ಒಂದೂವರೆ ವರ್ಷದ ಹಿಂದೆ ದೇವೇಗೌಡ್ರು ಆ ಮಾತು ಆಡಿದ್ದಾದರೂ ಏಕೆ?

Recommended Video

      ಎಚ್ ಡಿ ದೇವೇಗೌಡ್ರು ಒಂದೂವರೆ ವರ್ಷದ ಹಿಂದೆ ಆ ಮಾತಾಡಿದ್ಯಾಕೆ? | Oneindia Kannada

      ಇದು ಸುಮಾರು ಒಂದೂವರೆ ವರ್ಷಗಳ ಹಿಂದೆ ನಡೆದ ಘಟನೆ. ಅವತ್ತು ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಿಲುಕಿ ಕರ್ನಾಟಕ ನರಳುತ್ತಿತ್ತು. ರಾಜ್ಯದ ಕಾವೇರಿ ನದಿ ಪಾತ್ರದ ಜಲಾಶಯಗಳಲ್ಲಿ ನೀರಿನ ಕೊರತೆ ಇದೆ ಎಂದು ರಾಜ್ಯ ಎಷ್ಟೇ ವಾದಿಸಿದರೂ ಅದನ್ನೊಪ್ಪದ ಸುಪ್ರೀಂಕೋರ್ಟ್, ತಮಿಳ್ನಾಡಿಗೆ ನೀರು ಬಿಡುಗಡೆ ಮಾಡುವಂತೆ ಆದೇಶಿಸುತ್ತಲೇ ಇತ್ತು.ಆ ಸಂದರ್ಭದಲ್ಲಿ ಕಂಗಾಲಾದ ಸಿಎಂ ಸಿದ್ದರಾಮಯ್ಯ ಅವರಿಗೆ ಶಕ್ತಿಯಂತೆ ಜತೆ ನಿಂತವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ.

      ಪರಿಸ್ಥಿತಿ ದಿನ ಕಳೆದಂತೆಲ್ಲ ಬಿಗಡಾಯಿಸುತ್ತಾ ಹೋದಾಗ ಸ್ವತ: ದೇವೇಗೌಡರು ವಿಧಾನಸೌಧ-ವಿಕಾಸಸೌಧದ ನಡುವೆ ಇರುವ ಗಾಂಧಿ ಪ್ರತಿಮೆಯ ಬಳಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಈ ಸಂದರ್ಭದಲ್ಲಿ ಅವರೊಂದಿಗೆ ದೂರವಾಣಿಯ ಮೂಲಕ ಮಾತನಾಡಿದವರು ಕೇಂದ್ರ ಸಚಿವ ಅನಂತಕುಮಾರ್, ಉಪವಾಸ ಕೈ ಬಿಡುವಂತೆ ಅವರು ಮನವಿ ಮಾಡಿಕೊಂಡಾಗ ದೇವೇಗೌಡರು ಅವರಿಗೆ, "ಅನಂತಕುಮಾರ್ ಅವರೇ, ನಾಳೆ ನೀವು ಸಿಎಂ ಆಗುವವರು. ಮೊದಲು ರಾಜ್ಯದ ಹಿತ ರಕ್ಷಿಸಿ. ಕೇಂದ್ರ ಸರ್ಕಾರ ಕರ್ನಾಟಕದ ನೆರವಿಗೆ ಬರುವಂತೆ ಮಾಡಿ" ಎಂದರು.

      ಇದಾದ ನಂತರ ಅನಂತಕುಮಾರ್ ಕಾನೂನು ಬದ್ಧವಾಗಿ ಏನು ಮಾಡಬೇಕೋ ಅದನ್ನು ಮಾಡಿದರು. ಕರ್ನಾಟಕ ನಿರಾಳವಾಗಿ ಉಸಿರು ಬಿಡುವಂತೆ ಮಾಡಿದರು. ಈ ಘಟನೆ ನಡೆದು ಹಲವು ಕಾಲವೇ ಕಳೆದು ಹೋಗಿದೆ.ಅವತ್ತು ದೇವೇಗೌಡ-ಅನಂತಕುಮಾರ್ ನಡುವೆ ನಡೆದ ಸಂಭಾಷಣೆಗೆ ಮತ್ತೀಗ ಜೀವ ಬಂದಂತೆ ಕಾಣುತ್ತಿದೆ. ಅದು ಹೇಗೆ? ಅನ್ನುವುದನ್ನು ಗಮನಿಸುವ ಮುನ್ನ ಇತ್ತೀಚಿನ ಹಲವು ಬೆಳವಣಿಗೆಗಳನ್ನು ಗಮನಿಸಬೇಕು.

