ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳ್ಳಿಹಳ್ಳಿಗೆ ದಸರಾ ವಿಸ್ತರಿಸಲಿ: ರವಿಶಂಕರ್

By Staff
|
Google Oneindia Kannada News

ಮೈಸೂರು, ಸೆ.19: ವಿಶ್ವವಿಖ್ಯಾತ ಅದ್ದೂರಿ ದಸರಾ ಮಹೋತ್ಸವಕ್ಕೆ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ್ ಗುರೂಜಿ ಅವರು ಚಾಮುಂಡೇಶ್ವರಿ ದೇವಿಗೆ ಅಗ್ರ ಪೂಜೆ ಸಲ್ಲಿಸುವ ಮೂಲಕ ಇಂದು ಚಾಮುಂಡಿ ಬೆಟ್ಟದಲ್ಲಿ ಚಾಲನೆ ನೀಡಿದರು. ಉದ್ಘಾಟಿಸಿದ ಬಳಿಕ ಮಾತನಾಡುತ್ತಿದ್ದ ಅವರು ಸಚಿವೆ ಶೋಭಾ ಕರಂದ್ಲಾಜೆ ಅವರ ಗ್ರಾಮೀಣ ದಸರಾ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ದಸರಾ ಹಳ್ಳಿಹಳ್ಳಿಗೆ ವಿಸ್ತರಿಸಲಿ: ರವಿಶಂಕರ್
ದಸರಾ ಮಹೋತ್ಸವನ್ನು ವೀಕ್ಷಿಸಲು ಎಲ್ಲರಿಗೂ ಮೈಸೂರಿಗೆ ಬರಲು ಸಾಧ್ಯವಾಗುವುದಿಲ್ಲ.ದಸರಾ ಬರೀ ಮೈಸೂರಿಗಷ್ಟೇ ಸೀಮಿತವಾಗಬಾರದು ಪ್ರತಿ ತಾಲೂಕಿಗೂ ವಿಸ್ತರಿಸಬೇಕು. ಹಳ್ಳಿಹಳ್ಳಿಗೆ ದಸರಾ ಉತ್ಸವವನ್ನು ಕೊಂಡೊಯ್ಯಬೇಕು ಎಂದರು. ಇಂದಿನ ಆರ್ಥಿಕ ಬಿಕ್ಕಟ್ಟಿನಲ್ಲಿ ಮನಸ್ಸನ್ನು ದೃಢವಾಗಿಟ್ಟುಕೊಂಡರೆ ಎಂತಹ ಸಮಸ್ಯೆಗಳನ್ನು ಬಗೆಹರಿಸಬಹುದು. ದಸರಾ ಬರೀ ನಾಡಹಬ್ಬ ಅಷ್ಟೇ ಅಲ್ಲ ಭಾರತೀಯರ ಐಕ್ಯತೆಯ ಸಂದೇಶ, ಶಾಂತಿ, ಸಹಬಾಳ್ವೆಯ ಸಂಕೇತ ಎಂದು ಹೇಳಿದರು.

ಎರಡು ಮಕ್ಕಳಿದ್ದರೆ ಎಲ್ಲ ಸೌಲಭ್ಯ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡುತ್ತಾ, ಮುಂದಿನ ವರ್ಷದಿಂದ ಪ್ರೌಢ ಶಿಕ್ಷಣದವರೆಗೂ ಯೋಗ ಶಿಕ್ಷಣವನ್ನು ಜಾರಿ ತರುವುದಾಗಿ ಹೇಳಿದರು. ಎರಡು ಮಕ್ಕಳಿಗೆ ಸೀಮಿತವಾಗುವಂತೆ ಕುಟುಂಬ ನಿಯಂತ್ರಣ ಕಾರ್ಯಕ್ರಮ ಜಾರಿಗೆ ತರುವುದಾಗಿ ಪುನರುಚ್ಚರಿಸಿದರು. ಇದಕ್ಕಾಗಿ ಎಲ್ಲಾ ಜನಾಂಗದ ಗುರುಗಳ ಸಲಹೆ ಸೂಚನೆಗಳನ್ನು ಪಡೆಯುತ್ತೇವೆ ಎಂದರು.

