
ಕಾಫಿನಾಡಲ್ಲಿದೆ ಅಪರೂಪದ ಕನ್ನಡ ದೇವಾಲಯ, ಇಲ್ಲಿ ಎಲ್ಲವೂ ಕನ್ನಡಮಯ
ಚಿಕ್ಕಮಗಳೂರು, ನವೆಂಬರ್ 1 : ಕನ್ನಡದ ಉಳಿವಿಗಾಗಿ ಕರ್ನಾಟಕದಲ್ಲೇ ಹೋರಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕನ್ನಡದ ಅಸ್ತಿತ್ವಕ್ಕಾಗಿ ಕನ್ನಡಿಗರೇ ಹೋರಾಟ, ಚಳುವಳಿ ನಡೆಸಬೇಕಾದ ಕಾಲ ಬಂದಿರುವುದು ನಿಜಕ್ಕೂ ದುರಾದೃಷ್ಟ. ಇಂತಹಾ ಕಾಲಘಟ್ಟದಲ್ಲಿ ಇಲ್ಲೊಂದು ದೇವಾಲಯದ ಮಾತ್ರ ಕನ್ನಡವನ್ನ ಉಳಿಸಿ, ಬೆಳೆಸುದರ ಜೊತೆ ಕನ್ನಡದ ಮಹತ್ವವನ್ನ ವಿಶ್ವವ್ಯಾಪ್ತಿ ಸಾರುವ ಕೆಲಸದಲ್ಲಿ ನಿರತವಾಗಿದೆ. ಇಲ್ಲಿ ಸಂಸ್ಕರಕ್ಕೂ ಅವಕಾಶವಿಲ್ಲ. ಮದುವೆ, ಉಪನಯನ ಸೇರಿದಂತೆ ಎಲ್ಲಾ ಧಾರ್ಮಿಕ ಪೂಜೆಯೂ ಕನ್ನಡದಲ್ಲೇ ನಡೆಯುತ್ತಿರುವುದು ನಿಜಕ್ಕೂ ಕನ್ನಡಿಗರು ಹೆಮ್ಮೆ ಪಡುವ ಸಂಗತಿಯಾಗಿದೆ.
ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಕಾಫಿನಾಡು ಚಿಕ್ಕಮಗಳೂರು ತನ್ನದೇ ಆದ ಚಾಪು ಮೂಡಿಸಿದೆ. ಇಲ್ಲಿಂದ ಐದಾರು ಕಿ.ಮೀ. ದೂರದ ಶ್ರೀ ಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ಕೋದಂಡರಾಮನಿಗೆ ಕನ್ನಡದಲ್ಲೇ ಪೂಜೆ-ಕೈಂಕರ್ಯಗಳನ್ನ ನೆರವೇರಿಸೋ ಮೂಲಕ ಕಾಫಿನಾಡು ತನ್ನದೇ ಆದ ಖ್ಯಾತಿ ಗಳಿಸಿದೆ.
ಮೈಸೂರು; ಸ್ಥಳೀಯರಂತೆ ಕನ್ನಡ ಮಾತನಾಡುವ ಬೆಲ್ಜಿಯಂ ಪ್ರಜೆ ಹೆಂದ್ರಿಕ್ ಹರದಮನ್
ದೇವಾಲಯಗಳಲ್ಲಿ ಸಂಸ್ಕ್ರತದಲ್ಲಿ ಮಂತ್ರ ಪಠಣ ಮಾಡುವುದು ಸಾಮಾನ್ಯ. ಆದರೆ ಈ ದೇವಾಲಯದ ಅರ್ಚಕರಾಗಿರುವ ಹಿರೇಮಗಳೂರು ಕಣ್ಣನ್ ಹಾಗೂ ಇತರರು, ಕನ್ನಡದಲ್ಲೇ ಪೂಜೆ ಮಾಡುವುದನ್ನ ರೂಢಿಸಿಕೊಂಡಿದ್ದಾರೆ. ಹಿರೇಮಗಳೂರಿನ ಈ ದೇವಾಲಯದಲ್ಲಿ ನಿತ್ಯವೂ ಕನ್ನಡದಲ್ಲೇ ಮಂತ್ರ ಪಠಣ, ಹೋಮ, ಹವನ ಕೂಡ ಕನ್ನಡದಲ್ಲೇ ನಡೆಯುತ್ತದೆ. ಮದುವೆಯನ್ನು ಕನ್ನಡದಲ್ಲೇ ಮಾಡುವುದು ಇಲ್ಲಿನ ವಿಶೇಷ.

