ವಿಶ್ವ ಮಾನಸಿಕ ಆರೋಗ್ಯ ದಿನ: ಒತ್ತಡದ ಬದುಕಿನಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
ಅಕ್ಟೋಬರ್ 10ನ್ನು ವಿಶ್ವ ಮಾನಸಿಕ ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಇವತ್ತು ನಾವು ದೈಹಿಕ ಆರೋಗ್ಯವಾಗಿದ್ದರೂ ಎಲ್ಲೋ ಒಂದು ಕಡೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ಇದಕ್ಕೆ ಕಾರಣ ಇವತ್ತಿನ ಲೈಫ್ ಸ್ಟೈಲ್ ಮತ್ತು ಮಿತಿಮೀರಿದ ಒತ್ತಡಗಳು ಎಂದರೂ ತಪ್ಪಾಗಲಾರದು.
ನಾವೆಷ್ಟೇ ದೈಹಿಕವಾಗಿ ಆರೋಗ್ಯವಾಗಿದ್ದರೂ ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳದಿದ್ದರೆ ಅದರ ಪರಿಣಾಮವನ್ನು ದೇಹ ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಹಲವು ಸಮಸ್ಯೆಗಳಿಗೂ ದಾರಿ ಮಾಡಿಕೊಡುತ್ತದೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ.

ಇಷ್ಟಕ್ಕೂ ಮಾನಸಿಕ ಆರೋಗ್ಯ ಎಂದರೇನು ಎಂಬ ಪ್ರಶ್ನೆ ಹೆಚ್ಚಿನವರನ್ನು ಕಾಡದಿರದು. ಒಬ್ಬ ವ್ಯಕ್ತಿಯ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಅಷ್ಟೇ ಮಾನಸಿಕ ಆರೋಗ್ಯವೂ ಮುಖ್ಯವಾಗುತ್ತದೆ. ಮಾನಸಿಕ ಆರೋಗ್ಯವಿಲ್ಲದಿದ್ದರೆ ಆತನಿಗೆ ಏನಿದ್ದರೂ ಅದನ್ನು ನೆಮ್ಮದಿಯಾಗಿ, ಸುಖವಾಗಿ ಅನುಭವಿಸಲು ಸಾಧ್ಯವಾಗಲಾರದು.
ದೈಹಿಕ ಮಾನಸಿಕ ಆರೋಗ್ಯ ಮುಖ್ಯ
ಇವತ್ತಿನ ಪರಿಸ್ಥಿತಿಯಲ್ಲಿ ನಮ್ಮಲ್ಲಿ ಹೆಚ್ಚಿನವರು ಮಾನಸಿಕ ಆರೋಗ್ಯದ ಕೊರತೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣ ಬದಲಾಗಿರುವ ನಮ್ಮ ಬದುಕಿನ ಶೈಲಿ. ದೈಹಿಕ ಒತ್ತಡಕ್ಕಿಂತ ಹೆಚ್ಚಾದ ಮಾನಸಿಕ ಒತ್ತಡವೂ ಕಾರಣವಿರಬಹುದು. ನಾವು ಖುಷಿಯಾಗಿ ನೆಮ್ಮದಿಯಾಗಿ ಇರಬೇಕಾದರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಬಹುಮುಖ್ಯವಾಗಿರುತ್ತದೆ.
ದುಡಿಮೆಯ ಕ್ಷೇತ್ರಗಳಲ್ಲಿ ಕೆಲವು ಮಾನಸಿಕವಾಗಿ ಕಿರಿಕಿರಿ ತರುವ ಮತ್ತು ಒತ್ತಡದ ಕೆಲಸಗಳಾಗಿವೆ. ಇಂತಹ ಕ್ಷೇತ್ರಗಳಲ್ಲಿ ದುಡಿಯುವವರು ತಮ್ಮ ಮಾನಸಿಕ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳಬೇಕು. ಕೋಪ, ಆಕ್ರೋಶ, ಸೇರಿದಂತೆ ಉದ್ವೇಗಕ್ಕೊಳಗಾಗದೆ ಎಲ್ಲವನ್ನು ಸಮಾಧಾನವಾಗಿ, ಸಮಚಿತ್ತದಿಂದ ಎದುರಿಸುವ ಮಾನಸಿಕ ಧೈರ್ಯವನ್ನು ಬೆಳೆಸಿಕೊಳ್ಳಬೇಕು.

