ಗೌರಿಹಬ್ಬದಲ್ಲಿ ಕೊಡಗಿನ ಹೊನ್ನಮ್ಮನಿಗೆ ಬಾಗಿನ ಅರ್ಪಣೆ!
ಕೊಡಗಿನಲ್ಲಿರುವ ಹೊನ್ನಮ್ಮನಿಗೆ ಗೌರಿ ಹಬ್ಬದಂದು ಬಾಗಿನ ಅರ್ಪಿಸಲಾಗುತ್ತದೆ. ಹೆಣ್ಣು ಮಕ್ಕಳೆಲ್ಲ ಹೊನ್ನಮ್ಮನಿಗೆ ಬಾಗಿನ ಅರ್ಪಿಸಿ ಮುತ್ತೈದೆ ಸ್ಥಾನ ಕಲ್ಪಿಸುವಂತೆ ಬೇಡಿಕೊಳ್ಳುತ್ತಾರೆ. ಹಾಗಾದರೆ ಕೊಡಗಿನ ಹೊನ್ನಮ್ಮ ಯಾರು? ಎಂಬ ಪ್ರಶ್ನೆ ಜನರಲ್ಲಿ ಮೂಡದಿರದು.
ಗೌರಿಹಬ್ಬದಂದು ಹೊನ್ನಮ್ಮನ ದರ್ಶನ ಮಾಡಿ ಆಕೆಗೆ ಬಾಗಿನ ಅರ್ಪಿಸಿ ಬರಬೇಕೆಂದು ಹೆಣ್ಣು ಮಕ್ಕಳು ಬಯಸುತ್ತಾರೆ. ಹಬ್ಬದ ದಿನ ಆಕೆಯ ಆಶೀರ್ವಾದ ಪಡೆದರೆ ಜೀವನ ಪಾವನವಾಗುತ್ತದೆ ಎಂಬ ನಂಬಿಕೆ ಜನವಲಯದಲ್ಲಿದೆ. ಹೀಗಾಗಿ ಕೊಡಗಿನ ಸೋಮವಾರಪೇಟೆ ಬಳಿಯಿರುವ "ಹೊನ್ನಮ್ಮನ ಕೆರೆ" ಬಳಿ ಜನಸಾಗರವೇ ನೆರೆಯುತ್ತದೆ. ಇಷ್ಟಕ್ಕೂ ಹೊನ್ನಮ್ಮನ ಕೆರೆಯ ಬಗ್ಗೆ ಹೇಳುತ್ತಾ ಹೋದಂತೆ ಪ್ರಾಚೀನ ಇತಿಹಾಸದ ಹೆಣ್ಣುಮಗಳೊಬ್ಬಳ ಭಕ್ತಿಭಾವ, ತ್ಯಾಗ ಬಲಿದಾನದ ಕಥೆಯೊಂದು ಬಿಚ್ಚುತ್ತಾ ಹೋಗುತ್ತದೆ.
ನಮ್ಮ ದೇಶದ ಹೆಣ್ಣುಮಕ್ಕಳು ತ್ಯಾಗದ ಪ್ರತೀಕವೂ ಹೌದು. ಅವರು ತಮ್ಮನ್ನು ಕೇವಲ ಸಂಸಾರಕ್ಕೆ ಮಾತ್ರವಲ್ಲದೆ ಸಮಾಜಕ್ಕಾಗಿಯೂ ತ್ಯಾಗ ಮಾಡಿದ್ದಾರೆ. ಮಾಡುತ್ತಲೇ ಇದ್ದಾರೆ. ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳ ತ್ಯಾಗ ಬಲಿದಾನದ ಕಥೆ ಬಹಳಷ್ಟಿದೆ. ಅದರಲ್ಲಿ ಹೊನ್ನಮ್ಮ ಕೂಡ ಒಬ್ಬಳಾಗಿದ್ದಾಳೆ.
