'ಕಾರ್ಮಿಕ ದಿನ' ಎಂಬ ಅಸಂಬದ್ಧ ಆಚರಣೆ! (ಭಾಗ 2)

ರಜಾ ಮಜಾ ಹೊರತು ಮತ್ತೇನೂ ಇಲ್ಲ!
ಮೂಲಭೂತ ಪ್ರಶ್ನೆಯೆಂದರೆ, 'ಕಾರ್ಮಿಕ-ಮಾಲೀಕ ಸಂಬಂಧವು ಉಭಯರಿಗೂ ತೃಪ್ತಿದಾಯಕವಾಗಿಲ್ಲದಿರುವಾಗ ಕಾರ್ಮಿಕ ದಿನಾಚರಣೆಗೆ ಏನು ಅರ್ಥ?' ನಮ್ಮ ದೇಶದಲ್ಲಿಂದು ನಾವು ಕಾಣುತ್ತಿರುವುದೇನನ್ನು? ಸದಾ ಅತೃಪ್ತರಾಗಿರುವ ಕಾರ್ಮಿಕರು, ಅವರ ಅತೃಪ್ತಿಗೆ ಗಾಳಿ ಹಾಕುತ್ತ ಅವರನ್ನು ಮುಷ್ಕರಕ್ಕೆ ಎಳೆಯುವ ಕಾರ್ಮಿಕ ಧುರೀಣರು, ಧುರೀಣರ ಕರೆಗಳಿಗೆ ಕುರಿಗಳಂತೆ ಕೊರಳು ಕೊಡುವ ಅದೇ ಕಾರ್ಮಿಕರು, ಮಾಲೀಕರೊಡನೆ ಒಳ ಒಪ್ಪಂದ ಮಾಡಿಕೊಳ್ಳುವ, ಇಲ್ಲವೇ, ಕಾರ್ಮಿಕರನ್ನು ತಮ್ಮ ಏಣಿಗೆ ಮೆಟ್ಟಿಲಾಗಿ ಬಳಸಿಕೊಳ್ಳುವ ಅದೇ ಧುರೀಣರು, ಮತ್ತು, ನೌಕರರನ್ನು ಸದಾ ಅತೃಪ್ತಿಯಲ್ಲಿಡುವುದು ತಮ್ಮ ಆಜನ್ಮಸಿದ್ಧ ಹಕ್ಕು ಎಂಬಂತಾಡುವ ಮಾಲೀಕರು, ಈ ವಿಷ ವರ್ತುಲವನ್ನಲ್ಲವೆ ನಾವಿಂದು ಈ ದೇಶದಲ್ಲಿ ಕಾಣುತ್ತಿರುವುದು? ನಾವಿಂದು ಕಾಣುತ್ತಿರುವುದು ಅಸಂಘಟಿತ ಕಾರ್ಮಿಕರ ಶೋಷಣೆಯನ್ನಲ್ಲವೆ? ಕಾರ್ಮಿಕರ ಅವ್ಯಾಹತ ಮುಷ್ಕರಗಳನ್ನಲ್ಲವೆ? ಪ್ರತಿ ದಿನವೂ ಪ್ರತಿ ಊರಿನಲ್ಲಿಯೂ ಪ್ರತಿಭಟನಾ ಮೆರವಣಿಗೆಯನ್ನಲ್ಲವೆ? ಕಾರ್ಮಿಕ ಇಲಾಖೆಯ ಕಳ್ಳಾಟಿಕೆ ಮತ್ತು ರಾಜಕಾರಣಿಗಳ ಸುಳ್ಳಾಡುವಿಕೆಗಳನ್ನಲ್ಲವೆ?
ಅನೂಚಾನವೆಂಬಂತೆ ಸಾಗಿಬಂದಿರುವ ಇಂಥ ವಿಷಮ ಪರಿಸ್ಥಿತಿಯಲ್ಲಿ ನಾವು ವರ್ಷದಲ್ಲೊಂದು ದಿನ ಕಾರ್ಮಿಕರಿಗೆ ಅವರ ಹೆಸರಿನಲ್ಲಿ ರಜೆ ನೀಡಿಬಿಟ್ಟರೆ ಏನು ಸಾಧಿಸಿದಂತಾಯಿತು? ಇದುವರೆಗೆ ಸಾಧಿಸಿದ್ದಾದರೂ ಏನು? ಹೀಗಿರುವಾಗ ನಾವಿಂದು ಆಚರಿಸುತ್ತಿರುವ 'ಕಾರ್ಮಿಕ ದಿನ'ವು ಅಸಂಬದ್ಧವೆಂದು ಅನಿಸುವುದಿಲ್ಲವೆ?
