Viral Video: ರಾಮೇಶ್ವರ ಕೆಫೆ ಸಂಸ್ಥಾಪಕರು ಕ್ಷಮೆ ಕೇಳಿದ್ರಾ, ಎಚ್ಚರಿಕೆ ಕೊಟ್ರಾ?: ವಿಡಿಯೋಗೆ ನೆಟ್ಟಿಗರು ಏನಂದ್ರು?
ಬೆಂಗಳೂರು, ಮೇ 30: ಬೆಂಗಳೂರಿನ ರಾಮರೇಶ್ವರ ಕೆಫೆಯಲ್ಲಿನ ಬಾಂಬ್ ಬ್ಲಾಸ್ಟ್ ಬಳಿಕ ಈ ಕೆಫೆಯ ಬಗ್ಗೆ ರಾಜ್ಯದ ಜನರಿಗೆ ಹೆಚ್ಚಿನ ಮಾಹಿತಿ ಲಭಿಸಿದೆ. ಅದರ ಬೆನ್ನಲ್ಲೆ ಹೈದರಾಬಾದ್ ಔಟ್‌ಲೆಟ್‌ನ ರಾಮೇಶ್ವರ ಕೆಫೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಕುರಿತು ಕೆಫೆ ಸಹ ಸಂಸ್ಥಾಪಕರು ಪ್ರತಿಕ್ರಿಯಿಸಿರುವ ವಿಡಿಯೋ ವೈರಲ್ ಆಗಿದೆ.
ರಾಮೇಶ್ವರ ಕೆಫೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ಮಾಡಿ ಅವಧಿ ಮೀರಿದ (ಎಕ್ಸಫೈರಿ ಡೇಟ್) ಕೆ.ಜಿ.ಗಟ್ಟಲೇ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆದಿದ್ದರು. ಈ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಪ್ರತಿಷ್ಠಿತ ರಾಮೇಶ್ವರ ಕೆಫೆಗೆ ಇದೊಂದು ಕಪ್ಪು ಚುಕ್ಕೆ ಆಯಿತು.

ಈ ದಾಳಿಗೆ ಸಂಬಂಧಿಸಿದಂತೆ ಹೈದರಾಬಾದ್ ಔಟ್‌ಲೆಟ್‌ನ ಕೆಫೆಯ ಸಂಸ್ಥಾಪಕರಾದ ರಾಘವೇಂದ್ರ ರಾವ್ ಅವರು ಪ್ರತಿಕ್ರಿಯಿಸಿದ್ದಾರೆ. ಆದ ತಪ್ಪಿಗೆ ಅವರು ಪ್ರಾಮಾಣಿಕವಾಗಿ ಕ್ಷಮೆಯಾಚಿಸಿದ್ದಾರೆ. ದಾಳಿ ಬಗ್ಗೆ ಅವರು ಸ್ಪಷ್ಟನೆ ನೀಡಿರುವ ರೀತಿಯಿಂದಲೇ ಈ ವಿಡಿಯೋ ವೈರಲ್ ಆಗಿದೆ.
ರಾಘವೇಂದ್ರ ರಾವ್ ಕ್ಷಮೆಯಾಚನೆ ವಿಡಿಯೋ
ಲೇಬಲ್ ಮಾಡದ ಹಾಗು ಅವಧಿ ಮೀರಿದ ಪದಾರ್ಥಗಳನ್ನು ಬಳಸುತ್ತಿರುವುದು ಪತ್ತೆ ಆಗಿದೆ. ಈ ಕೆಫೆ ಸಹ ಸಂಸ್ಥಾಪಕ ರಾವ್ ಅವರು ವಿಡಿಯೋ ಮಾಡಿ ಕ್ಷಮೆಯಾಚಿಸಿ, ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದ್ದಾರೆ. ನಾವು ಕೊಟ್ಟ ಭರವಸೆಯಂತೆ ಮುಂದೆಯು ಗುಣಮಟ್ಟದ ಆಹಾರ ಉತ್ಪನ್ನವನ್ನು ಗ್ರಾಹಕರಿಗೆ ತಲುಪಿಸುತ್ತೇವೆ. ಉತ್ತಮ ಪದಾರ್ಥಗಳನ್ನು ಶಾಶ್ವತವಾಗಿ ಬಳಕೆ ಮಾಡುತ್ತೇವೆ. ಆದ ಸಣ್ಣ ತಪ್ಪುಗಳಿಗೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರು.
ವಿಡಿಯೋದಲ್ಲಿ ಅವರು ಎಚ್ಚರಿಕೆ ಕೊಡುವ ರೀತಿಯಲ್ಲಿ ಕೈ ತೋಳು ಏರಿಸಿಕೊಂಡು ಮಾತನಾಡಿದ ರೀತಿಯಿಂದ ನೆಟ್ಟಿಗರು ವಿಡಿಯೋ ಅನ್ನು ವೈರಲ್ ಮಾಡಿದ್ದಾರೆ. ತೆಲಂಗಾಣದ ಆಹಾರ ಸುರಕ್ಷತಾ ಅಧಿಕಾರಿಗಳು ಕೆಫೆ ಮೇಲೆ ದಾಳಿ ಮಾಡಿ, ರೂ.16,000 ಮೌಲ್ಯದ ಅವಧಿ ಮೀರಿದ 100 ಕೆಜಿ ಉದ್ದಿನ ಬೇಳೆ, 10 ಕೆಜಿ ನಂದಿನಿ ಮೊಸರು ಮತ್ತು ಎಂಟು ಲೀಟರ್ ಹಾಲು ಪತ್ತೆ ಮಾಡಿದ್ದರು.

