ಗ್ರಾಮ ಪಂಚಾಯಿತಿ ಚುನಾವಣೆಗೆ ಯಾರು ಸ್ಪರ್ಧಿಸಬಹುದು?
ಬೆಂಗಳೂರು, ಡಿಸೆಂಬರ್ 07: ಕರ್ನಾಟಕದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾಗಿದೆ. ಕರ್ನಾಟಕದಲ್ಲಿ ಒಟ್ಟು 2 ಹಂತಗಳಲ್ಲಿ ಮತದಾನ ನಡೆಯಲಿದೆ. ಸೋಮವಾರ ಚುನಾವಣಾ ಅಧಿಸೂಚನೆ ಪ್ರಕಟವಾಗಿದ್ದು, ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ.
ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿದೆ ರಾಜ್ಯ ಚುನಾವಣಾ ಆಯೋಗವು ಹಲವು ಸೂಚನೆಗಳನ್ನು ನೀಡಿದೆ. ಅಭ್ಯರ್ಥಿಯೊಬ್ಬರು ಚುನಾವಣೆಗೆ ಸ್ಪರ್ಧಿಸಲು ಅರ್ಹರಾಗಬೇಕಾದರೆ ಯಾವ ನಿಯಮಗಳನ್ನು ಪಾಲನೆಯಾಗಬೇಕು ಎಂದು ಸಹ ಮಾಹಿತಿಯನ್ನು ನೀಡಲಾಗಿದೆ.
ವ್ಯಕ್ತಿಯೊಬ್ಬರ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾನೆ ಎಂದರೆ ನಾಮಪತ್ರ ಪರಿಶೀಲನಾ ದಿನಾಂಕದಂದು ಅವರಿಗೆ 21 ವರ್ಷ ವಯಸ್ಸಾಗಿರಬೇಕು ಎಂಬ ನಿಯಮವಿದೆ.

ಒಂದು ಕ್ಷೇತ್ರಕ್ಕೆ ಒಬ್ಬ ಅಭ್ಯರ್ಥಿ 4 ನಾಮಪತ್ರ ಸಲ್ಲಿಸಬಹುದು. ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಯೂ ಹೆಚ್ಚುವರಿಯಾಗಿ ಸಲ್ಲಿಸುವ ಪ್ರತಿ ನಾಮ ಪತ್ರದೊಂದಿಗೆ ಬೇರೆ ಬೇರೆ ಅಫಿಡವಿಟ್, ಠೇವಣಿ ಹಣ, ಜಾತಿ ದೃಢೀಕರಣ ಪತ್ರ ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಅಭ್ಯರ್ಥಿಯೊಬ್ಬರು ಒಂದು ಸೆಟ್ ಅಫಿಡಮಿಟ್ ( 3 ಪ್ರತಿ ) ಠೇವಣಿ ಹಣ, ಜಾತಿ ದೃಢೀಕರಣ ಪತ್ರವನ್ನು ನೀಡಿದರೆ ಸಾಕು. ಒಬ್ಬ ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಚುನಾವಣಾ ಕ್ಷೇತ್ರದಲ್ಲಿ ಸ್ಪರ್ಧಿಸಬಹುದು. ಪ್ರತಿ ಕ್ಷೇತ್ರಕ್ಕೂ ಆತನು ಠೇವಣಿ ಇಡಬೇಕು.
ಒಂದು ಕ್ಷೇತ್ರಕ್ಕೆ ಯಾವುದೇ ಇನಿಷಿಯಲ್ ಇಲ್ಲದೇ ಒಂದೇ ಹೆಸರಿನ ಇಬ್ಬರು ಅಥವಾ ಹೆಚ್ಚು ಅಭ್ಯರ್ಥಿಗಳು ಒಂದೇ ಕ್ಷೇತ್ರದಲ್ಲಿ ಇದ್ದಲ್ಲಿ ಅವರುಗಳೊಂದಿಗೆ ಚರ್ಚಿಸಿ ಅವರ ಹೆಸರುಗಳನ್ನು ಗುರುತಿಸಲು ಅಗತ್ಯ ಬದಲಾವಣೆಗಳನ್ನು ಮಾಡಲಾಗುತ್ತದೆ.
