ಅಮ್ಮನ ಹೊಟ್ಟೆಯೆಂಬ ಪ್ರೀತಿಯ ಅಕ್ಷಯಪಾತ್ರೆ
1. ಕಾಂಗರೂ
2. ಹೇಂಟೆ
3. ಗುಬ್ಬಿ
1. ಅವಳು ತಬ್ಬಿಕೊಂಡು ಸಲಹುತ್ತಾಳೆ. ಮಗುವಿಗೆಂದೇ ಹೊಟ್ಟೆಯಲೊಂದು ಚೀಲ. ಬೆಟ್ಟ ಬಂಡೆಗಳ ಏರಿ ಕಣಿವೆಗಳ ಹಾರಿ ಏದುಸಿರು ಬಿಡುತ್ತಾಳೆ. ಚೀಲದಲ್ಲಿರುವ ಮರಿಯ ಸ್ಪರ್ಶ ಅನುಭವಿಸುತ್ತಲೇ ಬೆದರುಗಣ್ಣಿನಿಂದ ಬಯಲ ಸುತ್ತ ನೋಡುತ್ತಾಳೆ. ತನ್ನ ಜೀವ ಕಾಪಾಡುವುದಕ್ಕೆಂದೇನಲ್ಲ.
ಮಗುವಿನ ನೆಪ್ಪು, ಪ್ರಜ್ಞೆ , ಜಾಗೃತಿ, ವಾತ್ಸಲ್ಯ.... ಹೀಗೆ ಅವಳ ಪಂಚೇಂದ್ರಿಯಗಳನ್ನು ಅಲರ್ಟ್ ಆಗಿರಿಸುತ್ತದೆ. ಶತ್ರುಗಳ ವಾಸನೆಗೆ, ಮೋಸಗಾರರ ಬಲೆಗೆ ಬಲಿಯಾಗದಂತೆ ಬರೇ ಎಚ್ಚರೆಚ್ಚರ !. ಬಳಿಗೆ ಬಂದವರನ್ನು ಸಂಶಯದಿಂದ ನೋಡುತ್ತಾಳೆ. ಹೊಸ ಪರಿಚಯ ,ಹಳೇ ಪರಿಚಯ, ಸ್ನೇಹ- ದೋಸ್ತು ಎಲ್ಲ ಚೀಲದೊಳಗೆ ಹೊಟ್ಟೆಯ ಮೆತ್ತೆಗಂಟಿಗೊಂಡಿರುವ ಕೂಸಿಗಿಂತ ದೊಡ್ಡದಲ್ಲ .
ಕೂಸು ಬೆಳೆಯಬೇಕು. ತನ್ನ ದೇಹದ ಈ ಚೀಲಕ್ಕೆ ಮರಿಯ ಹೆಜ್ಜೆ ಭಾರವಾಗಬೇಕು. ಮತ್ತೊಂದು ದಿನ ಚೆಂಗನೆ ಜಿಗಿದು ಓಡಬೇಕು. ಯಾವುದೋ ಬೇಟೆಯ ಗುರಿಯಿಟ್ಟು. ಅವತ್ತು ಕಣ್ಣಲ್ಲಿ ತೃಪ್ತಿಯ ಒಂದೆರಡು ಹನಿ.
2. ಸಾಲು ಸಾಲು ಮೊಟ್ಟೆಗಳು. ಕಣ್ಣ ತುಂಬ ಅಷ್ಟೇ ಕನಸುಗಳು. ಆ ಬೆಚ್ಚನೆಯ ಲೋಕದಲ್ಲಿ ಮೊತ್ತ ಮೊದಲು ಜಗತ್ತಿನ ಬೆಳಕ ಕಂಡು ಕಣ್ಣು ಮುಚ್ಚಿ ಮುಚ್ಚಿ ಬಿಡಿಸುತ್ತಿರುವ ಮರಿಗಳು. ಪುಟ್ಟಾತಿ ಪುಟ್ಟ ಮರಿಗಳು. ಅದನ್ನು ತನ್ಮಯತೆಯಿಂದ ನೋಡುವ ಅಮ್ಮ.
ರೇಶಿಮೆ ಪುಕ್ಕಗಳೊಂದಿಗೆ ಅವು ಆಕಾಶದಡಿಗೆ ಬರುವಾಗ ಆಕೆಯ ಮೈಯೆಲ್ಲಾ ಮತ್ತೆ ಕಿವಿ. ಎತ್ತರದಲ್ಲಿ ಗಿಡುಗನ ರೆಕ್ಕೆಯಾಡುವ ಕಂಪನ ಕಿವಿಗೆ...ಊಂಹೂಂ... ಒಳಮನದ ಪರದೆಗೆ, ಕಾಣಿಸಿದಾಗ ಎಚ್ಚರಿಕೆಯ ಡಮರು ಬಾರಿಸುತ್ತಾಳೆ. ತನ್ನೆರಡು ಉರುಟುರುಟು ರೆಕ್ಕೆಗಳ ಅಗಲಗಲ ಬಿಡಿಸುತ್ತಾ. ಅದು ಸುರಕ್ಷೆಯ ಗುರಾಣಿ. ಅಭಯದ ಭರವಸೆ. ಕೃಷ್ಣನೆತ್ತಿದ ಗೋವರ್ಧನ.
