ತಾಯಿ .. ಏನೆಂದು ಬಣ್ಣಿಸಲೇ ನಿನ್ನ !

ಮನೆಯೆ ಮೊದಲ ಪಾಠಶಾಲೆ
ಜನನಿ ತಾನೆ ಮೊದಲ ಗುರುವು
ಜನನಿಯಿಂದ ಪಾಠ ಕಲಿತ ಜನರು ಧನ್ಯರು..

ಎಷ್ಟು ಅರ್ಥಗರ್ಭಿತ ಅಲ್ಲವೇ ಈ ಕವಿವಾಣಿ. ನವಮಾಸಗಳೂ ನೋವನ್ನು ಅನುಭವಿಸಿ, ನಮ್ಮನ್ನು ಹೆತ್ತು, ಹೊತ್ತು, ಸಲಹುವ ತಾಯಿ, ಹಾಲುಣಿಸಿ, ಕೈತುತ್ತು ನೀಡಿ, ಅಂಬೆಗಾಲಿಡಿಸಿ, ಕೈಹಿಡಿದು ನಡೆಸಿ, ಬದುಕಿನುದ್ದಕ್ಕೂ ಮಗುವಿನ ಏಳಿಗೆಗಾಗಿಯೇ ಅವಿರತ ಹಾಗೂ ಅನವರತ ಶ್ರಮಿಸುತ್ತಾಳೆ.

ಇಂತಹ ಮಹಾನ್‌ ತಾಯಿಯ ಋಣವನ್ನು ಏಳೇಳು ಜನ್ಮದಲ್ಲೂ ತೀರಿಸಲು ಸಾಧ್ಯವಿಲ್ಲ. ಭಾರತೀಯರು ಹೆಣ್ಣಿಗೆ ಮಹತ್ವದ ಸ್ಥಾನ ನೀಡಿದ್ದಾರೆ. ವಿದ್ಯಾಧಿದೇವತೆಯಾದ ಸರಸ್ವತಿ ಹೆಣ್ಣು, ಧನದೇವತೆಯಾದ ಲಕ್ಷ್ಮೀ ಹೆಣ್ಣು, ನಮಗೆ ಜನ್ಮ ನೀಡಿದಾತೆ ತಾಯಿ ಹೆಣ್ಣು, ಭೂಮಿ ತಾಯಿ ಹೆಣ್ಣು.

ರಾಷ್ಟ್ರಕವಿ ಕುವೆಂಪು ಅವರು, ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ.. ಎಂಬ ತಮ್ಮ ಕಾವ್ಯದಲ್ಲಿಯೂ ಭಾರತಾಂಬೆಯನ್ನು ತಾಯಿಯೆಂದೇ ಬಣ್ಣಿಸಿದ್ದಾರೆ. ತಾಯಿ ಹತ್ತು ಮಕ್ಕಳನ್ನು ಆನಂದದಿಂದ ಸಲಹುತ್ತಾಳೆ, ಆದರೆ, ಹತ್ತು ಮಕ್ಕಳು ಒಬ್ಬ ತಾಯಿಯನ್ನು ಸಾಕಲು ಹಿಂದೆ ಮುಂದೆ ನೋಡುತ್ತಾರೆ ಎಂಬ ಮಾತಿದೆ. ಇದು ಖಂಡಿತ ಸತ್ಯ.

ಬಾಲ್ಯದಲ್ಲಿ ಕೇಳಿದ ಒಂದು ಪುಟ್ಟ ಕಥೆ.. ಹೆತ್ತ ಕರುಳಿನ ದೊಡ್ಡತನವನ್ನು ಹೀಗೆ ಬಿಂಬಿಸುತ್ತದೆ:

ಒಮ್ಮೆ ದುಷ್ಟನಾದ ಮಗನೊಬ್ಬ, ತನ್ನ ಪ್ರೇಯಸಿಯ ಆಸೆ ಈಡೇರಿಸಲು, ತನ್ನ ತಾಯಿಯನ್ನೇ ಕೊಂದು, ಆಕೆಯ ಹೃದಯವನ್ನು ಪ್ರಿಯತಮೆಗೆ ತೋರಿಸಲು ಅವಸರವಸರವಾಗಿ ಓಡುತ್ತಿರುತ್ತಾನೆ. ರಸ್ತೆಯಲ್ಲಿ ಕಲ್ಲು ಎಡವಿ ಆ ದುಷ್ಟ ಮಗ ಮುಗ್ಗರಿಸುತ್ತಾನೆ.