ಅನಗತ್ಯ ವಿಚಾರಗಳಿಂದ ದೂರವಿರಬೇಕು
ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಮೊದಲಿಗೆ ದೇಹವನ್ನು ದಂಡಿಸಬೇಕು. ಅಂದರೆ ವ್ಯಾಯಾಮ ಮಾಡುವುದು, ವಾಕಿಂಗ್ ಮಾಡುವುದು, ಕ್ರೀಡಾ ಚಟುವಟಿಕೆಗಳಲ್ಲಿ ತೊಡಗುವುದು, ಹೆಂಡತಿ ಮಕ್ಕಳೊಂದಿಗೆ ದೇವಸ್ಥಾನ ಅಥವಾ ಯಾವುದಾದರೂ ಪ್ರವಾಸಿ ತಾಣಗಳಿಗೆ ತೆರಳುವುದು, ಸಾರ್ವಜನಿಕ ಕಾರ್ಯಕ್ರಮಗಳು, ಬಂಧುಬಳಗದವರೊಂದಿಗೆ ಸೇರಿ ಒಂದಷ್ಟು ಸಮಯ ಕಳೆಯುವುದು, ಮನೋರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು, ಚೆನ್ನಾಗಿ ನಿದ್ದೆ ಮಾಡುವುದು ಹೀಗೆ ತಮ್ಮ ಬಿಡುವಿನ ಸಮಯವನ್ನು ಕಳೆಯಬೇಕು.
ಒಂದಷ್ಟು ಸಮಯವನ್ನು ಧ್ಯಾನ, ದೇವರ ದರ್ಶನ ಹೀಗೆ ಪ್ರಶಾಂತ ವಾತಾವರಣದಲ್ಲಿ ಕಳೆಯಬೇಕು. ವೈದ್ಯರ ಬಳಿ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಆರೋಗ್ಯದ ಸಮಸ್ಯೆಗಳು ಕಂಡು ಬಂದರೆ ಚಿಕಿತ್ಸೆ ಪಡೆದುಕೊಳ್ಳಬೇಕು. ಬೇರೆಯವರ ವೈಯಕ್ತಿಕ ವಿಚಾರಗಳ ಬಗ್ಗೆ ಆಸ್ಥೆ ವಹಿಸದೆ ತಮ್ಮ ಪಾಡಿಗೆ ತಾವು ಇರುವುದನ್ನು ಕಲಿಯಬೇಕು. ಅನಗತ್ಯ ವಿಚಾರಗಳಿಗೆ ತಲೆಕೆಡಿಸಿಕೊಳ್ಳಬಾರದು.
ಮಾನಸಿಕ ತಲೆನೋವು ಕೂಡ ಕಾಡಬಹುದು
ಇದರ ನಡುವೆಯೂ ಮಾನಸಿಕ ತಲೆನೋವುಗಳು ಕೆಲವರನ್ನು ಕಾಡಲಾರಂಭಿಸಿದೆ. ಇದು ಬೇರೆಯವರಿಂದ ಬರುವ ತಲೆನೋವಲ್ಲ. ನಾವೇ ನಮ್ಮ ಕೈಯ್ಯಾರೆ ತಂದು ಕೊಳ್ಳುತ್ತಿದ್ದೇವೆ. ಇದಕ್ಕೆ ಕಾರಣ ಶಿಸ್ತುಬದ್ಧವಿಲ್ಲದ ಯಾಂತ್ರಿಕ ಜೀವನ, ಸದಾ ಜನ ಜಂಗುಳಿ ನಡುವೆ ಒತ್ತಡದ, ಪೈಪೋಟಿಯ ಬದುಕು, ಮಾಡಲೇ ಬೇಕಾದ ಕೆಲಸದ ಅನಿವಾರ್ಯತೆಯೂ ಇದೆ.

ದೈಹಿಕ ಶ್ರಮಕ್ಕಿಂತಲೂ ಹೆಚ್ಚಾಗಿ ಮಾನಸಿಕ ಶ್ರಮ, ಜತೆಗೆ ಸದಾ ಮೊಬೈಲ್, ಟಿವಿ ನೋಡುವುದು ಹೀಗೆ ಹತ್ತಾರು ಕಾರಣಗಳಿಂದ ಮಾನಸಿಕವಾಗಿ ತಲೆನೋವು ನಮ್ಮನ್ನು ಬಾಧಿಸುತ್ತಿದೆ. ಇನ್ನು ಯಾವುದಾದರೊಂದು ವಿಷಯದ ಬಗ್ಗೆಯೇ ಹೆಚ್ಚು ಚಿಂತೆ ಮಾಡುವುದು. ಅದರ ಸುತ್ತಲೂ ಇಲ್ಲ ಸಲ್ಲದ ಕಲ್ಪನೆ ಮಾಡಿಕೊಂಡು ನರಳುವುದು, ನಿದ್ದೆಗೆಡುವುದು ಕೂಡ ತಲೆನೋವಿಗೆ ಕಾರಣವಾಗುತ್ತಿದೆ.
