ಸಿಬಿಐ ಅಲ್ಲಾಡುವಂತೆ ಮಾಡಿರುವ ಮಾಂಸ ರಫ್ತುದಾರ ಮೊಯಿನ್
ನವದೆಹಲಿ, ಅಕ್ಟೋಬರ್ 22: ತನ್ನದೇ ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನ ವಿರುದ್ಧ ಭ್ರಷ್ಟಾಚಾರದ ಪ್ರಕರಣ ದಾಖಲಿಸಿಕೊಂಡಿರುವುದು ಗೊತ್ತಿರಬಹುದು. ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಸಿಬಿಐ) ಸಿಬಿಐ ಎಸ್ ಪಿಯೊಬ್ಬರನ್ನು ಬಂಧಿಸಿದೆ.
ಈ ನಡುವೆ ಈ ಭ್ರಷ್ಟಾಚಾರ ಪ್ರಕರಣದ ಪ್ರಮುಖ ರುವಾರಿ ಮೊಯಿನ್ ಖುರೇಶಿ ಯಾರು? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ಮೋಯಿನ್ ಖುರೇಶಿ ಭಾರತದ ಪ್ರಮುಖ ಮಾಂಸ ರಫ್ತುದಾರನಾಗಿದ್ದಾನೆ.
ಸಿಬಿಐನ ಎರಡನೇ ಉನ್ನತಾಧಿಕಾರಿಯಾಗಿರುವ ರಾಕೇಶ್ ಆಸ್ಥಾನ ವಿರುದ್ಧ ಸಿಬಿಐ ತನಿಖೆ ಆರಂಭಗೊಂಡಿದೆ. ಉನ್ನತ ಸಿಬಿಐ ಅಧಿಕಾರಿ ವಿರುದ್ಧ ಪ್ರಕರಣ ದಾಖಲಾಗಿರುವುದು ಇದೇ ಮೊದಲಾಗಿದೆ.
ಮೊಯಿನ್ ಖುರೇಷಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿಯೊಬ್ಬರಿಂದ ಲಂಚ ಕೇಳಿದ ಆರೋಪವನ್ನು ಸಿಬಿಐನ ನಂ.2 ಅಧಿಕಾರಿ ರಾಕೇಶ್ ಮೇಲೆ ಹೊರೆಸಲಾಗಿದೆ. ಸಿಬಿಐನಲ್ಲಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿರುವ ಅಧಿಕಾರಿಗಳ ನಡುವಿನ ಪ್ರತಿಷ್ಠೆಯ ಕದನ ಆರೋಪ - ಪ್ರತ್ಯಾರೋಪಗಳು ಈಗ ದೇಶದ ಅತ್ಯುನ್ನತ ತನಿಖಾ ಸಂಸ್ಥೆಯ ಹುಳುಕು ಹೊರ ಹಾಕುತ್ತಿದೆ.
ಯಾರು ಈ ಮೋಯಿನ್ ಖುರೇಷಿ, ಎಪಿ ಸಿಂಗ್, ರಂಜಿತ್ ಸಿಂಗ್, ಅಲೋಕ್ ವರ್ಮಾ, ರಾಕೇಶ್ ಆಸ್ಥಾನ, ಪಾಕಿಸ್ತಾನಿ ಸಿಂಗರ್, ತೆರಿಗೆ ವಂಚನೆ, ಮನೋಜ್ ಪ್ರಸಾದ್ ಇದು ಈ ಕೇಸಿನ ಪ್ರಮುಖ ಪಾತ್ರಧಾರಿಗಳ ಹೆಸರುಗಳು.. ಕಥೆ ಮುಂದಿದೆ...