ರಾರಾಜಿಸುತ್ತಿರುವ ಕನ್ನಡ ಸಂದೇಶ
ದೇವಾಲಯದೊಳಗಿನ ಎಲ್ಲಾ ಗೋಡೆಗಳ ಮೇಲೂ ಕನ್ನಡಮಯ. ದೇವಾಲಯದ ವಠಾರವೆಲ್ಲವೂ ಸಂಪೂರ್ಣ ಕನ್ನಡಾಂಭೆಯ ಮಡಿಲು. ದೇವಾಲಯಕ್ಕೆ ಬರೋ ಭಕ್ತರಿಗೆ ಭಕ್ತಿಯ ಜೊತೆ ಕನ್ನಡ ಹಾಗೂ ಜೀವನದ ಪಾಠಗಳ ಸಂದೇಶವುಳ್ಳ ಬರಹಗಳು, ನುಡಿ ಮುತ್ತುಗಳು ದೇವಾಲಯದ ಗೋಡೆಗಳ ಮೇಲೆಲ್ಲಾ ರಾರಾಜಿಸುತ್ತಿವೆ.

ಅಪ್ಪನ ಹಾದಿಯಲ್ಲೆ ಸಾಗುತ್ತಿರುವ ಕಣ್ಣನ್
ನಾಲ್ಕು ದಶಕಗಳ ಹಿಂದೆ ಚಿಕ್ಕಮಗಳೂರಿನ ಹಿರೇಮಗಳೂರಿಗೆ ಆಗಮಿಸಿದ ಕಣ್ಣನ್ ತಂದೆ ಸಚ್ಚಿದಾನಂದರವರು ಕನ್ನಡ ನೆಲದಲ್ಲಿ ಕನ್ನಡವೇ ಕಣ್ಮರೆಯಾಗುತ್ತಿರುವ ಕಾಲದಲ್ಲಿ ಏಕೆ ಕನ್ನಡವನ್ನು ಉಳಿಸಬಾರದೆಂದು ನಿತ್ಯವೂ ಕೋದಂಡರಾಮನಿಗೆ ಕನ್ನಡದಲ್ಲಿ ಪೂಜೆ ಸಲ್ಲಿಸಲು ಪ್ರಾರಂಭಿಸಿದ್ದರು. ಅಪ್ಪನ ಹಾದಿಯನ್ನೇ ಮೈಗೂಡಿಸಿಕೊಂಡ ಕಣ್ಣನ್ ಕೂಡ ಅಂದಿನಿಂದಲೂ ಕನ್ನಡದಲ್ಲಿ ಪೂಜೆ ಮಾಡುವುದನ್ನು ಅಭ್ಯಾಸ ಮಾಡಿಕೊಂಡು, ಕನ್ನಡದ ನೆಲದಲ್ಲೇ ಕನ್ನಡದ ಉಳಿವಿಗೆ ಶ್ರಮಿಸುತ್ತಿದ್ದಾರೆ.

ಪ್ರತಿಯೋರ್ವರ ಮನೆಯಲ್ಲಿ, ನಾಲಿಗೆಯಲ್ಲಿ ಕನ್ನಡ ಬಳಕೆಯಾಗಲಿ
ದೇಶ ವಿದೇಶಗಳಿಂದಲೂ ಇಲ್ಲಿಗೆ ನೂರಾರು ಭಕ್ತರು ಆಗಮಿಸುತ್ತಾರೆ. ವಿಶ್ವದ ನಾನಾ ಭಾಗಗಳಿಂದ ಬರುವ ವಿದೇಶಿಗರಿಗೆ ಸಂಸ್ಕೃತ ಹೇಳಿಕೊಡುವ ಕಣ್ಣನ್, ಕೋದಂಡರಾಮನಿಗೆ ಕನ್ನಡದಲ್ಲೇ ಪೂಜಾ ಕೈಂಕರ್ಯ ನೆರವೇರಿಸುತ್ತಿದ್ದಾರೆ. ಆದರೆ, ಬರೀ ದೇವಾಲದಲ್ಲಿ ಕನ್ನಡಲ್ಲಿ ಪೂಜೆ ಮಾಡಿದರೆ ಸಾಲದು ಕನ್ನಡ ಮನದಿಂದ ಬರಬೇಕು, ಪ್ರತಿ ಮನೆಯಲ್ಲೂ ಕನ್ನಡದಲ್ಲಿ ಪೂಜೆ-ಪುನಸ್ಕಾರಗಳು ನಡೆಯಬೇಕೆಂದು ಎಂಬ ತಮ್ಮ ಮನದಾಳದ ಇಂಗಿತವನ್ನು ಕಣ್ಣನ್ ತೋರಿದ್ದಾರೆ.