ನಾವೇ ಔಷಧಿಯನ್ನು ಕಂಡುಕೊಳ್ಳಬೇಕು
ಕೆಲವರು ಬೇಕು ಬೇಕಂತಲೇ ರಗಳೆಗಳನ್ನು ಮೈಮೇಲೆ ಎಳೆದು ಕೊಳ್ಳುತ್ತಾರೆ. ಆ ನಂತರ ಆ ವಿಚಾರಕ್ಕೆ ಸಂಬಂಧಿಸಿದಂತೆ ತಲೆಕೆಡಿಸಿಕೊಳ್ಳುತ್ತಾರೆ. ಇದು ಮಾನಸಿಕವಾಗಿ ಅವರನ್ನು ಕಾಡುತ್ತದೆ. ಅದು ತಲೆ ನೋವಿಗೂ ಕಾರಣವಾಗಿ ಬಿಡುತ್ತದೆ. ದೈಹಿಕವಾಗಿ ಬರುವ ತಲೆನೋವುಗಳಿಗೆ ಔಷಧಿಗಳಿಂದ ಪರಿಹಾರ ನೀಡಬಹುದು. ಆದರೆ ಮಾನಸಿಕವಾಗಿ ಬರುವ ತಲೆನೋವುಗಳಿಗೆ ಔಷಧಿಗಳನ್ನು ನಾವೇ ಕಂಡು ಹಿಡಿದುಕೊಳ್ಳುವುದು ಅನಿವಾರ್ಯವಾಗಿದೆ.
ಬಹಳಷ್ಟು ಸಲ ನಮ್ಮ ಬಗ್ಗೆ ಬೇರೆ ಯಾರಾದರೂ ಏನಾದರು ನಕರಾತ್ಮಕವಾಗಿ ಮಾತನಾಡಿದರು ಎಂಬ ವಿಚಾರ ನಮ್ಮ ಕಿವಿಗೆ ಬೀಳುತ್ತಿದ್ದಂತೆಯೇ ಮನಸ್ಸು ಗೊಂದಲಕ್ಕೀಡಾಗುತ್ತದೆ. ಆ ವಿಚಾರಕ್ಕೆ ಸಂಬಂಧಿಸಿದಂತೆ ಯಾರು ಹೇಳಿದರೋ ಆ ವ್ಯಕ್ತಿಯನ್ನು ಕೇಳುವ ತನಕ ಮನಸ್ಸಿಗೆ ಸಮಾಧಾನವೇ ಇರುವುದಿಲ್ಲ. ಅದೇ ವಿಷಯಗಳು ನಮ್ಮನ್ನು ಕೊರೆಯುತ್ತಾ ನಮ್ಮ ಮನಸ್ಸನ್ನು ಆವರಿಸಿ ಎಲ್ಲದರಲ್ಲೂ ನಿರಾಸಕ್ತಿಯನ್ನುಂಟು ಮಾಡುತ್ತದೆ. ಇದೊಂದು ರೀತಿಯ ತಲೆನೋವಿಗೂ ಕಾರಣವಾಗಿಬಿಡುತ್ತದೆ.
ಚಿಂತಿಸುತ್ತಾ ಕೂರುವುದನ್ನು ಬಿಟ್ಟು ಬಿಡಿ
ಇದಕ್ಕೆ ಸುಲಭೋಪಾಯ ಏನೆಂದರೆ ಅವರಿವರು ನಿಮ್ಮ ಬಗ್ಗೆ ಮಾತನಾಡಿದರು ಎಂಬ ಬಗ್ಗೆ ನಿಮ್ಮ ಬಳಿ ಬಂದು ಹೇಳುವ ವ್ಯಕ್ತಿಗಳಿಂದ ದೂರವಿರಿ. ಅವರು ನಿಮ್ಮ ಬಗ್ಗೆ ಹೇಳುತ್ತಿದ್ದಾರೆ ಎಂಬುದು ಗೊತ್ತಾದ ತಕ್ಷಣ ಮಾತನ್ನು ಬದಲಿಸಿ, ಉದಾಸೀನತೆ ತಾಳಿ, ಅವರಿಂದ ದೂರಬನ್ನಿ ಅಥವಾ ನೀವು ಹೇಳುತ್ತಿರುವ ವಿಷಯದದಲ್ಲಿ ಆಸಕ್ತಿಯಿಲ್ಲ. ಯಾರೂ ಏನೂ ಹೇಳಿದರೂ ತೊಂದರೆಯಿಲ್ಲ. ಅದನ್ನು ಬಿಟ್ಟು ಬೇರೆಯದನ್ನು ಮಾತನಾಡಿ ಎಂಬುದನ್ನು ಅವರಿಗೆ ನೇರವಾಗಿ ಹೇಳಿ ಬಿಡಿ ಅಷ್ಟೇ.
