Year End Special 2024: ಭಾರತದಲ್ಲಿನ ಪ್ರಮುಖ ನೇಮಕಾತಿ, ರಾಜೀನಾಮೆಗಳು
2024ನೇ ವರ್ಷ ಅಂತ್ಯವಾಗುತ್ತಾ ಬಂದಿದೆ. ಈ ವರ್ಷ ಭಾರತದಲ್ಲಿ ಕಾರ್ಪೊರೇಟ್ ಕಂಪನಿಗಳು ಸೇರಿದಂತೆ ಪ್ರಮುಖ ಕಂಪನಿಗಳಲ್ಲಿ ವಿವಿಧ ಬದಲಾವಣೆಗಳು ನಡೆದಿವೆ. ಸರ್ಕಾರದ ಇಲಾಖೆಗಳಲ್ಲಿಯೂ ಹಲವಾರು ನೇಮಕಾತಿಗಳು ನಡೆದಿವೆ. ದೇಶದಲ್ಲಿ ಈ ವರ್ಷ ನಡೆದ ಪ್ರಮುಖ ನೇಮಕಾತಿ, ರಾಜೀನಾಮೆಗಳ ಮಾಹಿತಿ ಇಲ್ಲಿದೆ.
ಆರ್‌ಬಿಐ, ಎನ್‌ಐಎ, ಎನ್‌ಡಿಆರ್‌ಎಫ್, ಬಿಪಿಆರ್‌ಡಿ, ಡಿಬಿಎಸ್ ಬ್ಯಾಂಕ್ ಸೇರಿದಂತೆ ವಿವಿಧ ನೇಮಕಾತಿಗಳು ನಡೆದಿವೆ. ಆರ್‌ಬಿಐ ಗೌರ್ನರ್ ಆಗಿ ಸಂಜಯ್ ಮಲ್ಹೋತ್ರಾ ನೇಮಕಗೊಂಡಿದ್ದಾರೆ.

ಆರ್‌ಬಿಐ ಗೌರ್ನರ್ ನೇಮಕ: ಕೇಂದ್ರ ಸರ್ಕಾರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನೂತನ ಗೌರ್ನರ್ ಆಗಿ ಸಂಜಯ್ ಮಲ್ಹೋತ್ರಾ ಅವರನ್ನು ನೇಮಕ ಮಾಡಿದೆ. 14 ಫೆಬ್ರವರಿ 1968ರಂದು ಜನಿಸಿದ ಸಂಜಯ್ ಮಲ್ಹೋತ್ರಾ ಆರ್‌ಬಿಐನ 26ನೇ ಗೌರ್ನರ್. 56 ವರ್ಷದ ಸಂಜಯ್ ಮಲ್ಹೋತ್ರಾ ಅವರು 1990ನೇ ಬ್ಯಾಚ್‌ನ ರಾಜಸ್ಥಾನ ಕೇಡರ್‌ನ ಐಎಎಸ್ ಅಧಿಕಾರಿ.
ಸಂಜಯ್ ಮಲ್ಹೋತ್ರಾ ಮೊದಲು ಹಣಕಾಸು ಸೇವೆಗಳ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದರು. ಐಐಟಿ ಕಾನ್ಪುರದಲ್ಲಿ ಅವರು ವ್ಯಾಸಂಗ ಮಾಡಿದ್ದಾರೆ. ಮೂರು ದಶಕಗಳ ಕಾಲದ ಸರ್ಕಾರಿ ಸೇವೆಯಲ್ಲಿ ಅವರು ವಿದ್ಯುತ್, ಹಣಕಾಸು, ತೆರಿಗೆ, ಐಟಿ ಮತ್ತು ಗಣಿಗಳಂತಹ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಸದಾನಂದ್ ವಸಂತ್ ನೇಮಕ; ಕೇಂದ್ರ ಸರ್ಕಾರ ಸದಾನಂದ ವಸಂತ ದಾತೆ ಅವರನ್ನು ಎನ್ಐಎ ಮುಖ್ಯಸ್ಥರನ್ನಾಗಿ ನೇಮಕ ಮಾಡಿತು. ಇವರು ಮಹಾರಾಷ್ಟ್ರ ಕೇಡರ್‌ನ 1990ರ ಬ್ಯಾಚ್‌ನ ಐಪಿಎಸ್ ಅಧಿಕಾರಿ. ದಿನಕರ್ ಗುಪ್ತಾ ನಿವೃತ್ತಿಯ ನಂತರ ಎನ್‌ಐಎ ಮುಖ್ಯಸ್ಥರಾಗಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. 2026ರ ಡಿಸೆಂಬರ್ 31ರ ತನಕ ಸದಾನಂದ ಅವರು ಎನ್‌ಐಎ ಮುಖ್ಯಸ್ಥರಾಗಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ.
