ಬಿಎಸ್ವೈಗೆ ಉನ್ನತ ಸ್ಥಾನಮಾನಕ್ಕೆ ಇದೇ 6 ಮಹತ್ವದ ಅಂಶ ಕಾರಣ?
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪಕ್ಷದ ಅತ್ಯುನ್ನತ ಕೇಂದ್ರೀಯ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಯಲ್ಲಿ ಸ್ಥಾನ ದಕ್ಕಿದೆ. ಈ ಸಂಬಂಧ, ಪಕ್ಷ ಅಧಿಕೃತ ಪ್ರಕಟಣೆಯನ್ನೂ ಹೊರಡಿಸಿದೆ. ಈ ಆಯ್ಕೆ ರಾಜ್ಯ ರಾಜಕೀಯಕ್ಕೆ ಹಲವು ಸಂದೇಶವನ್ನು ರವಾನಿಸಿದ್ದಂತೂ ಹೌದು.
Recommended Video
ಕೆಲವು ದಿನಗಳ ಹಿಂದೆ ಯಡಿಯೂರಪ್ಪನವರನ್ನು ಪ್ರತ್ಯೇಕವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆದು ಮಾತನಾಡಿಸಿದಾಗಲೇ, ಅಚ್ಚರಿಯ ನಿರ್ಧಾರವನ್ನು ಬಿಜೆಪಿ ಹೈಕಮಾಂಡ್ ತೆಗೆದುಕೊಳ್ಳಬಹುದು ಎನ್ನುವ ಸುಳಿವು ಇತ್ತು, ಅದೀಗ ನಿಜವಾಗಿದೆ.
ಯಡಿಯೂರಪ್ಪನವರ ಆಯ್ಕೆಯಾಗುತ್ತಿದ್ದಂತೆಯೇ ಪಕ್ಷದ ಹೆಚ್ಚಿನ ಮುಖಂಡರು, ಸಚಿವರು ನಾಮುಂದು, ತಾಮುಂದು ಎಂದು ಅವರ ನಿವಾಸಕ್ಕೆ ಹೂತುರಾಯಿಯೊಂದಿಗೆ ಹೋಗಿ ಅಭಿನಂದನೆ ಸಲ್ಲಿಸಿ ಬಂದಿದ್ದಾರೆ.
ಬಿಜೆಪಿ ಕಚೇರಿಗೆ ಭೇಟಿ ನೀಡಿದ ಬಿಎಸ್ವೈ, ಪಕ್ಷದ ಮಾತೃ ಸಂಘಟನೆ ಆರ್‌ಎಸ್‌ಎಸ್ ಕಚೇರಿಗೂ ಭೇಟಿ ನೀಡಿದ್ದಾರೆ. ಚುನಾವಣಾ ವರ್ಷವಾಗಿರುವುದರಿಂದ ಬಿಎಸ್ವೈ ನೇಮಕದ ಹಿಂದೆ, ವರಿಷ್ಠರ ಹಲವು ಲೆಕ್ಕಾಚಾರ ಇರಬಹುದು ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಕಣ್ಣೀರು ಹಾಕಿಕೊಂಡು ಸಿಎಂ ಸ್ಥಾನದಿಂದ ಕೆಳಗಿಳಿದಿದ್ದ ಯಡಿಯೂರಪ್ಪ
1. ಕಣ್ಣೀರು ಹಾಕಿಕೊಂಡು ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿದಿದ್ದರೂ, ಪಕ್ಷಕ್ಕಾಗಿ ತನ್ನ ನಿಯತ್ತನ್ನು ಮುಂದುವರಿಸಿಕೊಂಡು ಬಂದಿದ್ದರು. ರಾಜ್ಯ ಪ್ರವಾಸಕ್ಕೂ ಹೊರಟಿದ್ದ ಬಿಎಸ್ವೈಗೆ ವರಿಷ್ಠರ ಗ್ರೀನ್ ಸಿಗ್ನಲ್ ಸಿಗಲಿಲ್ಲ ಎನ್ನುವುದು ಆಮೇಲಿನ ಮಾತು. ಸಿಎಂ ಹುದ್ದೆ ತಪ್ಪಿದರೂ, ಪಕ್ಷ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರುವವರಿಗೆ ಉತ್ತಮ ಸ್ಥಾನಮಾನ ಖಚಿತ ಎನ್ನುವ ಸಂದೇಶವನ್ನು ವರಿಷ್ಠರು ರವಾನಿಸಿದಂತಿದೆ.

