ವರ್ಷದ ವಿಶೇಷ: 2021ರಲ್ಲಿ ವಿವಿ ಸಾಗರ ಜಲಾಶಯ, ಭರಮಸಾಗರ ಕೆರೆಗೆ ಹರಿದು ಬಂದ ನೀರು
ಚಿತ್ರದುರ್ಗ, ಡಿಸೆಂಬರ್ 31: ಮಧ್ಯ ಕರ್ನಾಟಕದ ಬಯಲು ಸೀಮೆಯ ಚಿತ್ರದುರ್ಗ ಜಿಲ್ಲೆಯ ಏಕೈಕ ಜೀವನಾಡಿಯಾಗಿರುವ ಹಿರಿಯೂರಿನ ವಾಣಿ ವಿಲಾಸ ಜಲಾಶಯ ಡ್ಯಾಂ ನೀರಿನ ಮಟ್ಟ 125.15 ಅಡಿ ತಲುಪಿದೆ. ಮತ್ತೊಂದು ಕಡೆ ಭರಮಸಾಗರ ಕೆರೆಗೆ ನೀರು ಹರಿಸಲಾಗಿದೆ. ಇದರ ಜೊತೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, 2021ರ ವಿಶೇಷವಾಗಿದೆ.
ಹೆಚ್ಚು ಮಳೆ ಬೀಳದೆ ಬರದ ಭೂಮಿಯಾಗಿ ಬಯಲು ಸೀಮೆಯಾಗಿದ್ದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನುಕೂಲವಾಗುವಂತೆ ಮೈಸೂರು ಮಹಾರಾಜರು ಮಾರಿಕಣಿವೆ ಬಳಿ ವೇದಾವತಿ ನದಿಗೆ ಅಡ್ಡಲಾಗಿ ವಾಣಿವಿಲಾಸ ಸಾಗರ ಜಲಾಶಯವನ್ನು ಕಟ್ಟಿದರು.
ಈ ವರ್ಷದ ಮಳೆಗಾಲ ಹಾಗೂ ನವೆಂಬರ್ ತಿಂಗಳಲ್ಲಿ ಸುರಿದ ಜಿಟಿಜಿಟಿ ಮಳೆಯಿಂದ ಹಾಗೂ ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ದಾಖಲೆ ಮಟ್ಟದಲ್ಲಿ ನೀರು ಹರಿದು ಬರಲು ಕಾರಣವಾಯಿತು.

63 ವರ್ಷಗಳ ನಂತರ 125. 15 ಅಡಿ ನೀರು ಸಂಗ್ರಹ
1956ರಲ್ಲಿ 125 ಅಡಿ, 1957ರಲ್ಲಿ 125.05 ಅಡಿ, 1958ರಲ್ಲಿ 124.50 ಅಡಿ ನೀರು ಸಂಗ್ರಹವಾಗಿತ್ತು. ತದನಂತರ 2000ರಲ್ಲಿ 122.50 ಅಡಿ ನೀರು ಜಲಾಶಯಕ್ಕೆ ಹರಿದಿದು ಬಂದಿತ್ತು. 2000ರಲ್ಲಿ ಹೆಚ್ಚು ನೀರು ಬಂದಿದ್ದು ಬಿಟ್ಟರೆ, ಇಲ್ಲಿಯವರೆಗೂ ಹೇಳಿಕೊಳ್ಳುವಂತಹ ನೀರು ಬಂದಿರಲಿಲ್ಲ. ಇದೀಗ 63 ವರ್ಷಗಳ (1958) ನಂತರ 125. 15 ಅಡಿ ನೀರು ಸಂಗ್ರಹವಾಗಿದೆ.
5 ಅಡಿ ನೀರು ಜಲಾಶಯಕ್ಕೆ ಹರಿದು ಬಂದಿದ್ದರೆ ಡ್ಯಾಂ ಎರಡನೇ ಬಾರಿಗೆ ಕೋಡಿ ಬೀಳುವುದು ಬಹುತೇಕ ಖಚಿತವಾಗಿತ್ತು. ತಾಲೂಕಿನ ಜನತೆ ಕೋಡಿ ಬೀಳುವುದನ್ನು ನೋಡಲು ಕಾತುರದಿಂದ ಕಾದಿದ್ದರು. ಆದರೆ ಡಿಸೆಂಬರ್ ಅಂತ್ಯದ ವೇಳಗೆ ಮಳೆ ಕಡಿಮೆಯಾದ್ದರಿಂದ ನೀರು ಬರಲಿಲ್ಲ.

