₹1 ಲಕ್ಷ ಸಂಬಳ ಬಂದರೂ ತಿಂಗಳ ಆರಂಭದಲ್ಲೇ ಅಕೌಂಟ್ ಖಾಲಿ! ಖರ್ಚಿನ ಬಗ್ಗೆ ವ್ಯಕ್ತಿಯ ಪೋಸ್ಟ್ ವೈರಲ್
ಕೆಲಸಕ್ಕೆ ಸೇರುವ ಪ್ರತಿಯೊಬ್ಬನಿಗೂ ತನ್ನ ಸಂಬಳದ ಬಗ್ಗೆ ಬಹಳ ಕನಸು ಇರುತ್ತದೆ. ಪೇಪರ್ ಮೇಲೆ ದೊಡ್ಡ ಮೊತ್ತವನ್ನು ನೋಡುವಾಗ ಖಂಡಿತವಾಗಿಯೂ ಖುಷಿ ಆಗುತ್ತದೆ. ಆದರೆ, ಬಂದ ಆದಾಯ ಹಾಗೆಯೇ ಉಳಿಯುತ್ತಾ, ಖರ್ಚೂ ಕೂಡಾ ಜೊತೆಯಲ್ಲಿಯೇ ಬರುತ್ತದೆ. ಇನ್ನು ಊರು ಬಿಟ್ಟು ಹೋಗಿ ದುಡಿಯುವುದು ಅಂದರೆ ಬಾಡಿಗೆ ಬೇರೆ ಕಟ್ಟಬೇಕು. ಎಲ್ಲಾ ಖರ್ಚು ಹೋಗಿ ಕೊನೆಗೆ ಅಕೌಂಟ್‌ನಲ್ಲಿ ಉಳಿಯುವ ದುಡ್ಡು ಎಷ್ಟು? ಅದು ನಿಮ್ಮ ಡ್ರೀಂ ನಂಬರ್ ಆಗಿರುವುದಕ್ಕಂತೂ ಸಾಧ್ಯವೇ ಇಲ್ಲ.
ಇಲ್ಲೊಬ್ಬ ವ್ಯಕ್ತಿ ಕೂಡಾ ಇದೇ ಸಮಸ್ಯೆ ಎದುರಿಸುತ್ತಾ ಇದ್ದಾರೆ. ಇವರಿಗೆ ಈಗ ಸಂಬಳದ ದಿನ ಹತ್ತಿರ ಬಂದಾಗ ಖುಷಿಯೇ ಆಗುವುದಿಲ್ಲವಂತೆ, ಯಾಕಂದ್ರೆ ಹಣ ಯಾವಾಗ ಅಕೌಂಟ್‌ಗೆ ಬರುತ್ತದೆ? ಯಾವಾಗ ಖಾಲಿಯಾಗುತ್ತದೆ ಎನ್ನುವುದೇ ಗೊತ್ತಾಗುವುದಿಲ್ಲವಂತೆ.

ಸಂಬಳದ ಜೊತೆ ಬರುವುದು ಖರ್ಚಿನ ಲಿಸ್ಟ್
25 ವರ್ಷದ ಈ ವ್ಯಕ್ತಿಯ ಪ್ರಕಾರ ಇವರಿಗೆ ಇರುವ ಸಂಬಳ 1 ಲಕ್ಷ ರೂಪಾಯಿ. ಸಂಬಳ ಆಗ್ತಾ ಇದ್ದ ಹಾಗೆ ತಿಂಗಳ ಖರ್ಚಿನ ಲಿಸ್ಟ್ ಕೂಡಾ ಇವರ ಕಣ್ಣ ಮುಂದೆ ಬಂದು ಬಿಡುತ್ತದೆ. ರೆಡ್ಡಿಟ್‌ನಲ್ಲಿ ಅವರು ತನ್ನ ಈ ಸಮಸ್ಯೆಯ ಬಗ್ಗೆ ಹೇಳಿಕೊಂಡು ಪೋಸ್ಟ್ ಶೇರ್ ಮಾಡಿದ್ದಾರೆ. ಇದರಲ್ಲಿ ಅವರ ಖರ್ಚು ವೆಚ್ಚದ ಬಗ್ಗೆ ವಿವರವಾಗಿ ಹೇಳಿದ್ದಾರೆ.
