ಸಾಂಸ್ಕೃತಿಕ ಹಿರಿಮೆಗೆ ಸಾಕ್ಷಿಯಾದ ಮೈಸೂರು

ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಮೈಸೂರು ಸ್ವಚ್ಛ ಸುಂದರ ನಗರಗಳಲ್ಲೊಂದಾಗಿದೆ. ಇಲ್ಲಿ ಪ್ರತಿವರ್ಷವೂ ನಡೆಯುವ ದಸರಾ ಜಗದ್ವಿಖ್ಯಾತವಾಗಿದೆ. ಬೇಸಿಗೆಯಲ್ಲಿ ಹೆಚ್ಚು ಸೆಖೆಯೂ ಇಲ್ಲದೆ, ಚಳಿಗಾಲದಲ್ಲಿ ಹೆಚ್ಚು ಚಳಿಯೂ ಇಲ್ಲದೆ ಮಳೆಗಾಲದಲ್ಲಿ ಒಂದಷ್ಟು ಮಳೆಯೊಂದಿಗೆ ಆಹ್ಲಾದಕರ ವಾತಾವರಣದಿಂದ ಕೂಡಿರುತ್ತದೆ. ಹೀಗಾಗಿಯೇ ದೇಶ ವಿದೇಶಗಳ ಜನ ದೃಷ್ಠಿ ನೆಡುವಂತೆ ಮಾಡಿದೆ.

ಬೇರೆ ನಗರಗಳಿಗೆ ಹೋಲಿಸಿದರೆ ಸಂಚಾರದ ಹೆಚ್ಚು ಕಿರಿಕಿರಿಯಿಲ್ಲದೆ, ಸದಾ ಪ್ರಶಾಂತವಾಗಿ ಗಮನಸೆಳೆಯುತ್ತದೆ. ಪ್ರವಾಸಿಗರಿಂದ ತುಂಬಿ ತುಳುಕುವ ಮತ್ತು ತನ್ನದೇ ಆದ ವಿಶೇಷತೆಗಳಿಂದ ಗಮಸೆಳೆಯುವ ಮೈಸೂರನ್ನು ಸಾಂಸ್ಕೃತಿಕ ನಗರಿ, ಅರಮನೆಗಳ ನಗರಿ, ಪಾರಂಪರಿಕ ನಗರಿ, ನಿವೃತ್ತರ ಸ್ವರ್ಗ ಹೀಗೆ ವಿವಿಧ ಹೆಸರುಗಳಿಂದ ಕರೆಯಲಾಗುತ್ತಿದೆ. ವಿಶೇಷ ತಿನಿಸುಗಳು, ಬೆಳೆಗಳಿಂದ, ಪ್ರವಾಸಿ ತಾಣಗಳಿಂದ, ಹಲವು ಪ್ರಥಮಗಳಿಗೆ ಮುನ್ನುಡಿ ಬರೆಯುವುದರ ಮೈಸೂರಿಗೆ ಮೈಸೂರೇ ಸಾಟಿಯಾಗಿದೆ.

ಇತಿಹಾಸದ ಮೆಲುಕು ಹಾಕಿದರೆ, ಮೈಸೂರು ಸಂಸ್ಥಾನವನ್ನಾಳಿದ ಅರಸರು ಇಲ್ಲಿಗೆ ನೀಡಿರುವ ಕೊಡುಗೆಯ ದೊಡ್ಡಪಟ್ಟಿಯೇ ದೊರೆಯುತ್ತದೆ. 1399 ರಿಂದ 1950ರವರೆಗೆ ಸುಮಾರು 550ವರ್ಷಗಳ ಕಾಲ 25 ಮಂದಿ ಮಹಾರಾಜರು ಈ ಸಂಸ್ಥಾನವನ್ನು ಆಳಿದ್ದಾರೆ. ಇವರಲ್ಲಿ ಅನೇಕ ರಾಜರು ಮೇಧಾವಿಗಳೂ, ಶೂರರೂ, ಸ್ವತಃ ಸಾಹಿತಿಗಳೂ, ಕವಿಗಳು, ದೇಶಭಕ್ತರೂ, ಆಡಳಿತದಲ್ಲಿ ಮಹಾದಕ್ಷರೂ ಆಗಿದ್ದರಿಂದ ಕಲೆ, ಸಂಸ್ಕೃತಿ ಬೆಳೆಯಲು ಸಾಧ್ಯವಾಯಿತು. ಕೇವಲ ಪಾಳೇಗಾರ ಮಟ್ಟದಲ್ಲಿದ್ದ ಮೈಸೂರನ್ನು ತಮ್ಮ ಧೈರ್ಯ ಪರಾಕ್ರಮಗಳಿಂದ ರಾಜ್ಯಮಟ್ಟಕ್ಕೆ ಕೊಂಡೊಯ್ದು ಇಡೀ ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಕೀರ್ತಿಯನ್ನು ಬೆಳಗಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.