ಅ ಎಲ್ಲದರಿಂದ ಬಚಾವಾಗಿ ಆ ಪುಟ್ಟಿಯ ಕೊಕ್ಕು ಗಟ್ಟಿಯಾದಾಗ ಸಾರ್ಥಕತೆಯ ಹಾರೈಕೆ. ತೇವಗಣ್ಣು .
3. ಇನ್ನೇನು ಹೊಟ್ಟೆಯಿಂದಾಚೆಗೆ ಜೀವವೊಂದು ಬರಲಿದೆ ಎನ್ನುವಾಗಲೇ ಸಂಭ್ರಮ - ಸುಸ್ತು. ಸುಸ್ತಿನಲ್ಲೇ ಕಡ್ಡಿ ಕಸಗಳ ಆಯ್ಕೆ. ಅದು ಸರಿಯಿಲ್ಲ, ಇದು ಸರಿಯಿಲ್ಲ, ಮತ್ತೊಂದು ಚೆಂದಾಗಿಲ್ಲ. ಚೆನ್ನಾಗಿರೋದ ಆಯಲು ಯತ್ನ. ಎಲ್ಲವೂ ಚೆಂದದ ಒಂದು ಗೂಡಿಗಾಗಿ. ಆ ಕೂಸು ಬೆಚ್ಚಗಿರಲು.
ಮತ್ತೆ ಆ ಮೊಟ್ಟೆಗೆ ಉಸಿರೀಯಲು ತಪಸ್ಸು. ಜಗತ್ತಿನ ಗಾಳಿಯಾಂದಿಗೆ ಕೂಸು ವ್ಯವಹಾರ ಆರಂಭಿಸುವವರೆಗೆ ತಪಸ್ಸು ಸಾಗುತ್ತದೆ. ನಂತರ ಮಗದೊಮ್ಮೆ ಆ ಪುಟಾಣಿಗಾಗಿ ಊರ ಸುತ್ತಾಟ. ಅದು ಮೆತ್ತಗಿದೆಯೇ, ಇದು ರುಚಿಯಿದೆಯಪ್ಪಾ, ಅಲ್ಲೇನೋ ಹೊಸದಿದೆ ...ಹೀಗೆ. ಎಲ್ಲದರ ಜೊತೆಗೆ ಆಕೆಯ ಎದೆಯಲ್ಲಿ ನಿರಂತರ ಒಸರುವ ಅಕ್ಕರೆಯಿದೆ.
ಜಗತ್ತಿನ ಎಲ್ಲ ಆಗುಹೋಗುಗಳು ಅವಳಿಗೆ ಕಾಣಿಸದು. ಅವು ಅಮುಖ್ಯ. ಕೂಸಿನ ಗೂಡಿನ ಭಧ್ರತೆ, ತುತ್ತಿಗಾಗಿ ಕಾಯುವ ಅದರ ಕಣ್ಣು, ಅದಕ್ಕೆರಡು ತುತ್ತು . ಅದಕ್ಕಾಗಿ ಅವಳು ಅಲೆಯುತ್ತಾಳೆ. ಆ ಕುಟ್ಟಿ ಪುರ್ರೆಂದು ಹಾರಬೇಕು. ಬೆಚ್ಚುಗಂಗಳೊಂದಿಗೆ ಅದಕ್ಕೆ ಲೋಕ ತೋರಿಸಬೇಕು. ಉಬ್ಬಿ ಬರುವ ಗಂಟಲಿನೊಂದಿಗೆ ಅದಕ್ಕೆ ಆಗಸ ಕಾಣಿಸಬೇಕು. ಅಷ್ಟು ಬಿಟ್ಟರೆ ಬೇರೇನೂ ಇಲ್ಲ.
ಈ ರಾಶಿ ಶ್ರಮದ ಹಿಂದೆ ವ್ಯವಹಾರದ ಹನಿಯಿಲ್ಲ. ಮುಪ್ಪಿನ ನೆನಪಿಲ್ಲ. ಸ್ವಾರ್ಥದ ಸೆಳಕು, ಬಯಕೆಗಳಿಲ್ಲ. ಅದು ಬೆಳ್ಳನೆಯ ಕ್ಷೀರದೊರತೆ. 'ಬರೇ ಪ್ರೀತಿ". ಪ್ರೀತಿ ಮಾತ್ರ.












Click it and Unblock the Notifications