ಯಾರೀದು ಮೋಯಿನ್ ಖುರೇಶಿ
ಈತನ ಪೂರ್ತಿ ಹೆಸರು ಮೋಯಿನ್ ಅಖ್ತರ್ ಖುರೇಶಿ. ಡೆಹ್ರಾಡೂನ್ ನ ಡೂನ್ ಶಾಲೆ ಹಾಗೂ ದೆಹಲಿ ಸೈಂಟ್ ಸ್ಟೀಫನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. 1993ರಲ್ಲಿ ಮಾಂಸ ಮಾರಾಟ ವ್ಯಾಪಾರಕ್ಕಿಳಿದ. ಉತ್ತರಪ್ರದೇಶ ರಾಮ್ ಪುರ್ ನಲ್ಲಿ ಸಣ್ಣ ಕಸಾಯಿಖಾನೆ ಹೊಂದಿದ್ದ. ಇಂದು ದೇಶದ ಅತಿದೊಡ್ಡ ಮಾಂಸ ರಫ್ತುದಾರನಾಗಿದ್ದಾನೆ.
ಕಟ್ಟಡ ನಿರ್ಮಾಣ, ಫ್ಯಾಷನ್ ಲೋಕದಲ್ಲೂ ಹೂಡಿಕೆ ಮಾಡಿದ್ದಾನೆ. ಲಂಡನ್ ಮೂಲದ ಚಾರ್ಟೆಡ್ ಅಕೌಂಟೆಂಟ್ ಅಜಿತ್ ಪ್ರಸಾದ್ ಅವರ ಪುತ್ರ ಅರ್ಜುನ್ ಜತೆ ಖುರೇಶಿ ಪುತ್ರಿ ವಿವಾಹವಾಗಿದೆ.

ಸಿಬಿಐ ನಿರ್ದೇಶಕರಿಗೆ ಆಪ್ತನಾದ ಮೋಯಿನ್
ಸಿಬಿಐನ ಈ ಹಿಂದಿನ ನಿರ್ದೇಶಕರಾದ ಎ.ಪಿ ಸಿಂಗ್ ಹಾಗೂ ರಂಜಿತ್ ಸಿಂಗ್ ಅವರಿಗೆ ಆಪ್ತನಾಗಿದ್ದ. ಎಪಿ ಸಿಂಗ್ ಜತೆ ನಡೆಸಿದ ಸಂಭಾಷಣೆ, ಚಾಟಿಂಗ್ ವಿವರಗಳನ್ನು ಐಟಿ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯ ಪಡೆದುಕೊಂಡು ಪರಿಶೀಲನೆ ನಡೆಸಿತ್ತು.
ಸರಿ ಸುಮಾರು 200 ಕೋಟಿ ರು ತೆರಿಗೆ ಹಣವನ್ನು ವಂಚನೆ ಮಾಡಿದ್ದಾನೆ ಎಂಬ ಆರೋಪವಿದೆ. ಐಟಿ ಇಲಾಖೆ ೨೦೧೧ನಲ್ಲಿ ದಾಳಿ ನಡೆಸಿದಾಗ ದಕ್ಷಿಣ ಆಫ್ರಿಕಾ, ಬರ್ಮುಡಾ, ಜರ್ಸಿ ಮುಂತಾದೆಡೆ ಬ್ಯಾಂಕ್ ಖಾತೆ ಹೊಂದಿದ್ದು, ಕೋಟ್ಯಂತರ ತೆರಿಗೆ ಹಣವನ್ನು ಆ ಬ್ಯಾಂಕ್ ಗಳಲ್ಲಿ ಜಮೆ ಮಾಡಿರುವುದು ಪತ್ತೆಯಾಗಿದೆ.

ರಹತ್ ಫತೇ ಅಲಿ ಖಾನ್ ಗೂ ಬಿಸಿ
2011ರಲ್ಲಿ ಮಗಳ ಮದುವೆಗೆ ಪಾಕಿಸ್ತಾನದ ಹೆಸರಾಂತ ಗಾಯಕ ರಹತ್ ಫತೇ ಅಲಿ ಖಾನ್ ಅವರನ್ನು ಭಾರತಕ್ಕೆ ಖುರೇಶಿ ಕರೆಸಿಕೊಂಡಿದ್ದ. ಮದುವೆ ಸಮಾರಂಭದಲ್ಲಿ ಹಾಡಿ ರಂಜಿಸಿದ್ದ ಫತೇ ಅಲಿ ಖಾನ್ ಅವರು ಪಾಕಿಸ್ತಾನಕ್ಕೆ ಮರಳುವಾಗ, ಕಂದಾಯ ಇಲಾಖೆಯ ಗುಪ್ತಚರ ಇಲಾಖೆಯ ಅಧಿಕಾರಿಗಳು, ಫತೇ ಅಲಿ ಖಾನ್ ಅವರನ್ನು ವಶಕ್ಕೆ ಪಡೆದಿದ್ದರು. ಲೆಕ್ಕಕ್ಕೆ ಸಿಗದ ೫೬ ಲಕ್ಷ ರು ವಿದೇಶಿ ಕರೆನ್ಸಿ ಹೊಂದಿದ್ದ ಆರೋಪ ಹೊತ್ತುಕೊಂಡಿದ್ದರು.

