ಬೆಳಕಿನ ಹಬ್ಬಕ್ಕೆ ಕಡಿಮೆ ಬಜೆಟ್ಟಿನ ವೆರೈಟಿ ಹಣತೆ
ದೀಪದಿಂದ ದೀಪ ಹಚ್ಚೆ ದೀಪಾವಳಿ.ಮತ್ತೆ ಬಂದಿದೆ ಬೆಳಕಿನ ಹಬ್ಬ. ದೀಪಾವಳಿ ಅಂದ ಕೂಡಲೇ ದೀಪಗಳ ಸಂಭ್ರಮ.. ಪಟಾಕಿ ಒತ್ತಟ್ಟಿಗಿಟ್ಟು ಈ ಬಾರಿ ಪರಿಸರ ಮಾಲಿನ್ಯಗೊಳಿಸದೇ ದೀಪ ಹಚ್ಚಿ ಸಂಭ್ರಮಿಸುವ ಸಂಕಲ್ಪವನ್ನು ಎಲ್ಲರೂ ತೊಟ್ಟರೆ ಬಹುಶಃ ದೀಪಾವಳಿ ಹಬ್ಬಕ್ಕೊಂದು ಅರ್ಥ ಸಿಕ್ಕಂತೆ. ದೀಪಾವಳಿ ಅಂದ ಕೂಡಲೇ ಮಾರ್ಕೆಟ್‌ಗಳಲ್ಲಿ ಹಣತೆಗಳ ವೆರೈಟಿ ವೆರೈಟಿ ಡಿಸೈನ್ ಲಭ್ಯವಿರುತ್ತೆ.
ಕೆಲವು ಅದ್ಬುತ ಡಿಸೈನಿನ ಹಣತೆಗಳು ಸ್ವಲ್ಪ ದುಬಾರಿಯಾರುತ್ತೆ. ಕಡಿಮೆ ಬಜೆಟ್‌ನಲ್ಲಿ ದೀಪಾವಳಿ ಆಚರಿಸ್ಬೇಕು ಅನ್ನೋರು ನೀವಾಗಿದ್ರೆ ನಿಮ್ಗೊಂದಿಷ್ಟು ಟಿಪ್ಸ್ ಇಲ್ಲಿದೆ. ಕೆಲವು ಶ್ರೀಮಂತರು ಬೆಳ್ಳಿ, ಚಿನ್ನದ ಹಣತೆಯಲ್ಲಿ ದೀಪ ಹಚ್ತಾರೆ. [ಶಾಸ್ತ್ರೋಕ್ತವಾಗಿ ದೀಪಾವಳಿ ಹಬ್ಬ ಆಚರಿಸುವುದು ಹೇಗೆ?]
ಮಾರುಕಟ್ಟೆಯಲ್ಲಿ ಯಾವ ತೆರನಾದ ದೀಪಗಳು ಇವೆ ಎಂಬುದರ ಬಗ್ಗೆ ಈಗಾಗಲೇ ಲೇಖನ ಓದಿರುತ್ತೀರಿ. ಈಗ ವೈವಿಧ್ಯಮಯ ದೀಪಗಳನ್ನು ಮನೆಯಲ್ಲೇ ತಯಾರಿಸುವ ವಿಧಾನವನ್ನು ಇಲ್ಲಿ ಕಾಣಿರಿ.
ಕೆಲವರು ಮಣ್ಣಿನ ವೆರೈಟಿ ಡಿಸೈನ್‌ಗಳನ್ನು ಕೊಂಡುಕೊಳ್ತಾರೆ. ಆದ್ರೆ ಮಣ್ಣಿನ ಹಣತೆಗಳನ್ನು ಹೊರತುಪಡಿಸಿ ದೀಪ ಹಚ್ಚಲು ಒಂದಷ್ಟು ಐಡಿಯಾಗಳಿವೆ. ನೀವೇ ನಿಮ್ಮ ಕೈಯಾರೆ ಹಣತೆಗಳನ್ನು ತಯಾರಿಸಿಕೊಳ್ಳಬಹುದು.. [ಬೆಳಕಿನೊಂದಿಗೆ ಆತ್ಮದ ಬಂಧ ಬೆಸೆಯುವ ಮಿಣಮಿಣ ಹಣತೆ!]
ದೀಪಾವಳಿ ಹಬ್ಬವನ್ನು ಪಟಾಕಿ ಸಿಡಿಸಿ ಶಬ್ದಮಾಲಿನ್ಯ ಮಾಡಿ ಆಚರಿಸುವ ಬದಲು ಹೀಗೆ ನೈಸರ್ಗಿಕ ದೀಪ ತಯಾರಿಸಲು ಸಮಯ ಕಳೆದು, ಆ ಮೂಲಕ ಅರೋಗ್ಯಕರವಾಗಿ ದೀಪಾವಳಿ ಆಚರಿಸಿದ್ರೆ ಮನೆಮಂದಿಯ ಆರೋಗ್ಯದ ಹಿತದೃಷ್ಟಿಯಿಂದಲೂ ಒಳ್ಳೆಯದು ಜೊತೆಗೆ ಪರಿಸರವೂ ಆರೋಗ್ಯಪೂರ್ಣವಾಗಿರಲು ನೀವು ಕೊಡುಗೆ ನೀಡಿದಂತಾಗುತ್ತೆ.
ಅದ್ಭುತವಾದ ನೈಸರ್ಗಿಕ ಹಣತೆಗಳು ನಿಜಕ್ಕೂ ದೀಪಾವಳಿ ಹಬ್ಬವನ್ನು ಇನ್ನಷ್ಟು ರಂಗುಗೊಳ್ಳುವಂತೆ ಮಾಡೋದರಲ್ಲಿ ಅನುಮಾನವೇ ಇಲ್ಲ. ಅಂತಹ ಕೆಲವು ಹಣತೆಗಳನ್ನು ಹೇಗೆ ತಯಾರಿಸೋದು ಅನ್ನೋದನ್ನು ಬಗ್ಗೆ ಮುಂದೆ ಓದಿ...

