'ನೀರುಣಿಸಿ-ಜೀವವನ್ನುಳಿಸಿ'ಅಭಿಯಾನ: ಸುಡು ಬೇಸಿಗೆಯಲ್ಲಿ ಮೂಕ ಪ್ರಾಣಿ, ಪಕ್ಷಿಗಳ ದಾಹ ತಣಿಸೋಣ!
ಹಲವು ದಶಕಗಳಿಂದ ಅರಮನೆ ನಗರಿ ಮೈಸೂರಿನಲ್ಲಿ ಪ್ರಾಣಿ ಪಕ್ಷಿಗಳಿಗೆ ಬೇಸಿಗೆಯಲ್ಲಿ ನೀರುಣಿಸುವ ಕಾರ್ಯವನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿರುವುದನ್ನು ಕಾಣಬಹುದಾಗಿದೆ. ಇಲ್ಲಿನ ಬಡಾವಣೆಗಳಲ್ಲಿ ನೀರಿನ ತೊಟ್ಟಿಗಳಿದ್ದು ಅವುಗಳಲ್ಲಿ ನೀರು ತುಂಬಿಸಿ ಬೀಡಾಡಿ ದನಗಳ ದಾಹ ತಣಿ
ಮೈಸೂರು, ಮಾರ್ಚ್ 6: ಬೇಸಿಗೆಯ ಧಗೆ ಶುರುವಾಗಿದೆ. ಈ ವೇಳೆಯಲ್ಲಿ ಮೂಕ ಪ್ರಾಣಿ, ಪಕ್ಷಿಗಳು ನೀರಿಗಾಗಿ ಪರದಾಡುವುದು ಎಲ್ಲರ ಗಮನಕ್ಕೆ ಬಂದಿರುತ್ತದೆ. ಹಳ್ಳಿಗಳಲ್ಲಿ ಕೆರೆಕಟ್ಟೆಗಳಿರುವುದರಿಂದ ಪ್ರಾಣಿ ಪಕ್ಷಿಗಳು ಅಲ್ಲಿ ನೀರು ಕುಡಿದು ಬಾಯಾರಿಕೆಯನ್ನು ತಣಿಸಿಕೊಳ್ಳುತ್ತವೆ. ಆದರೆ ಕಾಂಕ್ರಿಟ್ ಕಾಡುಗಳಾಗಿರುವ ನಗರಗಳಲ್ಲಿ ನೀರು ಸಿಗುವುದೇ ಕಷ್ಟವಾಗಿರುವುದರಿಂದ ಜನರೇ ಮೂಕ ಪ್ರಾಣಿಗಳ ದಾಹ ತಣಿಸುವ ಕಾರ್ಯವನ್ನು ಮಾಡಬೇಕಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಬೇಸಿಗೆ ಬಂತೆಂದರೆ ಸಾರ್ವಜನಿಕರು, ಸಂಘ ಸಂಸ್ಥಗಳು ಪ್ರಾಣಿ, ಪಕ್ಷಿಗಳಿಗೆ ಆಹಾರ, ನೀರನ್ನು ಒದಗಿಸುವ ಕೆಲಸವನ್ನು ಮಾಡುತ್ತಲೇ ಬಂದಿರುವುದನ್ನು ನಾವು ಕಾಣಬಹುದಾಗಿದೆ. ಅದರಲ್ಲೂ ಕೊರೊನಾ ಸಂಕಷ್ಟದಲ್ಲಿಯೂ ಹಲವರು ಪ್ರಾಣಿಪಕ್ಷಿಗಳ ಉಳಿವಿಗಾಗಿ ಹೋರಾಟ ಮಾಡಿದ್ದಾರೆ. ಅದು ನಿಜಕ್ಕೂ ಶ್ಲಾಘನೀಯ ಕಾರ್ಯವೂ ಹೌದು.
ನಗರಗಳಲ್ಲಿ ಬೀದಿ ನಾಯಿಗಳು, ಬೀಡಾಡಿ ದನಗಳು, ಕತ್ತೆ ಕುದುರೆಗಳು ಹೀಗೆ ವಿವಿಧ ಬಗೆಯ ಪ್ರಾಣಿಗಳು ಅಲ್ಲಲ್ಲಿ ಕಂಡು ಬರುತ್ತವೆ. ಈ ಪ್ರಾಣಿಗಳು ಬೇಸಿಗೆಯ ದಿನಗಳಲ್ಲಿ ನೀರಿಗಾಗಿ ಹಾತೊರೆಯುತ್ತವೆ. ಅದರಲ್ಲೂ ಗಲ್ಲಿಗಳಲ್ಲಿ ಅಲೆಯುವ ದನಗಳ ಸ್ಥಿತಿ ಶೋಚನೀಯವಾಗಿದೆ. ಇನ್ನು ನಗರಗಳ ಅಳಿದುಳಿದ ಮರಗಳಲ್ಲಿ ಆಶ್ರಯ ಪಡೆದಿರುವ ಅಳಿಲು, ಪಕ್ಷಿಗಳು ನೀರಿಗಾಗಿ ಹುಡುಕಾಡುತ್ತಿರುತ್ತವೆ. ಇಂತಹ ಸಂದರ್ಭಗಳಲ್ಲಿ ಅವುಗಳ ಸಹಾಯಕ್ಕೆ ಜನ ಧಾವಿಸುವುದು ಅಗತ್ಯವಾಗಿದೆ.

