Navratri 2023: ರಜಪೂತ ಮಹಿಳೆಯರಿಂದ ಕತ್ತಿಗಳೊಂದಿಗೆ ಗರ್ಬಾ ಪ್ರದರ್ಶನ- ಬೆರಗಾಗಿಸುವ ವಿಡಿಯೋ ವೈರಲ್
ಗುಜರಾತ್‌ನಲ್ಲಿ ನವರಾತ್ರಿಯ ಸಡಗರ ಎಲ್ಲೆಡೆ ಮನೆ ಮಾಡಿದೆ. ಮಹಿಳೆಯರು ದುರ್ಗಾ ದೇವಿಯ ವಿವಿಧ ರೂಪಗಳನ್ನು ಪೂಜಿಸುವ ಸಂಭ್ರಮದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಹಿಳೆಯರು ಕತ್ತಿಗಳನ್ನು ಬೀಸುತ್ತಾ 'ಗರ್ಬಾ' ಪ್ರದರ್ಶಿಸಿದ್ದನ್ನು ಕಂಡು ನೋಡುಗರು ಬೆರಗಾಗಿದ್ದಾರೆ.
ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನವರಾತ್ರಿ ಹಬ್ಬದ ಮೂರನೇ ದಿನವಾದ ಮಂಗಳವಾರ ಈ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ. ರಾಜ್ವಿ ಅರಮನೆಯಲ್ಲಿ ವಾಹನಗಳ ಮೇಲೆ ಮಹಿಳೆಯರು ಕತ್ತಿಗಳನ್ನು ಬೀಸುತ್ತಾ 'ಗರ್ಬಾ' ಪ್ರದರ್ಶಿಸಿದ್ದಾರೆ. ಇದನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಜನ ಅಲ್ಲಿ ಸೇರಿರುವುದನ್ನು ದೃಶ್ಯದಲ್ಲಿ ಕಾಣಬಹುದು.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಹಿಳೆಯರ ಈ ಧೈರ್ಯ ಹಾಗೂ ಸಾಹಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
#WATCH | Gujarat: Women in Rajkot perform 'Garba' on motorcycles and cars with swords in their hands, on the third of #Navratri (17.10) pic.twitter.com/AhbuiAwI7Y
— ANI (@ANI) October 17, 2023
'ತಲ್ವಾರ್ ರಾಸ್' ಅಥವಾ 'ಕತ್ತಿ ವರಸೆ' ಗುಜರಾತ್‌ನ ಸಾಂಪ್ರದಾಯಿಕ ಸಂಸ್ಕೃತಿಯಾಗಿದೆ. ಸಾಂಪ್ರದಾಯಿಕ ರಜಪೂತ್ ಉಡುಪುಗಳನ್ನು ಧರಿಸಿರುವ ಮಹಿಳೆಯರು ದುರ್ಗಾ ದೇವಿಯನ್ನು ಗೌರವಿಸಲು ವಿಶಿಷ್ಟವಾದ ಗರ್ಬಾವನ್ನು ಮಾಡುತ್ತಾರೆ. ನವರಾತ್ರಿಯ ಮೂರನೇ ದಿನ ದುರ್ಗಾ ದೇವಿಯ ಮತ್ತೊಂದು ರೂಪವಾದ ಚಂದ್ರಘಂಟಾ ದೇವಿಯನ್ನು ಪೂಜಿಸಲಾಗುತ್ತದೆ. 'ಚಂದ್ರ-ಘಂಟಾ' ಎಂದು ಕರೆಯಲ್ಪಡುವ ಅವಳ ಹೆಸರು ಗಂಟೆಯ ಆಕಾರದ ಅರ್ಧ ಚಂದ್ರನನ್ನು ಸೂಚಿಸುತ್ತದೆ.
