ಅದೊಂದು ಕಾಲುವೆ ಅಗಲ ಮಾಡಿದರೆ ಜಗತ್ತಿನ ಸಮಸ್ಯೆ ಬಗೆಹರಿಯುತ್ತಾ?
ಇಡೀ ಜಗತ್ತಿಗೆ ಸಹಾಯ ಮಾಡಬಲ್ಲ ಯೋಜನೆಗೆ ಅಸ್ತು ಎನ್ನಲಾಗಿದೆ. ಈಜಿಪ್ಟ್ ಸರ್ಕಾರ ದಿಟ್ಟ ಹೆಜ್ಜೆಯನ್ನೇ ಇಟ್ಟಿದೆ. ಇದೊಂದು ನಿರ್ಧಾರದಿಂದ ಜಗತ್ತಿನಲ್ಲಿ ಸರಕು ಸಾಗಾಣಿಕೆ ಮತ್ತಷ್ಟು ಸುಲಭವಾಗಲಿದೆ. ಅಂದಹಾಗೆ, ಜಗತ್ತಿನಲ್ಲಿ ಜಲ ಮಾರ್ಗದ ಮೂಲಕವೇ ಅತಿಹೆಚ್ಚು ಪ್ರಮಾಣದ ವಹಿವಾಟು ನಡೆಯುತ್ತಿದೆ. ಮನುಷ್ಯ ಹೀಗೆ ತನ್ನ ವ್ಯಾಪಾರಕ್ಕಾಗಿ ಜಲಮಾರ್ಗ ಅಂದರೆ ಸಮುದ್ರ ಮಾರ್ಗವನ್ನು ನಂಬಿಕೊಂಡು ಸಾವಿರಾರು ವಷವೇ ಗತಿಸಿ ಹೋಗಿದೆ. ಆದರೆ ನೂರಾರು ಸಮಸ್ಯೆಗಳು ಸಮುದ್ರ ಮಾರ್ಗದಲ್ಲಿ ಎದುರಾಗುತ್ತವೆ.
ಇದೇ ರೀತಿ ಐತಿಹಾಸಿಕ ಕಾಲುವೆ ಎಂಬ ಹೆಮ್ಮೆ ಪಡೆದಿರುವ 'ಸೂಯೆಜ್ ಕೆನಾಲ್' ಎಂದರೆ ಹಡಗುಗಳ ಮಾಲೀಕರು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. 2 ತಿಂಗಳ ಹಿಂದೆ ಅಂದರೆ ಮಾರ್ಚ್‌ನಲ್ಲಿ 'ಎವರ್ ಗಿವನ್' ಎಂಬ ಹೆಸರಿನ ಹಡಗು ಸೂಯೆಜ್ ಕಾಲುವೆಯಲ್ಲಿ ಲಾಕ್ ಆಗಿತ್ತು. ಕಾಲುವೆಯಲ್ಲಿ ತಗಲಾಕ್ಕೊಂಡ ಹಡಗು 1 ವಾರ ಒದ್ದಾಡಿಬಿಟ್ಟಿತ್ತು.
ಕಾಲುವೆಯಲ್ಲಿ ಸಿಲುಕಿದ್ದ ಹಡಗನ್ನು ಮರಳಿ ತೇಲುವಂತೆ ಮಾಡಲು ಇಡೀ ಜಗತ್ತಿನ ತಜ್ಞರು ಪರದಾಡಿದ್ದರು. ಏಕೆಂದರೆ ಜಗತ್ತಿನ ಬಹುಪಾಲು ಸರಕುಗಳು ಇದೇ ಸೂಯೆಜ್ ಕಾಲುವೆ ಮೂಲಕ ತೆರಳುತ್ತವೆ. ಆದರೆ ಹಿಂದೆ ಹಡಗು ಸಿಲುಕಿಕೊಂಡ ಹಿನ್ನೆಲೆಯಲ್ಲಿ ಕಾಲುವೆಯನ್ನ ಅಗಲ ಮಾಡಲು ಈಜಿಪ್ಟ್ ಸರ್ಕಾರ ಅಸ್ತು ಎಂದಿದೆ.