ಜಾತಿ ಪ್ರಮಾಣ ಪತ್ರವನ್ನು ನಾಮ ಪತ್ರದೊಂದಿಗೆ ಸಲ್ಲಿಸದಿದ್ದಲ್ಲಿ ಅಭ್ಯರ್ಥಿಯು ನಾಮಪತ್ರ ಪರಿಶೀಲನೆಯ ವೇಳೆಯ ತನಕ ಹಾಜರು ಪಡಿಸಲು ಅವಕಾಶವಿದೆ. ಆದರೆ, ನಾಮಪತ್ರದಲ್ಲಿ ಅವರು ಇಂಥ ವರ್ಗಕ್ಕೆ ಸೇರಿದವರೆಂದು ಮೊದಲೇ ತಿಳಿಸಬೇಕಾಗಿರುತ್ತದೆ. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಜಾತಿ ದೃಢೀಕರಣ ಪತ್ರ 5 ವರ್ಷ ಅವಧಿಯದಾಗಿರುತ್ತದೆ.
ಆದರೆ, ಹಿಂದುಳಿದವ ವರ್ಗಗಳ ಜಾತಿ ಪ್ರಮಾಣ ಪತ್ರವನ್ನು ಪ್ರಸ್ತುತ ನಡೆಯುವ ಚುನಾವಣೆಗೆಂದು ತಹಶೀಲ್ದಾರರಿಂದ ಪಡೆದುಕೊಂಡಿರತಕ್ಕದ್ದು ಮತ್ತು ಅದರ ಮೂಲ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
ಅಭ್ಯರ್ಥಿಗಳಿಗೆ ಸೂಚನೆಗಳು
* ಅಭ್ಯರ್ಥಿ ಸಲ್ಲಿಸುವ ಅಫಿಡೆವಿಟ್ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸುವುದಷ್ಟೆ ರಿಟರ್ನಿಂಗ್ ಅಧಿಕಾರಿಯ ಕರ್ತವ್ಯವಾಗಿದೆ. ಅಫಿಡವಿಟ್ ತೆಗೆದುಕೊಳ್ಳುವಾಗ ಅಫಿಡವಿಟ್‍ನ ಎಲ್ಲಾ ಕಾಲಂ ಭರ್ತಿಯಾಗಿದೆಯೇ ಹಾಗೂ ಅಭ್ಯರ್ಥಿಯ ಸಹಿ ಇದೆಯೇ ಎಂದು ಖಾತರಿ ಪಡಿಸಿಕೊಳ್ಳಬೇಕು.
* ಆಯೋಗವು ನೀಡಿರುವ ನಾಮನಿರ್ದೇಶನ ನಮೂನೆಗಳು ಮತ್ತು ಇತರೆ ನಮೂನೆಗಳು, ನಮೂನೆ ಪುಸ್ತಕಗಳು ಮುಂತಾದವುಗಳ ಮೇಲೆ ದರ ಮುದ್ರಣ ಆಗಿದ್ದಲ್ಲಿ ಆ ದರದಂತೆ ಶುಲ್ಕ ವಸೂಲಿ ಮಾಡಲಾಗುತ್ತದೆ. ದರ ಮುದ್ರಣವಾಗಿಲ್ಲದ ನಮೂನೆಗಳಿಗೆ ಶುಲ್ಕ ವಸೂಲಿ ಮಾಡುವದಿಲ್ಲ.
