೊತೆಗೆ ಗಜಪಡೆಗೆ ಕಟ್ಟುನಿಟ್ಟಿನ ತಪಾಸಣೆ ನಡೆಸಲು ಮುಂದಾಗಿದ್ದು, ಅದರಂತೆಯೇ ಈ ಬಾರಿ ಎಲ್ಲಾ ಹೆಣ್ಣಾನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್ ಮಾಡಲಾಗಿದೆ. ಜೊತೆಗೆ ಎಲ್ಲಾ ಆನೆಗಳಿಗೆ ಹೆಲ್ತ್ ಕಾರ್ಡ್ ನೀಡಲಾಗಿದೆ.












Click it and Unblock the Notifications