ಆದಿ ಶಂಕರಾಚಾರ್ಯರ ಜಯಂತಿ 2026: ಧರ್ಮೋದ್ದಾರಕ ಶಂಕರಾಚಾರ್ಯರ ಬಗ್ಗೆ ತಿಳಿದಿರಲೇಬೇಕಾದ ಮಾಹಿತಿ

ಸನಾತನ ಸಂತ ಪರಂಪರೆ, ಭಕ್ತಿ ವೇದಾಂತ, ಭಾರತ ಮತ್ತು ಕರ್ನಾಟಕದ ಇತಿಹಾಸ, ಹಿಂದೂ ಸಮಾಜದ ಪುನರುತ್ಥಾನದ ವಿಚಾರಗಳಲ್ಲಿ ಆದಿ ಶಂಕರಾಚಾರ್ಯರ ಹೆಸರು ಅಜರಾಮರ. ಅದ್ವೈತ ಸಿದ್ದಾಂತ ಮತ್ತು ಸನಾತನ ಸಮಾಜಕ್ಕೆ ತತ್ವಜ್ಞಾನಿ ಶಂಕರಾಚಾರ್ಯರ ಕೊಡುಗೆ ಅಪರಿಮಿತ. ಇದೀಗ ಆದಿ ಶಂಕರಾಚಾರ್ಯರ 1238ನೇ ಜಯಂತಿಯನ್ನು ಆಚರಿಸಲಾಗುತ್ತಿದೆ. ವೈಶಾಖ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ಆದಿ ಶಂಕರರ ಜಯಂತಿ. ಅಂದರೆ, ಈ ಸಲ 21ನೇ ಏಪ್ರಿಲ್‌, 2026ರಂದು ಶಂಕರಾಚಾರ್ಯರ ̆̆1238ನೇ ಜಯಂತಿ ಆಚರಿಸಲಾಗುವುದು.

ಆದಿ ಶಂಕರರ ಜಯಂತಿಯ ಶುಭ ಮುಹೂರ್ತ:

2026ನೇ ಸಂವತ್ಸರ ಶಂಕರಾಚಾರ್ಯರ 1238ನೇ ಜಯಂತಿಯಾಗಿದೆ.
- ಶಂಕರಾಚಾರ್ಯ ಜಯಂತಿ ಶುಭ ದಿನ: 2026ರ ಏಪ್ರಿಲ್‌ 21, ಮಂಗಳವಾರ
- ಪಂಚಮಿ ತಿಥಿ ಪ್ರಾರಂಭ: 2026ರ ಏಪ್ರಿಲ್‌ 21 ರಂದು ಮಂಗಳವಾರ, ಬೆಳಗ್ಗೆ 4-14 ರಿಂದ
- ಪಂಚಮಿ ತಿಥಿ ಮುಕ್ತಾಯ: 2026, ಏಪ್ರಿಲ್‌ 22, ಬುಧವಾರ ಬೆಳಗ್ಗೆ 1:19ರವರೆಗೆ

Adi Shankaracharya

ಆದಿ ಶಂಕರಾಚಾರ್ಯ ಜೀವನ ಚರಿತ್ರೆ:

ಶಂಕರಾಚಾರ್ಯರು ಹುಟ್ಟಿದ್ದು ಕೇರಳದ ಕಾಲಡಿಯಲ್ಲಿ. ಎಂಟನೇ ಶತಮಾನದ ಕ್ರಿ.ಶ.788ರಲ್ಲಿ ಜನಿಸಿದ ಶಂಕರಾಚಾರ್ಯರ ಪೂರ್ವಾಶ್ರಮದ ತಂದೆ, ತಾಯಿ - ಶಿವಗುರು ಮತ್ತು ಆರ್ಯಾಂಬಾ. ಅಸಾಧಾರಣ ಮೇಧಾವಿಯಾಗಿದ್ದ ಶಂಕರರು, 8 ನೇ ವಯಸ್ಸಿಗೆ ವೇದಾಧ್ಯಾಯನ ಮಾಡಿದ್ದರು. ಮಗುವಾಗಿದ್ದಾಗಲೇ ಸನ್ಯಾಸದತ್ತ ಆಕರ್ಷಿತರಾಗಿದ್ದರು. ಪೂರ್ಣಾನದಿಯಲ್ಲಿ ಮೊಸಳೆ ಕಾಲನ್ನು ಹಿಡಿದಾಗ, ತಾಯಿಯ ಒಪ್ಪಿಗೆಯೊಂದಿಗೆ ಸನ್ಯಾಸತ್ವ ಸ್ವೀಕರಿಸಿದ್ದರು.

ಅದ್ವೈತ ಸಿದ್ದಾಂತದ ಆಚಾರ್ಯ:

ಶಂಕರರ ಗುರು ಗೋವಿಂದ ಭಗವತ್ಪಾದರು. ಅವರಿಂದಲೇ ದೀಕ್ಷೆ ಪಡೆದು ಅದ್ವೈತ ಸಿದ್ದಾಂತ ಕಲಿತರು. "ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ" (ಬ್ರಹ್ಮನು ಸತ್ಯ, ಜಗತ್ತು ಮಿಥ್ಯೆ, ಆತ್ಮ ಮತ್ತು ಪರಮಾತ್ಮ ಒಂದೇ) ಎಂಬುದು ಶಂಕರಾಚಾರ್ಯ ಪ್ರತಿಪಾದಿತ ಅದ್ವೈತ ಸಿದ್ದಾಂತದ ಮೂಲಮಂತ್ರ. ಭಾರತದಾದ್ಯಂತ ಕಾಲ್ನಡಿಗೆಯಲ್ಲಿ ಸಂಚರಿಸಿ, ಅನೇಕ ವಿದ್ವಾಂಸರನ್ನು ವಾದದಲ್ಲಿ ಸೋಲಿಸಿ ಅದ್ವೈತ ಸಿದ್ಧಾಂತವನ್ನು ಸ್ಥಾಪಿಸಿದರು.

ಸನಾತನ ಧರ್ಮ ರಕ್ಷಕ:

5 ರಿಂದ 8 ವರ್ಷ ವಯಸ್ಸಿನವರೆಗೆ, ಆಚಾರ್ಯ ಶಂಕರರು ವೇದಗಳು, ವೇದಾಂಗ, ಧರ್ಮಶಾಸ್ತ್ರ, ಪುರಾಣ, ಇತಿಹಾಸ ಮತ್ತು ಬುಧಾಗಮ ಇತ್ಯಾದಿಗಳನ್ನು ಕಲಿತರು. ಸನಾತನ ಧರ್ಮ ಮತ್ತು ಶಿವ ಪುರಾಣದ ಪ್ರಕಾರ, ಹಿಂದೂಗಳು ಆದಿ ಶಂಕರಾಚಾರ್ಯರನ್ನು ಶಿವನ ಪುನರ್ಜನ್ಮ ಎಂದು ಕರೆಯುತ್ತಾರೆ. ಆಚಾರ್ಯ ಶಂಕರರು ಕೇವಲ ಹದಿನಾರು ವರ್ಷಗಳ ಅಲ್ಪಾವಧಿಯಲ್ಲಿಯೇ ಬೌದ್ಧಧರ್ಮ ಮತ್ತು ಇತರ ಹಲವು ಧರ್ಮ ವಿದ್ವಾಂಸರನ್ನು ವಾದದಲ್ಲಿ ಪರಾಭವಗೊಳಿಸಿದ್ದರು. ಹಲವು ಧರ್ಮ ವಿದ್ವಾಂಸರನ್ನು ಜಯಿಸಿ ಸನಾತನ ಧರ್ಮವನ್ನು ಪುನಃ ಸ್ಥಾಪಿಸಿದ್ದರು.