40 ಮೀಟರ್ ಅಗಲ..!
2021ರ ಮಾರ್ಚ್‌ನಲ್ಲಿ ನಡೆದಿದ್ದ ಘಟನೆಯಿಂದ ಸೂಯೆಜ್ ಕಾಲುವೆ ಪ್ರಾಧಿಕಾರ ಎಚ್ಚೆತ್ತುಕೊಂಡು ಕಾಲುವೆ ಅಂಚನ್ನು ಅಗಲ ಮಾಡುತ್ತಿದೆ. 'ಎವರ್ ಗಿವನ್' ಸಿಲುಕಿದ್ದ ಜಾಗದ ಸುತ್ತಮುತ್ತ ಕಾಮಗಾರಿ ಶುರುವಾಗಲಿದೆ. ಸುಮಾರು 30 ಕಿಲೋ ಮೀಟರ್ ಮಾರ್ಗದಲ್ಲಿ 40 ಮೀಟರ್ ಅಂದ್ರೆ 131 ಅಡಿಗಳಷ್ಟು ಕಾಲೆವೆಯನ್ನ ಅಗಲ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ 'ಎವರ್ ಗಿವನ್' ಸಿಲುಕಿದ್ದ ಜಾಗದಲ್ಲಿ ಮರಳಿಗೆ ಸಿಲುಕದಂತೆ ಮಾಡಲು 72 ಅಡಿ ಆಳಕ್ಕೆ ಗುಂಡಿ ತೋಡಲು ನಿರ್ಧರಿಸಲಾಗಿದೆ. ಈ ಮೂಲಕ ಭವಿಷ್ಯದ ದೃಷ್ಟಿಯಿಂದಲೂ ಕಾಲುವೆಯನ್ನ ಭದ್ರ ಮಾಡಲು ಮುಂದಾಗಿದೆ ಸೂಯೆಜ್ ಕಾಲುವೆ ಪ್ರಾಧಿಕಾರ.

‘ಸೂಯೆಜ್ ಕಾಲುವೆ’ ನೆಪೋಲಿಯನ್ ಕನಸು
ನಿಮಗೆಲ್ಲಾ ತಿಳಿದಿರುವಂತೆ ದೇಶ ದೇಶಗಳ ನಡುವೆ ಹೆಚ್ಚಿನ ವ್ಯಾಪಾರ ಮತ್ತು ವಹಿವಾಟು ಸಮುದ್ರ ಮಾರ್ಗದ ಮೂಲಕವೇ ನಡೆಯುತ್ತದೆ. ಇದು ಪುರಾತನ ವಿಧಾನ ಕೂಡ ಆಗಿದೆ. ಹೀಗೆ ಯುರೋಪ್ ಹಾಗೂ ಏಷ್ಯಾದ ನಡುವೆ ವ್ಯಾಪಾರ ಮತ್ತು ವಹಿವಾಟು ನಡೆಯಲು ಸೂಯೆಜ್ ಕಾಲುವೆ ಅತ್ಯಗತ್ಯವಾಗಿತ್ತು. ಮೊದಲಿಗೆ ಇದರ ಕನಸು ಕಂಡವನು ಯುರೋಪಿಯನ್ನರ ಪಾಲಿಗೆ ಅನಭಿಶಕ್ತ ದೊರೆಯಾದ ನೆಪೋಲಿಯನ್ ಬೋನಾಪಾರ್ಟೆ. ಮೆಡಿಟೆರಿಯನ್ ಮತ್ತು ಕೆಂಪು ಸಮುದ್ರ ಬೆಸೆಯುವ ಕಾಲುವೆ ಎರಡು ಖಂಡಗಳನ್ನು ಒಗ್ಗೂಡಿಸುತ್ತದೆ. ಅಲ್ಲಿನ ವ್ಯಾಪಾರ ಮತ್ತು ವಹಿವಾಟಿನ ಅಗತ್ಯತೆಗಾಗಿ ಕಾಲುವೆ ನಿರ್ಮಿಸಲಾಗಿತ್ತು. ಇದೀಗ ಈಜಿಪ್ಟ್ ಸರ್ಕಾರಕ್ಕೆ ಒಟ್ಟು ವಾರ್ಷಿಕ ಆದಾಯದ ಶೇಕಡಾ 25ರಷ್ಟು ಭಾಗವನ್ನು ಇದೇ ಕಾಲುವೆ ತಂದುಕೊಡುತ್ತದೆ.

