ನೀವು ಪಾನಿಪೂರಿ ತಿನ್ನಲು ಇಷ್ಟಪಡುತ್ತೀರಾ? ಹಾಗಾದರೆ ಈ ಸಂತಸದ ಸುದ್ದಿ ನಿಮಗಾಗಿ...!
ಪಾನಿಪೂರಿ ಭಾರತದ ಅತ್ಯಂತ ಜನಪ್ರಿಯ ರಸ್ತೆ ಬದಿಯ ಆಹಾರಗಳಲ್ಲಿ ಒಂದಾಗಿದೆ. ಗೋಲ್‌ಗಪ್ಪ ಎಂದೂ ಕರೆಯಲ್ಪಡುವ ಪಾನಿಪೂರಿಯನ್ನು ಹಲವಾರು ಜನ ಇಷ್ಟಪಡುತ್ತಾರೆ. ವೀಕೇಂಡ್ ಮಾತ್ರವಲ್ಲದೆ ನಿತ್ಯ ಪಾನಿಪೂರಿ ಸೇವಿಸದೇ ಇರದವರು ನಮ್ಮ ನಡುವೆ ಅನೇಕರು ಇದ್ದಾರೆ. ಕೆಲ ಸ್ಥಳಗಳು ಪಾನಿಪೂರಿ ಮಾರಾಟಕ್ಕೆಂದು ಹೆಸರುವಾಸಿಯಾಗಿವೆ.
ಹಿಸುಕಿದ ಆಲೂಗಡ್ಡೆ, ಕುದಿಸಿದ ಕಡಲೆ, ಸಿಹಿ ಮತ್ತು ಹುಳಿ ನೀರು ತುಂಬಿದ ಕುರುಕುಲಾದ ಪುರಿಯನ್ನು ತಿನ್ನುವುದರಲ್ಲಿರುವ ಮಜಾನೇ ಬೇರೆ. ಹೀಗಾಗಿ ಇದನ್ನು ಭಾರತದ ವಿವಿಧ ಭಾಗಗಳಲ್ಲಿ ವಿವಿಧ ಹೆಸರುಗಳು ಮತ್ತು ರುಚಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಪಾನಿಪೂರಿಯನ್ನು ಒಂದೇ ಸಮನೆ ಬಾಯಿಗೆ ಹಾಕಿಕೊಳ್ಳುವುದು ಒಂದು ವಿಶಿಷ್ಟ ಕಲೆ. ಹೀಗೆ ಅನೇಕರು ಇದನ್ನು ಇಷ್ಟಪಟ್ಟು ಕೆಲ ಬಾರಿ ಸ್ಪರ್ಧೆಗಿಳಿದು ಸೇವಿಸುತ್ತಾರೆ.

ಆದರೆ ಇದನ್ನು ಸೇವಿಸಬಾರದು ಎಂದು ಹೇಳಲಾಗುತ್ತದೆ. ಇದಕ್ಕೆ ಕಾರಣ ಸ್ವಚ್ಚತೆ ಕಾಪಾಡದೇ ಇರುವುದು. ಗುಣಮಟ್ಟದ ಅಂಗಡಿಗಳಲ್ಲಿ ಅಥವಾ ಮನೆಯಲ್ಲಿ ಇದನ್ನು ತಿಂದಾಗ ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಹಾಗಾದರೆ ಇದರಲ್ಲಿರುವ ಆರೋಗ್ಯಕರ ಪ್ರಯೋಜನಗಳು ಯಾವವು ಎಂದು ತಿಳಿಯೋಣ.
ಪಾನಿಪೂರಿ ಆರೋಗ್ಯಕರ ಪ್ರಯೋಜನಗಳು: -
1. ಜೀರ್ಣಕ್ರಿಯೆಗೆ ಒಳ್ಳೆಯದು
ಈ ಜನಪ್ರಿಯ ರಸ್ತೆ ಆಹಾರವನ್ನು ಮಸಾಲೆಗಳು ಮತ್ತು ಜೀರ್ಣಕಾರಿ ಪದಾರ್ಥಗಳ ಮಿಶ್ರಣದೊಂದಿಗೆ ನೀಡಲಾಗುತ್ತದೆ. ಜೀರಿಗೆ, ಹುಣಸೆಹಣ್ಣು ಮತ್ತು ನಿಂಬೆ ಮಿಶ್ರಣ ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
2. ಪೋಷಕಾಂಶಗಳಿಂದ ಸಮೃದ್ಧ
ಇದೊಂದು ಮಾತು ನಂಬಲು ಸ್ವಲ್ಪ ಕಷ್ಟವಾಗಬಹುದು. ಆದರೆ ಪಾನಿ ಪುರಿ ವಾಸ್ತವವಾಗಿ ಪೋಷಕಾಂಶಗಳಿಂದ ತುಂಬಿರುತ್ತದೆ. ಇದು ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ಅನ್ನು ಹೊಂದಿರುತ್ತದೆ. ಇದು ದೇಹದ ಒಟ್ಟಾರೆ ಆರೋಗ್ಯಕ್ಕೆ ಸಹಾಯ ಮಾಡುತ್ತದೆ ಮತ್ತು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

