Get Updates
Get notified of breaking news, exclusive insights, and must-see stories!

ಬಂಡಿ ಕೆಲಸದ ನಡುವೆಯೂ ಸಂಜೆಯ ಕಥಾ ಹಂದರ

ಅಮ್ಮನ ದಿನಚರಿ : ಬೆಳಗಿನ ಝಾವ ಕೋಳಿ ಕೂಗುವ ವೇಳೆಗೆ ಪ್ರಾರಂಭವಾಗುತ್ತಿತ್ತು ಅವರ ದಿನಚರಿ. ಎದ್ದು ಹಸುಗಳಿಂದ ಹಾಲು ಕರೆಯುವುದು, ಮನೆ ಮುಂದೆ ನೀರು ಚೆಲ್ಲಿ, ಒರಸಿ ರಂಗೋಲಿ ಇಟ್ಟು ಕಾಫಿ ಮಾಡುವ ಹೊತ್ತಿಗೆ ಮನೆಯಲ್ಲಿ ಬೇರೆಲ್ಲರಿಗೂ ಸುಪ್ರಭಾತವಾಗುತ್ತಿತ್ತು. ಸರಿ, ಎಲ್ಲರಿಗೂ ಕಾಫಿ ಸೇವೆ ಆದ ಮೇಲೆ, ಮಕ್ಕಳಿಗೆ ಶ್ಲೋಕಗಳನ್ನು ಹೇಳಿಕೊಡುವುದು. ಅವರನ್ನು ಸ್ಕೂಲಿಗೆ ಕಳುಹಿಸಲು ಸಿದ್ಧತೆ ಮಾಡುವುದು - ಬೆಳಗಿನ ಫಲಹಾರ ಅಥವಾ ತಂಗಳನ್ನದ ಪ್ರಯೋಗ ಮುಗಿಯುವ ಹೊತ್ತಿಗೆ ದನಕರುಗಳನ್ನು ಮೇವಿಗೆ ಕಳುಹಿಸಲು ಸಮಯವಾಗುತ್ತಿತ್ತು. ಆದಾದ ಮೇಲೆ 15-16 ಜನಕ್ಕೆ (ಮನೆಯವರಿಗೆ ಮತ್ತು ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದವರಿಗೆ) ಅಡುಗೆ ವ್ಯವಸ್ಥೆ. ಜಮೀನಿನ ಕಡೆ ಹೋಗಿ ಬರುವುದು. ಅವರೆಕಾಯಿ ಕಾಲದಲ್ಲಿ ಅವರೆ ಕಾಯಿ ಬಿಡಿಸಿಕೊಂಡು ಬರುವುದು (ಅವರಿಗೆ ಅವರೆ ಕಾಯಿ ಹುಳಿ, ಅದರಲ್ಲೂ ಹಿಚುಕಿದ ಅವರೆ ಕಾಳಿನ ಹುಳಿ, ರಾಗಿ ಮುದ್ದೆ ಅಂದರೆ ಪಂಚಪ್ರಾಣ) ಮತ್ತೆ ಸಾಯಂಕಾಲದ ಕೆಲಸಗಳಿಗೆ ತಯಾರಾಗುವುದು ಇದು ಅವರ ದಿನಚರಿ. ಇಷ್ಟು ಕೆಲಸಗಳಿದ್ದರೂ ಪ್ರತಿ ಸಂಜೆ ಮಕ್ಕಳನ್ನು ಹತ್ತಿರ ಕೂಡಿಸಿಕೊಂಡು, ತಮಗೆ ಗೊತ್ತಿದ್ದ ಮತ್ತು ಮಕ್ಕಳಿಗೆ ಉಪಯೋಗವಾಗುವಂತಹ ವಿಷಯಗಳನ್ನು ಮತ್ತು ಕಥೆಗಳನ್ನು ಹೇಳುವುದು ಒಂದು ದಿನವೂ ತಪ್ಪಿಸುತ್ತಿರಲಿಲ್ಲ.