      ಬಹುತೇಕ ಸಮೀಕ್ಷೆಗಳು ಏನು ಹೇಳುತ್ತಿವೆ

      ಬಹುತೇಕ ಸಮೀಕ್ಷೆಗಳು ಏನು ಹೇಳುತ್ತಿವೆ

      ಮುಂದಿನ ತಿಂಗಳ ಹನ್ನೆರಡನೇ ತಾರೀಖು ನಡೆಯಲಿರುವ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಎಂದು ರಾಷ್ಟ್ರೀಯ ಪಕ್ಷಗಳು ಹೇಳಿಕೊಳ್ಳುತ್ತಿದ್ದರೂ, ಬಹುತೇಕ ಎಲ್ಲ ಸಮೀಕ್ಷೆಗಳು ಅತಂತ್ರ ವಿಧಾನಸಭೆ ರಚನೆಯಾಗುತ್ತದೆ ಎಂದು ಹೇಳುತ್ತಿವೆ.
      ಹಾಗೆ ನೋಡಿದರೆ 2004ರಲ್ಲಿ ವಿಧಾನಸಭಾ ಚುನಾವಣೆ ನಡೆಯುವಾಗ ಬಹುತೇಕ ಮಾಧ್ಯಮಗಳು, ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಪಕ್ಷ ಬಹುಮತ ಗಳಿಸುತ್ತದೆ ಎಂದು ಭವಿಷ್ಯ ನುಡಿದಿದ್ದವು. ಒಂದು ಪ್ರಮುಖ ಮಾಧ್ಯಮವಂತೂ, ಜೆಡಿಎಸ್ ಪಕ್ಷವನ್ನು ಇತರರ ಪಟ್ಟಿಗೆ ಸೇರಿಸಿ ಎರಡು ಸ್ಥಾನಗಳು ಇತರರಿಗೆ ದಕ್ಕಲಿದೆ ಎಂದು ಹೇಳಿತ್ತು.

      ಮೀಡಿಯಾ ಡಾರ್ಲಿಂಗ್ ಅನ್ನಿಸಿಕೊಂಡಿದ್ದ ಕೃಷ್ಣ

      ಮೀಡಿಯಾ ಡಾರ್ಲಿಂಗ್ ಅನ್ನಿಸಿಕೊಂಡಿದ್ದ ಕೃಷ್ಣ

      ಆದರೆ ಚುನಾವಣೆ ಮುಗಿದು ಫಲಿತಾಂಶ ಬಂದಾಗ ಅತಂತ್ರ ವಿಧಾನಸಭೆ ಸೃಷ್ಟಿಯಾಗಿತ್ತು. ಅವತ್ತು ಎಸ್.ಎಂ.ಕೃಷ್ಣ ಮೀಡಿಯಾ ಡಾರ್ಲಿಂಗ್ ಅನ್ನಿಸಿಕೊಂಡಿದ್ದರು. ಆ ಮಾತು ಬೇರೆ. ಆದರೆ ಇವತ್ತು ಸಿದ್ದರಾಮಯ್ಯ ಮೀಡಿಯಾ ಡಾರ್ಲಿಂಗ್ ಏನಲ್ಲ. ಅದೇ ರೀತಿ ಅತಂತ್ರ ವಿಧಾನಸಭೆ ನಿರ್ಮಾಣವಾಗುತ್ತದೆ ಎಂದು ಇವತ್ತು ಹೇಳುತ್ತಿರುವ ಅನೇಕ ಮಾಧ್ಯಮಗಳು ಬಿಜೆಪಿ ಜತೆ ಇಲ್ಲವೇ ಕಾಂಗ್ರೆಸ್ ಜತೆ ಗುರುತಿಸಿಕೊಂಡಿವೆ ಎಂಬ ಮಾತುಗಳು ಹಿಂದಿನಿಂದಲೂ ಕೇಳಿ ಬರುತ್ತಲೇ ಇದೆ.
      ಹೀಗೆ ಒಂದು ಪಕ್ಷದ ಪರವಾಗಿರುವಂತೆ ಭಾಸವಾದರೂ ಅತಂತ್ರ ವಿಧಾನಸಭೆ ಸೃಷ್ಟಿಯಾಗುತ್ತದೆ ಎಂದು ಮಾಧ್ಯಮಗಳು ಘಂಟಾಘೋಷವಾಗಿ ಹೇಳುತ್ತಿವೆ ಎಂಬುದರ ಅರ್ಥವೇನು? ಸದ್ಯದ ಸ್ಥಿತಿಯಲ್ಲಂತೂ ಆ ವಾತಾವರಣ ಇರುವುದನ್ನು ಯಾರೂ ಅಲ್ಲಗಳೆಯಲಾಗುತ್ತಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಮುಖ್ಯ ವಿಷಯಕ್ಕೆ ಬರೋಣ.