2021ರಲ್ಲಿ 16.77 ಟಿಎಂಸಿ ನೀರು
2021ರಲ್ಲಿ ವಿವಿ ಸಾಗರ ಜಲಾಶಯಕ್ಕೆ ಮಳೆ ನೀರು ಹಾಗೂ ಭದ್ರಾ ನೀರು ಸೇರಿದಂತೆ 16.77 ಟಿಎಂಸಿ ಅಡಿ ನೀರು ಹರಿದು ಬಂದಿದೆ. ಭದ್ರಾ ಜಲಾಶಯದಿಂದ 6.82 ಅಡಿ ನೀರು, ಮಳೆಯಿಂದ 9.95 ಟಿಎಂಸಿ ನೀರು ಜಲಾಶಯಕ್ಕೆ ಬಂದಿದೆ ಒಟ್ಟು ಈ ವರ್ಷದಲ್ಲಿ ಜಲಾಶಯಕ್ಕೆ 16.77 ಟಿಎಂಸಿ ನೀರು ಸಂಗ್ರಹವಾಗಿದೆ.
ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಕರಿಯಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಯಿತ್ರಿ ಜಲಾಶಯ ಮಳೆಗೆ ತುಂಬಿ ಕೋಡಿ ಬಿದ್ದಿತ್ತು. ಗಾಯಿತ್ರಿ ಜಲಾಶಯ 2017 ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಎರಡು ಬಾರಿ ತುಂಬಿ ಕೋಡಿ ಬಿದ್ದಿತ್ತು. ನಂತರ 4 ವರ್ಷಗಳ ಬಳಿಕ ಡ್ಯಾಂ ತುಂಬಿ ಕೋಡಿ ಬಿದ್ದು ಹರಿಯಿತು. ಡ್ಯಾಂ ತುಂಬಿ ಹರಿಯುವ ನೀರಿನಲ್ಲಿ ಈಜಲು ಹೋಗಿ ಯುವಕನೊಬ್ಬ ಮೃತಪಟ್ಟ ಘಟನೆ ಕೂಡ ನಡೆದಿತ್ತು.

ಭರಮಸಾಗರ ಕೆರೆಗೆ ನೀರು
ಹರಿಹರದ ತುಂಗಾ ಭದ್ರಾ ನದಿಯಿಂದ ಸುಮಾರು 56 ಕಿಲೋಮೀಟರ್ ದೂರದಿಂದ ಜಿಲ್ಲೆಯ ಭರಮಸಾಗರ ದೊಡ್ಡಕೆರೆಗೆ ತುಂಗಾಭದ್ರಾ ನೀರು ಹರಿಸಲಾಯಿತು. ಈ ಕಾರ್ಯದಿಂದ ಬಯಲುಸೀಮೆಯ ಚಿತ್ರದುರ್ಗ ಜಿಲ್ಲೆಗೆ ಈ ವರ್ಷ ಮತ್ತೊಂದು ಬೆಳೆವಣಿಗೆಗೆ ಸಾಕ್ಷಿಯಾಯಿತು ಎಂದರೆ ತಪ್ಪಾಗಲಾರದು.
562 ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿತ್ತು. ಸಿರಿಗೆರೆ ಸ್ವಾಮೀಜಿಯ ನಿರಂತರ ಕಳಾಜಿಯಿಂದಾಗಿ ಇಲ್ಲಿನ ಐತಿಹಾಸಿಕ ಕೆರೆಗೆ ನೀರು ಹರಿದು ಬಂದಿದೆ. ಇನ್ನು ಭರಮಸಾಗರ ಹೋಬಳಿಯ 42 ಕೆರೆಗಳಿಗೆ ಹರಿಹರದ ತುಂಗಭದ್ರಾ ನದಿಯಿಂದ ಮೂಲಕ ನೀರನ್ನು ಮೇಲೆತ್ತಿ ಕೆರೆಗೆ ನೀರು ತುಂಬಿಸುವ ಯೋಜನೆಯಾಗಿದೆ.