ವಿಧಿಯ ಕಣ್ಣಾ ಮುಚ್ಚಾಲೆ : ಕೆಲಸದ ಒತ್ತಡದಿಂದ, ಹೆರಿಗೆಗಳ ಬಾಹುಳ್ಯದಿಂದ, ಅವರ ಶರೀರ ಕುಂದುತ್ತಾ ಬಂದಿತು. ಆರೋಗ್ಯ ಕೆಡುತ್ತಾ ಬಂತು. ಮೊದಲಿಗೆ ಊರಿನ ಹತ್ತಿರ ಇದ್ದ ಆಯುರ್ವೇದ ವೈದ್ಯರಿಗೆ ತೋರಿಸಲಾಯಿತು. ಸ್ವಲ್ಪ ದಿನ ಗುಣಮುಖವಾಗಿ ಕಂಡರೂ ಮತ್ತೆ ಆಯಾಸ, ನಿಶ್ಶಕ್ತಿ, ಶರೀರ ಕೃಶ, ನಡೆಯಲೂ ಕಷ್ಟವಾಗುತ್ತಿತ್ತು. ಆಗಿನ್ನೂ ಅವರಿಗೆ ಸುಮಾರು 43-44 ವರ್ಷ. ನಮ್ಮ ಅಕ್ಕ - ಭಾವನವರಿದ್ದ ವಿಜಯಪುರದಲ್ಲಿ ಆಸ್ಪತ್ರೆಗೆ ಸೇರಿಸಲಾಯಿತು.

ಕೆಲವು ದಿನಗಳಲ್ಲಿ, ಅಲ್ಲಿನ ವೈದ್ಯರ ಕೈವಾಡ, ಅಕ್ಕ - ಭಾವನವರ ಸೇವೆ ಎಲ್ಲಾ ಸೇರಿ ಬಹಳಷ್ಟೇ ಚೇತರಿಸಿಕೊಂಡು ಮುಖದಲ್ಲಿ ಗೆಲವು ಬರುವುದಕ್ಕೆ ಪ್ರಾರಂಭವಾಗಿತ್ತು. ನಡೆಯುವುದಕ್ಕೂ ಷುರು ಮಾಡಿದ್ದರು. ಒಂದು ಸಲ, ಮೆಟ್ಟಿಲು ಹತ್ತುತ್ತಿದ್ದಾಗ ಬಿದ್ದು ಮೊಣಕಾಲಿಗೆ ಪೆಟ್ಟಾಗಿ ಮತ್ತೆ ಹಾಸಿಗೆ ಹಿಡಿದರು. ವಿಧಿ ಕಣ್ಣುಮುಚ್ಚಾಲೆ ಆಡಿಸುತ್ತಿತ್ತು. 2 ದಿನ ಗುಣಮುಖವಾಗಿ ಕಂಡರೆ ಮತ್ತೆ 5 ದಿನ ಹಾಸಿಗೆಯಿಂದ ಏಳಲಾಗುತ್ತಿರಲಿಲ್ಲ. ಅಲ್ಲಿನ ವೈದ್ಯರಿಗೂ, ಖಾಯಿಲೆಯ ಮೂಲ ಮತ್ತು ಪರಿಹಾರ ಗೊತ್ತಾಗಲಿಲ್ಲ. ಅಲ್ಲಿಂದ ಕೋಲಾರದಲ್ಲಿನ ಮಿಷನ್‌ ಆಸ್ಪತ್ರೆಗೆ ಕರೆತಂದಿದ್ದಾಯಿತು. ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿದ್ದರು. ಸಾಕಷ್ಟು ಅಧುನಿಕ ಯಂತ್ರೋಪಕರಣಗಳಿದ್ದವು. ಆದರೂ ಯಾರೂ ಏನೂ ಮಾಡಲಾಗಲಿಲ್ಲ. ಅವರ ಕೊನೇ ದಿನ ಸಮೀಪಿಸುತ್ತಿತ್ತು.. ಒಂದು ದಿನ, ನನ್ನನ್ನು ಹತ್ತಿರ ಕರೆಸಿಕೊಂಡು, ಯಾವಾಗಿಗಿಂತಲೂ ಹೆಚ್ಚಿನ ಪ್ರೀತಿಯಿಂದ, ತಲೆ ಸವರಿ, ಚೆನ್ನಾಗಿ ಓದಿ, ಪದವೀಧರನಾಗಿ, ಮುಂದೆ ಬರಬೇಕೆಂದು ಹರಿಸಿದರು. ನನ್ನ ತಂದೆಯವರನ್ನು ಹತ್ತಿರ ಕರೆಸಿಕೊಂಡು, ಮುಖವನ್ನು ಹತ್ತಿರ ತಂದು, ಅವರ ಕೈಯನ್ನು ತಮ್ಮ ಕೈಯಲ್ಲಿಟ್ಟುಕೊಂಡು, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿ ಕೊನೆಯುಸಿರು ಬಿಟ್ಟರು.