      ಫಲಿತಾಂಶ ಕಣ್ಣಮುಂದಿದೆ : ಅತಂತ್ರ ವಿಧಾನಸಭೆ

      ಫಲಿತಾಂಶ ಕಣ್ಣಮುಂದಿದೆ : ಅತಂತ್ರ ವಿಧಾನಸಭೆ

      ಮಾಧ್ಯಮಗಳು ಮಾತ್ರವಲ್ಲ, ಬಹುತೇಕ ಎಲ್ಲ ಪಕ್ಷಗಳು ನಡೆಸಿದ ಆಂತರಿಕ ಸಮೀಕ್ಷೆಗಳು ಅತಂತ್ರ ವಿಧಾನಸಭೆ ರಚನೆಯಾಗಲಿದೆ ಎಂದೇ ಹೇಳುತ್ತಿವೆ.
      ಪರಿಣಾಮವಾಗಿ ಮುಖ್ಯಮಂತ್ರಿ ಹುದ್ದೆಯ ರೇಸಿಗೆ ಹಲವು ಹೆಸರುಗಳು ಮುಂದೆ ಬಂದಿವೆ. ಅಥವಾ ವಿವಿಧ ಪಕ್ಷಗಳ ನಾಯಕರಿಗೆ ತಾವೂ ಮುಖ್ಯಮಂತ್ರಿ ಇಲ್ಲವೇ ಉಪಮುಖ್ಯಮಂತ್ರಿಯಾಗಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ.
      ಅಂದ ಹಾಗೆ, ಅತಂತ್ರ ವಿಧಾನಸಭೆ ರಚನೆಯಾದರೆ ಜೆಡಿಎಸ್ ಪಕ್ಷದ ಮೊದಲ ಆದ್ಯತೆ ಬಿಜೆಪಿ ಜತೆಗಿನ ಸ್ನೇಹವೇ ಹೊರತು ಕಾಂಗ್ರೆಸ್ ಪಕ್ಷವಲ್ಲ. ಯಾಕೆಂದರೆ ಕಾಂಗ್ರೆಸ್ ಪಕ್ಷ ತನ್ನನ್ನು ನುಂಗಿ ನೊಣೆಯಲು ನಿರಂತರವಾಗಿ ಪ್ರಯತ್ನಿಸುತ್ತಲೇ ಇದೆ ಎಂಬ ಆಕ್ರೋಶ ಜೆಡಿಎಸ್ ನಲ್ಲಿದೆ.
      ಹೀಗಾಗಿ ಅದು ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಲು ಮುಂದಾಗುತ್ತದೆ.

      ಹಿಂದೆ ಮಾಡಿದ ತಪ್ಪು ಬಿಜೆಪಿ ಮಾಡುತ್ತಾ?

      ಹಿಂದೆ ಮಾಡಿದ ತಪ್ಪು ಬಿಜೆಪಿ ಮಾಡುತ್ತಾ?