ಬೌದ್ಧ ಧರ್ಮ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಸನಾತನ ಧರ್ಮ ರಕ್ಷಣೆಗಾಗಿ ಭಾರತದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪೀಠಗಳನ್ನು ಸ್ಥಾಪನೆ ಮಾಡಿದ್ದರು. ಚಿಕ್ಕವಯಸ್ಸಿನಲ್ಲೇ ದೇಶಾದ್ಯಂತ ಸಂಚಾರ ಮಾಡಿದ್ದ ಶಂಕರರು, ತನ್ನ 32ನೇ ವಯಸ್ಸಿನಲ್ಲೇ ದೇಶದ ನಾಲ್ಕು ಭಾಗಗಳಲ್ಲಿ ನಾಲ್ಕು ಪೀಠಗಳನ್ನು ಸ್ಥಾಪನೆ ಮಾಡಿದ್ದರು. ಅವುಗಳೆಂದರೆ ಶೃಂಗೇರಿ (ದಕ್ಷಿಣ), ದ್ವಾರಕಾ (ಪಶ್ಚಿಮ), ಪುರಿ (ಪೂರ್ವ), ಮತ್ತು ಜ್ಯೋತಿರ್ಮಠ (ಉತ್ತರ).

ಈ ಪೀಠಗಳು ಜ್ಞಾನ ಮತ್ತು ಆಧ್ಯಾತ್ಮಿಕತೆಯ ಕೇಂದ್ರಗಳಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಿವೆ.

ಸಾಹಿತ್ಯ ಕೃಷಿ:

ಮೊದಲೇ ಹೇಳಿದಂತೆ ಶಂಕರರು ಮಹಾಮೇಧಾವಿ. 16ನೇ ವಯಸ್ಸಿನಲ್ಲೇ ಉಪನಿಷತ್ತು, ಭಗವದ್ಗೀತೆ, ಮತ್ತು ಬ್ರಹ್ಮ ಸೂತ್ರಗಳಿಗೆ 'ಭಾಷ್ಯ' ಬರೆದ ಸಾಹಿತ್ಯ ಬ್ರಹ್ಮ. ವಿವೇಕಚೂಡಾಮಣಿ, ಭಜಗೋವಿಂದಂ, ಸೌಂದರ್ಯ ಲಹರಿ, ಆತ್ಮಾಬೋಧ ಮುಂತಾದ ಕೃತಿಗಳನ್ನೂ ಅವರು ರಚಿಸಿದ್ಧರು.

ಅಂತಿಮ ದಿನಗಳು:

ಹಿಂದೂ ಧರ್ಮದ ಪುನರುತ್ಥಾನಕ್ಕಾಗಿ ಅಹರ್ನಿಶಿ ದುಡಿದಿದ್ದ ಶಂಕರರು ಅಲ್ಪಾಯುಷಿಯಾಗಿದ್ದರು. ಅಲ್ಪಾಯುಷ್ಯದಲ್ಲೇ ಇಡೀ ಜಗತ್ತೇ ಬೆರಗಾಗುವಂತಹ ಸಾಧನೆ ಮಾಡಿದ್ದರು. ಅದ್ವೈತ ಸಿದ್ದಾಂತ ಆದಾಗಲೇ ಜನಪ್ರಿಯತೆಯ ಉತ್ತುಂಗದಲ್ಲಿತ್ತು. ತಮ್ಮ 32ನೇ ವಯಸ್ಸಿನಲ್ಲಿ, ಶಂಕರಾಚಾರ್ಯರು ಸಮಾಧಿ ಸ್ಥಿತಿಯಲ್ಲಿ ಮುಕ್ತಿ ಪಡೆದರು. ಕೇದಾರನಾಥದಲ್ಲಿ ತಮ್ಮ ಜೀವನದ ಕೊನೆಯ ಕ್ಷಣಗಳನ್ನು ಕಳೆದರು.
(ಸುಮಾರು ಕ್ರಿ.ಶ 820) ಅವರ ಪವಿತ್ರ ದೇಹವು 32 ನೇ ವಯಸ್ಸಿನಲ್ಲಿ ಅಂದರೆ ಕಾರ್ತಿಕ ಪೂರ್ಣಿಮೆಯ ಪವಿತ್ರ ದಿನದಂದು ಇಹಲೋಕ ತ್ಯಜಿಸಿತು.

