ನನ್ನ ಕೈ ಕಾಫಿ ಕುಡಿದ ಅಮ್ಮನ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ...
ನಾನು ಕಾಲೇಜಿನ ಮೆಟ್ಟಿಲೇರಿದ ಮೇಲೆ ಈದು ತಿರುಗುಮುರುಗಾಯಿತು. ಅಮ್ಮನಿಗಿಂತ ಮುಂಚೆ ನಾನೇ ಮನೆಗೆ ಬರುತ್ತಿದ್ದೆ. ಅಮ್ಮನಿಗಾಗಿ ಕಾಫಿ ಮಾಡುವ ಸರದಿ ನನ್ನದಾಗಿತ್ತು. ಕೆಲಸ ಮಾಡಿ ಸುಸ್ತಾಗಿ ಮನೆಗೆ ಬಂದ ತಕ್ಷಣ ನಾನು ಕಾಫಿ ಮಾಡಿಕೊಡುತ್ತಿದ್ದದ್ದು ಅಮ್ಮನಿಗೆ ಎಷ್ಟು ಸಂತೋಷವಾಗುತ್ತಿತ್ತು ಎಂದು ಅಮ್ಮನ ಕಣ್ಣಲ್ಲೇ ತಿಳಿಯುತ್ತಿತ್ತು. ಅಂದ ಹಾಗೆ ನಮ್ಮಮ್ಮನಿಗೆ ಕಾಫಿ ಎಂದರೆ ಪಂಚಪ್ರಾಣ. ನಾನು ಈಗಲೂ ರೇಗಿಸುತ್ತಿರುತ್ತೇನೆ, 'ಗಂಡ ಮಕ್ಕಳಿಗಿಂತ ನಿನಗೆ ಕಾಫಿನೇ ಹೆಚ್ಚು" ಅಂತ. ಆದರೆ ನಿಮಗೆ ಗೊತ್ತಲ್ಲ, ನನಗಂತೂ ಒಂದು ಹನಿ ಕಾಫಿ ಕೊಡಲಿಲ್ಲ ನಮ್ಮಮ್ಮ.
ನನ್ನ ಸ್ನೇಹಿತರ ಅಮ್ಮಂದಿರು ಹಾಗೂ ನನ್ನ ಅಮ್ಮನ ಕೆಲವು ಸ್ನೇಹಿತರೆಲ್ಲರಿಗೂ ತಮ್ಮ ಮಕ್ಕಳಿಗೆ ಪರೀಕ್ಷೆ ಇದೆ ಎಂದರೆ ಅದೇನೋ ಆತಂಕ. ತಾವೇ ಪರೀಕ್ಷೆ ಬರೆದಾಗಲೂ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಕ್ಕಿಲ್ಲ. ಆದರೆ ನನಗೆ ಪರೀಕ್ಷೆ ಇದ್ದಾಗ, ನಮ್ಮ ಮನೆಯಲ್ಲಿ ಏನೇನೂ ವ್ಯತ್ಯಾಸವಾಗುತ್ತಿರಲಿಲ್ಲ. ನಿತ್ಯದಂತೆ ಪಾಠಗಳು, ಕಚೇರಿಗಳು ಇದ್ದೇ ಇರುತ್ತಿದ್ದವು. ನಮ್ಮಮ್ಮನಿಗೆ ನನ್ನಲ್ಲಿ ವಿಪರೀತ ನಂಬಿಕೆ, ವಿಶ್ವಾಸ ಇತ್ತು. ನಾನೆಂದೂ ಅದನ್ನು ಹುಸಿಗೊಳಿಸಲಿಲ್ಲ. ಅಂತೆಯೇ ನಮ್ಮ ಮನೆಯಲ್ಲಿ ನನಗೆ ಕೊಟ್ಟಷ್ಟು ಸ್ವಾತಂತ್ರ್ಯ ನನ್ನ ಗೆಳೆಯರ ಮನೆಗಳಲೆಲ್ಲೂ ಇರಲಿಲ್ಲ. ನಾನೇನು ಹಾಳಾಗಲಿಲ್ಲ, ಯಾವ ಕೆಟ್ಟ ಚಟಗಳಿಗೂ ಬಲಿಯಾಗಲಿಲ್ಲ, ಮನೆಯಲ್ಲಿ ಅಂತಹ ಶುದ್ಧ ವಾತಾವರಣವಿರಬೇಕಾದರೆ ಮಕ್ಕಳನ್ನು ತೀರ ಹತೋಟಿಯಲ್ಲಿಡಬೇಕಾಗಿಲ್ಲ ಎನ್ನುವುದಕ್ಕೆ ನಮ್ಮ ಮನೆಯೇ ಜೀವಂತ ಸಾಕ್ಷಿ.