      ಆ ಸಂದರ್ಭದಲ್ಲಿ ಅದು ಕುಮಾರಸ್ವಾಮಿ ಅವರಿಗೆ ಸಿಎಂ ಪದವಿ, ಬಿಜೆಪಿಗೆ ಡಿಸಿಎಂ ಪದವಿ ಇರಲಿ ಎಂದು ಷರತ್ತು ಹಾಕುವುದು ಸಹಜ. ಆದರೆ ಮಾತುಕತೆಯ ಸಂದರ್ಭದಲ್ಲಿ ಕೊಟ್ಟು-ತೆಗೆದುಕೊಳ್ಳುವ ನೀತಿಗೆ ಉಭಯ ಪಕ್ಷಗಳೂ ಬದ್ಧವಾಗಿರಬೇಕಾಗುತ್ತದೆ. ಹೀಗಾಗಿ ಇದು ಉಲ್ಟಾ ಕೂಡಾ ಆಗಬಹುದು.
      ಅಂದರೆ? ಬಿಜೆಪಿ ಹೈಕಮಾಂಡ್ ವರಿಷ್ಠರು, ಮೊದಲ ಕಂತಿನಲ್ಲಿ ಬಿಜೆಪಿಯವರೇ ಮುಖ್ಯಮಂತ್ರಿಯಾಗಲಿ. ಯಾಕೆಂದರೆ, ಈ ಹಿಂದೆ 2006ರಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಸರ್ಕಾರ ರಚನೆಯಾದಾಗ ಜೆಡಿಎಸ್ ನ ಕುಮಾರಸ್ವಾಮಿ ಮೊದಲ ಕಂತಿನಲ್ಲಿ ಮುಖ್ಯಮಂತ್ರಿಯಾಗಿದ್ದರು. ಹೀಗಾಗಿ ಈ ಬಾರಿ ನಮಗೆ ಮೊದಲ ಕಂತಿನಲ್ಲೇ ಸಿಎಂ ಸ್ಥಾನ ಸಿಗಲಿ ಎಂದು ಕೇಳಬಹುದು.

      ರೇವಣ್ಣ ಡಿಸಿಎಂ ಆದ್ರೆ, ಸಿಎಂ ಯಾರು?

      ರೇವಣ್ಣ ಡಿಸಿಎಂ ಆದ್ರೆ, ಸಿಎಂ ಯಾರು?

      ದೇವೇಗೌಡರು ಈ ಪ್ರಸ್ತಾಪವನ್ನು ಏಕಾಏಕಿ ನಿರಾಕರಿಸುತ್ತಾರೆ ಎಂದು ಹೇಳಲಾಗದು. ಅವರಿಗೆ ಬೇಕಿರುವುದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸಿ ಜೆಡಿಎಸ್ ಬಲಿಷ್ಠವಾಗಬೇಕು ಎಂಬುದು. ಹೀಗಾಗಿ ಅವರು ಬಿಜೆಪಿಗೆ ಮೊದಲ ಕಂತಿನಲ್ಲಿ ಸಿಎಂ ಹುದ್ದೆಯನ್ನು ಬಿಟ್ಟು ಕೊಟ್ಟು, ತಮ್ಮ ಪಕ್ಷ ಡಿಸಿಎಂ ಹುದ್ದೆ ಮತ್ತು ಕೇಂದ್ರದಲ್ಲಿ ಸಚಿವ ಸ್ಥಾನವೊಂದನ್ನು ಬಯಸುತ್ತದೆ ಎಂದು ಹೇಳಬಹುದು.
      ಡಿಸಿಎಂ ಯಾರಾಗುತ್ತಾರೆ ಎಂಬ ಪ್ರಶ್ನೆ ಬಂದರೆ ಸಹಜವಾಗಿಯೇ ಎಚ್.ಡಿ.ರೇವಣ್ಣ ಅವರ ಹೆಸರು ಮುಂಚೂಣಿಗೆ ಬರುತ್ತದೆ. ಕೇಂದ್ರ ಮಂತ್ರಿ ಯಾರಾಗಬೇಕು ಎಂಬ ವಿಷಯ ಬಂದರೆ ಕುಮಾರಸ್ವಾಮಿ ಅವರ ಹೆಸರು ಮುನ್ನೆಲೆಗೆ ಬರುತ್ತದೆ.
      ಅಂತಹ ಸಂದರ್ಭದಲ್ಲಿ ಬಿಜೆಪಿ ವತಿಯಿಂದ ಸಿಎಂ ಕ್ಯಾಂಡಿಡೇಟ್ ಆಗುವವರು ಯಾರು?

