Money Matter: ದಿನಕ್ಕೆ ಕನಿಷ್ಠ ₹2000 ದುಡಿಯಬಹುದಾದ ಕೆಲಸಗಳಿವು!
ಕಾಯಕವೇ ಕೈಲಾಸ, ಕೈ ಕೆಸರರಾದರೆ ಬಾಯಿ ಮೊಸರು ಇವು ನಮ್ಮ ನಾಡಿನ ನಾಣ್ಣುಡಿಗಳು. ಈ ನಾಣ್ಣುಡಿಗಳನ್ನು ಶ್ರದ್ಧೆಯಿಂದ ಕಾರ್ಯರೂಪಕ್ಕೆ ಇಳಿಸಿದರೆ ಸಾಕು ಬೆಂಗಳೂರಿನಲ್ಲಿ ತಕ್ಕ ಮಟ್ಟಿಗೆ ಹಣ ಮಾಡುವುದು ಕಷ್ಟವಲ್ಲ.
ಒಂದು ಕಾಲದಲ್ಲಿ ಕೆರೆ ಕುಂಟೆ, ಹೊಲ-ತೋಟ, ತೊರೆಗಳಿಂದ ಆವೃತ್ತವಾಗಿದ್ದ ಬೆಂಗಳೂರು ಇವತ್ತು ಕೈಗಾರಿಕಾ ನಗರವಾಗಿ ರೂಪಾಂತರಗೊಂಡಿದೆ. ಕೆಂಪೇಗೌಡರು ಕಟ್ಟಿದ ಬೆಂಗಳೂರು ಮಲಗುವುದೇ ಇಲ್ಲ. ಹಗಲಿನ ಓಡಾಟ, ದುಡಿಮೆ, ವ್ಯವಹಾರ ಒಂದು ರೀತಿಯಾದರೆ, ರಾತ್ರಿಯ ಜಗತ್ತಿನ ವ್ಯವಹಾರವೂ ಬೇರೆ ಸ್ವರೂಪದಾಗಿರುತ್ತದೆ.

ಬೆಂಗಳೂರಿನ ಈ ವ್ಯವಹಾರದ ಸ್ವರೂಪವನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡರೆ ಓದು ಬರಹ ಬರದ ವ್ಯಕ್ತಿ ಕೂಡ ದಿನವೊಂದಕ್ಕೆ ಎರಡು ಸಾವಿರ ರೂಪಾಯಿಯನ್ನು ಸಲೀಸಾಗಿ ಸಂಪಾದನೆ ಮಾಡಬಹುದು.
ಎಳನೀರು ಮಾರಾಟದಿಂದ ಸಾವಿರ ಸಂಪಾದನೆ
"ಕಳೆದ ಏಳು ವರ್ಷಗಳಿಂದ ಖಾಸಗಿ ಕಂಪೆನಿಯಲ್ಲಿ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುತ್ತಾ ಕಣ್ಣು ತೂತು ಬಿದ್ದಿದ್ದೇ ಬಂತು ಹೊರತು, ಸಂಪಾದನೆಯ ಹಣವನ್ನು ಕೂಡಿಡುವುದಕ್ಕೆ ಸಾಧ್ಯವಾಗಲೇ ಇಲ್ಲ. ಈ ಬಗ್ಗೆ ಯೋಚಿಸುತ್ತಾ ಕಂಪೆನಿಯ ಗೇಟಿನ ಮುಂದೆ ನಿಂತು ಕಣ್ಣಾಯಿಸಿದಾಗ ನನ್ನ ಕಂಪೆನಿಯ ಎದುರಿಗೆ ಕೈಯಲ್ಲಿ ಮಚ್ಚನ್ನು ಹಿಡಿದು ನಿರಂತರವಾಗಿ ಎಳನೀರನ್ನು ಕೊಚ್ಚುತ್ತಾ ಗ್ರಾಹಕರಿಗೆ ಕೊಡುತ್ತಾ, ಅವರಿಂದ ಹಣವನ್ನು ಪಡೆಯುತ್ತಾ ತನ್ನ ಗಲ್ಲಪೆಟ್ಟಿಗೆಯನ್ನು ತುಂಬಿಸಿಕೊಳ್ಳುತ್ತಿದ್ದ ದೃಶ್ಯವನ್ನು ಕಣ್ತುಂಬಿಸಿಕೊಂಡೆ.