ಆಗ ತಾಯಿ ಹೃದಯ ಕೇಳುತ್ತದಂತೆ, ಮಗು ನಿನಗೆ ನೋವಾಗಲಿಲ್ಲ ತಾನೆ?

ತಾಯಿಯ ಹೃದಯವೇ ಅಂತಹದ್ದು. ತನಗೆ ನೋವಾದರೂ ಸರಿಯೇ, ತನ್ನ ಮಗ - ಮಗಳು ಸಂತೋಷದಿಂದ ಇರಬೇಕು ಎಂದು ಬಯಸುವ ಸಹೃದಯಿ ಆಕೆ. ಹತ್ತಾರು ಕಷ್ಟ, ಕಾರ್ಪಣ್ಯಗಳನ್ನು ಸಹಿಸುವ ತಾಯಿ, ತನ್ನ ಕರುಳಿನ ಕುಡಿಗೆ ಕೊಂಚ ನೋವಾದರೂ ಸಹಿಸಳು.

ಸಾವಿರಾರು ಮೈಲಿಯ ದೂರದಲ್ಲಿರುವ ತನ್ನ ಕಂದನಿಗೆ ಕೊಂಚ ನೋವಾದರೂ, ಆಕೆಯ ಹೃದಯ ಮಿಡಿಯುತ್ತದೆ. ಆಕೆಯ ಆರನೇ ಇಂದ್ರಿಯ (ಸಿಕ್ಸ್ತ್‌ ಸೆನ್ಸ್‌ ) ತುಡಿಯುತ್ತದೆ. ಎಲ್ಲಾದರೂ ಇರಲಿ ತನ್ನ ಮಗ ಚೆನ್ನಾಗಿರಲಿ ಎಂದು ತಾಯಿ ಸದಾ ದೇವರನ್ನು ಪ್ರಾರ್ಥಿಸುತ್ತಾಳೆ. ಈ ತಾಯಿ ಮಮತೆ - ಮಮಕಾರವನ್ನು ವರ್ಣಿಸಲು ಪದಗಳೇ ಇಲ್ಲ. ಇದಕ್ಕೆ, ದೇಶ - ಭಾಷೆಯ ಎಲ್ಲೆಯಿಲ್ಲ.

ತಾಯಿಗೆ ಮಿಗಿಲಾದ ದೇವರಿಲ್ಲ. ಭೂಮಿಗೆ ಬಂದ ಮೊದಲ ಕಂದನ ಅಳುವ ದನಿಯಿಂದ ಬಂದ ಅಮ್ಮಾ ಎಂಬ ಆ ಮಹಾ ಚೇತನ ಸ್ವರೂಪವಾದ ಶಬ್ದಕ್ಕೆ ಅರ್ಥ ಹೇಳುವ ಗಟ್ಟಿಗರು ಇನ್ನೂ ಹುಟ್ಟಿಲ್ಲ. ಮಾಕ್ಸಿಂ ಗೋರ್ಕಿ ಅವರ ಮಹಾನ್‌ ಕೃತಿ ತಾಯಿ ಇಡೀ ವಿಶ್ವ ಸಾಹಿತ್ಯ ಇತಿಹಾಸದಲ್ಲೇ ಸಂಚಲನೆ ಉಂಟು ಮಾಡಿದ ಮಹಾನ್‌ ಗ್ರಂಥ. ಈ ಪುಸ್ತಕದ ರೀತಿ ಭಾರಿ ಸಂಖ್ಯೆಯ ಓದುಗರನ್ನು ಪಡೆದು, ಪರಿಣಾಮಕಾರಿಯಾಗಿ ಮತ್ತು ನೇರವಾಗಿ ಕೋಟ್ಯಂತರ ಜನರ ಮೇಲೆ ಪ್ರಭಾವ ಬೀರಿದ ಕೃತಿ ಮತ್ತೊಂದಿಲ್ಲ .