ನನ್ನ ತಾಯಿ ಇದ್ದಷ್ಟು ದಿನವೂ ಅವರಿಗೆ ಮಕ್ಕಳದೇ ಚಿಂತೆ. ಮಕ್ಕಳ ಪುರೋಭಿವೃದ್ಧಿಯೇ ಅವರ ಆದ್ಯ ಕರ್ತವ್ಯ. ಸಾಯುವಾಗಲೂ, ತಾವು ಈ ಲೋಕದಿಂದ ತೆರಳುತ್ತಿದ್ದಾರೆಂದು ಸ್ವಲ್ಪವೂ ವ್ಯಥೆ ಕಾಣಲಿಲ್ಲ. ಅವರ ಒಂದೇ ಒಂದು ಚಿಂತೆಯೆಂದರೆ, ಮಕ್ಕಳ ಪಾಡು ಏನಾಗುತ್ತೋ ಎಂದು. ಶಂಕರಾಚಾರ್ಯರು ಸುಮ್ಮನೆ ಹೇಳಲಿಲ್ಲ, 'ಕುಪುತ್ರೋ ಜಾಯೇತ, ಕ್ವಚಿದ್‌ ಅಪಿ ಕುಮಾತಾ ನಭವತಿ". ( ಜಗತ್ತಿನಲ್ಲಿ ಕೆಟ್ಟ ಮಗನನ್ನು ಕಾಣಬಹುದೇ ಹೊರತು ಕೆಟ್ಟ ತಾಯಿಯನ್ನು ಎಂದಿಗೂ ಕಾಣಲಾಗದು.)

ನನ್ನ ತಾಯಿಯ ನಿಧನದ ನಂತರ, ತಂದೆ, ಸೋದರತ್ತೆ ತಾಯಿಯ ಅಗಲುವಿಕೆಯ ನೋವನ್ನು ಆದಷ್ಟು ಮರೆಸಿ ತಾಯಿಯಷ್ಟೇ ಪ್ರೀತಿಯಿಂದ ಮಕ್ಕಳೆಲ್ಲರನ್ನೂ ನೋಡಿಕೊಂಡರು. ಮಕ್ಕಳನ್ನು ಮುಂದೆ ತಂದರು. ನನ್ನ ವಿದ್ಯಾಭ್ಯಾಸದ ಒಂದೊಂದು ಹಂತದಲ್ಲೂ, ಯಾವುದಾದರೂ ಬಿರುದುಗಳು ಬಂದಾಗಲೂ, ನನ್ನ ತಾಯಿ ಇದ್ದಿದ್ದರೆ ಎಷ್ಟು ಸಂತೋಷ ಪಡುತ್ತಿದ್ದರು ಎಂದು ಅನ್ನಿಸದಿರಲಿಲ್ಲ. ಅವರು ತಮ್ಮ ಆಯಸ್ಸನ್ನೆಲ್ಲಾ ಬರೀ ಕಷ್ಟದಲ್ಲೇ ಕಳೆದು, ಸುಖ ಅನುಭವಿಸುವ ವೇಳೆಗೆ ಕಣ್ಮರೆ ಮಾಡಿಸಿದ್ದು ವಿಧಿಯ ಕ್ರೂರತೆಯೆಂದು ವಿಧಿಯನ್ನು ನಿಂದಿಸಿದ ದಿನಗಳಂತೂ ಎಣಿಸಲಾರದಷ್ಟು, ಆದರೂ, ಅವರು ಈ ಲೋಕ ಬಿಟ್ಟರೂ, ಪರೋಕ್ಷವಾಗಿ, ನನ್ನನ್ನು, ನನ್ನ ಸಂಸಾರವನ್ನೂ ಅದೇ ಪ್ರೀತಿಯಿಂದ ಸದಾ ಹರಸುತ್ತಿದ್ದಾರೆ. ಈ ಪುಣ್ಯಮೂರ್ತಿ, ತ್ಯಾಗಶೀಲೆ ನನ್ನ ತಾಯಿಗೆ ನನ್ನ ಮೊದಲಿನ ಪ್ರಶಸ್ತಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+