ನಮ್ಮಮ್ಮನಿಗೆ ಲೆಕ್ಕವಿಲ್ಲದಷ್ಟು ವಿದ್ಯಾರ್ಥಿಗಳು. ನಾನು ಮೈಸೂರಿನಲ್ಲಿದ್ದಷ್ಟು ದಿನ, ಅಮ್ಮನ ಎಲ್ಲ ವಿದ್ಯಾರ್ಥಿಗಳ ಪರಿಚಯ ನನಗಿತ್ತು. ನಿಜವಾಗಲೂ ಅದೊಂದು ಬೇರೆಯೇ ಪ್ರಪಂಚ. ಪ್ರತಿಯಾಬ್ಬ ವಿದ್ಯಾರ್ಥಿಯ ನಡೆ, ನುಡಿ, ಶೈಲಿ ಮತ್ತೊಬ್ಬ ವಿದ್ಯಾರ್ಥಿಗಿಂತ ಅದೆಷ್ಟು ಭಿನ್ನ? ಅವರೆಲ್ಲರಿಗೂ ನಮ್ಮ ಮನೆಯಲ್ಲಿ ಪೂರ್ಣ ಸ್ವಾತಂತ್ರ್ಯವಿತ್ತು. ಎಷ್ಟೋ ಮಂದಿ ಮನೆಯವರಂತೆಯೇ ಇದ್ದರು. ಅಡಿಗೆ ಮನೆಗೆ ನುಗ್ಗಿ ಕಾಫಿ ಮಾಡಿಕೊಂಡು, ಹಸಿವಾದರೆ ಊಟ ಮಾಡಿ, ನಂತರ ತಮ್ಮ ಮನೆಗೆ ಹೋಗುತ್ತಿದ್ದರು.
ಎಲ್ಲ ವಿದ್ಯಾರ್ಥಿಗಳೂ ಒಂದೇ ತೆರನಾಗಿ ಹಾಡುತ್ತಿರಲಿಲ್ಲ. ಕೆಲವರು ಅತ್ಯಂತ ಒಳ್ಳೆಯ ಗಾಯಕರಿದ್ದರು, ಮತ್ತೆ ಕೆಲವರು ಸುಮಾರಾಗಿ ಹಾಡುವವರಿದ್ದರು. ಆದರೆ, ನನಗೆ ತಿಳಿದಮಟ್ಟಿಗೆ ಪಾಠ ಕಲಿಯಲು ಬರುವ ಹೊಸ ವಿದ್ಯಾರ್ಥಿಗಳನ್ನು ಅಮ್ಮ ಎಂದೂ ಬೇಡ ಎನ್ನುತ್ತಿರಲಿಲ್ಲ. 'ಈಗ ಅಷ್ಟೊಂದು ಚೆನ್ನಾಗಿ ಹಾಡದೇ ಇರಬಹುದು, ಆದರೆ ಅಂತಹ ಅದಮ್ಯ ಆಸೆ ಇದ್ದಲ್ಲಿ ಪ್ರತಿ ಜನ್ಮದಲ್ಲೂ ಒಂದಿಷ್ಟು ಕಲಿತು, ಏಳನೇ ಜನ್ಮದಲ್ಲಿ ಬಹಳ ಒಳ್ಳೆಯ ಗಾಯಕರಾಗುತ್ತಾರೆ" ಎನ್ನುವುದು ನಮ್ಮಮ್ಮನ ವಾದ. ನಮ್ಮಮ್ಮನ ಎಷ್ಟೋ ವಿದ್ಯಾರ್ಥಿಗಳು ನಮ್ಮ ಮನೆಯವರಂತೆಯೇ ಇದ್ದರು ಎಂದು ಹೇಳಿದೆನಷ್ಟೇ.