ಆ ಕ್ಷಣವೇ ಕೆಲಸಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದೆ. ಮುಂದಿನ ಒಂದು ತಿಂಗಳಲ್ಲಿಯೇ ನನ್ನ ಮನೆಯ ಸ್ವಲ್ಪ ದೂರದಲ್ಲಿ ರಸ್ತೆ ಪಕ್ಕದಲ್ಲಿಯೇ ಎಳೆನೀರನ್ನು ಮಾರಾಟ ಮಾಡುತ್ತಾ ಬದುಕನ್ನು ಕಟ್ಟಿಕೊಂಡಿದ್ದೇನೆ" ಎನ್ನುತ್ತಾರೆ ಜಿಗಣಿಯ ಶಂಕರ್.
ಇದು ಕೇವಲ ಒಬ್ಬರ ಉದಾಹರಣೆಯಲ್ಲ. ನ್ಯಾಯಯುತವಾಗಿ ಹಣ ಮಾಡಬೇಕೆಂದು ಹಂಬಲಿಸುವ ಬಡ, ಮಧ್ಯಮ ವರ್ಗದ ಜೀವನಗಾಥೆ ಇದೇ ಆಗಿರುತ್ತದೆ. ಹೀಗೆ ದುಡಿಮೆಗೆ ಹಾತೊರೆಯುವ, ಸಣ್ಣ ಉದ್ಯಮ ಮಾಡುತ್ತಲೇ ದೊಡ್ಡದಾಗಿ ಬೆಳೆಯಬೇಕೆಂದು ಸಂಕಲ್ಪ ತೊಡುವ ಯುವಜನತೆಗೆ ಬೆಂಗಳೂರಿನಂತಹ ಸೂಕ್ತ ಜಾಗ ಮತ್ತೊಂದು ಸಿಗಲಾರದು.
ಬೆಂಗಳೂರು ಕೈಗಾರಿಕಾ ಪ್ರದೇಶಗಳು, ಐಟಿ-ಬಿಟಿ ಕಂಪೆನಿಗಳು, ಶಾಲಾ-ಕಾಲೇಜುಗಳು, ಆಸ್ಪತ್ರೆಗಳ ಸಂಖ್ಯೆಗೆ ಲೆಕ್ಕವೇ ಇಲ್ಲ. ಇಲ್ಲಿ ಹಣ ಮಾಡಲೇಬೇಕು ಎಂದು ನಿರ್ಧರಿಸಿದವರಿಗೆ ಓದಿನ ಸರ್ಟಿಫಿಕೇಟ್ ಅಗತ್ಯವಿಲ್ಲ. ಶ್ರಮ ಹಾಗೂ ಶ್ರದ್ಧೆಯಿದ್ದರೆ ಯಶಸ್ವಿ ಉದ್ದಿಮೆದಾರನಾಗಿ ಬೆಳೆಯಬಹುದು.

ಹಾಗಂತ ಎಲ್ಲೆಂದರಲ್ಲಿ ಎಳನೀರು ಅಂಗಡಿ ತೆರೆದರೆ ನಷ್ಟವಾಗುವುದು ಖಂಡಿತ. ಹೆಚ್ಚಿನ ಜನಸಂಚಾರ ಇರುವ ಕಡೆ, ಆಸ್ಪತ್ರೆ, ಕಚೇರಿ ಹೆಚ್ಚಾಗಿ ಇರುವ ಕಡೆ ನೋಡಿ ತಾಜಾ ಎಳನೀರು ಮಾರಿದರೆ ದಿನಕ್ಕೆ ಸಾವಿರ ಸಾವಿರ ಸಂಪಾದನೆ ಮಾಡಬಹುದು.