ಸದಾನಂದ ವಸಂತ ದಾತೆ ಎನ್‌ಐಎಗೆ ಸೇರುವ ಮೊದಲು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು. ರಾಜ್ಯದಲ್ಲಿ ಅವರು ಜಂಟಿ ಆಯುಕ್ತ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಜಂಟಿ ಆಯುಕ್ತ ಕ್ರೈಂ ಬ್ರಾಂಚ್ ಮುಂಬೈ ಸೇರಿದಂತೆ ಹಲವು ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ.
ಎನ್‌ಡಿಆರ್‌ಎಫ್ ಸಾರಥಿ ನೇಮಕ: ಕೇಂದ್ರ ಸರ್ಕಾರ 2024ರ ಮಾರ್ಚ್‌ನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮಹಾ ನಿರ್ದೇಶಕರನ್ನಾಗಿ ರಾಜೀವ್ ಕುಮಾರ್ ಶರ್ಮಾ ಅವರನ್ನು ನೇಮಕ ಮಾಡಿತು.
ಬಿಪಿಆರ್‌ಡಿ ನೇಮಕಾತಿ: ಕೇಂದ್ರ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಬಿಪಿಆರ್‌ಡಿ) ಮುಖ್ಯಸ್ಥರಾಗಿ ರಾಜೀವ್ ಕುಮಾರ್ ಶರ್ಮಾ ನೇಮಕ ಮಾಡಿದೆ. ಎನ್‌ಡಿಆರ್‌ಎಫ್ ಮಹಾ ನಿರ್ದೇಶಕರಾಗಿಯೂ ಅವರು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ರಾಜಸ್ಥಾನ ಕೇಡರ್‌ನ 1990 ಬ್ಯಾಚ್ ಐಪಿಎಸ್ ಅಧಿಕಾರಿ ರಾಜೀವ್ ಕುಮಾರ್ ಶರ್ಮಾ ರಾಜಸ್ಥಾನದಲ್ಲಿ ಭ್ರಷ್ಟಾಚಾರ ವಿರೋಧಿ ಘಟಕದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಈ ಹಿಂದೆ ಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ), ರಾಜಸ್ಥಾನ, ಆರ್‌ಎಸಿ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥರಾಗಿಯೂ ಅವರು ಕಾರ್ಯ ನಿರ್ವಹಣೆ ಮಾಡಿದ್ದರು.
ಡಿಬಿಎಸ್ ಬ್ಯಾಂಕ್: 2024ರ ನವೆಂಬರ್‌ನಲ್ಲಿ ಡಿಬಿಎಸ್ ಬ್ಯಾಂಕ್ ತನ್ನ ಸಾಂಸ್ಥಿಕ ಬ್ಯಾಂಕಿಂಗ್ ಮುಖ್ಯಸ್ಥ ರಜತ್ ವರ್ಮಾ ಅವರನ್ನು ಬ್ಯಾಂಕ್‌ನ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡಿತು. 2023ರಲ್ಲಿ ಅವರನ್ನು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು.












Click it and Unblock the Notifications