ಸಂಪುಟ ಸಂಕಟ: ಕೈ ಪಾಳಯ ಸ್ವಲ್ಪ ನಿರಾಳ, ಜೆಡಿಎಸ್ ನಲ್ಲಿ ಕಾರ್ಮೋಡ
ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಮೈತ್ರಿ ಸರಕಾರ ಯಾವುದೇ 'ಸಿದ್ಧತೆ' ಇಲ್ಲದೆ ಅಸ್ತಿತ್ವಕ್ಕೆ ಬಂದಿದ್ದು ಎಂಬ ಸಂಗತಿ ದಿನದಿನಕ್ಕೂ ನಿಜವಾಗುತ್ತಿದೆ. ಎಲ್ಲಿ ಕುಮಾರಸ್ವಾಮಿ ಬಿಜೆಪಿ ಜತೆಗೆ ದೋಸ್ತಿ ಮಾಡಿಕೊಂಡು ಬಿಡ್ತಾರೋ ಎಂಬ ದಿಗಿಲಿನಲ್ಲಿ ದೇವೇಗೌಡರು ತಮ್ಮ ಎಲ್ಲ ಬುದ್ಧಿ- ಶಕ್ತಿಯನ್ನೂ ಖರ್ಚು ಮಾಡಿ, ಕಾಂಗ್ರೆಸ್ ಜತೆಗೆ ದೋಸ್ತಿಯೇನೋ ಕುದುರಿಸಿದರು. ಆದರೆ ಕೊಟ್ಟು- ತೆಗೆದುಕೊಳ್ಳುವ ವಿಚಾರದಲ್ಲಿ ಫೈನಲ್ ಅನ್ನೋದು ಮಾಡಿಕೊಳ್ಳಬೇಕಿತ್ತು.
ಇದೇ ಮಾತು ಯಥಾವತ್ ಆಗಿ ಕಾಂಗ್ರೆಸ್ ಗೆ ಕೂಡ ಅನ್ವಯಿಸುತ್ತದೆ. ಶತಾಯಗತಾಯ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಅನ್ನೋದನ್ನು ಯೋಚನೆ ಮಾಡಿತೇ ವಿನಾ ದೂರಗಾಮಿ ಫಲಿತಾಂಶವನ್ನು ಇಂಚಿನಷ್ಟೂ ಆಲೋಚನೆ ಮಾಡದೆ ಜೆಡಿಎಸ್ ಜತೆಗೆ ದಾಂಪತ್ಯಕ್ಕೆ ಜತೆಯಾಗಬಾರದಿತ್ತು ಕಾಂಗ್ರೆಸ್.
ಜೂನ್ ಒಂಬತ್ತನೇ ತಾರೀಕಿನ ಶನಿವಾರ ನಡೆದ ಒಂದೊಂದೇ ಬೆಳವಣಿಗೆಗಳನ್ನು ಗಮನಿಸುತ್ತಾ ಹೋದರೆ ಜೆಡಿಎಸ್ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಡ್ಯಾಮೇಜ್ ಕಂಟ್ರೋಲ್ ಮೋಡ್ ಗಳಲ್ಲಿವೆ. ಸಂಪುಟ ವಿಸ್ತರಣೆ ಎಂಬ ಬೆಂಕಿ ಅದ್ಯಾವ ಪರಿಯ ವ್ಯಾಪ್ತಿ ಹಾಗೂ ತೀಕ್ಷ್ಣ ಎಂಬ ಸಂಗತಿ ಗೊತ್ತಿದ್ದರಿಂದಲೇ ಕಾಂಗ್ರೆಸ್ಸಿನ ಎಂ.ಬಿ.ಪಾಟೀಲರನ್ನು ಸಮಾಧಾನ ಮಾಡಲು ಸ್ವತಃ ಕುಮಾರಸ್ವಾಮಿ ಅವರೇ ಪ್ರಯತ್ನ ಪಟ್ಟರು.