ಲಿಂಗಾಯಿತ ಮತಬ್ಯಾಂಕ್ ಕೈತಪ್ಪುತ್ತದೋ ಎನ್ನುವ ಭಯ
2. ಯಡಿಯೂರಪ್ಪನವರು ಸಿಎಂ ಸ್ಥಾನದಿಂದ ಕೆಳಗಿಳಿದ ನಂತರ ವರಿಷ್ಠರಿಗೆ ಇದ್ದ ಬಹುದೊಡ್ಡ ಚಿಂತೆಯೆಂದರೆ ಎಲ್ಲಿ ಲಿಂಗಾಯಿತ ಮತಬ್ಯಾಂಕ್ ಕೈತಪ್ಪುತ್ತದೋ ಎನ್ನುವುದು. ಯಾಕೆಂದರೆ, ಬಿಜೆಪಿಗೆ ನಿರ್ಣಾಯಕವಾಗಿರುವುದು ಈ ಸಮುದಾಯದ ವೋಟುಗಳು. ಇದನ್ನೇ ಮುಂದಾಲೋಚನೆಯನ್ನಾಗಿ ಇಟ್ಟುಕೊಂಡು, ಸದ್ಯದ ಮಟ್ಟಿಗೆ ಸಮುದಾಯದ ಪ್ರಶ್ನಾತೀತ ನಾಯಕನಿಗೆ ಉನ್ನತ ಸ್ಥಾನವನ್ನು ನೀಡುವ ಮೂಲಕ, ಲಿಂಗಾಯತ/ವೀರಶೈವ ಮತವನ್ನು ತಮ್ಮಲ್ಲೆ ಉಳಿಸಿಕೊಳ್ಳುವುದು ವರಿಷ್ಠರ ಲೆಕ್ಕಾಚಾರವಾಗಿರಬಹುದು.

ಯಡಿಯೂರಪ್ಪ ಕಡೆಗಣಿಸಿಲ್ಲ ಎನ್ನುವ ಸಂದೇಶ
3 ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದ ಯಡಿಯೂರಪ್ಪನವರನ್ನು ಇತ್ತೀಚಿನ ದಿನಗಳಲ್ಲಿ ಪಕ್ಷ ಕಡೆಗಣಿಸುತ್ತಿದೆ ಎನ್ನುವುದು ಬಹುದೊಡ್ಡ ಚರ್ಚೆಯ ವಿಷಯವಾಗಿತ್ತು. ವಿರೋಧ ಪಕ್ಷಗಳಿಗೂ ಇದು ಆಹಾರವಾಗಿತ್ತು. ಇದಕ್ಕೆಲ್ಲಾ ಫುಲ್ ಸ್ಟಾಪ್ ಇಡುವುದಕ್ಕೆ ಬಿಎಸ್ವೈ ನೇಮಕ ಕಾರಣವಾಗಿರಬಹುದು.