ಅಸ್ಥಾನ ಹಾಗೂ ತಂಡದ ಕೈಲಿರುವ ಕೇಸುಗಳು
ಗುಜರಾತ್ ಕೆಡರ್ ಐಪಿಎಸ್ ಅಧಿಕಾರಿಯಾಗಿರುವ ಅಸ್ಥಾನ, ಆಗುಸ್ಟಾವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣ ಹಾಗೂ ವಿಜಯ್ ಮಲ್ಯ ವಿರುದ್ಧದ ವಂಚನೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಈಗ ಅಸ್ಥಾನ ವಿರುದ್ಧ ಅಪರಾಧಿಕ ಸಂಚು, ಭ್ರಷ್ಟಾಚಾರ ಹಾಗೂ ಅಪರಾಧಿಕ ದುರ್ವರ್ತನೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಈ ಪ್ರಕರಣದಲ್ಲಿ ಅಸ್ಥಾನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಎಸ್ ಪಿ ದೇವೇಂದ್ರ ಕುಮಾರ್ ಬಂಧನವಾಗಿದೆ. ಸನಾ ನೀಡಿದ ಹೇಳಿಕೆ ಮೇರೆಗೆ ಮಧ್ಯವರ್ತಿಗಳಾದ ಸೋಮೇಶ್ ಪ್ರಸಾದ್ ಹಾಗು ಮನೋಜ್ ಪ್ರಸಾದ್ ರನ್ನು ವಶಕ್ಕೆ ಪಡೆದಿರುವ ವಿಶೇಷ ತನಿಖಾ ದಳವು ತನಿಖೆ ಮುಂದುವರೆಸಿದೆ.

ಇಷ್ಟಕ್ಕೂ ಏನಿದು ಲಂಚ ಪ್ರಕರಣ?
ಮಾಂಸ ರಫ್ತುದಾರ ಮೊಯಿನ್ ಖುರೇಶಿ ಅವರು ಭ್ರಷ್ಟಾಚಾರದಲ್ಲಿ ತೊಡಗಿರುವ ಪ್ರಕರಣದಲ್ಲಿ ಉದ್ಯಮಿ ಸತೀಶ್ ಸನಾ ಕೂಡಾ ಆರೋಪಿಯಾಗಿದ್ದಾರೆ. ಈ ಕೇಸಿನಿಂದ ಹೊರಕ್ಕೆ ಬರಲು ಸನಾ ಅವರು ಸಿಬಿಐ ನಿರ್ದೇಶಕ ಅಲೋಕ್ ವರ್ಮಾಗೆ 2 ಕೋಟಿ ರು ಲಂಚ ನೀಡಿದ್ದರು ಎಂದು ರಾಕೇಶ್ ಅಸ್ಥಾನ ಆರೋಪಿಸಿದ್ದಾರೆ.
ಮಧ್ಯವರ್ತಿಯೊಬ್ಬರು 2 ಕೋಟಿ ರೂ. ಲಂಚ ನೀಡಿದ್ದಾರೆ ಎಂದು ಆಸ್ಥಾನ ಈ ಹಿಂದೆ ಆಗಸ್ಟ್ 24ರಂದು ಸಂಪುಟ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ನಂತರ ಈ ವಿಷಯವನ್ನು ಕೇಂದ್ರ ವಿಚಕ್ಷಣ ಆಯೋಗದ ಪರಿಶೀಲನೆಗೆ ವಹಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಯುತ್ತಿದೆ.












Click it and Unblock the Notifications