ಹಾಗೆ ನೋಡಿದರೆ ಇಲ್ಲಿರುವ ವಿಶಾಲಕೆರೆ ಹಾಗೂ ಕೆರೆಯ ದಂಡೆಯಲ್ಲಿರುವ ದೇಗುಲ ಎಲ್ಲದಕ್ಕೂ ಇತಿಹಾಸವಿದೆ. ಅಲ್ಲದೆ ಕೆರೆಯ ಬಳಿಯ ಬೆಟ್ಟಗಳಿಗೂ ಪುರಾಣದ ಐತಿಹ್ಯಗಳಿವೆ. ನ್ನಮ್ಮನ ಕೆರೆ ನಿರ್ಮಾಣದ ಹಿಂದೆ ಹೆಣ್ಣುಮಗಳೊಬ್ಬಳ ಬಲಿದಾನದ ಕಥೆಯಿರುವುದನ್ನು ನಾವು ಕಾಣಬಹುದು.

ಏಳುಸಾವಿರ ಸೀಮೆ ಕಥನ
ಅದು 1106ರ ಕಾಲಾವಧಿ ಇವತ್ತಿನ ಹೊನ್ನಮ್ಮನಕೆರೆಯಿರುವ ಪ್ರದೇಶ ದೊಡ್ಡಮಳ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶವನ್ನು ಅಂದು ಏಳುಸಾವಿರ ಸೀಮೆ ಎಂದು ಕರೆಯಲಾಗುತ್ತಿತ್ತಂತೆ. ಕ್ರಿ.ಶ.1034 ರಿಂದ 1297ರವರೆಗೆ ಈ ಸೀಮೆಯನ್ನು ಚಂಗಲವಾಸ್ ಎಂಬ ರಾಜಮನೆತನ ಆಳುತ್ತಿತ್ತಂತೆ. 1106ರಲ್ಲಿ ಆಗಿನ ಏಳುಸಾವಿರ ಸೀಮೆಗೆ ಒಳಪಟ್ಟಿದ್ದ ದೊಡ್ಡಮಳ್ತೆಯಲ್ಲಿ ವ್ಯಾಪಾರಿ ಕಲ್ಲನಕೇರಿ ಮಲ್ಲೇಗೌಡ ಎಂಬಾತ ವಾಸಿಸುತ್ತಿದ್ದನಂತೆ. ಈತ ಊರಿನ ಮುಖಂಡನಾಗಿದ್ದು, ಪರೋಪಕಾರಿಯೂ, ಮಹಾನ್ ದೈವಭಕ್ತನಾಗಿದ್ದನಂತೆ.
ಒಮ್ಮೆ ಗ್ರಾಮದಲ್ಲಿ ಬರಗಾಲ ಕಾಣಿಸಿಕೊಂಡಿತಂತೆ ಆಗ ಕುಡಿಯುವ ನೀರಿಗೆ ಗ್ರಾಮದಲ್ಲಿ ಹಾಹಾಕಾರ ಉಂಟಾಯಿತಂತೆ. ಪ್ರಾಣಿಪಕ್ಷಿಗಳು, ಜಾನುವಾರುಗಳು ನೀರಿಲ್ಲದೆ ಸಾಯತೊಡಗಿದವಂತೆ. ಈ ಸಂದರ್ಭ ಮಲ್ಲೇಗೌಡನಿಗೆ ಕೆರೆಯೊಂದನ್ನು ತೋಡಿ ಗ್ರಾಮದ ಜನರಿಗೆ ಉಂಟಾಗಿರುವ ನೀರಿನ ಬವಣೆಯನ್ನು ತಪ್ಪಿಸಬಹುದು ಎಂಬ ಆಲೋಚನೆ ಬಂತಂತೆ. ಕೂಡಲೇ ಆತ ಕೂಲಿಕಾರರನ್ನು ಕರೆಯಿಸಿ ಕೆರೆಯನ್ನು ತೋಡುವುದಕ್ಕೆ ಮುಂದಾದನು. ಗುಡ್ಡಗಳ ನಡುವೆ ಜನರ ಶ್ರಮದಿಂದ ವಿಶಾಲ ಕೆರೆಯೇನೋ ನಿರ್ಮಾಣವಾಯಿತಾದರೂ ನೀರು ಮಾತ್ರ ಕಾಣಲಿಲ್ಲ.