ಆ ಪರಿಯ ಪಟ್ಟು ಹಿಡಿದರೇಕೆ ಪಾಟೀಲರು?
ಎಂ.ಬಿ.ಪಾಟೀಲರು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿರುವುದು, ಎರಡೆರಡು ದಿನಗಳ ಕಾಲ ಹಲವು ಮುಖಂಡರಿಂದಲೂ ಅವರನ್ನು ಸಮಾಧಾನ ಮಾಡಲು ಸಾಧ್ಯವಾಗದೇ ಇದ್ದುದ್ದು, ಪಾಟೀಲರ ಪಾಳಯದಲ್ಲೇ ಅಸಮಾಧಾನಗೊಂಡ ಶಾಸಕರ ಸಂಖ್ಯೆ ಹೆಚ್ಚು ಜಮೆಯಾಗುತ್ತಾ ಹೋಗಿದ್ದನ್ನೆಲ್ಲ ಗಮನಿಸಿದರೆ ಒಂದೋ ಅವರ ಬೆನ್ನಿಗೆ ಪ್ರಬಲ ಮುಖಂಡ ನಿಂತಿರಬೇಕು. ಅಷ್ಟೇ ಅಲ್ಲ, ಮಾರ್ಗದರ್ಶನವನ್ನೂ ಮಾಡಿರಬೇಕು: ಹೀಗೀಗೆ ಮಾಡಿ ಅಂತ. ಇನ್ನೊಂದು ವಿಚಾರ ಏನೆಂದರೆ, ತಮಗೆ ಸಚಿವ ಸ್ಥಾನ ಸಿಗುವುದೋ ಬಿಡುವುದೋ ಅಥವಾ ಮತ್ತೆ ಚುನಾವಣೆ ಎದುರಿಸಬೇಕಾಗಬಹುದೋ ಅದೇನೇ ಆದರೂ ಈ ಜೆಡಿಎಸ್ ನ ಸಹವಾಸ ಬೇಡ ಎಂಬುದು ಕಾಂಗ್ರೆಸ್ ಒಳಗಿನ ಬಹು ಸಂಖ್ಯೆಯ ಮುಖಂಡರ ಅಭಿಪ್ರಾಯವಾಗಿ, ಎಂ.ಬಿ.ಪಾಟೀಲರು ಮತ್ತು ಅಂಥ ಮುಖಂಡರನ್ನು 'ಅತೃಪ್ತಿ' ಹೊರಹಾಕಲು ಸಾಂಕೇತಿಕವಾಗಿ ಬಳಸಿಕೊಂಡಿರಲಿಕ್ಕೂ ಸಾಕು.

ಸಂಜೆಯ ಹೊತ್ತಿಗೆ ಚಿತ್ರಣವೇ ಬದಲಾಯಿತು
ಆದರೆ, ಶನಿವಾರ ಸಂಜೆಯ ಹೊತ್ತಿಗೆ ಚಿತ್ರಣ ಸ್ವಲ್ಪ ಮಟ್ಟಿಗೆ ಬದಲಾವಣೆ ಆಯಿತು. ಎಂ.ಬಿ.ಪಾಟೀಲರೂ ಸೇರಿ ಅಸಮಾಧಾನಗೊಂಡಿದ್ದ ಶಾಸಕರಿಗೆ ರಾಹುಲ್ ಗಾಂಧಿ ಅದೆಂಥದೋ 'ಸಿಹಿ' ಮಾತುಗಳನ್ನೇ ಆಡಿದ್ದಾರೆ. ಎಂ.ಬಿ.ಪಾಟೀಲರು ತಾತ್ಕಾಲಿಕವಾಗಿಯಂತೂ ಸುಮ್ಮನಾದಂತೆ ಕಾಣುತ್ತಿದ್ದಾರೆ. ಅಷ್ಟೇ ಆಗಿದ್ದರೆ ಅದೇನೂ ಅಚ್ಚರಿಗೆ ಕಾರಣ ಆಗುತ್ತಿರಲಿಲ್ಲ. 'ಕೌರವ' ಬಿ.ಸಿ.ಪಾಟೀಲ್ ತಮ್ಮ ನಿಷ್ಠೆ ಪಕ್ಷಕ್ಕೇ ಅಂತ ಹೇಳಿದ್ದಾರೆ. ಇನ್ನು ಪರಮೇಶ್ವರ್ ನಾಯ್ಕ್, ಬಳ್ಳಾರಿಗೆ ಸಚಿವ ಸ್ಥಾನ ಕೊಡಬೇಕು ಅನ್ನೋದೇನೋ ನಿಜ. ಆದರೆ ಅವರು ಏನು ಕೊಡ್ತಾರೋ ಅದ್ಯಾವಾಗ ಕೊಡ್ತಾರೋ ತೆಗೆದುಕೊಳ್ತೀವಿ ಅನ್ನೋ ಮೂಲಕ ಫುಲ್ ಯೂ ಟರ್ನ್ ಹೊಡೆದಿದ್ದಾರೆ. ಇನ್ನು ಬಾಕಿ ಉಳಿದಿರುವುದು ಶಾಮನೂರು ಶಿವಶಂಕರಪ್ಪ, ಎಚ್.ಕೆ.ಪಾಟೀಲ್, ಸತೀಶ್ ಜಾರಕಿಹೊಳಿ ಅಂಥವರ ಅಸಮಾಧಾನ. ಅದನ್ನು ನಿವಾರಿಸುವ ನಂಬಿಕೆಯಲ್ಲಿದೆ ದೆಹಲಿಯ ಕಾಂಗ್ರೆಸ್ ಹೈ ಕಮಾಂಡ್.

