ಕತ್ತಲೆಯಲ್ಲಿ ಮುಳುಗಿದವರ ಎಚ್ಚರಿಸುವ, ಸದಾ ಬಾರಿಸುತ್ತಲೇ ಇರುವ ಗಂಟೆ!

ಇಡೀ ವರ್ಷ ಸಂಭವಿಸಿದ ಅವಘಡ, ನೋವುಗಳನ್ನೆಲ್ಲ ಬದಿಗಿಟ್ಟು ಕ್ರೈಸ್ತ ಪರಮಾತ್ಮನ ಆರಾಧಿಸುವ ಸಡಗರ. ನಳನಳಿಸುತ್ತಿರುವ ಎಕ್ಸ್ಮಸ್ ಗಿಡ, ತೂಗಾಡುವ ಬಣ್ಣದ ಬಲ್ಬುಗಳು, ಬಣ್ಣ ಸುಣ್ಣ, ಹೊಸ ಗಾಜು ಕಿಟಕಿಗಳಿಂದ ಅಲಂಕೃತ ದೇವಳಗಳು. ಹೊಸ ಬಟ್ಟೆ, ಘಮಘಮಿಸುವ ಬಗೆಬಗೆಯ ಕೇಕು, ಸಿಹಿಮುತ್ತುಗಳು, ಸ್ವಲ್ಪವೇ ವೈನ್... ಆಮೆನ್.

ಇದು ಕ್ರಿಸ್ಮಸ್ ದಿನ ಸರಿಯಾಗಿ ಹನ್ನೆರಡು ಗಂಟೆಗೆ ಬರೋಬ್ಬರಿ ಹನ್ನೆರಡು ಬಾರಿ ಢಣ್‌ ಢಣ್ ಎಂದು ಬಾರಿಸುವ ಗಂಟೆ ಮಾತ್ರ ಎಂದುಕೊಂಡೀರಾ ಜೋಕೆ! ಭಾರತದ ಗುಡಿಗಳಲಿ ಕಲ್ಲಾಗಿ ಕುಳಿತಿರುವ ದೇವರನ್ನು ಎಚ್ಚರಿಸಲೋ, ಕಿಂಕರ್ತವ್ಯ ಮೂಢನಾಗಿ ಬರೀ ಧ್ಯಾನದಲ್ಲಿ ಮುಳುಗಿರುವ ಧ್ಯಾನಿಗಳನ್ನು ಎಬ್ಬಿಸಲೆಂದೋ ತೂಗುಹಾಕಿರುವ ದೊಡ್ಡದೊಡ್ಡ ಗಂಟೆಗಳನ್ನು ದೇವಸ್ಥಾನದವರು ಕಟ್ಟಿಹಾಕಿದ್ದಾರೆ. ದೇವರನ್ನು ನೋಡುವ ನೆಪದಲ್ಲಿ ಕೈಕೈ ಸ್ಪರ್ಶಿಸಿ ಕಣ್ಸನ್ನೆಯಲ್ಲೇ ಲಲ್ಲೆಶುರುಗೈಯುವ ಪ್ರೇಮಿಗಳ ಏಕೈಕ ನೆಪವಾಗಿದ್ದ ಆ ಗಂಟೆಯೂ ಕೈನಿಲುಕಲಾರದಷ್ಟು ಮೇಲೆ ಹೋಗಿರುತ್ತದೆ.