3.ತೂಕ ಇಳಿಕೆ
ನಿರ್ದಿಷ್ಟ ಪ್ರಮಾಣದ ಪಾನಿ ಪುರಿಯನ್ನು ತಿನ್ನುವುದರಿಂದ ತೂಕ ಇಳಿಸಲು ಸಹಾಯವಾಗುತ್ತದೆ ಎನ್ನುತ್ತಾರೆ ಪೌಷ್ಟಿಕತಜ್ಞರು. ಪಾನಿಪೂರಿ ಫೈಬರ್‌ನಲ್ಲಿ ಸಮೃದ್ಧವಾಗಿದೆ. ಇದು ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ.
4.ರಕ್ತದಲ್ಲಿನ ಸಕ್ಕರೆಯನ್ನು ನಿರ್ವಹಿಸಲು ಸಹಾಯ
ಪಾನಿಪುರಿಯ ರುಚಿ ಅದಕ್ಕೆ ಸೇರಿಸಲಾದ ಪದಾರ್ಥಗಳ ಮೇಲೆ ಅವಲಂಬಿತವಾಗಿರುತ್ತದೆ. ಜೀರಿಗೆ, ಮೆಣಸು, ಶುಂಠಿ ಮತ್ತು ನಿಂಬೆಯಂತಹ ಪದಾರ್ಥಗಳು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
5.ಆಮ್ಲೀಯತೆ ಗುಣಪಡಿಸಬಹುದು
ಪಾನಿಪುರಿಯಲ್ಲಿ ಬೆರೆಸಿದ ಜಲ್ಜೀರಾ ನೀರು ಆಮ್ಲೀಯತೆ ಮತ್ತು ಅದರಿಂದ ಉಂಟಾಗುವ ಅಸ್ವಸ್ಥತೆಯನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಬಳಸಲಾಗುವ ಕೊತ್ತಂಬರಿ ಮತ್ತು ಪುದೀನಾ ಮುಂತಾದ ಪದಾರ್ಥಗಳು ಆರೋಗ್ಯಕ್ಕೆ ಉಪಯುಕ್ತವಾಗಿವೆ.

ಪಾನಿಪೂರಿ ಆರೋಗ್ಯಕರವಾಗಿ ಮಾಡುವುದು ಹೇಗೆ?
ಪಾನಿಪೂರಿಯನ್ನು ಹೊರಗಡೆ ಸೇವಿಸುವುದಕ್ಕಿಂತ ಮನೆಯಲ್ಲೇ ತಯಾರಿಸಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ತಾಜಾ ಪುದೀನ, ಕೊತ್ತಂಬರಿಯನ್ನು ಬಳಕೆ ಮಾಡಬಹುದು. ರುಚಿಗಾಗಿ ಬಳಕೆ ಮಾಡಲಾದ ಪದಾರ್ಥಗಳನ್ನು ಮನೆಯಲ್ಲೇ ತಯಾರಿಸುವುದರಿಂದ ಅದರ ಗುಣಮಟ್ಟವನ್ನು ಕಾಪಾಡಬಹುದು. ಜೊತೆಗೆ ಮನಸ್ಪೂರ್ತಿಯಾಗಿ ಸೇವಿಸಬಹುದು.
ಪಾನಿಪೂರಿ ಆರೋಗ್ಯಕರವಾಗಿ ಮಾಡುವು ವಿಧಾನದಲ್ಲಿ ಮೊದಲನೆಯದು, ಕರಿದ ಪೂರಿ ಅಥವಾ ಕರಿಯಬೇಕಾದ ಪೂರಿಯನ್ನು ಅಂಗಡಿಯಿಂದ ತರುವುದಕ್ಕಿಂತ ಮನೆಯಲ್ಲೇ ತಯಾರಿಸಿಟ್ಟುಕೊಳ್ಳುವುದು ಒಳ್ಳೆಯದು. ಎರಡನೇಯದು ಸ್ಟಫ್ ಮಾಡಬೇಕಾದ ಬೇಯಿಸಿದ ಆಲುಗಡ್ಡೆ ಮೊಳಕೆಯೊಡೆದಿದ್ದರೆ ಇನ್ನೂ ಒಳ್ಳೆಯದು.
ಇನ್ನೂ ಪಾನಿ ತಯಾರಿಸುವುದು ಕೂಡ ಅಷ್ಟೇ ಇದರಲ್ಲಿ ಯಾವೆಲ್ಲಾ ಪದಾರ್ಥಗಳನ್ನು ಬಳಕೆ ಮಾಡುತ್ತಾರೆಂದು ತಿಳಿದು ಅದನ್ನು ಮನೆಯಲ್ಲೇ ತಯಾರಿಸಿದರೆ, ಪಾನಿಪೂರಿ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಹುಳಿ ಮತ್ತು ಕಹಿ ಹುಣಸೆ ನೀರಿನ ಬದಲಿಗೆ ಕಡಿಮೆ ಕ್ಯಾಲೋರಿ ಹೊಂದಿರುವ ಜೀರಿಗೆ ನೀರನ್ನು ಬಳಸಬಹುದು. ಮಾತ್ರವಲ್ಲದೆ ಚಟ್ನಿಗಳನ್ನು ಮನೆಯಲ್ಲಿ ಮಾಡಲು ಪ್ರಯತ್ನಿಸಿ. ಈ ಎಲ್ಲಾ ತಯಾರಿಯೊಂದಿಗೆ ನಿಮ್ಮ ನೆಚ್ಚಿನ ಪಾನಿಪೂರಿಯನ್ನು ಎಷ್ಟು ಬೇಕಾದರೂ ಸೇವಿಸಬಹುದು.












Click it and Unblock the Notifications