ಏನಿದು 'ತಲ್ವಾರ್ ರಾಸ್' (ಕತ್ತಿ ವರಸೆ)
ಗುಜರಾತ್‌ನ ಜಾನಪದ ಸಂಪ್ರದಾಯಗಳ ವಿದ್ವಾಂಸರ ಪ್ರಕಾರ, ಭೂಚಾರ್ ಮೋರಿಯ ಐತಿಹಾಸಿಕ ಯುದ್ಧದಲ್ಲಿ (ಜುಲೈ 18, 1591) ಮಡಿದ ರಜಪೂತ ವೀರರನ್ನು ಸ್ಮರಿಸಲು ತಲ್ವಾರ್ ರಾಸ್ ಅನ್ನು ರಚಿಸಲಾಗಿದೆ. ಇದು ಗುಜರಾತ್‌ನಲ್ಲಿ ಪ್ರದರ್ಶನಗೊಂಡ ರಾಸ್ ಮಾತ್ರವಲ್ಲ. ಕೃಷಿ ಸಮುದಾಯ, ಯೋಧರ ಸಮುದಾಯ, ಸಮುದ್ರಯಾನ ಸಮುದಾಯ ಮತ್ತು ಮುಸ್ಲಿಂ ಮಾಲ್ಧಾರಿ ಸಮುದಾಯ ಸೇರಿದಂತೆ ವಿವಿಧ ಸಮುದಾಯಗಳಿಂದ ಸುಮಾರು ಆರು ವಿಧದ ರಾಸ್‌ಗಳನ್ನು ನಡೆಸಲಾಗುತ್ತದೆ ಎನ್ನುತ್ತಾರೆ.

ಹರಿವಂಶ ಪುರಾಣ, ವಿಷ್ಣು ಪುರಾಣ ಮತ್ತು ಭಗವದ್ ಪುರಾಣದಂತಹ ವಿವಿಧ ಪುರಾಣಗಳಲ್ಲಿ ರಾಸ್ನ ವಿವರಣೆಯನ್ನು ಕಾಣಬಹುದು. ಇದು ಸಾಮಾನ್ಯವಾಗಿ 16-20 ಸಂಗೀತಗಾರರು ಮತ್ತು ನರ್ತಕರನ್ನು ಒಳಗೊಂಡಿರುತ್ತದೆ.
ಭಾರತದಾದ್ಯಂತ ಚಂದ್ರಘಂಟಾ ಪೂಜೆ
ನವರಾತ್ರಿಯ ಮೂರನೇ ದಿನದಂದು ದೇಶಾದ್ಯಂತ ದೇವಾಲಯಗಳಲ್ಲಿ ಬೆಳಿಗ್ಗೆ ಆರತಿ ಮಾಡುವ ಮೂಲಕ ಚಂದ್ರಘಂಟಾ ದೇವಿ ಆರಾಧನೆ ಆರಂಭವಾಯಿತು. ಈ ದಿನವೂ ಅಪಾರ ಸಂಖ್ಯೆಯಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸಲು ಮತ್ತು ಬೆಳಗಿನ ಆರತಿಯಲ್ಲಿ ಭಾಗವಹಿಸಲು ಜಮಾಯಿಸುತ್ತಾರೆ. ಹಲವೆಡೆ ಜನ ದಾಂಡಿಯಾ, ಗರ್ಬಾ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.
ಆರತಿಯ ಸಮಯದಲ್ಲಿ ದೇವಾಲಯದ ಗಂಟೆ ಮತ್ತು ಇತರ ವಾದ್ಯಗಳ ಶಬ್ದಗಳೊಂದಿಗೆ ದೇವಾಲಯ ಪ್ರತಿಧ್ವನಿಸಿತು. ಗುಜರಾತಿನ ಸೂರತ್‌ನ ಉಮಿಯಾ ದೇವಾಲಯದಲ್ಲಿ ಬೆಳಗಿನ ಆರತಿ ಕೂಡ ನಡೆಯಿತು.
ಶಾರದೀಯ ನವರಾತ್ರಿಯ 9-ದಿನಗಳ ಉತ್ಸವದಲ್ಲಿ ಮಾ ದುರ್ಗಾ ಮತ್ತು ಅವಳ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ಇದನ್ನು ನವದುರ್ಗಾ ಎಂದು ಕರೆಯಲಾಗುತ್ತದೆ. ನವರಾತ್ರಿ ಎಂದರೆ ಸಂಸ್ಕೃತದಲ್ಲಿ ಒಂಬತ್ತು ರಾತ್ರಿಗಳು. ಇದನ್ನು ರಾಷ್ಟ್ರದಾದ್ಯಂತ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ವಿಭಿನ್ನ ಸಂಪ್ರದಾಯಗಳು ವಿವಿಧ ರಾಜ್ಯಗಳಲ್ಲಿ ಕಾಣ ಸಿಗುತ್ತವೆ.












Click it and Unblock the Notifications