2021ರ ಹಿನ್ನೋಟ; ದೇಶಾದ್ಯಂತ ಸುದ್ದಿಯಾದ ಧಾರವಾಡದ ಅಪಘಾತ
2021ನೇ ವರ್ಷಕ್ಕೆ ವಿದಾಯ ಹೇಳಲು ಕೆಲವು ದಿನಗಳು ಬಾಕಿ ಇದೆ. 2022ನೇ ವರ್ಷ ಶುಭಕರವಾಗಿರಲಿ ಎಂಬ ಆಶಯದೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲು ಜನರು ಸಿದ್ದವಾಗುತ್ತಿದ್ದಾರೆ. ಈ ವರ್ಷದಲ್ಲಿ ನಡೆದ ಕೆಲವು ಕಹಿ ಘಟನೆಗಳು ಸದಾ ಕಾಡುತ್ತವೆ. ಅದರಲ್ಲಿ ಒಂದು ಧಾರವಾಡದಲ್ಲಿ ನಡೆದ ಭೀಕರ ರಸ್ತೆ ಅಪಘಾತ.
ಅದು ಜನವರಿ 15ರ ಶುಕ್ರವಾರ. ಹುಬ್ಬಳ್ಳಿ- ಧಾರವಾಡ ಬೈಪಾಸ್ ರಸ್ತೆಯ ಇಟಿಗಟ್ಟಿ ಬಳಿ ಟೆಂಪೋ ಟ್ರಾವೆಲರ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿತು. ದಾವಣಗೆರೆಯಿಂದ ಗೋವಾಕ್ಕೆ ಪ್ರವಾಸ ಹೊರಟಿದ್ದ 11 ಜನರು ಈ ಅಪಘಾತದಲ್ಲಿ ಮೃತಪಟ್ಟರು. ಮೃತಪಟ್ಟವರಲ್ಲಿ ಮಹಿಳೆಯರೇ ಹೆಚ್ಚು, ಎಲ್ಲರೂ ಸ್ನೇಹಿತರಾಗಿದ್ದು, ಸಂಕ್ರಾಂತಿ ರಜೆ ಹಿನ್ನಲೆಯಲ್ಲಿ ಗೋವಾ ಪ್ರವಾಸ ಕೈಗೊಂಡಿದ್ದರು.
ಈ ರಸ್ತೆ ಅಪಘಾತದ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆಗಳು ನಡೆದವು. ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದರು. ಸದಾ ಅಪಘಾತ ನಡೆಯುವ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯನ್ನು ಅಗಲೀಕರಣ ಮಾಡಬೇಕು ಎಂದು ಒತ್ತಾಯಿಸಲಾಯಿತು. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಚರ್ಚೆಗಳು ನಡೆದವು.

ಸ್ನೇಹಿತೆಯರ ದುರ್ಮರಣ; ಇಟಿಗಟ್ಟಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಎಲ್ಲರೂ ಸ್ನೇಹಿತೆಯರು. ಒಟ್ಟಿಗೆ ಓದಿದ್ದ ಎಲ್ಲರೂ ಬಳಿಕ ದೂರವಾಗಿದ್ದರು. ಬಳಿಕ ಫೇಸ್‌ಬುಕ್ ಸಹಾಯದಿಂದ ಒಂದಾಗಿ ವಾಟ್ಸಪ್ ಗ್ರೂಪ್ ಕ್ರಿಯೇಟ್ ಮಾಡಿಕೊಂಡಿದ್ದರು. ದಾವಣಗೆರೆಯಲ್ಲಿ ಲೇಡಿಸ್ ಕ್ಲಬ್ ಮಾಡಿಕೊಂಡಿದ್ದರು. ಮೃತಪಟ್ಟವರಲ್ಲಿ ವೈದ್ಯೆ, ಉದ್ಯಮಿ, ಗೃಹಿಣಿಯರು ಇದ್ದರು. ಮನೆಗೆ ಆಧಾರವಾಗಿದ್ದ ಮಹಿಳೆಯನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.
ಗೋವಾ ಪ್ರವಾಸ ಹೋಗಲು ದಾವಣಗೆರೆಯಿಂದ ಹೊರಟಿದ್ದ ಸ್ನೇಹಿತೆಯರು ಸೆಲ್ಪೀ ತೆಗೆದು ವಾಟ್ಸಪ್ ಸ್ಟೇಟಸ್ ಹಾಕಿದ್ದರು. ಧಾರವಾಡದಲ್ಲಿರುವ ಸ್ನೇಹಿತೆಯ ಮನೆಯಲ್ಲಿ ಉಪಹಾರಕ್ಕಾಗಿ ಹೋಗುವವರಿದ್ದರು. ಆದರೆ ಧಾರವಾಡ ತಲುಪಲು ಕೆಲವೇ ಕಿಲೋಮೀಟರ್ ಇರುವಾಗ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದರು.