ಇದೊಂದು ಪಾಠ: ರಾವ್
ರೆಸ್ಟೋರೆಂಟ್ ಸರಪಳಿಯ ಸಂಸ್ಥಾಪಕರು ಮತ್ತು ಸಿಬ್ಬಂದಿ ಎಪಿಜೆ ಅಬ್ದುಲ್ ಕಲಾಂ ಅವರ ಹೆಜ್ಜೆಗಳನ್ನು ಅನುಸರಿಸುತ್ತಾರೆ ಎಂದು ಸೇರಿಸುತ್ತಾ, ರಾವ್ ಅವರು ಬ್ರ್ಯಾಂಡ್ ಅನ್ನು ಜಾಗತಿಕವಾಗಿ ಕೊಂಡೊಯ್ಯುವುದು ಅವರ ದೃಷ್ಟಿಯಾಗಿದೆ. ಆಗಿರುವ ಪ್ರಮಾದದಿಂದ ಇದೊಂದು ಪಾಠ ಕಲಿತಿದ್ದೇವೆ ಎಂದು ಹೇಳಿದರು.
ಇದೇನು ಕ್ಷಮೇಯಾಚನೆನಾ? ಎಚ್ಚರಿಕೆಯಾ?
ರಾಘವೇಂದ್ರ ರಾವ್ ಅವರ ವಿಡಿಯೋಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಭಾಷೆಯ ಕಾರಣವು ಅವರ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದರು. ಇವರು ಕ್ಷಮೆ ಕೇಳುವ ರೀತಿ ನೋಡಿದರೆ, ಇವರು ಕ್ಷಮೆಯಾಚಿಸುತ್ತಿದ್ದಾರಾ? ಇಲ್ಲಾ ಭಯಪಡಿಸುತ್ತಿದ್ದಾರಾ ಎಂದು ಕಾಲೆಳೆದು ಕಾಮೆಂಟ್ ಮಾಡಿದ್ದಾರೆ.
ನಾನು ರಾಮೇಶ್ವರಂ ಕೆಫೆಯ ಗ್ರಾಹಕನಾಗಿದ್ದೇನೆ. ಅವರನ್ನು ಬೆಂಬಲಿಸುತ್ತೇನೆ. ಇವರು ಕ್ಷಮೆಯಾಚಿಸುವಂತೆ ಮಾತನಾಡುತ್ತಿಲ್ಲ ಎಂದರು. ಒಂದು ಕಡೆ ದೋಸೆಗೆ ಸುಮಾರು ರೂ. 200 ಶುಲ್ಕ ವಿಧಿಸಿದರೆ ಮತ್ತೊಂದು ಕಡೆ ಗುಣಮಟ್ಟದ ಅವಧಿ ಮೀರಿದ ಪದಾರ್ಥ ಬಳಸಿದ್ದಾರೆ. ಇದು ಗ್ರಾಹಕರ ನಿರ್ಲಕ್ಷ್ಯ ಖಂಡಿತಾ ಅಲ್ಲವೇ ಅಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ನೀವು ಆಡುವ ಮಾತಿನಲ್ಲಿ ಕ್ಷಮೆ ಇದ್ದರೂ ಸಹಿತ ನಿಮ್ಮ ದೇಹ ಭಾಷೆ ಬೇರೆಯದನ್ನೇ ಹೇಳುತ್ತದೆ. ಇದು ಕ್ಷಮೆ ಅಲ್ಲ ಎಚ್ಚರಿಕೆ ಕೊಡುವಂತಿದೆ ಎಂದರು. ನೀವು ಬಳಸುವ ಪ್ರೀಮಿಯಂ ಕಾಳುಗಳು ಮತ್ತು ತರಕಾರಿಗಳು ಯಾವುವು? ಎಂದು ಸುದರ್ಶನ್ ಎಂಬುವವರು ಪ್ರಶ್ನೆ ಮಾಡಿದ್ದಾರೆ.
ಹೀಗೆ ಪ್ರಶ್ನೆ ಮಾಡುವ ಮೂಲಕ ನೆಟ್ಟಿಗರು ಕ್ಷಮೆಯಾಚನೆ ಮಾಡಿದ ರಾಮೇಶ್ವರ ಕೆಫೆ ಸಹ ಸಂಸ್ಥಾಪಕರಿಗೆ ಪರೋಕ್ಷವಾಗಿ ಬುದ್ಧಿ ಹೇಳಿದ್ದಾರೆ. ಕ್ಷಮೆ ಕೇಳುವಾಗ ಗತ್ತು ಗೈರತ್ತು ತೋರಿದಂತೆ ವಿಡಿಯೋ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಆಕ್ಷೇಪಣೆಗೆಳು ವ್ಯಕ್ತವಾಗಿವೆ.












Click it and Unblock the Notifications