ಇವರ ಪೋಸ್ಟ್ ಪ್ರಕಾರ ಪ್ರತಿ ತಿಂಗಳು 25,000 ಕಾರು EMI, 25,000 ಮನೆ ಬಾಡಿಗೆ 6,000 ಇನ್ಶುರೆನ್ಸ್ ಪ್ರೀಮಿಯಂ ಕಟ್ಟಬೇಕಾಗುತ್ತದೆ. ಅಂದರೆ ಸಂಬಳ ಬಂದು ಮೊದಲ ಐದು ದಿನದೊಳಗೆ 56% ಹಣ ಖಾಲಿ.
ಆಹಾರ ಮತ್ತು ಪೆಟ್ರೋಲ್ ಖರ್ಚೂ ಸೇರಿದರೆ ?
ದೊಡ್ಡ ಮೊತ್ತದ ಇಎಂಐ ಮತ್ತು ಬಾಡಿಗೆ ಕಟ್ಟಿದರೆ ಸಾಕಾ? ಮುಂದಿನ ಖರ್ಚಿಗೂ ದುಡ್ಡು ಬೇಕಲ್ಲ. ಆಹಾರ ಪದಾರ್ಥಕ್ಕಾಗಿ ಸುಮಾರು 10,000 ರೂಪಾಯಿ, ಪೆಟ್ರೋಲ್‌ಗೆ 5,000 ರೂ. ಯುಟಿಲಿಟಿ ಬಿಲ್ ಕನಿಷ್ಠ 3,000 ರೂ. ಎತ್ತಿಡಬೇಕು. ಈ ಎಲ್ಲಾ ಖರ್ಚು ಕಳೆದ ಮೇಲೆ ತಿಂಗಳ ಕೊನೆಯಲ್ಲಿ ಅಕೌಂಟ್‌ನಲ್ಲಿ ಉಳಿಯುವುದು 20,000 ರೂ. ಹೀಗೆ ಆರು ತಿಂಗಳಲ್ಲಿ, ಅವರ ಸೇವಿಂಗ್ಸ್ ಸುಮಾರು 1.20 ಲಕ್ಷ ರೂ. ಇಷ್ಟು ಹಣ ಉಳಿಸಿದ್ದು ಸರಿ. ಆದರೆ ತಾನು ಮಾಡುವ ಕೆಲಸಕ್ಕೆ ಈ ಉಳಿತಾಯ ಏನೂ ಅಲ್ಲ ಅನ್ನುವುದು ಅವರ ಯೋಚನೆ.
ಇಷ್ಟೆಲ್ಲಾ ದುಡಿದರೂ ಆಗುತ್ತಿರೋ ಸೇವಿಂಗ್ಸ್ ?
ರೆಡ್ಡಿಟ್ ಪೋಸ್ಟ್‌ನಲ್ಲಿ ಇವರು ಹೇಳುವ ಪ್ರಕಾರ, ದಿನಕ್ಕೆ ಸುಮಾರು 10 ಗಂಟೆ ಕೆಲಸ ಮಾಡ್ತಾರೆ. ಕೆಲವೊಮ್ಮೆ ವೀಕೆಂಡ್‌ನಲ್ಲಿಯೂ ಕೆಲಸವೇ. ರಜೆ ಬೇಕು ಅಂದರೂ ಸಿಗಲ್ಲ. ರಜೆ ಇಲ್ಲದೆ, ರೆಸ್ಟ್ ಇಲ್ಲದೆ ದುಡಿದು ಕೂಡಾ ಉಳಿಸುವುದು ಇಷ್ಟೇ ಹಣ ಎನ್ನುವುದು ಈ ವ್ಯಕ್ತಿ ಬೇಸರ. ಇಪ್ಪತ್ತು ಸಾವಿರ ಉಳಿಸುವುದಕ್ಕೆ ಇಷ್ಟು ಕಷ್ಟಪಡಬೇಕಾ? ಈ ಕೆಲಸ ಮಾಡಬೇಕಾ ಅನ್ನೋ ಯೋಚನೆ ಕೂಡಾ ಇವರ ಮನಸ್ಸಿಗೆ ಬರುವುದಿದೆಯಂತೆ. ಆದರೆ ಏನು ಮಾಡೋದು ಕೆಲಸ ಬಿಟ್ಟರೆ ಕಾರು ಕಳೆದುಕೊಳ್ಳಬೇಕಾಗುತ್ತದೆ. ಮನೆ ಓನರ್ ಮನೆಯಿಂದ ಹೊರಗೆ ಹಾಕ್ತಾರೆ. ಜೊತೆಗೆ ತಂದೆ 8 ಲಕ್ಷ ರೂಪಾಯಿ ಸಾಲ ಮಾಡಿದ್ದಾರೆ. ಅದನ್ನೂ ತೀರಿಸಬೇಕು.ಆದರೆ ಈಗ ಮಾಡುವ ಈ ಸೇವಿಂಗ್ಸ್ ಇಟ್ಟುಕೊಂಡು ಸಾಲ ಯಾವಾಗ ತೀರಿಸುವುದು ಎನ್ನುವುದೇ ಇವರ ಯೋಚನೆ.