ಆದರೆ, ನೋವಿನ ಸಂಗತಿ ಎಂದರೆ, ಅಷ್ಟು ಹತ್ತಿರವಾದವರಲ್ಲಿ ಎಷ್ಟೋ ಜನ ಯಾವುದೋ ಕುಂಟು ನೆಪ ಹೇಳಿ ದೂರವಾಗಿದ್ದಾರೆ. ಆಶ್ಚರ್ಯದ ಸಂಗತಿ ಎಂದರೆ ಹೀಗೆ ದೂರವಾದವರೆಲ್ಲ ಅತ್ಯಂತ ಒಳ್ಳೆಯ ಗಾಯಕರು, ಆಕಾಶವಾಣಿ, ದೂರದರ್ಶನ ಅಥವಾ ಹಲವಾರು ಸಂಘ ಸಂಸ್ಥೆಗಳಲ್ಲಿ ಹಾಡಿರುವವರು. ಒಂದಂತೂ ನಿಜ, ಹಾಗೆ ದೂರ ಹೋದವರಲ್ಲಿ ಮುಕ್ಕಾಲು ಜನ ವಾಪಸ್ಸಾಗಿದ್ದಾರೆ. ಅದು ಬಹಳ ಸಂತೋಷದ ವಿಷಯ. ಆದರೆ ಅಂತಹ ಕೆಲ ವಿದ್ಯಾರ್ಥಿಗಳಿಂದ ಅಮ್ಮನಿಗೆ ಎಷ್ಟು ನೋವಾಗಿದೆ ಎಂದು ನನಗೆ ಮಾತ್ರ ಗೊತ್ತು.
ನಾನು ಹಾಗೂ ನಮ್ಮಮ್ಮನನ್ನು ಬಿಟ್ಟು ಇನ್ನಿಬ್ಬರನ್ನು ನಾನು ಈ ಲೇಖನದಲ್ಲಿ ಪ್ರಸ್ತಾಪಿಸಲೇಬೇಕು. ಹಾಗಿಲ್ಲದಿದ್ದಲ್ಲಿ ಇದು ಅಪೂರ್ಣವಾಗುತ್ತದೆ. ಇಬ್ಬರು - ನನ್ನ ತಂದೆ ಹಾಗೂ ನನ್ನ ತಾತ. ನಮ್ಮಪ್ಪನನ್ನು ನಾನು ಒಂದೇ ವಾಕ್ಯದಲ್ಲಿ ವರ್ಣಿಸಬೇಕೆಂದರೆ ಇಗೋ - ನನ್ನ ತಂದೆ ದೇವರ ರೂಪದಲ್ಲಿ ಮನುಷ್ಯರೋ ಅಥವಾ ಮನುಷ್ಯನ ರೂಪದಲ್ಲಿ ದೇವರೋ ಎಂದು ನಮಗೆ ಇಂದಿಗೂ ತಿಳಿದಿಲ್ಲ. ನಾನು ಪ್ರತಿಯಾಂದು ಹೆಜ್ಜೆ ಮುಂದಿಟ್ಟಾಗಲೂ ನನ್ನ ಬೆನ್ನೆಲುಬಾಗಿ ನಮ್ಮಮ್ಮನ ಜೊತೆಗೆ ಅಪ್ಪ ಇರುತ್ತಿದ್ದರು. ನಿಜ ಹೇಳಬೇಕೆಂದರೆ ನಾನು ಯಾವುದಾದರೂ ಕಾರ್ಯದಲ್ಲಿ ಉತ್ತೀರ್ಣನಾದರೆ ಎಷ್ಟೋ ಸಲ ನನಗಿಂತ ಹೆಚ್ಚು ಸಂತೋಷ ನಮ್ಮಪ್ಪನಿಗಾಗುತ್ತದೆ. ನಮ್ಮಪ್ಪ ಅಮ್ಮನದು ಅತ್ಯಂತ ಅನುರೂಪದ ಜೋಡಿ. ಅದೆಂತಹ ಹೊಂದಾಣಿಕೆ. ಪ್ರಾಯಶಃ ಇಬ್ಬರ ಆಸಕ್ತಿಯೂ ಒಂದೇ, ಆದ್ದರಿಂದಲೇ ಇರಬೇಕು.
ನಮ್ಮ ಕುಟುಂಬದಲ್ಲಿ ಅತ್ಯಂತ ಹಿರಿಯರು ನನ್ನ ತಾತ, ನಾನೆ ಅವರ ಮುದ್ದಿನ ಮೊಮ್ಮಗ ಎಂದು ನನ್ನ ಬಂಧು ಮಿತ್ರರೆಲ್ಲರಿಗೂ ಗೊತ್ತು. ಚಿಕ್ಕಂದಿನಲ್ಲಿ ಅವರು ಹೇಳುತ್ತಿದ್ದ ಕಿಕ್ಕೇರಿಯ ಕಥೆಗಳು ಇನ್ನೂ ನೆನಪಿದೆ. ಜೊತೆಗೆ ಅವರು ಕೊಟ್ಟ ಹೊಡೆತಗಳೂ ನೆನಪಿವೆ ಅನ್ನಿ.












Click it and Unblock the Notifications