ಮೈಸೂರಿನ ನಯನ ಮನೋಹರ ಜಂಬೂಸವಾರಿ
ಮೈಸೂರು, ಅ. 9: ನವರಾತ್ರಿ ಕಳೆದು ವಿಜಯದಶಮಿಯ ಸಂಭ್ರಮದಲ್ಲಿ ಸಾಂಸ್ಕೃತಿಕ ನಗರಿ ಸಜ್ಜಾಗಿದೆ. ಮಳೆ ಮೋಡ ದೂರ ಸರಿದಿದ್ದು, ಸೂರ್ಯನ ಪ್ರಕಾಶ ಬೆಳಕಿನಲ್ಲಿ ಅರಮನೆ ಆವರಣ ಕಂಗೊಳಿಸುತ್ತಿದೆ. ವಿಶ್ವ ಪ್ರಸಿದ್ಧಿ ಪಡೆದಿರುವ ಜಂಬೂ ಸವಾರಿ ಉತ್ಸವವನ್ನು ಕಾಣಲು ಅಪಾರ ಸಂಖ್ಯೆಯಲ್ಲಿ ಜನಪ್ರವಾಹ ಹರಿದು ಬಂದಿದೆ. ಸುಮಾರು 750 ಕೆ.ಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತ ಬಲರಾಮ ತನ್ನ ಸಹಚರರೊಂದಿಗೆ ಮೆರವಣಿಗೆ ಹೊರಟಿದ್ದಾನೆ.
ಜಂಬೂಸವಾರಿ, ಪಂಜಿನ ಕವಾಯತು ಉದ್ಘಾಟನೆ:
ಮಧ್ಯಾಹ್ನ 13.15ರ ಸುಮಾರಿಗೆ ಅರಮನೆ ಮುಂಭಾಗ ನಂದೀಧ್ವಜ ಪೂಜೆಯೊಡನೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಜಂಬೂಸವಾರಿ ಮೆರವಣಿಗೆಯ ಉದ್ಘಾಟಿಸಿದರು.ನಂತರ ಮುಖ್ಯಮಂತ್ರಿಗಳು ಜಂಬೂಸವಾರಿಯ ಚಿನ್ನದ ಅಂಬಾರಿಯಲ್ಲಿ ಬರುವ ತಾಯಿ ಚಾಮುಂಡೇಶ್ವರಿ ದೇವಿಗೆ ಪುಷ್ಪ ಸಮರ್ಪಣೆ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಈ ಶುಭಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ನಗರದ ಮಹಾಪೌರರು ಅನೇಕ ಮುಖಂಡರು ಜತೆಯಲ್ಲಿದ್ದರು.
24 ಕುಶಾಲ ತೋಪುಗಳ ಸದ್ದಿನ ಹಿನ್ನೆಲೆಯಲ್ಲಿ ಕೆ.ಆರ್ ವೃತ್ತ, ಸಯ್ಯಾಜಿ ರಾವ್ ರಸ್ತೆ ಮೂಲಕ ಬನ್ನಿಮಂಟಪದತ್ತ ಬಲರಾಮ ಚಿನ್ನದ ಅಂಬಾರಿ ಹೊತ್ತು ನಡೆವ ದೃಶ್ಯ ಮನಸೂರೆಗೊಳಿಸಿತು.
ಸಂಜೆ 6.30 ಗಂಟೆಗೆ ಬನ್ನಿಮಂಟಪ ಮೈದಾನದಲ್ಲಿ ನಡೆಯುವ ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ರಾಜ್ಯದ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಕವಾಯತು ವೀಕ್ಷಿಸಿ, ವಂದನೆ ಸ್ವೀಕರಿಸುವರು. ಬಿ ಎಸ್ ಯಡಿಯೂರಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಪ್ರೇಕ್ಷಕರಿಗೆ ಉತ್ತಮ ವ್ಯವಸ್ಥೆ:
ದಸರಾ ಮಹೋತ್ಸವದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಗಣ್ಯರುಗಳಿಗೆ ಅನುಕೂಲವಾಗುವಂತೆ ಪ್ಲಾಟಿನಂ ಕಾರ್ಡುಗಳನ್ನು ವಿತರಿಸಲಾಗಿತ್ತು. ಆದರೆ ಇಂದು ನಡೆಯುವ ಜಂಬೂಸವಾರಿ ಹಾಗೂ ಪಂಜಿನ ಕವಾಯಿತು ಕಾರ್ಯಕ್ರಮಗಳಿಗೆ ಪ್ರತ್ಯೇಕ ಆಹ್ವಾನ ಪತ್ರಿಕೆಗಳನ್ನು ವಿತರಿಸಿರುವುದರಿಂದ ಆ ದಿನ ಪ್ಲಾಟಿನಂ ಕಾರ್ಡುಗಳು ಚಾಲ್ತಿಯಲ್ಲಿರುವುದಿಲ್ಲ. ಕೇವಲ ಆಹ್ವಾನ ಪತ್ರಿಕೆಗಳನ್ನು ತರುವವರಿಗೆ ಮಾತ್ರ ಪ್ರವೇಶ ನೀಡಲಾಗುವುದು.
ಅರಮನೆ ಆವರಣದಲ್ಲಿ 10 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಅಗತ್ಯವಿದ್ದ ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.ಉಗ್ರರ ಭೀತಿಯ ಹಿನ್ನೆಲೆಯಲ್ಲಿ ಅಂಬಾರಿ ಸಾಗುವ ಹಾದಿಯಲ್ಲಿ ಸೂಕ್ತ ಭದ್ರತೆ ಒದಗಿಸಲಾಗಿದೆ ಎಂದು ಆಯುಕ್ತ ಮಣಿವಣ್ಣನ್ ತಿಳಿಸಿದರು.