ಮಾನಸಿಕ ಒತ್ತಡದಿಂದ ಬರುವ ತಲೆನೋವಿಗೆ ಮುಖ್ಯವಾಗಿ ವಿಶ್ರಾಂತಿ ತೆಗೆದುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಮನಸ್ಸನ್ನು ಹಗುರವಾಗಿಸುವ ಉಪಾಯವನ್ನು ಕಂಡುಕೊಳ್ಳಬೇಕು. ಯಾವುದಾದರೊಂದು ವಿಚಾರಗಳು ನಮ್ಮನ್ನು ಕಾಡುತ್ತಿದ್ದರೆ ಅಥವಾ ಸಮಸ್ಯೆಯಿಂದ ಬಳಲುತ್ತಿದ್ದರೆ ಅದನ್ನು ಪರಿಹರಿಸುವ ಪ್ರಯತ್ನ ಮಾಡಬೇಕೇ ವಿನಃ ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಚಿಂತಿಸುತ್ತಾ ಕೂರುವುದು ಒಳ್ಳೆಯದಲ್ಲ.
ಸದಾ ಮನಸ್ಸನ್ನು ತಿಳಿಯಾಗಿಸಿಟ್ಟು ಕೊಳ್ಳಿ
ಮಾನಸಿಕ ಒತ್ತಡದಿಂದ ಹೊರಬರಬೇಕು ಎನ್ನುವ ಸಲಹೆಯನ್ನು ಕೊಡುವುದು ಸುಲಭ ಆದರೆ ಹೇಗೆ ಬರುವುದು ಎಂಬುದೇ ಎಲ್ಲರನ್ನು ಕಾಡುವ ಪ್ರಶ್ನೆಯಾಗಿದೆ. ಮನೆಯೊಳಗೆ ಅಥವಾ ಏಕಾಂಗಿಯಾಗಿದ್ದಾಗಲೇ ನಮ್ಮನ್ನು ಮಾನಸಿಕವಾಗಿ ಹಲವು ವಿಚಾರಗಳು ಕಾಡುತ್ತವೆ. ಹೀಗಾಗಿ ನಾವು ಜನರೊಂದಿಗೆ ಬೆರೆಯುವುದನ್ನು ಕಲಿತುಕೊಳ್ಳಬೇಕು. ನಮ್ಮದೇನು? ನಮಗಿಂತಲೂ ಕಷ್ಟದಲ್ಲಿರುವವರು ಇದ್ದಾರೆ ಎಂಬ ಧೈರ್ಯವನ್ನು ತಂದುಕೊಳ್ಳಬೇಕು. ನಮ್ಮ ಯೋಚನಾ ಲಹರಿಯ ದಿಕ್ಕನ್ನು ಆದಷ್ಟು ಬೇರೆ ಕಡೆಗೆ ತಿರುಗಿಸುವ ಪ್ರಯತ್ನ ಮಾಡಬೇಕು. ಅನಾವಶ್ಯಕ, ಅನಪೇಕ್ಷಿತ ವಿಚಾರಗಳಿಂದ ದೂರವಿರುವುದನ್ನು ಕಲಿಯಬೇಕು.
ಬೆಳಿಗ್ಗೆ ಅಥವಾ ಸಂಜೆಯ ಸಮಯದಲ್ಲಿ ಆಹಾರ ಸೇವಿಸುವ ಮುನ್ನ ವಾಕಿಂಗ್, ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಬೇಕು. ಸಡಿಲವಾದ ಉಡುಪನ್ನು ಧರಿಸಿ ನೆಲದ ಮೇಲೆ ಕಂಬಳಿಯನ್ನು ಹಾಸಿ ಅದರ ಮೇಲೆ ಕುಳಿತುಕೊಳ್ಳಬೇಕು. ಬೇರೆ ಎಲ್ಲ ಯೋಚನೆಗಳನ್ನು ಬದಿಗೆ ಸರಿಸಿ ಏಕಾಗ್ರತೆಯಿಂದ ಮನಸ್ಸನ್ನು ತಿಳಿಯಾಗಿಸಿಕೊಳ್ಳಬೇಕು.
-
Vastu Tips for Kitchen: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಇವು ಇರಬಾರದು.. ಒಮ್ಮೆ ನೋಡಿ! -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ












Click it and Unblock the Notifications