ಚಿತ್ರದುರ್ಗದಲ್ಲಿ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆ
ಚಿತ್ರದುರ್ಗ, ಸೆಪ್ಟೆಂಬರ್, 07: ಇಂದು (ಸೆಪ್ಟೆಂಬರ್ 07, 2024) ದೇಶಾದ್ಯಂತ ಗಣೇಶ ಚತುರ್ಥಿ ಹಿನ್ನೆಲೆ ಮನೆ ಮನೆಗಳಲ್ಲಿ ಸಂಭ್ರಮ ಮನೆ ಮಾಡಿದೆ. ಇತ್ತ ಐತಿಹಾಸಿಕ ಕೋಟೆ ನಾಡು ಚಿತ್ರದುರ್ಗದಲ್ಲೂ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಕೆ ಮಾಡಲಾಯಿತು.
ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ನಗರದ ಬಿ ಡಿ ರಸ್ತೆಯಲ್ಲಿನ ಜೈನಧಾಮದಲ್ಲಿ ಬೃಹತ್ ಪೆಂಡಾಲ್ ಹಾಕಿ ಹಿಂದೂ ಮಹಾಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.

ಇಂದಿನಿಂದ 21 ದಿನಗಳ ಕಾಲ ವಿವಿಧ ಪೂಜಾ ಕಾರ್ಯಕ್ರಮಗಳು ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿ ಗಣಪತಿಗೆ ಪ್ರಥಮವಾಗಿ ಒಂದು ಗ್ರಾಂ ಬಂಗಾರದ ಆಭರಣಗಳನ್ನು ತಯಾರು ಮಾಡಿ, ಗಣೇಶನಿಗೆ ತೋಡಿಸಲಾಗಿದೆ.
ಕಳೆದ ನಾಲ್ಕು ವರ್ಷಗಳಿಂದ ಗಣಪತಿ ಪೂರ್ವ ದಿಕ್ಕಿನಲ್ಲಿ ನಿರ್ಮಾಣ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಉತ್ತರ ದಿಕ್ಕಿಗೆ ಮಂಟಪವನ್ನು ನಿರ್ಮಾಣ ಮಾಡಿ ಉತ್ತರ ದಿಕ್ಕಿಗೆ ಈ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ನಗರದ ನೂರಾರು ಭಕ್ತರು ಶ್ರೀ ಗಣೇಶನ ಪೂಜೆಯಲ್ಲಿ ಭಾಗಿಯಾಗಿ ದರ್ಶನ ಪಡೆದರು.
ಪ್ರತಿದಿನ ಬೆಳಗ್ಗೆ ಗಣಪತಿಗೆ ವಿವಿಧ ರೀತಿಯ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಸ್ಥಳೀಯರಿಗಲ್ಲದೇ ಹೊರ ಜಿಲ್ಲೆಯ, ಹೊರ ರಾಜ್ಯದವರಿಗೂ ತಮ್ಮ ಕಲೆಯನ್ನು ಪ್ರದರ್ಶನ ಮಾಡಲು ಅವಕಾಶವನ್ನು ಈ ಬಾರಿ ಕಲ್ಪಿಸಲಾಗಿದೆ. ಸಂಗೀತ ಭರತನಾಟ್ಯ ಯಕ್ಷಗಾನ ಸೂತ್ರದ ಗೊಂಬೆ ಮಾತನಾಡುವ ಗೊಂಬೆ ಎಂತಹ ಕಾರ್ಯಕ್ರಮಗಳು 22ರ ವರೆಗೆ ನಡೆಯಲಿದೆ. ಸೆಪ್ಟೆಂಬರ್ 27ರಂದು ಬೃಹತ್ ಮೆರವಣಿಗೆಯ ಮೂಲಕ ಗಣೇಶನ ಶೋಭ ಯಾತ್ರೆ ನಡೆಯಲಿದ್ದು, ಅಂದು ರಾತ್ರಿ ವಿಸರ್ಜನೆ ಮಾಡಲಾಗುತ್ತದೆ.