'ನೀರುಣಿಸಿ-ಜೀವವನ್ನುಳಿಸಿ, ಅಭಿಯಾನ
ತಾಂತ್ರಿಕ ಯುಗದಲ್ಲಿ ಹಲವು ಕಾರಣಗಳಿಗೆ ಪಕ್ಷಿ ಸಂಕುಲ ಸದ್ದಿಲ್ಲದೆ ನಶಿಸಿ ಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ಅವುಗಳ ಉಳಿವಿಗೆ ಎಲ್ಲರೂ ಕೈಜೋಡಿಸಬೇಕಾದ ಅಗತ್ಯವಿರುವುದರಿಂದ ಜನರು ಕೂಡ ತಮ್ಮ ಕೈಲಾದ ಚಿಕ್ಕ, ಚಿಕ್ಕ ರೀತಿಯ ಸಹಾಯ ಮಾಡುವುದರಿಂದ ಅವುಗಳ ರಕ್ಷಣೆ ಮಾಡಿದ ಪುಣ್ಯ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಹಲವು ದಶಕಗಳಿಂದ ಅರಮನೆ ನಗರಿ ಮೈಸೂರಿನಲ್ಲಿ ಪ್ರಾಣಿ ಪಕ್ಷಿಗಳಿಗೆ ಬೇಸಿಗೆಯಲ್ಲಿ ನೀರುಣಿಸುವ ಕಾರ್ಯವನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿರುವುದನ್ನು ಕಾಣಬಹುದಾಗಿದೆ.

ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಭಿಯಾನ
ಇವತ್ತಿಗೂ ಇಲ್ಲಿನ ಬಡಾವಣೆಗಳಲ್ಲಿ ನೀರಿನ ತೊಟ್ಟಿಗಳಿದ್ದು ಅವುಗಳಲ್ಲಿ ನೀರು ತುಂಬಿಸಿ ಬೀಡಾಡಿ ದನಗಳ ದಾಹ ತಣಿಸುವ ಕೆಲಸ ಮಾಡಿರುವುದು ಕಂಡು ಬರುತ್ತದೆ. ಮತ್ತೆ ಕೆಲವರು ತಮ್ಮ ಮನೆಗಳ ಮುಂದೆ ತೊಟ್ಟಿಗಳನ್ನಿಟ್ಟು ಅದರಲ್ಲಿ ನೀರು ತುಂಬಿಸಿ ಪ್ರಾಣಿಗಳ ದಾಹ ತಣಿಸುತ್ತಿದ್ದಾರೆ. ಚಾಮುಂಡಿಬೆಟ್ಟದಲ್ಲಿ ಮರಗಿಡಗಳಲ್ಲಿ ಡಬ್ಬಗಳನ್ನಿಟ್ಟು ಅದರಲ್ಲಿ ನೀರನ್ನು ತುಂಬಿಸಿಡುವ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಮೈಸೂರಿನ ಪರಿಸರ ಸ್ನೇಹಿ ತಂಡ ಹಾಗೂ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಮುಂದಿನ ಎರಡು ತಿಂಗಳ ಕಾಲ ಮೂಕ ಸ್ಪಂದನೆ ಎಂಬ 'ನೀರುಣಿಸಿ-ಜೀವವನ್ನುಳಿಸಿ, ಅಭಿಯಾನವನ್ನು ಹಮ್ಮಿಕೊಂಡಿದೆ.

ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡಲು ಅಭಿಯಾನ
ಬೇಸಿಗೆ ಸಮಯವಾಗಿರುವುದರಿಂದ ಪ್ರಾಣಿ ಪಕ್ಷಿಗಳು ತಿನ್ನಲು ಆಹಾರ ಮತ್ತು ಕುಡಿಯಲು ನೀರಿಗಾಗಿ ಪರಿತಪಿಸಬೇಕಾಗಿದೆ. ಇಂತಹ ಸಂದರ್ಭದಲ್ಲಿ ಮಾನವೀಯ ದೃಷ್ಟಿಯಿಂದ ಪ್ರಾಣಿ ಪಕ್ಷಿಗಳ ಬಗ್ಗೆ ಕಾಳಜಿ ವಹಿಸಬೇಕಾಗಿದ್ದು ಸಮಾಜಮುಖಿ ಟ್ರಸ್ಟ್‌ನ ಈ ಸೇವಾ ಕಾರ್ಯಕ್ಕೆ ಜನ ಕೈಜೋಡಿಸಲು ಮನವಿ ಮಾಡಲಾಗುತ್ತಿದೆ.
ಮೈಸೂರು ನಗರದ ಪ್ರತಿಯೊಂದು ವಾರ್ಡ್ ನಲ್ಲಿ ಕಾಣಸಿಗುವ ಪ್ರಾಣಿ ಮತ್ತು ಪಕ್ಷಿಗಳಿಗೆ ನೀರಿನ ತೊಟ್ಟಿ ಹಾಗೂ ಮರಗಳಿಗೆ ನೀರಿನ ತಟ್ಟೆ ಹಾಗೂ ಆಹಾರದ ತಟ್ಟೆಯಿಟ್ಟು ಹಾಗೆಯೇ ಸುತ್ತಮುತ್ತ ಇರುವವರಿಗೆ ಪ್ರತಿನಿತ್ಯ ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವಂತೆ ಜಾಗೃತಿ ಮೂಡಿಸುವ ಕಾರ್ಯವನ್ನು ಆರಂಭಿಸಲಾಗಿದೆ.

ಪ್ರಾಣಿ, ಪಕ್ಷಿಗಳಿಗಾಗಿ ನೀರಿನ ತೊಟ್ಟಿ
ಎಲ್ಲರೂ ಅವರವರ ಮನೆಗಳ ಮೇಲಿನ ತಾರಸಿಯ ಮೇಲೆ, ಮರಗಳ ಕೆಳಗೆ, ಮನೆಯ ಮುಂದಿನ ರಸ್ತೆಯ ಇಕ್ಕೆಲಗಳಲ್ಲಿ ಪ್ರಾಣಿ, ಪಕ್ಷಿಗಳ ಬಾಯಿಗೆ ಎಟಕುವಂತೆ ಮಣ್ಣಿನ ಬಟ್ಟಲು ಅಥವಾ ಸಣ್ಣ ಸಿಮೆಂಟ್ ತೊಟ್ಟಿಗಳನ್ನಿಟ್ಟು ಅದರಲ್ಲಿ ಶುದ್ಧ ನೀರನ್ನು ಮತ್ತು ಆಹಾರ ಧಾನ್ಯಗಳನ್ನು ಮಿತವಾಗಿಟ್ಟು ಸಲಹುವಂತೆ ಎಲ್ಲರಲ್ಲಿ ಕಳಕಳಿಯ ಮನವಿ ಮಾಡಿಕೊಳ್ಳಲಾಗುತ್ತಿದೆ.
ಎಲ್ಲ ನಗರಗಳಲ್ಲಿಯೂ ಇಂತಹ ಕೆಲಸಗಳನ್ನು ಜನ ಮಾಡಿದರೆ ಮೂಕ ಪ್ರಾಣಿ ಪಕ್ಷಿಗಳು ಬೇಸಿಗೆಯ ದಾಹದಿಂದ ಮುಕ್ತಿಹೊಂದಲು ಸಾಧ್ಯವಾಗುತ್ತದೆ. ನಾವು ಮಾಡುವ ಚಿಕ್ಕದೊಂದು ಕಾರ್ಯದಿಂದ ಒಂದೇ ಒಂದು ಪಕ್ಷಿಯ ದಾಹ ತಣಿದರೂ ಅದು ಮಹತ್ಕಾರ್ಯವೇ.












Click it and Unblock the Notifications