ಕೆರೆಗೆ ಹಾರವಾದ ಹೊನ್ನಮ್ಮ
ಶಕ್ತಿಮೀರಿ ಭೂಮಿಯ ಆಳಕ್ಕೆ ತೋಡಿದರೂ ನೀರು ಮಾತ್ರ ಮೇಲೆ ಬರಲೇ ಇಲ್ಲ. ಇದರಿಂದ ಮಲ್ಲೇಗೌಡ ಮುಂದೇನು ಮಾಡುವುದು ಎಂದು ಚಿಂತಾಕ್ರಾಂತನಾದನು. ಈ ಸಂದರ್ಭ ಮುತ್ತೈದೆ ಹೆಣ್ಣುಮಗಳನ್ನು ಕೆರೆಗೆ ಹಾರ ನೀಡಿದರೆ ನೀರು ಬರುತ್ತೆ ಎಂಬ ಅಶರೀರವಾಣಿಯೊಂದು ಆತನಿಗೆ ಕೇಳಿಬರುತ್ತದೆ. ಆದರೆ ಕೆರೆಗೆ ಹಾರ ನೀಡುವುದಾದರು ಯಾರನ್ನು ಎಂದು ಮಲ್ಲೇಗೌಡ ಯೋಚಿಸುತ್ತಾ ಚಿಂತೆಯಲ್ಲಿಯೇ ದಿನಕಳೆಯುತ್ತಿರುತ್ತಾನೆ.
ಮಾವನನ್ನು ಆವರಿಸಿದ ಚಿಂತೆಯನ್ನು ಅರಿತ ಕಿರಿಸೊಸೆ ಹೊನ್ನಮ್ಮ ಮಾವನ ಮನವೊಲಿಸಿ ತಾನೇ ಬಲಿದಾನವಾಗಲು ಮುಂದಾಗಿ ಊರಿನ ಜನರ ಒಳಿತಿಗಾಗಿ ಕೆರೆಗೆ ಹಾರವಾಗುತ್ತಾಳೆ. ಆಕೆ ಮಾಡಿದ ತ್ಯಾಗಬಲಿದಾನದ ಫಲದಿಂದ ಕೂಡಲೇ ಕೆರೆಯಲ್ಲಿ ನೀರು ತುಂಬಿ ಬರುತ್ತದೆ. ಪ್ರಾಣಿ ಪಕ್ಷಿಗಳು, ಜನ ಜಾನುವಾರುಗಳು ಕೆರೆಯ ನೀರು ಕುಡಿದು ಸಂತೋಷಪಡುತ್ತಿರುವಾಗಲೇ ದಂಡಿಗೆ ಹೋಗಿದ್ದ ಹೊನ್ನಮ್ಮನ ಪತಿ ಶಾಂತರಾಜು ಹಿಂತಿರುಗುತ್ತಾನೆ. ಆತನಿಗೆ ಮಡದಿ ಹೊನ್ನಮ್ಮ ಕೆರೆಗೆ ಹಾರವಾಗಿರುವ ವಿಷಯ ತಿಳಿಯುತ್ತದೆ. ಮಡದಿಯ ಅಗಲಿಕೆಯ ನೋವನ್ನು ತಾಳಲಾರದೆ ಆತನೂ ಕೂಡ ಅದೇ ಕೆರೆಗೆ ಹಾರಿ ಪ್ರಾಣಬಿಡುತ್ತಾನೆ.