ಕೈಗಾರಿಕಾ ಪ್ರದೇಶ-ಐಟಿ ಬಿಟಿ ಕಂಪೆನಿಯ ಮುಂಭಾಗದ ಒಂದು ಮರದಡಿ ಎಳನೀರಿನ ಕಾಯಿಗಳು ಇಟ್ಟು ನಿಂತರೂ ಸಾಕು ಸಲೀಸಾಗಿ ವ್ಯಾಪಾರ ನಡೆಸಬಹುದು. ಈ ವ್ಯಾಪಾರಕ್ಕೆ ಒಂದು ನಿರ್ಧಿಷ್ಟವಾದ ಅಂಗಡಿಯೋ ಆಗಬೇಕಿಲ್ಲ. ನೆರಳಿರುವ ಜಾಗದಲ್ಲಿ ಎಳನೀರು ಕಾಯಿಗಳನ್ನು ಹಾಕಿಕೊಂಡು ನಿಂತರು ಗ್ರಾಹಕರನ್ನು ಆಕರ್ಷಿಸಬಹುದು. ಈ ಉದ್ಯಮಕ್ಕೆ ಯಾವುದೇ ಓದಿನ, ಸರ್ಟಿಫಿಕೆಟ್‌ನ ಅಗತ್ಯವಿಲ್ಲ. ದುಡಿಮೆಯ ಆಸಕ್ತಿ ಒಂದೇ ಅರ್ಹತೆ ಆಗಿರುತ್ತದೆ.
ಜೆರಾಕ್ಸ್ ಅಂಗಡಿ
ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿರುವ ಶಾಲಾ-ಕಾಲೇಜುಗಳ ಬಳಿ ಒಂದು ಜೆರಾಕ್ಸ್ ಅಂಗಡಿ ಪ್ರಾರಂಭಿಸಿದರೂ ದಿನವೊಂದಕ್ಕೆ ಸಾವಿರಾರು ರೂಪಾಯಿ ಸಂಪಾದನೆ ಮಾಡಬಹುದು. ಜೆರಾಕ್ಸ್ ಅಂಗಡಿ ನಡೆಸಲು ಪದವೀಧರನೆ ಆಗಬೇಕಿಲ್ಲ. ಜೆರಾಕ್ಸ್ ಮೆಷಿನ್ ಬಗ್ಗೆ ಸ್ವಲ್ಪ ತಿಳಿದುಕೊಂಡರೆ ಸಾಕು.
ಜೆರಾಕ್ಸ್ ಜೊತೆಗೆ ಕೆಲಸಗಳಿಗೆ ಅರ್ಜಿ ಹಾಕುವುದು, ಸರ್ಕಾರಿ ಯೋಜನೆಗಳ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ಕೆಲಸ ಮಾಡಿದರೂ ಸಂಪಾದನೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು.
ಈ ಮೇಲಿನ ಒಂದೆರಡು ಉದಾಹರಣೆಯಷ್ಟೆ. ಬೆಂಗಳೂರಿನಲ್ಲಿ ಇಂತಹ ನೂರಾರು ರೀತಿಯ ವ್ಯವಹಾರವನ್ನು ನಡೆಸಬಹುದಾಗಿದೆ. ಇಂತಹ ಸಣ್ಣ ವ್ಯವಹಾರಗಳಿಗೆ ಹೆಚ್ಚಿನ ಬಂಡವಾಳವು ಅಗತ್ಯ ಬೀಳುವುದಿಲ್ಲ. ಸರಿಯಾದ ಸ್ಥಳ, ಅಲ್ಲಿನ ಅಗತ್ಯವನ್ನು ನೋಡಿಕೊಂಡು ಪ್ರಾರಂಭಿಸಬೇಕಷ್ಟೆ.












Click it and Unblock the Notifications