      ಇನ್ಯಾರು? ಅನಂತ್ ಕುಮಾರ್!

      ಇನ್ಯಾರು? ಅನಂತ್ ಕುಮಾರ್!

      ಅನಂತಕುಮಾರ್ ಎಂಬುದು ಕಮಲ ಪಾಳೆಯದ ಆಳದಲ್ಲಿ ಕೇಳಿ ಬರುತ್ತಿರುವ ಮಾತು. ಯಾಕೆಂದರೆ ಅನಂತಕುಮಾರ್ ಅವರಿಗೆ ಎಲ್ಲರನ್ನೂ ಸಂಭಾಳಿಸಿಕೊಂಡು ಹೋಗುವ ಕಲೆ ಇದೆ. ಹಾಗೆಯೇ ಎಲ್ಲ ರಾಜಕೀಯ ಪಕ್ಷಗಳ ನಾಯಕರ ಜತೆ ಅವರಿಗೆ ಉತ್ತಮ ಒಡನಾಟವಿದೆ.
      ಹಾಗೆಯೇ ರಾಜ್ಯದ ಮತ್ತು ರಾಷ್ಟ್ರ ರಾಜಕಾರಣದ ಎಲ್ಲ ಸೂಕ್ಷ್ಮಗಳು ಅವರಿಗೆ ಗೊತ್ತಿರುವುದರಿಂದ ಮುಖ್ಯಮಂತ್ರಿಯಾಗಿ ಅವರು ಯಶಸ್ಸು ಸಾಧಿಸುವ ಅವಕಾಶಗಳೂ ಇವೆ. ಅನಂತಕುಮಾರ್ ಅವರ ರೀತಿಯಲ್ಲೇ ಬೇರೆ ಬೇರೆ ಕಾರಣಗಳಿಗಾಗಿ ತಮಗೂ ಮುಖ್ಯಮಂತ್ರಿಯಾಗುವ ಅವಕಾಶ ದಕ್ಕಬಹುದು ಎಂದು ಈಶ್ವರಪ್ಪ ಅವರಂತಹ ನಾಯಕರು ನಿರೀಕ್ಷಿಸಿರುವುದು ರಹಸ್ಯವೇನೂ ಅಲ್ಲ.
      ಆದರೆ ಈ ವಿಷಯದಲ್ಲಿ ಹೆಚ್ಚಿನ ಅವಕಾಶ ಇರುವುದು ಅನಂತಕುಮಾರ್ ಅವರಿಗೆ. ಹೀಗಾದ್ರೆ ಯಡಿಯೂರಪ್ಪಗೆ ನಿರಾಶೆ ಕಟ್ಟಿಟ್ಟ ಬುತ್ತಿ!