ತ್ಯಾಗಬಲಿದಾನದ ನೆನಪಿಗಾಗಿ ದೇವಾಲಯ
ಇದಾದ ಬಳಿಕ ತನ್ನ ಸೊಸೆಯ ತ್ಯಾಗಬಲಿದಾನದ ನೆನಪಿಗಾಗಿ ಮಲ್ಲೇಗೌಡ ಕೆರೆಯ ಏರಿಯಲ್ಲೊಂದು ದೇವಾಲಯವನ್ನು ಕಟ್ಟಿಸಿ, ಅಲ್ಲಿ ಬಸವೇಶ್ವರ, ಗಣಪತಿ, ಹಾಗೂ ಹೊನ್ನಮ್ಮನ ವಿಗ್ರಹವನ್ನು ಪ್ರತಿಷ್ಠಾಪಿಸಿದನು ಎಂದು ಹೇಳಲಾಗಿದೆ. ಈ ದೇವಾಲಯವನ್ನು ಗ್ರಾಮಸ್ಥರು ಕಳೆದ ಹತ್ತು ವರ್ಷಗಳ ಹಿಂದೆ ಶ್ರಮದಾನದ ಮೂಲಕ ಜೀರ್ಣೋದ್ಧಾರಗೊಳಿಸಿ ಗುಡಿಯ ಮಧ್ಯೆ ಬಸವೇಶ್ವರ ದೇವರ ವಿಗ್ರಹ, ಬಲಭಾಗಕ್ಕೆ ಗಣಪತಿ ಮತ್ತು ತಾಯಿ ಹೊನ್ನಮ್ಮನ ವಿಗ್ರಹ ಹಾಗೂ ಎಡಭಾಗಕ್ಕೆ ಅಮೃತೇಶ್ವರ ದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿಕೊಂಡು ಬರಲಾಗುತ್ತಿದೆ.

ನವದಂಪತಿ-ಮುತ್ತೈದೆಯರಿಂದ ಬಾಗಿನ
ನಾಡಿನ ಜನತೆಗಾಗಿ ಹೊನ್ನಮ್ಮ ಮಾಡಿದ ತ್ಯಾಗ ಬಲಿದಾನದ ನೆನಪಿಗಾಗಿ ವರ್ಷಂಪ್ರತಿ ಗೌರಿಹಬ್ಬದ ದಿನದಂದು ಕೆರೆಗೆ ನವ ವಧು-ವರರು ಹಾಗೂ ಮುತ್ತೈದೆಯರು ಬಾಗಿನ ಅರ್ಪಿಸುತ್ತಾರೆ. ಅಲ್ಲದೆ, ನವದಂಪತಿಗಳು ಬಾಗಿನ ಅರ್ಪಿಸಿ ತಾಯಿ ಹೊನ್ನಮ್ಮನಿಗೆ ಪೂಜೆ ಸಲ್ಲಿಸಿದರೆ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ಎಂಬ ನಂಬಿಕೆಯೂ ಜನರಲ್ಲಿದೆ.
ಸುಮಾರು 16.20 ಎಕರೆ ವಿಸ್ತೀರ್ಣ ಹೊಂದಿರುವ ಹೊನ್ನಮ್ಮನ ಕೆರೆಯಿಂದ ದೊಡ್ಡಮಳ್ತೆ, ಹಾರೋಹಳ್ಳಿ, ಮಸಗೊಡು, ಅಬ್ಬೂರು, ಮೋರಿಕಲ್ಲು ಹಾಗೂ ಅಡಿನಾಡೂರು ಗ್ರಾಮಗಳ ಕೃಷಿಕರ ಜಮೀನಿಗೆ ನೀರು ಹರಿಯುತ್ತಿದ್ದು ಅವರ ಪಾಲಿಗೆ ಹೊನ್ನಮ್ಮ ಅನ್ನದಾತೆಯೂ ಆಗಿದ್ದಾಳೆ. ಹೊನ್ನಮ್ಮನ ಕೆರೆಗೆ ಕೊಡಗಿನ ಸೋಮವಾರ ಪೇಟೆಯಿಂದ ಶನಿವಾರಸಂತೆ ಕಡೆಗಿನ ರಸ್ತೆಯಲ್ಲಿ ಸುಮಾರು 6ಕಿ.ಮೀ. ಸಾಗಿದರೆ ದೊಡ್ಡಮಳ್ತೆ ಎಂಬ ಗ್ರಾಮ ಸಿಗುತ್ತದೆ. ಅಲ್ಲಿಂದ ಬಲಕ್ಕೆ ಇರುವ ರಸ್ತೆಯಲ್ಲಿ ತೆರಳಿದರೆ ಹೊನ್ನಮ್ಮನ ಕೆರೆಯನ್ನು ತಲುಪಬಹುದು.
-
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ












Click it and Unblock the Notifications