ಜಿಲ್ಲೆಯಲ್ಲಿ ಉತ್ತಮ ಮಳೆ
ಭರಮಸಾಗರ ಏತ ನೀರಾವರಿ ಹರಿಹರ ತಾಲೂಕು ಹಲಸಬಾಳು ಗ್ರಾಮದ ಬಳಿ ತುಂಗಭದ್ರಾ ನದಿಯಿಂದ ಭರಮಸಾಗರ ಕೆರೆಗೆ 55 ಕಿಲೋಮೀಟರ್ ದೂರ ಇದೆ. ಇದು ಬಹುತೇಕ ರಾಜ್ಯದಲ್ಲಿಯೇ ಬಹುದೊಡ್ಡ ರೈಸಿಂಗ್ ಮೇಲಿರುವ ಯೋಜನೆಯಾಗಿದ್ದು, ತುಂಗಭದ್ರಾ ನದಿಯಿಂದ ಪಂಪ್ ಮಾಡುವ ನೀರು ನೇರವಾಗಿ ಮುಂದೆ ಚಳ್ಳಕೆರೆ, ಬೇವಿನಹಳ್ಳಿ, ನಂದಿಹಳ್ಳಿ,ಇಸಾಮುದ್ರ, ಚಿಕ್ಕಬೆನ್ನೂರು, ಚಿಕ್ಕಪುರ ಹೀಗೆ ಆರು ಕವಲು ದಾರಿಗಳ ಮೂಲಕ ಆಯಾ ಕೆರೆಗಳನ್ನು ತುಂಬುತ್ತದೆ.
ಕಳೆದ ಎರಡು ವರ್ಷಗಳಿಗಿಂತ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಕೆಲವು ಕಡೆ ಅತಿವೃಷ್ಟಿಯಾದರೆ, ಇನ್ನು ಕೆಲವು ಭಾಗಗಳಲ್ಲಿ ಅನಾವೃಷ್ಟಿಯಾಗಿದೆ. ಹಿರಿಯೂರು ತಾಲ್ಲೂಕಿನ ವೇದಾವತಿ ನದಿ ಎರಡು ಅರ್ಧದಷ್ಟು ಮೈದುಂಬಿ ಹರಿಯಿತು. ಉಳಿದಂತೆ ಜಿಲ್ಲೆಯ ಅನೇಕ ಭಾಗಗಳಲ್ಲಿ ಕೆರೆ ಕಟ್ಟೆಗಳು, ಚೆಕ್ ಡ್ಯಾಂ, ಕೃಷಿ ಹೊಂಡಗಳು ಮೈದುಂಬಿ ಹರಿದು ಕೋಡಿ ಬಿದ್ದಿವೆ. ಬತ್ತಿ ಹೋಗಿದ್ದ ಕೊಳವೆ ಬಾವಿಯಲ್ಲಿ ನೀರು ಉಕ್ಕಿ ಬಂದಿರುವ ಘಟನೆ ಸನ್ನಿವೇಶಗಳು ನಡೆದಿವೆ. ಹೊಳಲ್ಕೆರೆ, ಚಳ್ಳಕೆರೆ ತಾಲೂಕುಗಳಲ್ಲಿ ಕೆರೆಗಳು ತುಂಬಿದ್ದರಿಂದ ಗ್ರಾಮದ ಜನರು ಕೆರೆಗಳಲ್ಲಿ ತೆಪ್ಪೋತ್ಸವ ಕಾರ್ಯಕ್ರಮ ನೆರವೇರಿಸಿದ್ದಾರೆ.

ಚಿತ್ರದುರ್ಗದಲ್ಲಿ ಬೆಳೆ ಹಾನಿ
ಚಿತ್ರದುರ್ಗ ಜಿಲ್ಲೆಯಲ್ಲಿ 2021-22ನೇ ಸಾಲಿನ ನವೆಂಬರ್ ಮಾಹೆಯಲ್ಲಿ ಬಿದ್ದಂತಹ ಹೆಚ್ಚಿನ ಮಳೆಯಿಂದಾಗಿ ಬೆಳೆಹಾನಿ ಆಗಿದ್ದು, ಬೆಳೆ ಹಾನಿಯ ಕುರಿತು ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸಮೀಕ್ಷೆ ಕಾರ್ಯ ನಡೆಸಲಾಯಿತು. ಜಿಲ್ಲೆಯಾದ್ಯಂತ ಶೇಂಗಾ ಬೆಳೆಯಲ್ಲಿ ಒಟ್ಟು 56,119 ಹೆಕ್ಟೇರ್, ರಾಗಿ ಬೆಳೆಯಲ್ಲಿ 19,030 ಹೆಕ್ಟೇರ್, ಕಡಲೆ ಬೆಳೆಯಲ್ಲಿ 15,307 ಹೆಕ್ಟೇರ್, ಮೆಕ್ಕೆಜೋಳದಲ್ಲಿ 1979 ಹೆಕ್ಟೇರ್ ಹಾಗೂ ಇತರೆ ಬೆಳೆಗಳಲ್ಲಿ 870.40 ಹೆಕ್ಟೇರ್‍ಗಳಂತೆ ಒಟ್ಟು 93,305.40 ಹೆಕ್ಟೇರ್‌ಗಳಷ್ಟು ಬೆಳೆಹಾನಿಯಾಗಿರುವುದು ವರದಿಯಾಗಿದೆ.
ಒಟ್ಟಾರೆಯಾಗಿ ಬಯಲು ಸೀಮೆಯಾಗಿದ್ದ ಚಿತ್ರದುರ್ಗ ಜಿಲ್ಲೆಯಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುತ್ತಿತ್ತು. ಜೊತೆಗೆ ಕೃಷಿ ಚಟುವಟಿಕೆಗಳಿಗೆ ನೀರಿನ ಅಭಾವ ಇತ್ತು. ಈ ವರ್ಷದ ಸಮೃದ್ಧಿ ಮಳೆಯಿಂದ ಜಿಲ್ಲೆಯಲ್ಲಿ ನೀರಿನ ಬರದ ಕರಿನೆರಳು ದೂರವಾಗಿದ್ದು, ರೈತರಲ್ಲಿ ಮಂದಹಾಸ ಹೆಚ್ಚಿದೆ. ಬರುವ ವರ್ಷದಲ್ಲಿ ಭದ್ರಾ ಕಾಮಗಾರಿ ಪೂರ್ಣಗೊಂಡು ವಾಣಿ ವಿಲಾಸ ಜಲಾಶಯಕ್ಕೆ ಮತ್ತಷ್ಟು ನೀರು ಹೆಚ್ಚಳವಾದರೆ ಜಿಲ್ಲೆಯಲ್ಲಿ ಜಲಸಂಪನ್ಮೂಲ ಹೆಚ್ಚಳವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.












Click it and Unblock the Notifications