      ಮೂರುವರೆ ದಶಕದ ನಂತರ ಬ್ರಾಹ್ಮಣ ಸಿಎಂ

      ಮೂರುವರೆ ದಶಕದ ನಂತರ ಬ್ರಾಹ್ಮಣ ಸಿಎಂ

      ಹಾಗೇನಾದರೂ ಆದರೆ ಸುಮಾರು ಮೂರೂವರೆ ದಶಕಗಳ ನಂತರ ಕರ್ನಾಟಕ ಬ್ರಾಹ್ಮಣ ಸಮುದಾಯದ ಮುಖ್ಯಮಂತ್ರಿಯನ್ನು ಕಾಣಲಿದೆ.
      ರಾಜ್ಯದಲ್ಲಿ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಸರ್ಕಾರ ರಚನೆಯಾದಾಗ (1983) ಆ ಸಮುದಾಯದ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿ ವಿರಾಜಮಾನರಾಗಿದ್ದರು. ತುಂಬ ಜನ, ಯಾರೋ ಕಟ್ಟಿದ ಗೂಡಿಗೆ ರಾಮಕೃಷ್ಣ ಹೆಗಡೆ ಬಂದು ಕುಳಿತರು ಅಂತ ಈಗಲೂ ಹೇಳುತ್ತಿರುತ್ತಾರೆ.
      ಆದರೆ ಅವತ್ತಿನ ಸಂದರ್ಭ ಹೇಗಿತ್ತೆಂದರೆ, ಜನತಾ ರಂಗ ಪಕ್ಷದ ಹಲವು ನಾಯಕರು ರಾಮಕೃಷ್ಣ ಹೆಗಡೆ ದೆಹಲಿಯಿಂದ ಬಂದು ಮುಖ್ಯಮಂತ್ರಿಯಾಗಲಿ ಎಂದು ಹಪಹಪಿಸುತ್ತಿದ್ದರು. ಅವತ್ತು ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿದ್ದ ಬಂಗಾರಪ್ಪ ಅವರು ಕ್ರಾಂತಿರಂಗ ಪಕ್ಷವನ್ನು ತಮ್ಮಿಂದ ಹೈಜಾಕ್ ಮಾಡಿದರು ಎಂಬ ಸಿಟ್ಟು ಜೆ.ಎಚ್. ಪಟೇಲರಲ್ಲಿತ್ತು. ಅದೇ ರೀತಿ ದೇವೇಗೌಡರು ಮುಖ್ಯಮಂತ್ರಿಯಾಗುವುದು ಬೊಮ್ಮಾಯಿ ಅವರಂತಹ ನಾಯಕರಿಗೆ ಬೇಕಾಗಿರಲಿಲ್ಲ. ಹೀಗೆ ಹಲವರ ನಡುವಣ ವ್ಯಕ್ತಿಗತ ಸಂಘರ್ಷಗಳು ರಾಮಕೃಷ್ಣ ಹೆಗಡೆ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಬಂದು ಕೂರುವುದನ್ನು ಸುಗಮಗೊಳಿಸಿದವು.

      ಯಡಿಯೂರಪ್ಪ ಹೂಡಿರುವ ತಂತ್ರವೇನು?

      ಯಡಿಯೂರಪ್ಪ ಹೂಡಿರುವ ತಂತ್ರವೇನು?

      ಇವತ್ತಿನ ಸಂದರ್ಭವೂ ಹೆಚ್ಚು ಕಡಿಮೆ ಹಾಗೆಯೇ ಇದೆ.
      ಬಿಜೆಪಿಯಲ್ಲಿರುವ ಬಹುತೇಕರಿಗೆ ಯಡಿಯೂರಪ್ಪ ಸಿಎಂ ಆಗುವುದು ಇಷ್ಟವಿಲ್ಲ. ಇನ್ನು ಅತಂತ್ರ ವಿಧಾನಸಭೆ ನಿರ್ಮಾಣವಾದರೆ ತಮಗೂ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಈಶ್ವರಪ್ಪ ಅವರಂತಹ ನಾಯಕರಲ್ಲಿದ್ದರೂ, ಯಡಿಯೂರಪ್ಪ ಅವರಿಗಿಂತ ಅನಂತಕುಮಾರ್ ಸಿಎಂ ಆಗುವುದನ್ನು ಅವರು ಬಯಸುತ್ತಾರೆ.
      ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಲೇ ಸುಮಾರು ಒಂದೂವರೆ ವರ್ಷಗಳಷ್ಟು ಹಿಂದೆ ಮಾಜಿ ಪ್ರಧಾನಿ ದೇವೇಗೌಡರು ಕೇಂದ್ರ ಸಚಿವ ಅನಂತಕುಮಾರ್ ಅವರ ಜತೆ ಆಡಿದ ಮಾತುಗಳನ್ನು ತುಲನೆ ಮಾಡಿ ನೋಡಿ. ರಾಜಕೀಯದ ಆಳ ಹೇಗೆಲ್ಲ ಇರುತ್ತದೆ? ಅಂತ ನಿಮಗೆ ಅಚ್ಚರಿಯಾಗುತ್ತದೆ.
      ಈ ಲೆಕ್ಕಾಚಾರಕ್ಕೆ ಕೌಂಟರ್ ಕೊಡಲು ಯಡಿಯೂರಪ್ಪ ಹೂಡಿರುವ ತಂತ್ರವೇನು? ಸಿದ್ದರಾಮಯ್ಯ ಮಾಡಿರುವ ಪ್ಲಾನ್ ಏನು? ಅಂತ ಹೇಳಲು ಹೋದರೆ ಅದು ಮತ್ತೊಂದು ಎಪಿಸೋಡು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+