S. R. Mahesh Profile: ಹ್ಯಾಟ್ರಿಕ್ ಗೆಲುವಿನ ಸರದಾರ ಶಾಸಕ ಸಾ.ರಾ ಮಹೇಶ್ ವ್ಯಕ್ತಿ ಪರಿಚಯ
ಮೂರು ಬಾರಿ ಕೃಷ್ಣರಾಜ ನಗರ ಒಂದೇ ಕ್ಷೇತ್ರದಲ್ಲಿ ಶಾಸಕರಾಗಿ ಜನ ಮನ್ನಣೆಗಳಿಸಿರುವ ಸಾ.ರಾ ಮಹೇಶ್, ಈ ಬಾರಿಯೂ ವಿಜಯದ ಪತಾಕೆ ಹಾರಿಸುವ ಭರವಸೆಯಲ್ಲಿದ್ದಾರೆ. ಜೆಡಿಎಸ್ ಶಾಸಕ ಸಾ.ರಾ ಮಹೇಶ್ ವ್ಯಕ್ತಿ ಪರಿಚಯ ಇಲ್ಲಿದೆ.
ಬೆಂಗಳೂರು, ಮಾರ್ಚ್ 1: ಮೈಸೂರು ಭಾಗದಲ್ಲಿ ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್ ಇಂದಿಗೂ ತನ್ನ ಪ್ರಬಲ್ಯತೆಯನ್ನು ಉಳಿಸಿಕೊಂಡಿದೆ. ಇದಕ್ಕೆ ಪ್ರಮುಖರಾದ ನಾಯಕರಲ್ಲಿ ಸಾ.ರಾ ಮಹೇಶ್ ಕೂಡ ಒಬ್ಬರು. ಮೂರು ಬಾರಿ ಕೃಷ್ಣರಾಜ ನಗರ ಒಂದೇ ಕ್ಷೇತ್ರದಲ್ಲಿ ಶಾಸಕರಾಗಿ ಜನ ಮನ್ನಣೆಗಳಿಸಿರುವ ಇವರು, ಈ ಬಾರಿಯೂ ವಿಜಯದ ಪತಾಕೆ ಹಾರಿಸುವ ಭರವಸೆಯಲ್ಲಿದ್ದಾರೆ.
ಸಾಲಿಗ್ರಾಮ ರಾಮೇಗೌಡ ಮಹೇಶ್ ಎಂಬ ಹೆಸರಿಸಿನ ಇವರು ಸಾ.ರಾ ಮಹೇಶ್ ಎಂದೇ ಚಿರಪರಿಚಿತರು.ಎಸ್.ಆರ್ ರಾಮೇಗೌಡ ಹಾಗೂ ಕಾಂತಮ್ಮ ದಂಪತಿಯ ಪುತ್ರನಾಗಿ ಅಕ್ಟೋಬರ್ 8, 1966ರಲ್ಲಿ ಜನಿಸಿದರು. ಪದವಿ ಶಿಕ್ಷಣ ಪಡೆದಿರುವ ಇರುವ ಅನಿತಾ ಮಹೇಶ್ ಇವರನ್ನು ವಿವಾಹವಾದರು. ಮೊದಲಿನಿಂದಲೂ ಹೋರಾಟ ಗುಣ ಬೆಳೆಸಿಕೊಂಡಿದ್ದ ಇವರು ರಾಜಕೀಯದತ್ತ ಒಲವು ತೋರಿದ್ದರು.

ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಿಸಿಕೊಂಡಿದ್ದ ಸಾ.ರಾ ಮಹೇಶ್ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಆಪ್ತರಾಗಿದ್ದರು. ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಅವರನ್ನು ಜೆಡಿಎಸ್ ಪಕ್ಷದ ವರಿಷ್ಠರು 2008ರ ಸಾರ್ವತ್ರಿಕ ಚುನಾವಣೆಯಲ್ಲಿ ಕೃಷ್ಣರಾಜ ನಗರದ ಜೆಡಿಎಸ್ ಅಭ್ಯರ್ಥಿಯಾಗಿ ಘೋಷಿಸಿದರು. ಕಾಂಗ್ರೆಸ್‌ನ ಎಚ್. ವಿಶ್ವನಾಥ್ ಹಾಗೂ ಜನತಾ ಪರಿವಾರದ ಎಸ್.ನಂಜಪ್ಪ ನಡುವೆ ಜಿದ್ದಾಜಿದ್ದಿಯ ಪೈಪೋಟಿಯ ಕಣವಾಗಿದ್ದ ಕೃಷ್ಣರಾಜ ನಗರದಲ್ಲಿ ಸಾ.ರಾ ಮಹೇಶ್ ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು.
ತಮ್ಮ ಮೊದಲ ಅಧಿಕಾರವಧಿಯಲ್ಲಿ ಜನಪರ ಕೆಲಸಗಳನ್ನು ಮಾಡುವ ಕೃಷ್ಣರಾಜ ನಗರದ ಮತದಾರರ ಮೆಚ್ಚುಗೆ ಗಳಿಸಿದ್ದ ಸಾರಾ ಮಹೇಶ್ 2013ರ ವಿಧಾನಸಭಾ ಚುನಾವಣೆಯಲ್ಲಿ ಕೆ. ಆರ್. ನಗರ ಕ್ಷೇತ್ರದಿಂದ 81,457 ಮತಗಳನ್ನು ಪಡೆಯುವ ಮೂಲಕ 2ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಐದು ವರ್ಷ ಯಶಸ್ವಿಯಾಗಿ ಮುಗಿಸಿದ ಸಾ.ರಾ ಮಹೇಶ್ 2018ರ ಚುನಾವಣೆಯಲ್ಲಿ ಮೂರನೇ ಬಾರಿ ಸ್ಫರ್ಧೆಗಳಿದರು.
2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಿ.ರವಿಶಂಕರ್, ಸಾರಾ ಮಹೇಶ್ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕಲು ಭರ್ಜರಿ ಪೈಪೋಟಿ ನೀಡಿದ್ದರು. ಆದರೆ ಸಾರಾ ಮಹೇಶ್ ಕೃಷ್ಣರಾಜನಗರ ಕ್ಷೇತ್ರದಿಂದ 85,011 ಮತಗಳನ್ನು ಪಡೆದು ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾದರು. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಂಪುಟ ಸೇರಿ ಪ್ರವಾಸೋದ್ಯಮ ಖಾತೆ ಹೊಣೆ ಪಡೆದರು. ಬಳಿಕ ಮೈತ್ರಿ ಸರ್ಕಾರ ಪಥನದ ಬಳಿಕ ಶಾಸಕರಾಗಿ ತಮ್ಮ ಕಾರ್ಯದಲ್ಲಿ ನಿರತರಾಗಿದ್ದಾರೆ.
ಜಿದ್ದಾಜಿದ್ದಿಯ ರಾಜಕೀಯಕ್ಕೆ ಹೆಸರುವಾಸಿಯಾಗಿರುವ ಕೃಷ್ಣರಾಜನಗರ ಕ್ಷೇತ್ರದಲ್ಲಿ ಈ ಬಾರಿಯೂ ಚುನಾವಣೆಯ ಕಾವು ಹೆಚ್ಚಾಗಿದೆ. ಆರು ತಿಂಗಳ ಹಿಂದೆಯೇ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರಚಾರ ಆರಂಭಿಸಿದ್ದು, ಜೆಡಿಎಸ್ ಅಭ್ಯರ್ಥಿ ಸಾರಾ ಮಹೇಶ್ ಅವರನ್ನು ಈ ಬಾರಿ ಶತಾಯಗತಾಯ ಸೋಲಿಸಬೇಕು ಎನ್ನುವ ಜಿದ್ದಿಗೆ ಬಿದ್ದಿದ್ದಾರೆ.
