Winter tips: ಚಳಿಗಾಲದಲ್ಲಿ ನಿಮ್ಮ ಬೈಕ್ ನಿರ್ವಹಣೆಗೆ ಇಲ್ಲಿವೆ ಸಿಂಪಲ್ ಟಿಪ್ಸ್
ಚಳಿಗಾಲದ ತಂಪು ವಾತಾವರಣಕ್ಕೆ ಮನುಷ್ಯರಾದ ನಮಗೇ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದರಂತೆ ನಾವು ಬಳಸುವ ಬೈಕ್‌ಗಳು ಕೂಡ ಚಳಿಗಾಲದಲ್ಲಿ ತೊಂದರೆಗೆ ಸಿಲುಕುತ್ತವೆ. ಮೊದಲೆಲ್ಲ ಕಿಕ್ ಸ್ಟಾರ್ಟ್ ಜಮಾನ ಆಗಿತ್ತು. ಚಳಿಗಾಲದಲ್ಲಿ ಬಲಬಿಟ್ಟು ಕಿಕ್ ಮಾಡಿದರೂ ಗಾಡಿಗಳು ಸ್ಟಾರ್ಟ್ ಆಗುತ್ತಿರಲಿಲ್ಲ. ಸ್ಟಾರ್ಟ್ ಆದರೂ ಅರ್ಥ ದಾರಿಗಳಲ್ಲಿ ಕೈಕೊಡುವುದು ತಪ್ಪುತ್ತಿರಲೂ ಇಲ್ಲ.
ಈಗೆಲ್ಲ ಸೆಲ್ಫ್ ಸ್ಟಾರ್ಟ್ ಜಮಾನ. ಆದರೂ ಚಳಿ ಹೆಚ್ಚಾದಂತೆ ಗಾಡಿಗಳು ಆಂತರಿಕವಾಗಿ ನಡುಗುತ್ತವೆ. ಇದರ ಪರಿಣಾಮ ಸರಿಯಾಗಿ ಸ್ಟಾರ್ಟ್ ಆಗದೆ ನಿಮ್ಮ ಸವಾರಿಯ ಮೂಡ್ ಅನ್ನೇ ಹಾಳು ಮಾಡುತ್ತಿರುತ್ತದೆ. ಹಾಗಾದರೆ ಚಳಿಗಾಲದಲ್ಲಿ ನಾವು ನಮ್ಮ ಆರೋಗ್ಯದ ಮೇಲೆ ವಹಿಸುವ ಜಾಗ್ರತೆಯನ್ನು ಬೈಕ್‌ಗಳ ಮೇಲೂ ತೋರುವುದು ಉತ್ತಮ. ಇದರಿಂದ ಚಳಿಗಾಲದಲ್ಲೂ ಬೈಕ್ ಅಥವಾ ಸ್ಕೂಟರ್‌ಗಳನ್ನು ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳಬಹುದು. ಇದಕ್ಕಿವೆ ಕೆಲವು ಟಿಪ್ಸ್.

ಅದರಂತೆ ಚಳಿಗಾಲ ಶುರುವಾದಂತೆ ತಾಪಮಾನವು ಕಡಿಮೆಯಾಗುವುದು ಸಹಜ. ಈ ವೇಳೆ ನಿಮ್ಮ ಮೋಟಾರ್ ಸೈಕಲ್ ಮೇಲೆ ನೀವು ಕಾಳಜಿ ವಹಿಸುವುದು ತುಂಬಾ ಮುಖ್ಯ. ಈ ಚಳಿಗಾಲದಲ್ಲಿ ನಿಮ್ಮ ಮೋಟಾರ್‌ಸೈಕಲ್ ಅನ್ನು ಕಾಪಾಡಿಕೊಳ್ಳಲು ಕೆಲವು ಪ್ರಮುಖ ಟಿಪ್ಸ್ ಅನ್ನು ನೋಡುವುದಾದರೆ..
ಬೈಕ್‌ಗಳ ಮೇಲೆ ಕವರ್‌ಗಳನ್ನು ಹೊದಿಸಿ:
ಸಾಮಾನ್ಯವಾಗಿ ಮಳೆಗೆ ಹಾಗೂ ಬಿಸಿಲಿಗೆ ಮಾತ್ರವೇ ನಿಮ್ಮ ಬೈಕ್‌ಗಳ ಮೇಲೆ ಕವರ್ ಹೊದಿಸುತ್ತೀರಿ. ಆದರೆ, ಚಳಿಗಾಲದಲ್ಲೂ ಕವರ್ ಹೊದಿಕೆ ಬಹಳ ಮುಖ್ಯ ಎನ್ನುತ್ತಾರೆ ತಜ್ಞರು. ಮಾರುಕಟ್ಟೆಯಲ್ಲಿ ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ಕವರ್‌ಗಳು ಲಭ್ಯವಿದ್ದು, ಅದನ್ನು ಪ್ರತಿದಿನ ನಿಮ್ಮ ವಾಹನದ ಮೇಲೆ ಹೊದಿಸುವುದರಿಂದ ಚಳಿಯ ಪರಿಣಾಮವನ್ನು ತಡೆಯಬಹುದು. ಇಂಜಿನ್‌ಗೂ ಕೂಡ ಯಾವುದೇ ತೊಂದರೆ ಆಗುವುದಿಲ್ಲ. ಅದರಲ್ಲೂ ತೆರೆದ ಜಾಗಗಳಲ್ಲಿ ಬೈಕ್‌ಗಳನ್ನು ನಿಲ್ಲಿಸುವುದಾದರೆ ಕವರ್ ಬಳಸುವುದು ಬಹಳ ಮುಖ್ಯ!
ಬ್ಯಾಟರಿಯನ್ನ ಆಗಾಗ ಪರಿಶೀಲಿಸಿ:
ಬೈಕ್ ಸ್ಟಾರ್ಟ್ ಆಗಲು ಹಾಗೂ ಬೆಳಕು ನೀಡಲು ಬ್ಯಾಟರಿಗಳು ಅತಿ ಮುಖ್ಯವಾಗಿವೆ. ಚಳಿಗಾಲದ ಅವಧಿಯಲ್ಲಿ ಬ್ಯಾಟರಿಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಹಾಗಾಗಿ ಬೈಕ್ ಸ್ಟಾರ್ಟ್ ಆಗುವ ಸಮಸ್ಯೆ ಹೆಚ್ಚಾಗಿ ನಿಮ್ಮನ್ನು ಕಾಡಬಹುದು. ಈ ಕಾರಣದಿಂದ ಬ್ಯಾಟರಿಯನ್ನು ಆಗಾಗ ಚೆಕ್ ಮಾಡಿ, ಚಾರ್ಜ್ ಇದೆಯೇ ಇಲ್ಲವೇ ಎಂಬುದನ್ನು ಖಾತರಿಪಡಿಸಿಕೊಳ್ಳಿ.