ಬೇರೆ ಬೇರೆ ರೀತಿ ಕಾಮೆಂಟ್
ಇವರ ಈ ಪೋಸ್ಟ್ ನೋಡಿ ಎದ್ದಿರುವ ಮೊದಲ ಪ್ರಶ್ನೆ ಎಂದರೆ ಕಾರಿಗೆ ಕಟ್ಟುವ ಇಎಂಐ. 25,000 ಕಾರು ಇಎಂಐ ಪ್ರಾಕ್ಟಿಕಲ್ ಆಗಿ ಕಾಣುವುದಿಲ್ಲ ಎನ್ನುವುದೇ ಬಹುತೇಕರ ಅಭಿಪ್ರಾಯ. ಸಂಬಳ ಇರುವುದು ಒಂದು ಲಕ್ಷ. ಅಂದರೆ ಸಂಬಳದ ಕಾಲು ಭಾಗ ಪೂರ್ತಿ ಕಾರು ಲೋನ್ ಹೋಗುತ್ತಿದೆ. ಅಸಲಿಗೆ ಈ ಲೆಕ್ಕಾಚಾರವೇ ಎಲ್ಲವನ್ನೂ ಬುಡ ಮೇಲು ಮಾಡುತ್ತಿರುವುದು.
ಕಾರು ಇಎಂಐ ಕಡಿಮೆ ಇದ್ದಿದ್ದರೆ ಹೆಚ್ಚು ಉಳಿತಾಯ ಸಾಧ್ಯವಿತ್ತು ಎನ್ನುವುದನ್ನು ಒಬ್ಬರು ಹೇಳಿದ್ದಾರೆ. ಆಗ ಸೇವಿಂಗ್ಸ್ ಜಾಸ್ತಿ ಆಗುತ್ತಿತ್ತು, ಸಾಲ ತೀರಿಸುವುದು ಕೂಡಾ ಸುಲಭವಾಗ್ತಾ ಇತ್ತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೆಲವರು ಪಾಸಿಟಿವ್ ಆಗಿರುವಂತೆ ಸಲಹೆ ಕೊಟ್ಟಿದ್ದಾರೆ. ನಿಮಗಿನ್ನೂ ಚಿಕ್ಕ ವಯಸ್ಸು. ಈಗಲೇ ಒಂದು ಲಕ್ಷ ಸಂಬಳವಿದೆ. ಕ್ರಮೇಣ ಅದು ಜಾಸ್ತಿ ಆಗುತ್ತಾ ಹೋಗುತ್ತದೆ. ಒಳ್ಳೆಯ ಕೆಲಸ ಸಿಕ್ಕಿದರೆ ಸಂಬಳವೂ ಹೆಚ್ಚಾಗುತ್ತದೆ. ಉಳಿತಾಯ ಕೂಡಾ ಜಾಸ್ತಿ ಮಾಡಬಹುದು. ವರ್ಷಕ್ಕೆ 200,000 ಉಳಿಸುತ್ತಾ ಬಂದರೆ ಮುಂದಿನ ಐದು ವರ್ಷಗಳಲ್ಲಿ ತಂದೆಯ ಸಾಲವನ್ನು ಸಂಫೂರ್ಣವಾಗಿ ತೀರಿಸಬಹುದು ಎಂದು ಧೈರ್ಯ ತುಂಬಿದ್ದಾರೆ.


Click it and Unblock the Notifications
