Diwali 2023: ದೀಪಾವಳಿಯ ದಿನ ಹಚ್ಚುವ ಯಮ ದೀಪದ ಮಹತ್ವವೇನು..?
ದೀಪಾವಳಿ ದೀಪಗಳ ಹಬ್ಬ. ಸಾಂಪ್ರದಾಯವಾಗಿ ದೀಪಕ್ಕೆ ಅದರದೇ ಆದ ಮಹತ್ವವಿದೆ. ದೀಪ ಎನ್ನುವುದು ಕೇವಲ ಬೆಳಕಿಗಾಗಿ ಹಚ್ಚುವ ಸಾಧನವಲ್ಲ, ಬದಲಿಗೆ ಅದು ನಮ್ಮ ಪ್ರಾರ್ಥನೆಯನ್ನು ದೇವರಿಗೆ ತಲುಪಿಸುವ ಮಧ್ಯವರ್ತಿ ಎಂದು ನಂಬಲಾಗುತ್ತದೆ. ಇಂತಹ ಮಹತ್ವವಿರುವ ದೀಪಗಳ ಹಬ್ಬವೇ ದೀಪಾವಳಿ.
ಕಾರ್ತಿಕ ಮಾಸದಲ್ಲಿ ದೀಪಗಳನ್ನು ಬೆಳಗಿಸುವುದು ಶುಭ ಎನ್ನುವ ನಂಬಿಕೆ ಇದೆ. ಕೆಲವರ ಮನೆ ಬಾಗಿಲಿನಲ್ಲಿ ಪ್ರತಿನಿತ್ಯವು ದೀಪಗಳನ್ನು ಬೆಳಗಿಸಲಾಗುತ್ತದೆ. ಆದರೆ ಇನ್ನೂ ಕೆಲವರು ಕಾರ್ತಿಕ ಮಾಸದಲ್ಲಿ ಮನೆಯ ಹೊಸ್ತಿಲಲ್ಲಿ ದೀಪಗಳನ್ನು ಬೆಳಗಿಸುತ್ತಾರೆ.

ದೀಪಾವಳಿಯ ದಿನ ಹಚ್ಚುವ ದೀಪಕ್ಕೆ ಬಹಳಷ್ಟು ಮಹತ್ವ ಹಾಗೂ ವಿಶೇಷತೆ ಇದೆ. ಈ ದಿನ ಕೆಲವರು ಯಮ ದೀಪ ಹಚ್ಚುತ್ತಾರೆ. ಹಾಗಾದರೆ ದೀಪಾವಳಿಗೆ ಯಮ ದೀಪಗಳನ್ನು ಹಚ್ಚುವ ಸರಿಯಾದ ಕ್ರಮವೇನು ಎನ್ನುವ ಪ್ರಶ್ನೆಗೆ ಇಲ್ಲಿ ವಿವರ ನೀಡಲಾಗಿದೆ.
ದೀಪಾವಳಿಯ ದಿನ ಕೆಲವು ಭಾಗಗಳಲ್ಲಿ ಯಮನನ್ನು ಪೂಜಿಸುತ್ತಾರೆ. ದೀಪಾವಳಿಯ ದಿನ ಯಮನನ್ನು ಪೂಜಿಸಿದ ನಂತರ, ಸಂಜೆ ಹೊಸ್ತಿಲಲ್ಲಿ ದೀಪಗಳನ್ನು ಬೆಳಗಿಸಲಾಗುತ್ತದೆ. ಈ ದೀಪವನ್ನು ಯಮ ದೀಪ ಎಂದು ಕರೆಯಲಾಗುತ್ತದೆ.ಇದು ಎದುರಾಗುವ ಅಕಾಲಿಕ ಮರಣವನ್ನು ತಡೆಯುತ್ತದೆ ಎನ್ನುವುದು ಜನರ ನಂಬಿಕೆಯಾಗಿದೆ.
ಸೂರ್ಯಾಸ್ತದ ನಂತರ ಜನರು ತಮ್ಮ ಮನೆಗಳ ಬಾಗಿಲುಗಳಲ್ಲಿ ಹದಿನಾಲ್ಕು ದೀಪಗಳನ್ನು ಬೆಳಗಿಸುತ್ತಾರೆ. ಈ ದೀಪಗಳನ್ನು ದಕ್ಷಿಣಾಭಿಮುಖವಾಗಿಟ್ಟು ಪೂಜೆ ಮಾಡುತ್ತಾರೆ. ಈ ದೀಪವನ್ನು ಹೊರಗೆ ಇಟ್ಟ ಮೇಲೆ ಯಾರು ಅದನ್ನು ಹಿಂದಿರುಗಿ ನೋಡಬಾರದು ಎನ್ನುತ್ತಾರೆ. ಇದನ್ನು ಮನೆಯ ಸುತ್ತಲೂ ತೆಗೆದುಕೊಂಡು ಹೋಗುವುದರಿಂದ ಎಲ್ಲಾ ದುಷ್ಟಶಕ್ತಿಗಳು ಮನೆಯಿಂದ ದೂರ ಹೋಗುತ್ತವೆ ಎನ್ನುವ ನಂಬಿಕೆಯಿದೆ.

ದೀಪಾವಳಿಯ ಲಕ್ಷ್ಮೀ ಪೂಜೆಯ ವಿಧಿ-ವಿಧಾನಗಳೇನು..?
ಇನ್ನು ದೀಪಾವಳಿಯ ಅಮವಾಸೆಯಂದು ಲಕ್ಷ್ಮೀ ಪೂಜೆಯನ್ನು ಮಾಡಲಾಗುತ್ತದೆ. ಧನಲಕ್ಷ್ಮಿ ಅಥವಾ ಕುಬೇರ ಲಕ್ಷ್ಮೀಯನ್ನು ಆರಾಧಿಸಲಾಗುತ್ತದೆ. ದೀಪಾವಳಿಯ ಹಬ್ಬದಂದು ಬಹುತೇಕರ ಮನೆಯಲ್ಲಿ ಲಕ್ಷ್ಮೀ ದೇವಿಯ ಪೂಜೆ ಮಾಡುತ್ತಾರೆ. ಒಂದು ಮಣೆಯ ಮೇಲೆ ಲಕ್ಷ್ಮೀ ದೇವಿಯ ವಿಗ್ರಹ ಅಥವಾ ಕಳಶವನ್ನು ಕೂರಿಸಿ ಅಲಂಕರಿಸಿ. ಸೀರೆ, ಬಳೆ, ಆಭರಣಗಳನ್ನು ತೊಡಿಸಿದ ಬಳಿಕ ಹೂವಿನಿಂದ ಅಲಂಕರಿಸಿ.
ಬಳಿಕ ಮನೆಯಲ್ಲಿರುವ ಧನ-ಕನಕಗಳನ್ನು ದೇವರ ಮುಂದೆ ಇರಿಸಿ. ಜೊತೆಗೆ ಒಂದಿಷ್ಟು ಸಿಹಿ-ತಿಂಗಳನ್ನು ದೇವ ಮುಂದೆ ಇರಿಸಿ. ಆರತಿ ಮಾಡಿ ಪೂಜೆಯ ವಿಧಿವಿಧಾನಗಳನ್ನು ಪೂರೈಸಿ. ಈ ಪೂಜೆಯನ್ನು ಸಂಜೆ 06.30 ರಿಂದ ರಾತ್ರಿ 7.30ರ ಒಳಗೆ ಮಾಡಬೇಕು. ಲಕ್ಷ್ಮೀ ದೇವರಿಗೆ ತುಪ್ಪದ ದೀಪಗಳನ್ನು ಹಚ್ಚಿ ಸಕಲ ಐಶ್ವರ್ಯ ಸಿದ್ಧಿಗಾಗಿ ಬೇಡಿಕೊಳ್ಳಿ.
ನಿಮ್ಮ ಮನೆಗೆ ಪೂಜೆಗೆ ಬಂದವರನ್ನು ಬರಿ ಗೈಯಲ್ಲಿ ಕಳುಹಿಸಬೇಡಿ. ಲಕ್ಷ್ಮಿಯ ಪೂಜೆ ಮಾಡಿದ ದಿನ ಯಾರಿಗೂ ಹಣವನ್ನು ಕೊಡಬಾರದು ಎನ್ನುವ ನಂಬಿಕೆಯನ್ನು ಬಿಟ್ಟು ಬಿಡಿ. ಬದಲಿಗೆ ಮನೆಗೆ ಬಂದವರಿಗೆ ತಾಂಬೂಲ ನೀಡಿ. ಬಾಳೆಹಣ್ಣು, ವೀಳ್ಯದೆಲೆ, ಅಡಿಕೆ ಮತ್ತು ಕನಿಷ್ಠ ಪಕ್ಷ ನಾಣ್ಯವನ್ನು ನೀಡಿ ಸತ್ಕರಿಸಿ. ಇದರಿಂದ ಮನೆಗೆ ಆಗಮಿಸಿದ ಅತಿಥಿಗಳ ಶುಭ ಹಾರೈಕೆ ನಿಮಗೆ ಸಿಗುತ್ತದೆ.












Click it and Unblock the Notifications