ವಿವಿಧ ರೀತಿಯ ಹಿಟ್ಟುಗಳಿಂದ ಹಣತೆ
ಗೋಧಿಹಿಟ್ಟು, ಅಕ್ಕಿಹಿಟ್ಟು, ಮೈದಾಹಿಟ್ಟು ಇತ್ಯಾದಿಗಳಿಂದ ನೀವು ನಿಮ್ಮ ಕೈಯಾರೆ ಹಣತೆಯನ್ನು ತಯಾರಿಸಿಕೊಳ್ಳಬಹುದು.. ಹಿಟ್ಟನ್ನು ಗಟ್ಟಿಯಾಗಿ ಚಪಾತಿ ಹದಕ್ಕೆ ಕಲಸಿ ಅದಕ್ಕೆ ಹಣತೆಯ ಶೇಪ್ ನೀಡಿ ಒಂದೆರಡು ದಿನ ಬಿಸಿಲಿನಲ್ಲಿ ಒಣಗಿಸಿ.. ಸ್ವಲ್ಪ ಗಟ್ಟಿಯಾದ ನಂತ್ರ ಬೇಕಿದ್ರೆ ಆ ಹಣತೆಗೆ ನಿಮ್ಗಿಷ್ಟವಾದ ಬಣ್ಣ ಹಚ್ಚಿ..
ಬಣ್ಣ ಹಚ್ಚಲು ಪೈಂಟೇ ಬೇಕು ಅಂತೇನಿಲ್ಲ. ಬದಲಾಗಿ ನೀವು ನೈಲ್ ಪಾಲಿಶ್ ಕೂಡ ಬಳಸಿ ಡಿಸೈನ್ ಮಾಡ್ಬಹುದು.. ಅದಕ್ಕೂ ಮೀರಿ ಕ್ರಿಯೇಟಿವ್ ಆಗಿರೋರು ನೀವಾಗಿದ್ರೆ ಸ್ಟಿಕ್ಕರ್‌ಗಳನ್ನು ಅಂಟಿಸಿ ಕುಂದನ್ ಡಿಸೈನ್‌ನ್ನೂ ಕೂಡ ತಯಾರಿಸ್ಬಹುದು..