ದೇವಾಲಯದಲ್ಲಿ ಕನ್ನಡದ ಮಂತ್ರಗಳನ್ನು ಪಠಿಸಿದರೆ ಮಾತ್ರ ಕನ್ನಡದ ಕೈಂಕರ್ಯ ಸಂದಾಯವಾಗುತ್ತದೆ ಎಂದು ನಾವು ಭಾವಿಸಿದರೆ ಅದು ತಪ್ಪು. ನಮ್ಮ ಇರಾದೆ ಗುಡಿ-ಗೋಪುಗಳಲ್ಲಿ ಕನ್ನಡ ಕೇಳುವುದಕ್ಕಿಂತಲೂ ಪ್ರತಿಯೋರ್ವರ ಮನೆಯಲ್ಲಿ, ನಾಲಿಗೆಯಲ್ಲಿ, ಮನೆ-ಮನೆಗಳಲ್ಲಿ ಕನ್ನಡ ಕನ್ನಡ ಎನ್ನುವ ಶಬ್ಧ ಕೇಳುತ್ತಿರಬೇಕು. ಪ್ರತಿಯೊಬ್ಬರ ಮನೆಯಲ್ಲೂ ಕನ್ನಡದಲ್ಲಿ ಪೂಜೇ ಮಾಡುವ ಕಾರ್ಯವಾಗಬೇಂಬುದು ಕಣ್ಣನ್‌ರವರ ಮನದಾಳವಾಗಿದೆ.

ಜನಸಾಮಾನ್ಯರಿಗಾಗಿ ಕನ್ನಡ ಫಲಕ
ಸಂಸ್ಕೃತ ಬಹಳಷ್ಟು ಜನರಿಗೆ ಬರಲ್ಲ, ಕನ್ನಡದಲ್ಲೇ ಮಂತ್ರಗಳನ್ನು ಹೇಳಿ ಜನಸಾಮನ್ಯರಿಗೆ ಅರ್ಥವಾಗುತ್ತದೆ. ಅದೇ ಕಾರಣ ಹಿರೇಮಗಳೂರಿನ ಕೋದಂಡರಾಮ ದೇವಾಲಯ ತುಂಬಾ ವಿಶೇಷವಾಗಿದೆ. ನಾವು ಬಳಸುವ ಕನ್ನಡ ಮಂತ್ರಗಳು ಭಕ್ತರಿಗೂ ಅರ್ಥವಾಗುತ್ತದೆ. ನಾವು ದೇವಾಲಯದ ಸುತ್ತಾ-ಮುತ್ತಾ ಕನ್ನಡದಲ್ಲೇ ಬರೆದಿರುವ ಫಲಕಗಳನ್ನು ಹಾಕಿದ್ದೇವೆ, ಇದರಿಂದ ದೇವಾಲಯಕ್ಕೆ ಬರುವವರಿಗೆ ಎಲ್ಲಾ ಮಾಹಿತಿ, ನುಡಿಮುತ್ತುಗಳು ಸುಲಭವಾಗಿ ಅರ್ಥವಾಗುತ್ತದೆ ಎಂದು ದೇವಾಲಯದ ಅರ್ಚಕರು ಮಾಹಿತಿ ನೀಡಿದರು.
ಒಟ್ಟಾರೆ, ಇಲ್ಲಿಗೆ ಬರೋ ಭಕ್ತರಿಗೆ ಕನ್ನಡ ನಾಡು ನುಡಿಯ ಬಗ್ಗೆ ಅರಿವೂ ಮೂಡಿಸುವ ಕಾರ್ಯವನ್ನು ಈ ದೇವಾಲಯ ಮಾಡುತ್ತಿದೆ. ಆಂಗ್ಲ ಭಾಷೆಯ ವ್ಯಾಮೋಹದ ನಡುವೆ ಮರೆಯಾಗುತ್ತಿರುವ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಿರುವ ಕಣ್ಣನ್‍ರವರ ಸಾಧನೆ ನಿಜಕ್ಕೂ ಶ್ಲಾಘನೀಯ.