ಕೈಗೆ ನಿಲುಕದ ಗಂಟೆ ಹೋದರೆ ಹೋಗಲಿ. ಸದ್ಯಕ್ಕೆ ಬೇಕಾಗಿರುವುದು ಕರ್ತವ್ಯಮೂಢತೆಯಿಂದ ಕತ್ತಲೆಯಲ್ಲಿ ಮುಳುಗಿಹೋಗಿದ್ದ ಮನಸ್ಸನ್ನು ಜಾಗೃತಗೊಳಿಸುವ ಎಚ್ಚರಿಕೆಯ ಗಂಟೆ. ಇಡೀ ವರ್ಷ ಕತ್ತಲೆಯಲಿ ಕರಗಿಹೋಗಿದೆ. ಆ ಪ್ರಾರ್ಥನಾ ಸ್ಥಳದ ಮೇಲೆ ಇವರ ದಾಳಿ, ಇವರ ಪ್ರಾರ್ಥನಾ ಮಂದಿರದ ಮೇಲೆ ಅವರ ದಾಳಿ. ಪ್ರವಾಹ, ಸುನಾಮಿ, ಬರೀ ಇಂಥವೇ ಸುದ್ದಿಗಳಿಂದ ತುಂಬಿಹೋಗಿರುತ್ತವೆ ಪತ್ರಿಕೆಯ ಪುಟಗಳು. ಇನ್ನೊಬ್ಬರ ಮೇಲೆ ಗೂಬೆ ಕೂರಿಸುವಷ್ಟರಲ್ಲಿಯೇ ನಮ್ಮ ಬಾಳಿನ ಒಂದು ಪುಟವೂ ಸರಿದುಹೋಗಿರುತ್ತದೆ. ಒಂದೇ ಮನೆಯ ಅಣ್ಣತಮ್ಮಂದಿರು ಕಾಲರು ಹಿಡಿದು ಜಗಳವಾಡುತ್ತಿರುವಾಗಲೇ ಪಕ್ಕದ ಮನೆಯವ ಬಾಂಬಿಟ್ಟು ಹೋಗಿರುತ್ತಾನೆ. ಹೀಗೆ ಮಾಡಬಾರದಿತ್ತು ಅಂದುಕೊಳ್ಳುತ್ತಿರುವಾಗಲೇ ಅನಾಹುತ ನಡೆದುಹೋಗಿರುತ್ತದೆ.

For whom the bell tolls?

ಕಳೆದ ವರ್ಷದಲಿ ಮಾಡಿದ ಪಾಪಗಳೆಷ್ಟು? ದೇವರೇ ನಾನು ಮಾಡಿದ ಪಾಪಗಳನ್ನೆಲ್ಲ ಕ್ಷಮಿಸಿಬಿಡಪ್ಪಾ ಅಂದರೆ ಕ್ಷಮಿಸಿಬಿಡುತ್ತಾನಾ ದೇವರು? ಆರತಿ ತಟ್ಟೆಯಲಿ ಜಾಸ್ತಿ ದುಡ್ಡು ಹಾಕಿದವನಿಗೆ ಹೆಚ್ಚಿಗೆ ಮರ್ಯಾದೆ ಸಿಗುವಂಥ ಕಾಲ ಇದು. ಹೆಚ್ಚಿಗೆ ಮರ್ಯಾದೆ ಸಿಗಲಿ ಅಂತನೇ ಎಲ್ಲರಿಗೆ ಕಾಣಿಸುವ ಹಾಗೆ ಹೆಚ್ಚಿಗೆ ದುಡ್ಡುಹಾಕುವವರ ಜಮಾನಾ. ಸ್ವಲ್ಪ ವಿಚಾರ ಮಾಡಿ. ಸರಿಯಾಗಿ ಕರ್ತವ್ಯ ನಿಭಾಯಿಸದೇ ಅಬ್ಬೇಪಾರಿಯಂತೆ ಅಲೆದಾಡಿದ ಸಮಯವೆಷ್ಟು? ಎಷ್ಟು ವ್ಯಯಿಸಿದಿರಿ, ಎಷ್ಟು ಕೂಡಿಟ್ಟಿರಿ? ಯಾರ ತಲೆಯ ಮೇಲೆ ಹೊಡೆದು ಕೂಡಿಟ್ಟಿರಿ? ಸುಮ್‌ಸುಮ್ನೆ ರೇಗಾಡಿ ರಂಪಾಟ ಮಾಡಿದ ಕ್ಷಣಗಳೆಷ್ಟು?