ಅಡಿಕೆ ಸಿಪ್ಪೆಯಿಂದ ಹಣತೆ
ಸಿಪ್ಪೆ ಸಹಿತ ಇರುವ ಅಡಿಕೆಯನ್ನು ಎರಡು ಸಮಭಾಗವನ್ನಾಗಿ ಕತ್ತರಿಸಿ ಅದ್ರೊಳಗಿನ ಅಡಿಕೆಯನ್ನು ಹೊರತೆಗೆದ್ರೆ ಆ ಅಡಿಕೆ ಸಿಪ್ಪೆಯಲ್ಲಿ ದೀಪ ಹಚ್ಚಬಹುದು.. ಇದು ನೈಸರ್ಗಿಕವಾಗಿಯೇ ಇರುವ ಹಣತೆ..ಸಾಮಾನ್ಯವಾಗಿ ಕರಾವಳಿ ಮತ್ತು ಮಲೆನಾಡಿನ ಹಲವು ಕಡೆಗಳಲ್ಲಿ ಈ ರೀತಿ ಅಡಿಕೆ ಸಿಪ್ಪೆಯಿಂದ ದೀಪ ಹಚ್ಚುವ ಸಂಪ್ರದಾಯ ಚಾಲ್ತಿಯಲ್ಲಿದೆ.. ನೀವೂ ಈ ಸಂಪ್ರದಾಯವನ್ನು ಇಲ್ಲಿ ಬೆಳೆಸಿ ಯಾವುದೇ ಖರ್ಚಿಲ್ಲದೆ ದೀಪಗಳ ಹಬ್ಬವನ್ನು ಸಂಭ್ರಮದಿಂದ ಆಚರಿಸಬಹುದು.

ಲಿಂಬೆಹಣ್ಣಿನ ಹಣತೆ
ಎಲ್ಲರಿಗೂ ಗೊತ್ತಿರೋ ಹಾಗೆ ಸಾಮಾನ್ಯವಾಗಿ ಲಿಂಬೆಹಣ್ಣಿನಿಂದ ದೀಪ ಹಚ್ಚುವ ಸಂಪ್ರದಾಯ ಇದೆ. ದೇವಿಗೆ ಲಿಂಬೆಹಣ್ಣಿನ ದೀಪ ಶ್ರೇಷ್ಠ ಅಂತ ಹೇಳಲಾಗುತ್ತೆ. ಅದೇ ರೀತಿ ದೀಪಾವಳಿಯ ಸಂದರ್ಭದಲ್ಲೂ ಕೂಡ ನೀವು ಲಿಂಬೆಹಣ್ಣಿನಿಂದ ದೀಪನ್ನು ಹಚ್ಚಬಹುದು. ನಿಂಬೆಯ ದೀಪದ ಬಗ್ಗೆ ಹೆಚ್ಚೇನು ಹೇಳುವ ಅಗತ್ಯವಿಲ್ಲ. ಹೆಚ್ಚಿನವರಿಗೆ ನಿಂಬೆಯ ದೀಪ ಹಚ್ಚೋದು ಹೇಗೆ ಅನ್ನೋದು ಗೊತ್ತೇ ಇರುತ್ತೆ.

ಹಳ್ಳಿಗಾಡಿನ ಸಗಣಿ ಹಣತೆ
ಹಳ್ಳಿಗಾಡಿನ ಜನತೆಗೆ ಚಿರಪರಿಚಿತವಾಗಿರುವ ದೀಪ ಅಂದ್ರೆ ಸಗಣಿಯಿಂದ ತಯಾರಿಸುವ ದೀಪ.. ಬೆರಣಿಯಿಂದ ದೀಪ ತಯಾರಿಸಲು ಸ್ವಲ್ಪ ಸಮಯ ಹೆಚ್ಚೆ ಬೇಕಾಗುತ್ತೆ. ಸುಮಾರು 15 ದಿನಗಳ ಪೂರ್ವ ತಯಾರಿ ಬೇಕಾಗುತ್ತೆ.
ಸಗಣಿಯಿಂದ ಹಣತೆಯನ್ನು ತಯಾರಿಸಿ ಅದನ್ನು ಬಿಸಿಲಿನಲ್ಲಿ ಹಲವು ದಿನಗಳ ಕಾಲ ಒಣಗಿಸಬೇಕಾಗುತ್ತೆ. ನಿಮ್ಗೆ ತಾಳ್ಮೆ ಇದ್ದಲ್ಲಿ, ಈ ದೀಪವನ್ನು ತಯಾರಿಸಿಕೊಂಡ್ರೆ ಎಲ್ಲಾ ದೀಪಗಳಿಗಿಂತ ಈ ದೀಪ ಹೆಚ್ಚು ಆರೋಗ್ಯಕಾರಿಯಾಗಿರುವ ಅದ್ಭುತ ಹಣತೆಗಳಲ್ಲಿ ಒಂದು.