ಬಿಜೆಪಿಗೆ ಬರಲು ರೆಡಿಯಾಗಿದ್ದಾರಂತೆ ಅತೃಪ್ತರು
ಈ ಮಧ್ಯೆ ದಿಡಗ್ಗನೆ ಎದ್ದು ಕೂತಂತಿರುವ ಯಡಿಯೂರಪ್ಪ ಕಾಂಗ್ರೆಸ್- ಜೆಡಿಎಸ್ ನವರಿಗೆ ಹುಳ ಬಿಟ್ಟರು. ಬಿಜೆಪಿಗೆ ಬರುವುದಕ್ಕೆ ಅಂತಲೇ ಅಸಮಾಧಾನಗೊಂಡಿರುವ ಎರಡೂ ಪಕ್ಷಗಳ ನಾಯಕರು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಹೇಳಿದರು. ಹಾರಿಸಿದ ಗುಂಡಿಗೆ ಗೊತ್ತು- ಗುರಿ ಇರಲಿಲ್ಲ. ಆದರೆ ಇಂಥ ಮಾತುಗಳು ಎಂಥ ಭಯ- ಅಪನಂಬಿಕೆ ಮೂಡಿಸುತ್ತವೆ ಎಂಬ ಸಂಗತಿ ಅನುಭವಿ ರಾಜಕಾರಣಿ ಯಡಿಯೂರಪ್ಪ ಅವರಿಗೆ ಗೊತ್ತಿಲ್ಲದ್ದೇನಲ್ಲ. ಸದ್ಯಕ್ಕಂತೂ ಕಾಂಗ್ರೆಸ್ ನಲ್ಲಿ ಅಸಮಾಧಾನ ಬೂದಿ ಮುಚ್ಚಿದ ಕೆಂಡ ಅಥವಾ ಹಾಗೆ ಗೋಚರಿಸುತ್ತಿರುವ ದೊಡ್ಡ ಮಟ್ಟದ ಬೆಂಕಿ. ಒಟ್ಟಿನಲ್ಲಿ ಇದು ತಿಳಿದುಕೊಳ್ಳುವುದಕ್ಕೆ ಹೆಚ್ಚು ಸಮಯ ಬೇಡ.

ಕಾಂಗ್ರೆಸ್ ಪಾಳಯದಲ್ಲಿ ನಿರಾಳ, ಜೆಡಿಎಸ್ ನಲ್ಲಿ ಕಾರ್ಮೋಡ
ಜೆಡಿಎಸ್ ನಲ್ಲಿ ಸಿ.ಎಸ್.ಪುಟ್ಟರಾಜು ಹಾಗೂ ಜಿ.ಟಿ.ದೇವೇಗೌಡರಿಗೆ ಕಾಣಿಸಿಕೊಂಡಿರುವ ಅಸಮಾಧಾನ ಬಹಳ ಅಪಾಯಕಾರಿ ಆಗುವಂತೆ ಕಾಣುತ್ತಿದೆ. ಏಕೆಂದರೆ, ಜಿ.ಟಿ.ದೇವೇಗೌಡರಿಗೆ ಬಿಜೆಪಿ ಜತೆಗೆ ಹಳೆಯದೊಂದು ಸ್ವಲ್ಪ ಕಾಲದ ದೋಸ್ತಿ ಇದೆ. ಜತೆಗೆ ಈ ಬಾರಿ ವಿಧಾನಸಭಾ ಚುನಾವಣೆ ವೇಳೆ ಕೂಡ ತಮ್ಮ ಹಳೇ ಪ್ರೀತಿಯನ್ನು ಮತ್ತೊಮ್ಮೆ ತೋರ್ಪಡಿಸಿದ್ದರು ಜಿಟಿಡಿ. ಈ ಸಲ ಅವರಿಗೆ ನೀಡಿದ ಖಾತೆ ಬಗ್ಗೆ ಶ್ಯಾನೇ ಬೇಸರ ಆಗ್ಬಿಟ್ಟು, ಯಾರ ಕೈಗೂ ಸಿಗದೇ ಎಲ್ಲೋ ದೂರ ಹೋಗಿದ್ದಾರಂತೆ ಗೌಡರು. ಅಲ್ಲಿ ಯಡಿಯೂರಪ್ಪ ಹೇಳುವುದಕ್ಕೂ ಈಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗೂ ಬಲೇ ಮ್ಯಾಚಿಂಗ್ ಆಗ್ತಿದೆ. ಅಂತೂ ಶನಿವಾರ ರಾತ್ರಿ ಹೊತ್ತಿಗೆ ಕಾಂಗ್ರೆಸ್ ಪಾಳಯ ನಿರಾಳವಾಗಿ ಕಂಡುಬಂದರೆ, ಜೆಡಿಎಸ್ ನಲ್ಲಿ ಒಂದಿಷ್ಟು ಕಾರ್ಮೋಡ ಕವಿದಿದೆ.












Click it and Unblock the Notifications