ಯಾವುದೇ ಕೃತಿ, ಕಥೆ, ಕಾವ್ಯಗಳು ತಾಯಿಯ ಬಗ್ಗೆ ಎಷ್ಟು ವರ್ಣಿಸಿದ್ದರೂ, ತಾಯಿಯ ಮಹಿಮೆಯನ್ನು ಕೊಂಡಾಡಿದ್ದರೂ ಅದು ಕಡಿಮೆಯೇ?

ಲೆವ್‌ ತೋಲ್‌ಸ್ತೋಯ್‌, ಸ್ಟೀಫನ್‌ ಜ್ವೇಯ್‌ಗ್‌, ಬರ್ನಾರ್ಡ್‌ ಷಾ, ರೋಮೆನ್‌ ರೊಲಾನ್‌, ಕ್ರಿಶನ್‌ ಚಂದರ್‌ ಮೊದಲಾದ ವಿಶ್ವ ಸಾರಸ್ವತ ಲೋಕದ ದಿಗ್ಗಜರೂ ಈ ಪುಸ್ತಕವನ್ನು ಮನಸಾರೆ ಕೊಂಡಾಡಿದ್ದಾರೆ.

ಗೋರ್ಕಿಯವರ ತಾಯಿ ಕೃತಿ ಭರವಸೆ ಹಾಗೂ ನಂಬಿಕೆಗಳನ್ನು ತುಂಬುತ್ತದೆ ಎಂದು ಬರ್ನಾರ್ಡ್‌ ಷಾ ಉಲ್ಲೇಖಿಸಿದ್ದಾರೆ.

ಗೋರ್ಕಿಯ ಪ್ರತಿಭೆಗೆ ಕೇವಲ ಒಂದೇ ಒಂದು - ಸತ್ಯವೇ ಆ ಹೆಸರು ಎಂದು ಸ್ಟೀಫನ್‌ ಜ್ವೇಯ್‌ಗ್‌ ಬರೆದಿದ್ದಾರೆ.

ನಾನು ಗೋರ್ಕಿಯವರನ್ನು ಸ್ವತಃ ಅರಿತಿದ್ದೇನೆ ಹಾಗೂ ಪ್ರೀತಿಸುತ್ತೇನೆ, ಯುರೋಪಿನಲ್ಲಿ ಖ್ಯಾತಿ ಪಡೆದ ಶ್ಲಾಘನಾರ್ಹ ಲೇಖಕನೆಂದು ಮಾತ್ರವಲ್ಲದೆ, ಬುದ್ಧಿವಂತ, ಸಹೃದಯಿ ಮತ್ತು ಕರುಣಾಳೆಂದು ತಿಳಿದಿದ್ದೇನೆ ಎಂದು ಲೆವ್‌ ತೋಲ್‌ಸ್ತಾಯ್‌ ತಮ್ಮ ದಿನಚರಿಯಲ್ಲಿ ನಮೂದಿಸಿದ್ದಾರೆ.

ಇಂತಹ ಮಹಾ ಮಹಿಮರಿಂದ ಸೈ ಎನಿಸಿಕೊಂಡಿದ್ದು, ಗೋರ್ಕಿಯೋ ಅಥವಾ ಅವರು ತಮ್ಮ ಕೃತಿಗೆ ಆರಿಸಿಕೊಂಡ ವಸ್ತು ತಾಯಿಯೋ ಎಂಬುದು ಜಿಜ್ಞಾಸೆ. ತಾಯಿಯ ಬಗ್ಗೆ ಗೋರ್ಕಿ ಕೃತಿಯಲ್ಲಿ ಮೂಡಿರುವ ಅಭಿಪ್ರಾಯಗಳು, ಸರ್ವ ಕಾಲಿಕ. ತಾಯಿ, ಅಮ್ಮ, ಮಾ, ಮಮ್ಮಿ, ಮಾತಾ, ಮಾತಾಶ್ರೀ... ಈ ಪದ ನೀಡುವ ಆನಂದವೇ ಅಂತಹದ್ದು, ಇದು ಚೇತನ ಸ್ವರೂಪ. ತಾಯಿಯ ಹಿರಿಮೆಯ ಅರಿತ ಕಂದನೇ ಧನ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+