ಕಿತ್ತಲೆ ಹಣ್ಣು
ನಿಂಬೆಯಂತೆಯೇ ಕಿತ್ತಲೆ ಹಣ್ಣಿನಿಂದಲೂ ಕೂಡ ದೀಪ ಹಚ್ಚಬಹುದು. ಲಿಂಬೆಯಲ್ಲಿ ನೀವು ಯಾವ ರೀತಿ ವಿಧಾನ ಬಳಸುತ್ತೀರೋ ಅದೇ ಕ್ರಮವನ್ನು ಕಿತ್ತಲೆ ದೀಪ ಹಚ್ಚುವಾಗಲೂ ಕೂಡ ಅನುಸರಿಸ್ಬೇಕು..ಲಿಂಬೆಗಿಂತ ಹೆಚ್ಚು ಎಣ್ಣೆಯನ್ನು ಹಾಕುವ ಅವಕಾಶ ಕಿತ್ತಲೆ ಹಣ್ಣಿನ ದೀಪದಲ್ಲಿರುತ್ತೆ. ಬೇಕಿದ್ರೆ ಒಂದೆರಡು ದಿನ ಮುಂಚಿತವಾಗಿಯೇ ಕಿತ್ತಲೆ ದೀಪವನ್ನು ರೆಡಿ ಮಾಡಿ , ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಇಟ್ಟುಕೊಂಡು ಬೇಕಿದ್ರೆ ಆ ಸಿಪ್ಪೆಗೆ ಕಲರಿಂಗ್ ಕೂಡ ಮಾಡಿ ಆಕರ್ಷಕ ದೀಪವನ್ನು ತಯಾರಿಸಿಕೊಳ್ಳಬಹುದು..

ಆಲೂಗಡ್ಡೆಯಿಂದ ದೀಪ
ಒಂದು ದೊಡ್ಡ ಆಲೂಗಡ್ಡೆ ತೆಗೆದುಕೊಂಡು ಅದ್ರ ಮಧ್ಯಭಾಗದಲ್ಲಿ ಹೋಲ್ ಮಾಡಿ ಹಣತೆಯ ಆಕಾರ ನೀಡಿ. ಆಲೂಗಡ್ಡೆಯ ಸಿಪ್ಪೆಯನ್ನು ತೆಗೆಯದೇ ಇದ್ರೆ, ಎಣ್ಣೆ ಹೆಚ್ಚು ಹೊತ್ತು ಇರಲು ಸಹಕಾರಿಯಾಗುತ್ತೆ. ನೀಟಾಗಿ ಆಲೂಗಡ್ಡೆಗೆ ಹಣತೆಯ ಶೇಪ್ ನೀಡಿ ಅದ್ರಲ್ಲಿ ಎಣ್ಣೆ ಹಾಕಿ ದೀಪ ಹಚ್ಚಿ. ಕೇವಲ ಆಲೂಗಡ್ಡೆ ಮಾತ್ರ ಅಲ್ಲ, ಹೀಗೆ ಹೆಚ್ಚಿನ ಗಟ್ಟಿ ತರಕಾರಿಗಳಲ್ಲಿ ಹಣತೆಯನ್ನು ತಯಾರಿಸ್ಬಹುದು..












Click it and Unblock the Notifications