ಸದಾ ಅಪಫಾತ ನಡೆಯುವ, ಅದರಲ್ಲೂ ಮುಂಜಾನೆ ವೇಳೆ ಹೆಚ್ಚು ಅಪಘಾತ ಆಗುವ ಹುಬ್ಬಳ್ಳಿ-ಧಾರವಾಡ ಬೈಪಾಸ್ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಯನ್ನು ಅಗಲೀಕರಣ ಮಾಡಬೇಕು ಎಂದು ಒತ್ತಾಯಿಸಿದರು. ಅಪಘಾತ ನಡೆದು 11 ತಿಂಗಳು ಕಳೆದಿದೆ. ಅಗಲೀಕರಣ ದೂರದ ಮಾತು ಒಂದು ಕಲ್ಲು ಸಹ ಆ ಕಡೆ, ಈ ಕಡೆ ಕದಲಿಲ್ಲ.
ಭೀಕರ ಅಪಘಾತದ ನಂತರ ಧಾರವಾಡ ಜಿಲ್ಲಾಡಳಿತ ಅಪಘಾತ ನಡೆದ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯ 30 ಕಿ. ಮೀ. ರಸ್ತೆ ಪರಿಶೀಲಿಸಿತು. ಮುಂದಿನ 72 ಗಂಟೆಗಳಲ್ಲಿ ಅಪಾಯಕಾರಿ ಸ್ಥಳ, ಸೇತುವೆ ತಿರುವು ಗುರುತಿಸಿ ಚಾಲಕರಿಗೆ ಅರಿವು ಮೂಡಿಸುವ ಫಲಕಗಳನ್ನು ಅಳವಡಿಕೆ ಮಾಡಲು ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿತು. ಆದರೆ ಇಂದಿಗೂ ಬೈಪಾಸ್ ರಸ್ತೆಯಲ್ಲಿ ಅಪಘಾತ ನಿಂತಿಲ್ಲ.
ರಸ್ತೆ ಅಗಲ ಮಾಡಬೇಕು ಎಂದು ಪ್ರತಿಭಟನೆಗಳು ನಡೆದವು. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರು ದಾವಣಗೆರೆಯಿಂದ ಧಾರವಾಡಕ್ಕೆ ಬಂದು ಪ್ರತಿಭಟನೆ ನಡೆಸಿದರು. ಇನ್ನೊಂದು ಇಂತಹ ಅಪಘಾತ ಆಗಬಾರದು ಎಂಬ ಕಾಳಜಿಯಿಂದ ರಸ್ತೆ ಅಗಲೀಕರಣ ಮಾಡಿ, ಬೈಪಾಸ್ ರಸ್ತೆಯನ್ನು ಚತುಷ್ಪಥ ಮಾಡಿ ಎಂಬ ಬೇಡಿಕೆ ಮುಂದಿಟ್ಟರು. ಅಪಘಾತ ನಡೆದ ಕೆಲವು ದಿನಗಳ ಕಾಲ ಇದ್ದ ಆಕ್ರೋಶ ಬಳಿಕ ತಣ್ಣಗಾಯಿತು.
4 ವರ್ಷಗಳ ಅವಧಿಯಲ್ಲಿ 30 ಕಿ. ಮೀ. ಉದ್ದ ಈ ಬೈಪಾಸ್ ರಸ್ತೆಯಲ್ಲಿ ನಡೆದ ಅಪಘಾತಗಳ ಸಂಖ್ಯೆ 528. 89 ಜನರು ಮೃತಪಟ್ಟಿದ್ದಾರೆ, 542 ಜನರು ಗಾಯಗೊಂಡಿದ್ದಾರೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಅಗಲೀಕರಣ ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ. ಗಬ್ಬೂರು ಕ್ರಾಸ್‌ನಿಂದ ಆರಂಭವಾಗುವ ಬೈಪಾಸ್ ರಸ್ತೆ ನರೇಂದ್ರ ತನಕ ದ್ವಿಪಥ ಮಾರ್ಗವಾಗಿದೆ, ಇದು ಸಾವಿನ ರಸ್ತೆ ಎಂದೇ ಕುಖ್ಯಾತಿಗಳಿಸಿದೆ.












Click it and Unblock the Notifications