1869ರಲ್ಲಿ ಕಾಲುವೆ ನಿರ್ಮಾಣ..!
ಇಡೀ ಜಗತ್ತು ನೆಪೋಲಿಯನ್‌ನ ನೆನಪಿನಲ್ಲಿ ಇಡುವುದು ಕೇವಲ ಆತನ ಯುದ್ಧಗಳಿಂದ ಅಲ್ಲ. ಬದಲಾಗಿ ಆತ ತಂದ ಕ್ರಾಂತಿಕಾರಿ ಬದಲಾವಣೆಗಳಿಂದ. ಯುರೋಪ್ ಹಾಗೂ ಆಫ್ರಿಕಾ ಅಭಿವೃದ್ಧಿಗೆ ನೆಪೋಲಿಯನ್ ನೀಡಿದ ಕೊಡುಗೆ ಮಹತ್ವದ್ದಾಗಿದೆ. 1799ರಲ್ಲಿ ಈಜಿಪ್ಟ್ ವಶಪಡಿಸಿಕೊಂಡ ನೆಪೋಲಿಯನ್ ಸೂಯೆಜ್ ಕಾಲುವೆಯ ಅಧ್ಯಯನಕ್ಕೆ ಆದೇಶ ನೀಡಿದ್ದ. ಆದರೆ ಅತಿಯಾದ ವೆಚ್ಚದ ಹಿನ್ನೆಲೆ ಯೋಜನೆ ಕೈಬಿಡಲಾಯಿತು. 1840ರಲ್ಲಿ 2ನೇ ಬಾರಿ ಸಮೀಕ್ಷೆ ನಡೆಸಲಾಯಿತು. ಮೊದಲಿಗೆ ಕೈಗೊಂಡಿದ್ದ ಸಮೀಕ್ಷೆ ತಪ್ಪಾಗಿರುವುದನ್ನ ಅರಿತುಕೊಂಡು, ಮೆಡಿಟೆರಿಯನ್-ಕೆಂಪು ಸಮುದ್ರದ ಮಧ್ಯೆ ಸಂಪರ್ಕ ಕಲ್ಪಿಸಲು ಸಾಧ್ಯ ಎಂಬ ತೀರ್ಮಾನಕ್ಕೆ ಬರಲಾಯಿತು. ಸೆಪ್ಟೆಂಬರ್ 25, 1859ರಲ್ಲಿ ಕಾಲುವೆ ನಿರ್ಮಾಣ ಆರಂಭವಾಗಿ-ನವೆಂಬರ್ 17, 1869ರಲ್ಲಿ ಕಾಲುವೆ ಕೆಲಸ ಪೂರ್ಣವಾಯಿತು. ಅಂದಿನಿಂದಲೂ ಈ ಕಾಲುವೆ ಅಸ್ತಿತ್ವದಲ್ಲಿ ಇದೆ.

‘ಸೂಯೆಜ್ ಕಾಲುವೆ’ಗಾಗಿ ಫೈಟಿಂಗ್..!
ಜಗತ್ತಿನಲ್ಲಿ ಜಾಗದ ಮೇಲಿನ ಹಿಡಿತಕ್ಕಾಗಿ ಎಷ್ಟೋ ಯುದ್ಧಗಳು ನಡೆದಿವೆ. ಆದರೆ ಒಂದು ಕಾಲುವೆ ವಿಚಾರಕ್ಕೆ ನಡೆದ ಹೊಡೆದಾಟವನ್ನು 'ಸೂಯೆಜ್ ಕಾಲುವೆ' ಮೊದಲ ಸ್ಥಾನದಲ್ಲಿ ಪ್ರತಿನಿಧಿಸುತ್ತದೆ. 20 ಮೇ 1882ರಲ್ಲಿ ಈಜಿಪ್ಟ್ ಮೇಲೆ ಬ್ರಿಟನ್ ದಾಳಿ ನಡೆಸಿದ್ದು ಸೇರಿದಂತೆ ಅನೇಕ ಯುದ್ಧಗಳನ್ನ ಈ ಕಾಲುವೆ ಕಂಡಿದೆ. ಹಲವು ಸಂದರ್ಭದಲ್ಲಿ ಈ ಕಾಲುವೆಯನ್ನ ಬಂದ್ ಮಾಡಲಾಗಿತ್ತು. ಈಜಿಪ್ಟ್ ಸರ್ಕಾರಕ್ಕೆ ಈಗಿನ ಪರಿಸ್ಥಿತಿಯಲ್ಲಿ ಈ ಕಾಲುವೆಯೇ ಆಧಾರವಾಗಿದ್ದು, ಲಕ್ಷಾಂತರ ಕೋಟಿ ಆದಾಯವನ್ನು ಇಲ್ಲಿಂದಲೇ ಗಳಿಸುತ್ತಿದೆ ಈಜಿಪ್ಟ್.












Click it and Unblock the Notifications