ಶಂಕರಾಚಾರ್ಯರ ಪ್ರಮುಖ ಬೋಧನೆಗಳು:

- ಮೋಕ್ಷ ಪಡೆಯಲು ಜ್ಞಾನ ಮಾರ್ಗವೇ ಅತ್ಯಂತ ಮುಖ್ಯ ಎಂದು ಸಾರಿದರು.
- ಬ್ರಹ್ಮನು ಸತ್ಯ, ಜಗತ್ತು ಮಿಥ್ಯೆ, ಆತ್ಮ ಮತ್ತು ಪರಮಾತ್ಮ ಒಂದೇ ಎಂದು ಪ್ರತಿಪಾದಿಸಿದರು (ಅದ್ವೈತ ಸಿದ್ದಾಂತ)
- ಕೇವಲ ಬ್ರಹ್ಮ ಮಾತ್ರ ಅಂತಿಮ ಸತ್ಯ. ಜಗತ್ತು ಶಾಶ್ವತವಲ್ಲ, ಇದು ಒಂದು ಮಾಯೆ ಅಥವಾ ಭ್ರಮೆ.
- ಅಹಂ ಬ್ರಹ್ಮಾಸ್ಮಿ: 'ನಾನು ಬ್ರಹ್ಮನಾಗಿದ್ದೇನೆ' ಎಂಬ ಜ್ಞಾನವೇ ನಿಜವಾದ ಜ್ಞಾನ.
- ಷಣ್ಮತ ಸ್ಥಾಪನೆ: ಶಂಕರರು ವಿಷ್ಣು, ಶಿವ, ಶಕ್ತಿ, ಗಣೇಶ, ಸೂರ್ಯ ಮತ್ತು ಸ್ಕಂದ (ಮುರುಗನ್) ಎಂಬ ಆರು ದೇವತೆಗಳ ಆರಾಧನಾ ಪದ್ಧತಿಯನ್ನು ಪುನರುಜ್ಜೀವನಗೊಳಿಸಿದರು.

ಶಂಕರ ಜಯಂತಿ ಆಚರಣೆ ಹೇಗೆ?

ಶಂಕರಾಚಾರ್ಯರ ಭಕ್ತರು ಅವರ ಜಯಂತಿಯನ್ನು ವಿಶೇಷವಾಗಿ ಆಚರಿಸುತ್ತಾರೆ. ಈ ದಿನ ಉಪವಾಸ ಮಾಡಿ ಶಿವ, ವಿಷ್ಣು, ಸೂರ್ಯ, ಗಣೇಶ ಮತ್ತು ದೇವಿಯನ್ನು ಪೂಜಿಸುತ್ತಾರೆ. ಅವರು ಭಗವದ್ಗೀತೆ ಮತ್ತು ಮಂತ್ರಗಳ ಪಠಣ ನಡೆಯುತ್ತದೆ. ಶಂಕರ ಪೀಠಗಳಲ್ಲಿ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಇದಲ್ಲದೆ, ಗುರು ಶಂಕರಾಚಾರ್ಯ ಜಯಂತಿಯಂದು ಸನಾತನ ಧರ್ಮದ ಕುರಿತು ಚರ್ಚೆಗಳು ಮತ್ತು ಗೋಷ್ಠಿಗಳನ್ನು ಆಯೋಜಿಸಲಾಗುತ್ತದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+