ನಮ್ಮೀ ದೇಶದಲ್ಲಿ 'ಕಾರ್ಮಿಕ ದಿನ'ದ ಅರಿವೂ ಇಲ್ಲದೆ ಲಕ್ಷಾಂತರ ಹೋಟೆಲ್ ನೌಕರರು ಸುರಕ್ಷಿತವಲ್ಲದ ವಾತಾವರಣದಲ್ಲಿ ಅಹರ್ನಿಶಿ ದುಡಿದು ಹಣ್ಣಾಗುತ್ತಿರುವಾಗ, ಕೋಟ್ಯಂತರ ಗಾರ್ಮೆಂಟ್ ನೌಕರರು, ಕಟ್ಟಡ ಕಾರ್ಮಿಕರು, ಭಟ್ಟಿಗಳ ಕಾರ್ಮಿಕರು, ಆಟೋ ಗ್ಯಾರೇಜ್ ಮಕ್ಕಳು, ಹೀಗೆ ನಾನಾ ವಲಯಗಳ ಅಸಂಘಟಿತ ಕಾರ್ಮಿಕರು ಅನಾರೋಗ್ಯಕರ ಮತ್ತು ಅಭದ್ರ ವಾತಾವರಣದಲ್ಲಿ ದಿನವಿಡೀ ದುಡಿದೂ ಅರೆಹೊಟ್ಟೆ ಉಣ್ಣುವಾಗ ತಿಂಗಳಿಗೆ ಹತ್ತಾರು ಸಾವಿರದಿಂದ ಲಕ್ಷದವರೆಗೆ ಸಂಬಳ ಎಣಿಸುವ (ಗಿಂಬಳವಿದ್ದಲ್ಲಿ ಅದು ಬೇರೆ!) ಸಂಘಟಿತ ವಲಯದ ನೌಕರರು 'ಕಾರ್ಮಿಕ ದಿನ'ವೆಂದು ರಜಾದ ಮಜಾ ಅನುಭವಿಸುವುದು ಎಷ್ಟು ಸೂಕ್ತ? ಪುಸ್ತಕದ ಬದನೇಕಾಯಿಯಾಗಿರುವ ಈ ದೇಶದ ಕಾರ್ಮಿಕ ನಿಯಮಗಳು ಏನೇ ಹೇಳಲಿ, ಕಮ್ಯೂನಿಸ್ಟರ ಆದರ್ಶಗಳು ಏನೇ ಇರಲಿ, ಕೇವಲ ಸಂಘಟಿತ ಕಾರ್ಮಿಕರು ಮಾತ್ರ ಫಲಾನುಭವಿಗಳಾಗಿರುವ ನಮ್ಮ ಕಾರ್ಮಿಕ (ಅ)ವ್ಯವಸ್ಥೆಯಲ್ಲಿ 'ಕಾರ್ಮಿಕ ದಿನ'ದ ಆಚರಣೆಯು ಸಂಘಟಿತ ಕಾರ್ಮಿಕರ 'ಬಲ'ದ ಸಂಕೇತವಾಗಿ ಬಿಂಬಿತವಾಗುವುದರಿಂದಾಗಿ ಪರೋಕ್ಷವಾಗಿ ಅಸಂಘಟಿತ ಕಾರ್ಮಿಕರಿಗೆ ಅನ್ಯಾಯವೆಸಗಿದಂತಾಗುವುದಲ್ಲವೆ? ಇಷ್ಟಕ್ಕೂ, 'ಕಾರ್ಮಿಕ ದಿನ'ವೆಂಬುದು ನಮ್ಮೀ ದೇಶದಲ್ಲಿ 'ಕಮ್ಯೂನಿಸ್ಟ್ ಸಿದ್ಧಾಂತದ ಪ್ರತಿಪಾದನೆಯ ದಿನ'ದ ರೂಪು ಪಡೆದಿರುವುದಾಗಲೀ ಕಮ್ಯೂನಿಸ್ಟರ ರಾಜಕಾರಣದ ಸಾಧನವಾಗಿ ಬಳಕೆಯಾಗುತ್ತಿರುವುದಾಗಲೀ ಸರಿಯೇ? ಚೀನಾದಂಥ ಚೀನಾವೇ ಬಂಡವಾಳಶಾಹಿ ಮಾರ್ಗ ಹಿಡಿದು, 'ಕಾರ್ಮಿಕ ದಿನ'ವನ್ನು ಸಂಪ್ರದಾಯಮಾತ್ರವೆಂಬಂತೆ ಆಚರಿಸುತ್ತಿರುವಾಗ ಭಾರತಕ್ಕೆ ಈ ದಿನದ ಬಗ್ಗೆ ಅದೆಂಥ ಹುಮ್ಮಸ್ಸು?