ಅಲ್ಲಿ ಕುಡಿಯಲು ಶುದ್ಧ ನೀರಿಲ್ಲದೇ ವರ್ಷಕ್ಕೆ ಸಾವಿರಾರು ಬಡವರು ಸಾಯುತ್ತಿದ್ದಾರೆ. ಇಲ್ಲಿ ಕೇಳುವವರಿಲ್ಲದೆ ನಲ್ಲಿಯಿಂದ ನೀರು ಹರಿದು ಗಟಾರು ಸೇರುತ್ತಿರುತ್ತದೆ. ಟ್ರಾಫಿಕ್‌ನಲ್ಲಿ ಬುರುಬುರು ಹೊಗೆ ಬಿಡುತ್ತ ಹಿಂದೆ ನಿಂತವನ ಮೂಗುಕಟ್ಟಿ ಉಸಿರಾಡಲು ತೊಂದರೆಯಾದರೂ ಆತ ಹಾಗೇ ಎಕ್ಸಲರೇಟರ್ ತಿರುಗಿಸುತ್ತಿರುತ್ತಾನೆ. ಒಳಗಡೆ ಖಾಲಿಯಿದ್ದರೂ ಸ್ವಲ್ಪ ಮುಂದೆ ಹೋಗಿ ಅಂದರೆ ಬಿಟಿಎಸ್ ಬಸ್ಸಿನ ಫುಟ್‌ಬೋರ್ಡ್‌ನಲ್ಲಿ ತೂರಾಡುತ್ತಿರುವವನಿಗೆ ಕೆಂಡದಂಥ ಕೋಪ. ಬೇಕಾದ್ರೆ ಹೋಗಯ್ಯೋ ಅಂತ ಕಿರುಚುತ್ತಾನೆ. ವಿವೇಚನೆ ತುಕ್ಕುಹಿಡಿದು ನಿದ್ದೆ ಮಾಡುತ್ತಿದೆ. ಎಚ್ಚರಿಸಲೊಂದು ಬೇಕಾಗಿದೆ ಗಂಟೆ. ಮುಂದೆಂದೂ ಎಚ್ಚರಿಕೆಯಲ್ಲಿಡಬೇಕಾದ ಗಂಟೆ. ಆತ್ಮಾವಲೋಕನಕ್ಕಾಗಿ, ಆತ್ಮಶುದ್ಧಿಗಾಗಿ ಬಾರಿಸಬೇಕಾಗಿದೆ ಗಂಟೆ.

ಚುನಾವಣೆಯಲಿ ಯಾವೋನು ಗೆದ್ರೆ ಏನು? ಎಲ್ಲಾ ಅಂಥವರೇ? ಅವನ್ಜೊತೆ ಇವನು ಕೈಮಿಲಾಯಿಸ್ತಾನೆ, ಇವನ್ಗೆ ನಂತರ ಅವನು ಕೈಕೊಡ್ತಾನೆ. ಯಾರು ಬಂದ್ರೂ ಅಷ್ಟೇ ವ್ಯವಸ್ಥೆ ಸರಿಹೋಗೊಲ್ಲ. ಈ ಬಾರಿ ಯಾರಿಗೂ ಓಟು ಹಾಕಲ್ಲ ಅಂತ ಶಪಥ ಮಾಡಿ ಹೇಳುವ ವಯ್ಯ ಈ ಬಾರಿ ಇಂಥವನಿಗೇ ಓಟು ಹಾಕುತ್ತೇನೆ ಅಂತ ಎದೆತಟ್ಟಿ ಹೇಳುವುದಿಲ್ಲ. ಮನಶ್ಶುದ್ಧಿಯಾದ, ಕೈಶುದ್ಧಿಯಾದ ವ್ಯಕ್ತಿಯೊಬ್ಬ ರಾಜಕೀಯಕ್ಕೆ ಬರಲಿ ಅಂದ್ರೆ ನಿಮ್ದು ಹಗಲು ಕನಸು ಅಂತ ರಾಗ ಎಳೀತಾರೆ. ಆಶಾವದಕ್ಕೆ ಲತ್ತೆ ಹೊಡೆದಿದೆ.

