ತಾಯಂದಿರ ದಿನವಿದು ಕನ್ನಡಾಂಬೆಗೆ ಮಂಗಳಾರತಿ
ಭಾಷೆ ತಿಳಿದೂ ತಿಳಿದು,
ಓದಿ ಬರೆಯಲು ಬೇಡ, ಮಾತನಾಡಲೂ
ಮನಸ್ಸಿಲ್ಲ?!
ಚಿಂತೆಯಿಲ್ಲ, ನಮ್ಮ ಕಾರ್ಯಕ್ರಮಗಳೆಲ್ಲ
ನಡೆವುದೆಲ್ಲಾ, (ಸಾಮಾನ್ಯದ ಮಾತು),
ಇಂಗ್ಲೀಷಿನಲ್ಲೇ!
'ನಿಮಗೆ ಬಳಸಲು ಇಷ್ಟವಿಲ್ಲದ ಭಾಷೆಯನು
ನಮಗೇಕೆ ಹೇರುವಿರಿ?"-
ಎಂದು ಕೇಳಿದಳೆ ಮಗಳು?
'ಛೆ", ಗದರಿಸಿ ಹೇಳಿ, 'ಹೇಳಿದ್ದ ಕೇಳು!"
(ಮಗನಂತು ಟಿ.ವಿ., ಫುಟ್‌ಬಾಲ್, ಇಂಟರ್ನೆಟ್‌ನ ಕಲಾಪ
ಬಿಟ್ಟು ನಮ್ಮ ಜೊತೆ ಬಂದದ್ದು ಭಾರೀ ಅಪರೂಪ!)
ಮನೆಯಲ್ಲಿ, ಇದ್ದಲ್ಲಿ, ಹೋದಲ್ಲಿ, ಬಂದಲ್ಲಿ,
ಅರ್ಥವಾಗಲಿ ಬಡಲಿ,
ಮೇಲಿಂದ ಮೇಲಾಗಿ ಕಿವಿಗಪ್ಪಳಿಸುತ್ತಿದ್ದಾಗ,
ಹೊಸ, ಹಳೆಯ ಪದಗಳನ್ನು ಕಲಿಯುವರು, ನೆನೆಯುವರು
ಬಳಸುವರು ತಾವೇ ತಾವಾಗಿ -
ಇದು ಗೊತ್ತು; ಹೀಗಿದ್ದೂ
'ಭಾಷೆ ಗೊಂದಲವಾಗಿ, ಮಕ್ಕಳಿಗೆ ಹೊರೆಯಾಗಿ,
ಬಿಟ್ಟೀತು" - ಎಂಬ ಭ್ರಮೆಯೇನೇ ನೆಪವಾಯ್ತೆ ನಮಗೆ!
ನಾವಂತು ಕಲಿತಿದ್ದಾಯ್ತು, ಬಳಸಿದ್ದೂನೂ ಆಯ್ತು ;
ಈಗ ಉಳಿದಿದ್ದೇನು ಅದ ಹುಡುಕಬೇಕು.
'ಅದಿಲ್ಲದಿದ್ದರೂ ನಡೆಯುತ್ತೆ"-
ಎಂದು ಹೇಳಿಕೊಂಡೊಡನೆಯೇ,
ತಯಾರಾಯ್ತು, ನಂಬಿ ಈ ಮಾತನ್ನ, ಒಂದು ಶವವಾಹನ!
ನಾವು ಸಂಸ್ಕೃತ ಕೊಂದದ್ದು ಹೀಗೆ;
ಗೀತೆ, ಉಪನಿಷತ್ತು ಮರೆತದ್ದೂ ಹೀಗೆ -
ಬರೀ ಗೌರವ ತೋರಿಸಿ,
ಇಟ್ಟಿದ್ದೇವೆ, ಅಲ್ಲಿ ಎತ್ತರದಲ್ಲಿ, ಉತ್ತುಂಗ ಶಿಖರದಲಿ,
ನಮಗೆ ಎಟುಕಲಾರದ ಅಟ್ಟದ ಆ ನೆತ್ತಿಯಲ್ಲಿ!