ನಮ್ಮ ದೇಶಕ್ಕೆ ಇಂದು ಬೇಕಾಗಿರುವುದು ಸಂಘಟಿತ ಕಾರ್ಮಿಕರ ಮೈಮುರಿ ದುಡಿಮೆ. (ಮಾತೆತ್ತಿದರೆ ನಾವು ಟೀಕಿಸುವ ಸಾಫ್ಟ್‌ವೇರ್ ನೌಕರರು ಮೈಮುರಿ ದುಡಿಮೆಗೆ ಉತ್ತಮ ಉದಾಹರಣೆಯಾಗಬಲ್ಲರು.) ಅದೇವೇಳೆ, ಅಸಂಘಟಿತ ಕಾರ್ಮಿಕರಿಗೆ ಅಗತ್ಯವಾಗಿರುವುದು ಆರೋಗ್ಯಕರ, ಸುರಕ್ಷಿತ ಹಾಗೂ ಶೋಷಣೆಮುಕ್ತ ಕೆಲಸದ ವಾತಾವರಣ, ನ್ಯಾಯಬದ್ಧ ಸಂಬಳ ಮತ್ತು ಉತ್ತಮ ಸೇವಾ ಸೌಲಭ್ಯ. ಜೊತೆಗೆ, ಸಂಘಟಿತ ಕಾರ್ಮಿಕರು ಬಯಸುವುದು ತಮ್ಮ ನಾಯಕರ ಪ್ರಾಮಾಣಿಕತೆ ಮತ್ತು ನಿಷ್ಕಾಮಕರ್ಮ ಭಾವ ಹಾಗೂ ಮಾಲೀಕರ ವಾತ್ಸಲ್ಯ. ಎಲ್ಲಿಯವರೆಗೆ ನಮ್ಮ ದೇಶದಲ್ಲಿ ಈ ಗುಣಾಂಶಗಳು ಒಡಮೂಡುವುದಿಲ್ಲವೋ ಅಲ್ಲಿಯವರೆಗೆ ಕಾರ್ಮಿಕ ದಿನಾಚರಣೆಯಿಲ್ಲಿ ಅರ್ಥಹೀನ. ಕಾರ್ಮಿಕ ದಿನಾಚರಣೆಯ 'ಬಲ'ದಿಂದಲಾದರೂ ಈ ಗುಣಾಂಶಗಳ ಒಡಮೂಡುವಿಕೆ ಸಾಧ್ಯವಾಗಿದೆಯೇ ಎಂದರೆ, ಊಹ್ಞೂ, ಸಾಧ್ಯವಾಗಿಲ್ಲ. ಹಾಗೆ ಸಾಧ್ಯವಾಗುವುದೂ ಇಲ್ಲ. ಏಕೆಂದರೆ, ಕಾರ್ಮಿಕ ದಿನಾಚರಣೆಯೆಂಬುದಿಲ್ಲಿ 'ಒಂದು ದಿನದ ರಜಾ-ಮಜಾ' ಹೊರತು ಬೇರಿನ್ನೇನೂ ಆಗಿ ಉಳಿದಿಲ್ಲ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications