Get Updates
Get notified of breaking news, exclusive insights, and must-see stories!

ಮೈಸೂರು ದಸರಾ ಕುಸ್ತಿಗೆ ಗರಡಿಮನೆಗಳು ಸಜ್ಜು

Dasara Special Kushti
ಮೈಸೂರನ್ನು ಗರಡಿಮನೆಗಳ ನಗರಿ ಎಂದರೆ ತಪ್ಪಾಗಲಾರದು. ಏಕೆಂದರೆ ಬೇರೆಲ್ಲೂ ಇಲ್ಲದಷ್ಟು ಗರಡಿಮನೆಗಳು ಇಲ್ಲಿವೆ. ದಸರಾ ಬರುತ್ತಿದ್ದಂತೆಯೇ ಈ ಗರಡಿಮನೆಗಳಲ್ಲಿ ಸಂಚಲನ ಉಂಟಾಗುವುದರೊಂದಿಗೆ ಪೈಲ್ವಾನ್‌ಗಳು ದಸರಾ ಕುಸ್ತಿಗೆ ಸಜ್ಜಾಗುತ್ತಾರೆ.

ಹಾಗೆನೋಡಿದರೆ ದಸರಾ ಸಂದರ್ಭ ನಡೆಯುವ ವಿವಿಧ ಕಾರ್ಯಕ್ರಮಗಳ ನಡುವೆ ಕುಸ್ತಿಗೂ ಮಹತ್ವದ ಸ್ಥಾನವಿದೆ. ಕುಸ್ತಿ ಪಂದ್ಯಾವಳಿಗಳಿಗೆ ರಾಜಮಹಾರಾಜರ ಕಾಲದ ಇತಿಹಾಸವಿದೆ. ರಾಜರ ಕಾಲದಲ್ಲಿ ಪೈಲ್ವಾನ್‌ರನ್ನು ಕರೆಸಿ ಪ್ರತಿ ವಾರವೂ ಕುಸ್ತಿ ನಡೆಸಲಾಗುತ್ತಿತ್ತು. ಅಲ್ಲದೆ, ದಸರಾ ಸಂದರ್ಭ ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ನಡೆಯುತ್ತಿದ್ದ ವಜ್ರಮುಷ್ಠಿ ಕಾಳಗ ಖ್ಯಾತಿ ಪಡೆದಿತ್ತು. ಪೈಲ್ವಾನರಿಗೆ ರಾಜರೇ ಆಶ್ರಯ ನೀಡಿ ಪ್ರೋತ್ಸಾಹಿಸುತ್ತಿದ್ದರು. ಹೀಗಾಗಿ ನಗರದಾದ್ಯಂತ ಗರಡಿಮನೆಗಳು ಹುಟ್ಟಿಕೊಂಡಿದ್ದವು.

ಮುಂಜಾನೆ ಚುಮುಚುಮು ಚಳಿಯಲ್ಲಿಯೇ ಗರಡಿ ಮನೆಗೆ ಹೋಗಿ ಅಭ್ಯಾಸ ನಡೆಸುತ್ತಿದ್ದರು. ದಸರಾ ಸಂದರ್ಭ ನಡೆಯುವ ಕುಸ್ತಿ ಪಂದ್ಯದಲ್ಲಿ ತನ್ನ ಬಲ ಪ್ರದರ್ಶಿಸಿ ಜಯಶಾಲಿಯಾದ ಪೈಲ್ವಾನರಿಗೆ ದಸರಾ ಕೇಸರಿ, ದಸರಾ ಕಂಠೀರವ, ದಸರಾ ಕುಮಾರ ಪ್ರಶಸ್ತಿ ನೀಡಲಾಗುತ್ತಿತ್ತು.

ಗರಡಿಗಳ ಆಗರ: ರಾಜರ ಕಾಲದ ನಂತರದ ದಿನಗಳನ್ನು ನೋಡಿದರೆ ಗರಡಿಮನೆಗಳು ತಮ್ಮ ಅಸ್ತಿತ್ವ ಕಳೆದು ಕೊಳ್ಳುತ್ತಿರುವುದನ್ನು ನಾವು ಕಾಣಬಹುದು. ಇತ್ತೀಚೆಗಿನ ವೈಜ್ಞಾನಿಕ ಜಿಮ್‌ಗಳು ಗರಡಿಮನೆಗಳ ಮೇಲೆ ಪರಿಣಾಮ ಬೀರುತ್ತಿವೆಯೇನೋ ಎಂಬ ಸಂಶಯ ನಮ್ಮನ್ನು ಕಾಡುತ್ತಿದೆ. ಆದರೆ ನಗರಕ್ಕೊಂದು ಸುತ್ತು ಹೊಡೆದರೆ ಸುಮಾರು ನೂರಕ್ಕೂ ಹೆಚ್ಚು ಗರಡಿಮನೆಗಳು ಕಾಣಸಿಗುತ್ತವೆ.

ಸುಣ್ಣದಕೇರಿ ನಾಲಾ ಬೀದಿಯ ಗೋಪಾಲಸ್ವಾಮಿ ಗರಡಿ, ಬಸವೇಶ್ವರ ರಸ್ತೆಯ ಮಹಾಲಿಂಗೇಶ್ವರ ಮಠದ ಗರಡಿ, ಕೆ.ಜಿ.ಕೊಪ್ಪಲು, ಪಡುವಾರಹಳ್ಳಿಯ ಹತ್ತೂ ಜನರ ಗರಡಿ, ಹುಲ್ಲಿನ ಬೀದಿಯ ಈಶ್ವರರಾಯನ ಗರಡಿ, ಫಕೀರ್ ಅಹಮ್ಮದ್ ಸಾಹೇಬರ ಗರಡಿ ಹೀಗೆ ಗರಡಿ ಮನೆಗಳ ಹೆಸರು ಮುಂದುವರೆಯುತ್ತಾ ಹೋಗುತ್ತದೆ. ಇಂತಹ ಗರಡಿಮನೆಗಳಿಂದ ಬೆಟ್ಟದ ಚಿಕ್ಕಣ್ಣ, ಪೈ.ಪಾಪಣ್ಣ, ಪೈ.ಶಂಕರ್ ಚಕ್ರವರ್ತಿ, ಚಿನ್ನ, ಅನಂತ್ ಅವರಂತಹ ನೂರಾರು ಪೈಲ್ವಾನ್‌ಗಳು ಪ್ರತಿಭೆ ಪ್ರದರ್ಶಿಸಿ ಮೈಸೂರಿನ ಖ್ಯಾತಿಯನ್ನು ಇಮ್ಮಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಾವು ಪೈಲ್ವಾನರ ಬಗ್ಗೆ ತಿಳಿಯುತ್ತಾ ಹೋದರೆ ಕುತೂಹಲ ಮೂಡುತ್ತದೆ. ಪೈಲ್ವಾನರ ನಿತ್ಯದ ದಿನಚರಿ, ಅವರ ಊಟ, ತಾಲೀಮು ಎಲ್ಲವೂ ವಿಭಿನ್ನವಾಗಿರುತ್ತದೆ. ದೇಹವನ್ನು ವ್ಯಾಯಾಮ, ಕಸರತ್ತಿನ ಮೂಲಕ ದಂಡಿಸುತ್ತಾರೆ. ಮುಂಜಾನೆ ಎದ್ದು ಗರಡಿಮನೆಗೆ ಹೋಗುವ ಪೈಲ್ವಾನರು ಅಲ್ಲಿರುವ ಪರಿಕರಗಳಾದ ಕಲ್ಲುಗುಂಡು, ಬಳೆ, ಗದೆ, ಕೊಂತ, ಕಂಬಕಟ್ಟೋದು, ಮಣ್ಣಿನಲ್ಲಿ ಪರಸ್ಪರ ಕುಸ್ತಿ ಅಭ್ಯಾಸ ನಡೆಸುವುದಲ್ಲದೆ, ಈ ಸಂದರ್ಭ ಹುಲಿಹೆಜ್ಜೆ, ಡೇಕ್ನಿ, ಕಟಾಪ್, ಹನುಮಾನ್ ದಂಡೆ, ಸುತ್ತಂಡೆ, ಚಪ್ಪಡಿದಂಡೆ, ಬಸ್ಕಿ ಮುಂತಾದ ಕಸರತ್ತುಗಳನ್ನು ಸಹ ನಡೆಸುತ್ತಾರೆ.

ಗರಡಿಮನೆಯಿಂದ ತಾಲೀಮು ನಡೆಸಿ ಬರುವ ಪೈಲ್ವಾನರು ಮನೆಗೆ ಬರುತ್ತಿದ್ದಂತೆಯೇ ಲೀಟರ್‌ಗಟ್ಟಲೆ ಬಾದಾಮಿ ಬೀಜಗಳ ಮಿಶ್ರಣ ಮಾಡಿದ ಹಾಲು, ಬೆಲ್ಲ ಮತ್ತು ರವೆಯಿಂದ ಮಾಡಿದ ಸಿಹಿ ತಿನಿಸು, ಬೆಣ್ಣೆ ಮುಂತಾದ ಪೌಷ್ಠಿಕ ಆಹಾರಗಳನ್ನು ಸೇವನೆ ಮಾಡುತ್ತಾರೆ. ಮಧ್ಯಾಹ್ನ ಚಪಾತಿ, ರಾಗಿ ಮುದ್ದೆ, ಅನ್ನ ಸಾರು, ಹಾಲು, ಬೆಣ್ಣೆ, ಹಣ್ಣು ಹೀಗೆ ಸಾಗುತ್ತದೆ. ಮೊದಲೆಲ್ಲಾ ಪೈಲ್ವಾನ್ ಇದ್ದಾರೆಂದರೆ ಅದು ಊರಿಗೆ ಹೆಮ್ಮೆಯ ಸಂಗತಿಯಾಗಿರುತ್ತಿತ್ತು, ಅಲ್ಲದೆ, ಎಲ್ಲಾ ರೀತಿಯ ಪ್ರೋತ್ಸಾಹ ನೀಡಿ ಕಳುಹಿಸಲಾಗುತ್ತಿತ್ತು.

ಪ್ರಸ್ತುತ ದಿನಗಳಲ್ಲಿ ಗರಡಿಮನೆಗಳಿಗೆ ತೆರಳುವವರ ಸಂಖ್ಯೆ ಕಡಿಮೆಯಾಗಿರಬಹುದು ಆದರೆ ಅದರ ಘನತೆ ಗೌರವ ಕಡಿಮೆಯಾಗಿಲ್ಲ ಎನ್ನಬಹುದು ಹಾಗಾಗಿ ಇಂದಿಗೂ ದಸರಾದಲ್ಲಿ ಕುಸ್ತಿ ಪಂದ್ಯಾವಳಿಗೆ ತನ್ನದೇ ಆದ ಸ್ಥಾನಮಾನವಿದೆ. ಈ ಬಾರಿ ಕುಸ್ತಿ ಪಂದ್ಯಾವಳಿ ಅಕ್ಟೋಬರ್ 8 ರಿಂದ ಪ್ರಾರಂಭವಾಗಲಿದೆ. ಅ.8 ರಿಂದ 10 ರವರೆಗೆ 29ನೇ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿದೆ.

ಅ.11 ರಂದು 3ನೇ ರಾಜ್ಯಮಟ್ಟದ ಮಹಿಳಾ ಕುಸ್ತಿ ಪಂದ್ಯಾವಳಿ ಹಾಗೂ 16 ವರ್ಷ ಕೆಳಗಿನ ಬಾಲಕ ಮತ್ತು ಬಾಲಕಿಯರ ಕುಸ್ತಿ ಪಂದ್ಯಾವಳಿ, ಅ.12 ಮತ್ತು 13 ರಂದು 5ನೇ ರಾಷ್ಟ್ರಮಟ್ಟದ ಪುರುಷರ ಮಹಿಳೆಯರ ಕುಸ್ತಿ ಅಲ್ಲದೆ, ದಸರಾ ಕಿಶೋರ, ದಸರಾ ಕುಮಾರ, ದಸರಾ ಕೇಸರಿ, ದಸರಾ ಕಂಠೀರವ ಪ್ರಶಸ್ತಿಗೆ ಪಂದ್ಯಾವಳಿ ನಡೆಯಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+