ಯಾವ್ದೇ ಹಬ್ಬ ಬರಲಿ ಇದನ್ನು ಕೊಂಡರೆ ಇಂಥದ್ದು ಗಿಫ್ಟು ಗ್ಯಾರಂಟಿ ಎಂದು ಸೈಲೆಂಟಾಗಿ ಜೋಬಿಗೆ ಕೈಹಾಕುವವರಿಗೆ ಜನರ ನಾಡಿಮಿಡಿತ ಎಂಥದ್ದು ಎಂದು ಗೊತ್ತಾಗಿದೆ. ಕೈಯಲ್ಲಿ ದುಡ್ಡಿಲ್ಲದಿದ್ದರೇನಾಯಿತು ಕ್ರೆಡಿಟ್ ಕಾರ್ಡ್ ಇದೆಯಲ್ಲ, ಉಜ್ಜಿಬಿಡೋಣ ಎನ್ನುವವರಿಗೆ ಬ್ಯಾಂಕು ಸರಿಯಾಗಿ ಟೋಪಿ ಹಾಕಿರುತ್ತದೆ. ಅತ್ತ ಅದೇ ಬ್ಯಾಂಕಿಂದ ಸಾಲ ತೆಗೆದುಕೊಂಡವ ಸಾಲ ತೀರಿಸಲಾರದೇ ನೇಣು ಹಾಕಿಕೊಂಡಿರುತ್ತಾನೆ. ಜಗಮಗಿಸುವ ಗ್ಲಾಸಿನ ಹಿಂದಿನ ಆ ಜಗತ್ತು ಕೈಬೀಸಿ ಕರೆಯುತ್ತಲೇ ಇರುತ್ತದೆ. ಕೊಳ್ಳುಬಾಕರು ಕೊಳ್ಳುತ್ತಲೇ ಇರುತ್ತಾರೆ. ಏನೇ ಆದರೂ ಕೊಳ್ಳಲೇಬೇಕಲ್ಲ. ಮನೆ ಅಲಂಕಾರಕ್ಕೆ ಸ್ಟಾರು, ಕ್ರಿಸ್ಮಸ್ ಗಿಡ, ಕೇಕು, ಹೊಸಬಟ್ಟೆ. ಇದೇ ಸರಿಯಾದ ಸಮಯ ಎಂದು ಮನೆಗೊಂದು ಫ್ರಿಜ್ಜು, ಒಂದು ಟೀವಿ, ಒಂದು ಡಿವಿಡಿ. ಪ್ರೀತಿಪಾತ್ರರಿಗೆ ಒಂದೊಂದು ಗಿಫ್ಟು. ಉಳ್ಳವರು ಮಜಾ ಉಡಾಯಿಸುವರಯ್ಯ. ಬಾಕ್ಸಿಂಗ್ ಡೇಯಂಥ ಆಚರಣೆಗಳು ನಮ್ಮ ಭಾರತಕ್ಕೂ ಎಲ್ಲ ಮತಗಳಲ್ಲಿ, ಎಲ್ಲ ಹಬ್ಬಗಳಲ್ಲಿ ಆಚರಣೆಗೆ ಬಂದರೆ ಹೇಗೆ? ಎನಿವೇ, ಹ್ಯಾಪಿ ಶಾಪಿಂಗ್.

ಏನೇ ಆಗಲಿ ಕ್ರೈಸ್ತ ಬಾಂಧವರಿಗೆ ಕ್ರಿಸ್ಮಸ್ ಪ್ರಯುಕ್ತ ಹಾರ್ದಿಕ ಶುಭಾಶಯಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+