ಚಿಂತೆಯೇ? ಕಟ್ಟೋಣ ಬಿಡಿ, ಆಮದು ಮಾಡಿಕೊಂಡ
ಇಷ್ಟೊಂದು ಗುಡಿಗಳ ನಡುವೆ ಇನ್ನೊಂದ,
'ಕನ್ನಡ ತಾಯ" ದೇವಾಲಯ!
ಎತ್ತರದ ಬೆಟ್ಟದ ಮೇಲೆ ಹೂವ ಮುಡಿ,
ಸುತ್ತು ಸುತ್ತಾದ ಹಾವು - ದಾರಿಯ ತುಟ್ಟ ತುದಿ,
ಮೆಟ್ಟಲು ಮೆಟ್ಟಲಿಗೂ ಕೆತ್ತಿಸಿಬಿಡೋಣ-
'ಸಿರಿಗನ್ನಡಂ ಗೆಲ್ಗೆ, ಬಾಳ್ಗೆ, ಆಳ್ಗೆ!" ಇತ್ಯಾದಿ
'ಜೈ ಭುವನೇಶ್ವರಿ!" 'ಕನ್ನಡವೆನೆ ಕುಣಿದಾಡುವುದೆನ್ನೆದೆ!",
'ಹರಸು ತಾಯೆ!", ಇತಿ ಮಧ್ಯ,
'ಎಲ್ಲಾದರೂ ಎಂತಾದರೂ ಇರು; ನೀ ಕನ್ನಡವಾಗಿರು!",
- ಇತ್ಯಂತ್ಯ;
ಮೈಸೂರ ಶ್ರೀಗಂಧ, ಧಾರವಾಡದ ಮಣ್ಣು,
ಕಾರವಾರದ ಮರಳು, ಮಂಗಳೂರ ನೀರು-
ಸೆರಿಸಿ ಕಡೆದ ದಿವ್ಯ ಸುಂದರಮೂರ್ತಿ!
ಪಂಪ ರನ್ನ ಜನ್ನ ಕುಮಾರವ್ಯಾಸ ಲಕ್ಷ್ಮೀಶ
ಬಸವ ದಾಸಾದಿಗಳ,
ರಮ್ಯ ನವೋದಯ ನವ್ಯ ಬಂಡಾಯ ದಲಿತ-
ಲೇಖಕರ ಚಿತ್ರ - ಮಂದಿರ!
ಹೇಗೂ 'ತಾಯದಿನ"ಕ್ಕೆ ಸಿಗುತ್ತಲ್ಲ ರಜ,
ಬಿಡುವು, ಯಥೇಚ್ಛ
ಸೇರೋಣ, ತರೋಣ ಮನೆಗೊಂದು ಹೂ ಗುಚ್ಛ.
ಇಡೋಣ ತಾಯ ಪಾದಕ್ಕೆ
ಮಾಡೋಣ
ಕನ್ನಡದಲ್ಲೇ ಕನ್ನಡಕ್ಕೆ 'ಮಂಗಳಾರತಿ"ಯನ್ನ,
ತಿಂದು ತೇಗಿ,
ಹರಟೆ ಬೇರೆ ಭಾಷೆಯಲ್ಲೇ ಕೊಚ್ಚಿ,
ಗುಡಿಯ ಬಾಗಿಲು ಭದ್ರವಾಗಿ ಮುಚ್ಚಿ,
ತೆರಳೋಣ,
ಮುಂದಿನ ಅಥವಾ ಅದರ ಮರು ವರುಷ
ಇದೇ ದಿನ ಮತ್ತೆ ಸೇರುವ ನಿರ್ಧಾರ
ಕೈಗೊಳ್ಳೋಣ!
ಎಸ್.ಕೆ. ಹರಿಹರೇಶ್ವರ












Click it and Unblock the Notifications