ಗಣೇಶ ದೇವಾಲಯದಲ್ಲಿ ಪೂಜೆ: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಶ್ರೀ ಗಣೇಶ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗಣೇಶ ಚತುರ್ಥಿ ಅಂಗವಾಗಿ ಶ್ರೀ ಗಣಪತಿಗೆ ವಿಶೇಷ ಅಲಂಕಾರ ನೈವೇದ್ಯ ಮಾಡಿ ಪೂಜೆ ಸಲ್ಲಿಸಲಾಯಿತು. ಇನ್ನು ಹಿರಿಯೂರು, ಚಳ್ಳಕೆರೆ, ಹೊಸದುರ್ಗ ಹಾಗೂ ಮೊಳಕಾಲ್ಮೂರು ತಾಲೂಕಿನಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಲಾಗಿದೆ.
ಅಯೋಧ್ಯೆ ರಾಮನ ರೂಪದ ಗಣಪತಿ: ಇಂದು (ಸೆಪ್ಟೆಂಬರ್ 07, 2024) ದೇಶಾದ್ಯಂತ ಗಣೇಶ ಚತಿರ್ಥಿ ಹಬ್ಬ ಆರಂಭವಾಗಿದೆ. ಒಂದೊಂದು ಭಾಗಗಳಲ್ಲಿ ಒಂದೊಂದು ಥೀಮ್‌ನಲ್ಲಿ ಮಂಟಪಗಳನ್ನು ಮಾಡಲಾಗಿದ್ದು, ಹಾಗೆಯೇ ವಿವಿಧ ರೀತಿಯ ಆಕರ್ಷಣೆ ಮೂರ್ತಿಗಳನ್ನು ಇಟ್ಟು ಪೂಜೆ ಮಾಡಲಾಗಿದೆ. ಹಾಗಾದರೆ ಗಡಿಜಿಲ್ಲೆ ಚಾಮರಾಜನಗರದಲ್ಲಿ ಗಣಪನ ಮೂರ್ತಿಯನ್ನು ಯಾವ ಥೀಮ್‌ನಲ್ಲಿ ತಯಾರಿಸಲಾಗಿದೆ ಎಂದು ಇಲ್ಲಿ ತಿಳಿಯಿರಿ.
ಗಡಿಜಿಲ್ಲೆ ಚಾಮರಾಜನಗರದಲ್ಲಿ ಹಿಂದೂಪರ ಸಂಘಟನೆಗಳು ಈ ಬಾರಿ ಅಯೋಧ್ಯೆ ರಾಮನ ಪ್ರತಿರೂಪ ಗಣಪತಿಯನ್ನು ಪ್ರತಿಷ್ಟಾಪನೆ ಮಾಡಲಾಗಿದೆ. ಹಾಗಾದರೆ ಇದಕ್ಕೆ ಮೊದಲ ಪೂಜೆ ಯಾರಿಂದ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಹೆಚ್ಚು ಪೊಲೀಸ್ ಬಂದೋಬಸ್ತ್ ಇರುವುದರಿಂದ ಇದು ಪೊಲೀಸ್ ಗಣಪತಿ ಅಂಥಲೂ, ದೊಡ್ಡ ಗಣಪತಿ, ಆರ್‌ಎಸ್ಎಸ್ ಗಣಪತಿ ಅಂಥಲೂ ಈ ಗಣೇಶ ರಾಜ್ಯದಲ್ಲೇ ಪ್ರತಿಷ್ಠಿತ ಗಣೇಶ ಮೂರ್ತಿಗಳಲ್ಲಿ ಒಂದಾಗಿದ್ದಾನೆ. ಮಂಗಳವಾದ್ಯದಲ್ಲಿ ಗಣೇಶ ಮೂರ್ತಿಯನ್ನು ಮೆರವಣಿಗೆಯಲ್ಲಿ ತಂದು ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.
ಇನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್, ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಪ್ರತಿಷ್ಠಾಪನೆ ವೇಳೆ ಹಾಜರಿದ್ದು, ಪೂಜೆಯಲ್ಲಿ ಪಾಲ್ಗೊಂಡು ಮೊದಲ ಪೂಜೆ ಮಾಡಿ ಗಮನ ಸೆಳೆದರು.












Click it and Unblock the Notifications