ಪ್ರತಿಪಕ್ಷದ ಮುಖಂಡರೊಂದಿಗೆ, ಹಿಂದು, ಮುಸ್ಲಿಂ ಮತ್ತು ಕ್ರಿಶ್ಚಿಯನ್ ನಾಯಕರೊಂದಿಗೆ ಮಾತುಕತೆ ನಡೆಸಿ ಜಾರಿಗೆ ತರುವುದಾಗಿ ಅವರು ತಿಳಿಸಿದರು.ಜನಸಂಖ್ಯೆಗೆ ನಿಯಂತ್ರಣ ಹೇರಿ ಇಡೀ ದೇಶದಲ್ಲೇ ರಾಜ್ಯವನ್ನು ಮಾದರಿಯನ್ನಾಗಿ ಮಾಡಿ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದಾಗಿ ತಿಳಿಸಿದರು.

ಮೈಸೂರಿನ ಮಂಡಕಲ್ಲಿ ವಿಮಾನ ನಿಲ್ದಾಣಕ್ಕೆ ಚಾಲನೆ ನೀಡುವ ಮೂಲಕ ವಿದೇಶಿ ಪ್ರವಾಸಿಗರನ್ನು ಹೆಚ್ಚುಹೆಚ್ಚಾಗಿ ಆಕರ್ಷಿಸುತ್ತೇವೆ ಎಂದು ತಿಳಿಸಿದರು. ಇದರಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದರು. ಮುಂದಿನ ದಸರಾ ಮಹೋತ್ಸವಕ್ಕೆ ರು.100 ಕೋಟಿ ಮೀಸಲಿಡುವುದಾಗಿ ಯಡಿಯೂರಪ್ಪ ತಿಳಿಸಿದರು.

ಗ್ರಾಮೀಣ ಪ್ರತಿಭೆಗಳಿಗೆ ಆದ್ಯತೆ: ಶೋಭಾ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡುತ್ತಾ, ಗ್ರಾಮೀಣ ಪ್ರತಿಭೆಗಳಿಗೆ ಹಾಗೂ ಎಲ್ಲಾ ಕಲಾ ಪ್ರಕಾರಗಳಿಗೆ ಆದ್ಯತೆ ನೀಡುವುದಾಗಿ ಹೇಳಿದರು. ರೈತರು ಸಂಕಷ್ಟದಲ್ಲಿದ್ದಾರೆ, ಸಾವಯವ ಕೃಷಿಗೆ ಒತ್ತು ನೀಡುವುದಾಗಿ ತಿಳಿಸಿದರು. ಹಾಗಾಗಿ ಹಿಂದಿನ ವರ್ಷದಂತೆ ಈ ಬಾರಿಯೂ ರೈತರಿಗಾಗಿ ರೈತ ದಸರಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು. ರೈತ ದಸರಾ ಮೂಲಕ ಸಾವಯವ ಗೊಬ್ಬರ, ಬೀಜಗಳ ಸಂರಕ್ಷಣೆ ಬಗ್ಗೆ ತಿಳಿಸಿಕೊಡಲಾಗುತ್ತದೆ ಎಂದರು.

ಈ ಬಾರಿಯ ಮೈಸೂರು ದಸರಾದಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಅವರು ವಿವರ ನೀಡಿದರು. ದಸರಾ ಉತ್ಸವನ್ನು ಹೆಚ್ಚು ಜನಪ್ರಿಯಗೊಳಿಸಲು ಯುವ ದಸರಾ, ಗ್ರಾಮೀಣ ದಸರಾ ಮತ್ತು ರೈತ ದಸರಾದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೈಸೂರನ್ನು ಸಂಪರ್ಕಿಸುವ ರಸ್ತೆಗಳಿಗೆ ವಿದ್ಯುತ್ ಅಲಂಕಾರ ಮಾಡಲಾಗಿದೆ. 1.63 ಲಕ್ಷಬಲ್ಬ್ ಗಳು, 3250 ಮೆಟಲ್ ಅಲೈಡ್ ಲ್ಯಾಂಪ್ ಗಳನ್ನು ಬಳಸಲಾಗುತ್ತಿದೆ ಎಂದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X