ರಾಜ್ಯದಲ್ಲಿನ ಬಿಜೆಪಿಯ ಗ್ರೌಂಡ್ ರಿಯಾಲಿಟಿ
4. ಚುನಾವಣಾ ವರ್ಷದಲ್ಲಿ ಕಾರ್ಯಕರ್ತರು/ಮುಖಂಡರನ್ನು ಒಗ್ಗೂಡಿಸಿಕೊಂಡು ಮುನ್ನಡೆಸುವ ನಾಯಕರು ರಾಜ್ಯದಲ್ಲಿ ಯಾರು? ದುರ್ಬಿನ್ ಹಾಕಿ ಹುಡುಕಿದರೂ ಯಡಿಯೂರಪ್ಪ ಹೊರತಾಗಿ ಇನ್ನೊಬ್ಬರು ಸಿಗುವುದು ಕಷ್ಟ. ರಾಜ್ಯದಲ್ಲಿನ ಬಿಜೆಪಿಯ ಗ್ರೌಂಡ್ ರಿಯಾಲಿಟಿಯನ್ನು ಅರಿತೇ ವರಿಷ್ಠರು ಬಿಎಸೈಗೆ ಉನ್ನತ ಸ್ಥಾನ ನೀಡಿರಬಹುದು.

ಕಾಂಗ್ರೆಸ್ಸಿನ ಓಟಕ್ಕೆ ಬ್ರೇಕ್ ಹಾಕುವ ನಾಯಕ
5. ಇದೆಲ್ಲಾ ಅಂಶಗಳು ಒಂದು ಕಡೆಯಾದರೆ, ಪ್ರಮುಖವಾದ ಅಂಶವೆಂದರೆ ಕಾಂಗ್ರೆಸ್ಸಿನ ಓಟಕ್ಕೆ ಬ್ರೇಕ್ ಹಾಕುವ ನಾಯಕನೊಬ್ಬನ ತುರ್ತು ಅವಶ್ಯಕತೆ ಬಿಜೆಪಿಗಿದೆ. ಸಿದ್ದರಾಮೋತ್ಸವ, ಸ್ವಾತಂತ್ರ್ಯ ದಿನಾಚರಣೆ ರ‍್ಯಾಲಿ ಸೇರಿದಂತೆ ಕಾಂಗ್ರೆಸ್ ಚುನಾವಣೆ ಎದುರಿಸಲು ದಾಪುಗಾಲು ಹಾಕುತ್ತಿದೆ. ಇದಕ್ಕೆ ಕೌಂಟರ್ ಕೊಡಲು ಬಿಎಸ್ವೈ ನೇಮಕವಾಗಿರಬಹುದು.

ಬಿಎಸ್ವೈಗೆ ಉನ್ನತ ಸ್ಥಾನಮಾನಕ್ಕೆ ಇದೇ 6 ಮಹತ್ವದ ಅಂಶ ಕಾರಣ
6. ಲಾಸ್ಟ್ ಬಟ್ ನಾಟ್ ಲೀಸ್ಟ್, ಆಡಳಿತ ಸರಕಾರ ಇದ್ದರೂ ಯಡಿಯೂರಪ್ಪ ಇಲ್ಲದೆ ಚುನಾವಣೆ ಎದುರಿಸುವುದು ಕಷ್ಟ ಎಂಬ ಸಮೀಕ್ಷಾ ವರದಿ. ಚುನಾವಣಾ ರಾಜಕಾರಣದಿಂದ ಯಡಿಯೂರಪ್ಪ ಹಿಂದೆ ಸರಿದಿದ್ದರೂ ಅವರ ಮುಂದಾಳತ್ವದಲ್ಲೇ ಚುನಾವಣೆ ಎದುರಿಸಿದರೆ ಸುಮಾರು 40-50 ಸ್ಥಾನಗಳನ್ನು ಖಚಿತವಾಗಿ ಭದ್ರಪಡಿಸಿಕೊಳ್ಳಬಹುದು ಎನ್ನುವ ಮುಂದಾಲೋಚನೆಯೇ ಯಡಿಯೂರಪ್ಪನವರು ಸಂಸದೀಯ ಮಂಡಳಿಗೆ ಆಯ್ಕೆಯ ಹಿನ್ನಲೆಯಾಗಿರಬಹುದು ಎಂದು ವ್ಯಾಖ್ಯಾನಿಸಲಾಗುತ್ತಿದೆ.












Click it and Unblock the Notifications