ರೋಹಿಣಿ ಸಿಂಧೂರಿ ವಿರುದ್ಧ ಗುಡುಗಿದ್ದ ಸಾರಾ ಮಹೇಶ್
ಶಾಸಕರಾದ ಸಾರಾ ಮಹೇಶ್ ಮೈಸೂರು ಜಿಲ್ಲೆಯಲ್ಲಿನ ನಡೆದ ಅಧಿಕಾರಿಗಳ ಅಕ್ರಮದ ಬಗ್ಗೆ ಧ್ವನಿ ಎತ್ತಿದ್ದರು. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ರೋಹಿಣಿ ಸಿಂಧೂರಿ ವಿರುದ್ದ ಸಾಲು ಸಾಲು ಆರೋಪ ಮಾಡಿ ತನಿಖೆಗೆ ಆಗ್ರಹಿಸಿ ಪಟ್ಟು ಹಿಡಿದಿದ್ದರು. ಈ ಸಂಘರ್ಷ ತಾರಕ್ಕೇರಿದ್ದು, ರೋಹಿಣಿ ಸಿಂಧೂರಿಅವರ ಮೇಲೆ ಸಾರಾ ಮಹೇಶ್ ಮಾನನಷ್ಟ ಮೊಕದ್ದಮೆಯನ್ನೂ ದಾಖಲಿಸಿದ್ದರು. ಈ ಜಟಾಪಟಿ ರಾಜ್ಯಾದ್ಯಂತ ಸುದ್ದಿಯಾಗಿತ್ತು.ಇನ್ನು ಇತ್ತೀಚಿಗಷ್ಟೇ ಇವರಿಬ್ಬರ ನಡುವೆ ಸಂಧಾನ ನಡೆದಿದೆ ಎನ್ನಲಾಗಿದೆ.
ಇನ್ನು ಸಾ.ರಾ ಮಹೇಶ್ ಅವರು ಒಬ್ಬ ಪ್ರಾಣಿ ಪ್ರೇಮಿಯಾಗಿದ್ದು, ಪ್ರಾಣಿಗಳ ಮೇಲೆ ಅವರಿಗೆ ಅಪಾರವಾದ ಪ್ರೀತಿ ಇದೆ. ತಮ್ಮ ಮನೆಗೆ ಬಂದು ಸೇರಿಕೊಂಡಿದ್ದ ಕೋತಿಗೆ ಚಿಂಟು ಎಂದು ಹೆಸರಿಟ್ಟು ಅತೀ ಪ್ರೀತಿಯಿಂದ ಸಾಕಿದ್ದರು. ಚಿಂಟು ಸಾವನ್ನಪ್ಪಿದಾಗ ಅದರ ನೆನಪಿಗಾಗಿರ್ಮ ತಮ್ಮ ಫಾರ್ಮ್ ಹೌಸ್‌ನಲ್ಲಿ ದೇವಾಲಯ ನಿರ್ಮಾಣ ಮಾಡಿದ್ದಾರೆ.
ಸಾ.ರಾ ಮಹೇಶ್ ಅವರ ಆಸ್ತಿ ವಿವರ
ಸಾ.ರಾ ಮಹೇಶ್‌ಅವರ ಒಟ್ಟು ಆಸ್ತಿ 29.55 ಕೋಟಿ ರೂಪಾಯಿ, ಸಾಲ 14.27 ಕೋಟಿ ರೂಪಾಯಿ ಎನ್ನಲಾಗಿದೆ. ಇನ್ನು ಸಾರಾ ಮಹೇಶ್ https://www.facebook.com/saramahesh9448073350/ ಫೇಸ್‌ಬುಕ್ ಖಾತೆ ಮೂಲಕ ಸದಾ ಜನರೊಂದಿಗೆ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.












Click it and Unblock the Notifications