* ನಾಮಪತ್ರ ಪರಿಶೀಲನೆಗೆ ಎಲ್ಲಾ ಅಭ್ಯರ್ಥಿಗಳಿಗೆ ಒಂದೇ ಸಮಯ ನೀಡತಕ್ಕದ್ದು. ಆದರೆ ಒಂದರ ನಂತರ ಒಂದು ನಾಮಪತ್ರವನ್ನು ಪರಿಶೀಲನೆ ಮಾಡುವುದು. ಕ್ಷೇತ್ರವೊಂದರ ಅಭ್ಯರ್ಥಿಗೆ ಆ ಕ್ಷೇತ್ರದ ಎಲ್ಲಾ ಅಭ್ಯರ್ಥಿಗಳ ನಾಮಪತ್ರಗಳನ್ನು ನೋಡಲು ಅಥವಾ ಆಕ್ಷೇಪಣೆಗಳನ್ನು ಎತ್ತಲು ಅವಕಾಶವಿರುತ್ತದೆ.
* ನೋಂದಾಯಿತ ಗುತ್ತಿಗೆದಾರರು ಈಗ ಗ್ರಾಮ ಪಂಚಾಯಿತಿಯ ಕಾಮಗಾರಿಯನ್ನು ನಿರ್ವಹಿಸುತ್ತಿದ್ದಲ್ಲಿ ಅವರು ಗ್ರಾಮ ಪಂಚಾಯಿತಿಗೆ ಸ್ಪರ್ಧಿಸಲು ಅನರ್ಹರಾಗುತ್ತಾರೆ. ಈ ವಿಷಯದಲ್ಲಿ ಚುನಾವಣಾಧಿಕಾರಿಗಳಿಗೆ ಮಾಹಿತಿ ಇಲ್ಲವಾದಲ್ಲಿ ಅವರು ಯಾವುದೇ ಕ್ರಮವನ್ನು ತೆಗೆದುಕೊಳ್ಳುವ ಅಗತ್ಯವಿರುವುದಿಲ್ಲ.
* ಚುನಾವಣೆಗೆ ಗ್ರಾಮ ಸಹಾಯಕರು, ಗ್ರಾಮ ಪಂಚಾಯಿತಿ (ತಾತ್ಕಾಲಿಕ) ಬಿಲ್‍ಕಲೆಕ್ಟರ್, ಅಂಗನವಾಡಿ ಕಾರ್ಯಕರ್ತರು, ಬಿಸಿಯೂಟ ಯೋಜನೆಯಡಿ ನೇಮಕಗೊಂಡ ಅಡಿಗೆಯವರು ಸ್ಪರ್ಧಿಸಬಹುದು.
* ರಾಜ್ಯ ಅಥವಾ ಕೇಂದ್ರ ಸರ್ಕಾರಿ ನೌಕರರು, ಡಿಸ್‍ಮಿಸ್ ಆದವರು ಅಭ್ಯರ್ಥಿಯಾಗುವಂತಿಲ್ಲ. ಗ್ರಾಮ ಪಂಚಾಯಿತಿಗೆ ತುಂಬಬೇಕಾದ ಯಾವುದಾದರೂ ಬಾಕಿ ಉಳಿಸಿಕೊಂಡವರು ಅಭ್ಯರ್ಥಿಯಾಗುವಂತಿಲ್ಲ.
* ಗಂಡ ಸರ್ಕಾರಿ ನೌಕರ ಆಗಿದ್ದರೆ ಹೆಂಡತಿ ಸ್ಪರ್ಧಿಸಬಹುದು. ಅದೇ ರೀತಿ ಹೆಂಡತಿ ಸರ್ಕಾರಿ ನೌಕರಿಯಲ್ಲಿದ್ದರೆ ಗಂಡ ಸ್ಪರ್ಧಿಸಬಹುದು.
* ಮಂಗಳಮುಖಿಯರು ಸ್ಪರ್ಧಿಸಬಹುದು. ಆದರೆ, ನಾಮಪತ್ರ ನಮೂನೆಯಲ್ಲಿ ಅವರು ಮಹಿಳೆ ಎಂದು ಘೋಷಿಸಿಕೊಂಡಲ್ಲಿ ಅವರನ್ನು ಮಹಿಳೆ ಎಂದು ಇಲ್ಲವಾದಲ್ಲಿ ಅವರನ್ನು ಪುರುಷರೆಂದು ಭಾವಿಸತಕ್ಕದ್ದು.












Click it and Unblock the Notifications