ಇಂಧನದ ಬಗ್ಗೆ ಎಚ್ಚರ ವಹಿಸಿ:
ಚಳಿಗಾಲವು ನಿಮ್ಮ ಬೈಕ್ ಟ್ಯಾಂಕ್‌ನಲ್ಲಿರುವ ಇಂಧನದ ಮೇಲೂ ಪರಿಣಾಮ ಬೀರುತ್ತದೆ. ಚಳಿಗಾಲದಲ್ಲಿ, ನಿಮ್ಮ ಮೋಟಾರ್‌ಸೈಕಲ್‌ನಲ್ಲಿರುವ ಪೆಟ್ರೋಲ್ ಅನ್ನು ಬೇಸಿಗೆಯಲ್ಲಿ ಬಳಸುವಷ್ಟು ಬಳಸಲಾಗುವುದಿಲ್ಲ. ಪೆಟ್ರೋಲ್‌ನಲ್ಲಿರುವ ಎಥೆನಾಲ್ ಅನ್ನು ಅದರ ಹೈಗ್ರೊಸ್ಕೋಪಿಕ್ ಗುಣಲಕ್ಷಣಗಳಿಂದಾಗಿ ನೀರಿನಂತೆ ಹೀರಿಕೊಳ್ಳುತ್ತವೆ. ಹಾಗಾಗಿ ಅಲ್ಲಿ ನೀರು ಸಂಗ್ರಹವಾಗುವ ಸಾಧ್ಯತೆಯೂ ಹೆಚ್ಚು. ಇಂಧನವನ್ನು ದೀರ್ಘಕಾಲದವರೆಗೆ ಬಳಸದಿದ್ದರೆ, ಇದರಿಂದ ಬೈಕ್ ಇಂಜಿನ್ ಸರಿಯಾಗಿ ಕೆಲಸ ಮಾಡುವುದಿಲ್ಲ.
ಚೈನ್ ಸ್ವಚ್ಛ ಮಾಡುವುದು ಮರೆಯದಿರಿ:
ಚಳಿಗಾಲದಲ್ಲಿ ಹೆಚ್ಚಿನ ತೇವಾಂಶವು ನಿಮ್ಮ ಬೈಕ್‌ನ ಕಾರ್ಯಕ್ಷಮತೆ ಮತ್ತು ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು. ಅದರಲ್ಲೂ ಚೈನ್ ಹಾಗೂ ಇತರ ಪಾರ್ಟ್ಸ್‌ಗಳನ್ನು ಆಗಾಗ ಸ್ವಚ್ಛ ಮಾಡುವುದು ಒಳಿತು. ರೈಡ್ ಮುಗಿದ ನಂತರ ಸಡಿಲಗೊಳ್ಳುವ ಚೈನ್ ಸ್ವಚ್ಛ ಮಾಡುವುದರಿಂದ ಲೂಬ್ರಿಕಂಟ್ ಹಾಕಲು ಸಹ ಅನುಕೂಲವಾಗುತ್ತದೆ.
ಟೈರ್‌ಗಳ ಬಗ್ಗೆ ಗಮನವಿರಲಿ:
ಹಿಮ ಅಥವಾ ಮಳೆಯಿಂದಾಗಿ ರಸ್ತೆಗಳು ಜಾರುವುದರಿಂದ ಚಳಿಗಾಲದಲ್ಲಿ ಬೈಕ್ ಸವಾರಿ ತುಂಬಾ ಅಪಾಯಕಾರಿ. ಹೀಗಾಗಿ ನಿಮ್ಮ ಬೈಕ್ ಸರಿಯಾದ ಟೈರ್‌ಗಳನ್ನು ಹೊಂದಿದೆಯೇ ಅಥವಾ ನಿಮ್ಮ ಟೈರ್‌ಗಳು ಸರಿಯಾದ ಸ್ಥಿತಿಯಲ್ಲಿವೆಯೇ ಎಂದು ಖಚಿತಪಡಿಸಿಕೊಳ್ಳಲೇಬೇಕು. ನೀವು ಸವಾರಿಗೆ ಹೊರಡುವ ಮೊದಲು, ನಿಮ್ಮ ಟೈರ್‌ನ ಒತ್ತಡದ ಪ್ರಮಾಣವನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ.












Click it and Unblock the Notifications