ಬನ್ನಿಮಂಟಪದಲ್ಲಿ ಪಂಜಿನ ಕವಾಯತು ವೀಕ್ಷಿಸಲು ಆಗಮಿಸುವವರು ಇಂದು ಸಂಜೆ 5.30 ಗಂಟೆಯೊಳಗಾಗಿ ನಿಗದಿತ ಸ್ಥಳಗಳಲ್ಲಿ ಆಸೀನರಾಗುವುದು. ತಪ್ಪಿದಲ್ಲಿ ಅವರನ್ನು ವಾಪಸ್ಸು ಕಳುಹಿಸಲಾಗುವುದು.
ಆಹ್ವಾನಿತರು ನೀರಿನ ಬಾಟಲಿ ಹೊರತುಪಡಿಸಿ ಮೊಬೈಲ್ ಹಾಗೂ ಇನ್ನಿತರೆ ಯಾವುದೇ ವಸ್ತುಗಳನ್ನು ತರುವುದನ್ನು ನಿಷೇಧಿಸಿದೆ.
ಆಹ್ವಾನ ಪತ್ರಿಕೆ, ಗೋಲ್ಡ್ ಕಾರ್ಡ್ ಮತ್ತು ಟಿಕೆಟ್ ಹೊಂದಿರುವವರಿಗೆ ಮಾತ್ರ ಪ್ರವೇಶ ನೀಡಲಾಗುವುದು. ಆಹ್ವಾನಿತರು ಒಮ್ಮೆ ಪ್ರವೇಶಿಸಿದ ನಂತರ ಕಾರ್ಯಕ್ರಮ ಮುಗಿಯುವವರೆಗೆ ಹೊರಗೆ ಹೋಗಲು ಅವಕಾಶವಿರುವುದಿಲ್ಲ. ಎಲ್ಲಾ ಆಹ್ವಾನ ಪತ್ರಿಕೆಗಳು ಹಾಗೂ ಕಾರ್ಡುಗಳಿಗೆ ನಂಬರುಗಳನ್ನು ನಮೂದಿಸಿದ್ದು , ಅವುಗಳನ್ನು ಬೇರೆಯವರಿಗೆ ವರ್ಗಾಯಿಸತಕ್ಕದ್ದಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ದಸರಾ ವಿಶೇಷಾಧಿಕಾರಿ ಪಿ ಮಣಿವಣ್ಣನ್ ಅವರು ಸಾರ್ವಜನಿಕರಿಗೆ ತಿಳಿಸಿ, ಸಹಕರಿಸುವಂತೆ ಕೋರಿದ್ದಾರೆ.
ಜಂಬೂ ಸವಾರಿ ವಿಶೇಷ:
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ ಯೋಗ ಪ್ರದರ್ಶನದ ಬಗ್ಗೆ ಸ್ತಬ್ಧ ಚಿತ್ರಗಳು ಮತ್ತು 50 ಜನ ಯೋಗ ಪಟುಗಳಿಂದ ಯೋಗ ಪ್ರದರ್ಶನವಿದೆ. ಕೊಪ್ಪಳ ಜಿಲ್ಲೆಯನ್ನು ಬಿಟ್ಟು ಉಳಿದೆಲ್ಲ ಜಿಲ್ಲೆಗಳ ಕಲಾವಿದರು ತಮ್ಮ ಊರಿನ ಸಂಸ್ಕೃತಿಯನ್ನು ಬಿಂಬಿಸುವ ಸ್ತಬ್ದ ಚಿತ್ರಗಳನ್ನು ಪ್ರದರ್ಶಿಸಿದರು.
ವೀರಗಾಸೆ, ಪೂಜಾ ಕುಣಿತ,ಡೊಳ್ಳು ಕುಣಿತ, ಚೋಮನ ಕುಣಿತ, ಪಟದ ಕುಣಿತ, ಕರಡಿಮಜಲು,ಕೋಲಾಟ, ಕಂಸಾಳೆ,ಹುಲಿವೇಷಧಾರಿಗಳು ಸೇರಿದಂತೆ ಅನೇಕ ಜಾನಪದ ನೃತ್ಯ ತಂಡಗಳು ಮೆರವಣಿಗೆಯಲ್ಲಿವೆ. ಕುದುರೆಗಳು, ಪಾದಾತಿಗಳು, ವಾದ್ಯಗೋಷ್ಠಿಗಳು, ಎತ್ತಿನ ಬಂಡಿ, ಜಟಕಾಬಂಡಿಗಳು ಹೆಮ್ಮೆಯಿಂದ ಸಾಗಿದವು. ಅರಮನೆಯ ಅಂಗಳದಲ್ಲಿ ಪ್ರವೇಶ ದೊರೆಯದ ಜನರು ಸುತ್ತಮುತ್ತಲಿನ ಮರಗಳನ್ನು ಏರಿ ಜಂಬೂ ಸವಾರಿ ಮೆರವಣಿಗೆಯನ್ನು ಆಸ್ವಾದಿಸಿದರು.
ದಸರಾ ಹಬ್ಬದ ಸಂಭ್ರಮದ ಸುದ್ದಿಗಳು
ನವರಾತ್ರಿಯ ಗ್ಯಾಲರಿ












Click it and Unblock the Notifications