ಮಹಿಷಾಸುರನ ಸಂಹಾರ

ಮಹಿಷಾಸುರನ ಸಂಹಾರ

ಇನ್ನು ಪೌರಾಣಿಕವಾಗಿ ನೋಡುವುದಾದರೆ ಪೌರಾಣಿಕ ಯುಗದಲ್ಲಿ ಮಹಿಷಾಸುರನೆಂಬ ಅಸುರ ಇಲ್ಲಿದ್ದನೆಂದೂ ಆತ ತನ್ನ ತಪಸ್ಸಿನ ಮೂಲಕ ಶಿವನಿಂದ ಅಧಿಕ ಶಕ್ತಿಯನ್ನು ಪಡೆದಿದ್ದನಂತೆ. ಹೀಗಾಗಿ ದೇವತೆಗಳು ಸೇರಿದಂತೆ ಜನರನ್ನು ವಿವಿಧ ರೀತಿಯ ತೊಂದರೆ ನೀಡಿ ಹಿಂಸಿಸುತ್ತಿದ್ದನಂತೆ. ಈತನ ಉಪಟಳ ತಾಳಲಾರದೆ ಜನರು ಶ್ರೀಚಾಮುಂಡೇಶ್ವರಿಯಲ್ಲಿ ಮೊರೆಯಿಟ್ಟರಂತೆ ಆಗ ಚಾಮುಂಡೇಶ್ವರಿ ಮಹಿಷಾಸುರನೊಂದಿಗೆ ಯುದ್ದ ಮಾಡಿದಳಂತೆ.

ಆದರೆ ಯುದ್ದದ ಸಮಯದಲ್ಲಿ ಆತನ ದೇಹದಿಂದ ಒಂದು ತೊಟ್ಟು ರಕ್ತ ಬಿದ್ದರೂ ಆ ನೆಲದಿಂದ ಸಹಸ್ರ ರಾಕ್ಷಸರು ಹುಟ್ಟುತ್ತಿದ್ದರಂತೆ. ಮಹಿಷಾಸುರನ ಈ ಶಕ್ತಿಯನ್ನು ತಿಳಿದ ಚಾಮುಂಡೇಶ್ವರಿಯ ಸಹೋದರಿ ಉತ್ತನಳಮ್ಮ ತನ್ನ ವಿಶಾಲವಾದ ನಾಲಿಗೆಯನ್ನು ಚಾಚಿ ಆತನ ರಕ್ತ ನೆಲಕ್ಕೆ ಬೀಳದಂತೆ ನೋಡಿಕೊಂಡಳಂತೆ. ಆ ಸಂದರ್ಭ ಚಾಮುಂಡೇಶ್ವರಿ ಉಗ್ರರೂಪ ತಾಳಿ ಮಹಿಷಾಸುರನನ್ನು ಸಂಹರಿಸಿದಳು ಎನ್ನುವುದು ಪ್ರಚಲಿತದಲ್ಲಿರುವ ಕಥೆಯಾಗಿದೆ.

ಮಹಿಷೂರು ನಿಂದ ಮೈಸೂರು

ಮಹಿಷೂರು ನಿಂದ ಮೈಸೂರು

ಕಾಲಕ್ರಮೇಣ ಮಹಿಷಾಸುರ ನೆಲೆಸಿದ ಊರು "ಮಹಿಷೂರು" ಆಯಿತೆಂದೂ ಆ ನಂತರ ಬಾಯಿಯಿಂದ ಬಾಯಿಗೆ ಮೈಸೂರಾಗಿ ಬದಲಾಯಿತೆಂದು ಹೇಳಲಾಗುತ್ತಿದೆ. ಹತ್ತನೇ ಶತಮಾನದಿಂದಲೂ ಮೈಸೂರು ಎಂದೇ ಕರೆಯುತ್ತಾ ಬರಲಾಗಿದೆ. ಮೈಸೂರು ನಗರ ಮತ್ತು ಸುತ್ತಮುತ್ತ ದೊರೆತ ಹಳೆಯ ಶಾಸನಗಳ ಪ್ರಕಾರ ಮೈಸೂರು ಸುಮಾರು 70 ಹಳ್ಳಿಗಳಿಂದ ಕೂಡಿ "ಮೈಸೂರು ನಾಡು" ಎಂದು ಕರೆಯಲ್ಪಡುತ್ತಿತ್ತು ಎಂದು ಹೇಳಲಾಗಿದೆ.

ಮೈಸೂರು ನಗರದ ಬಗ್ಗೆ ಹೇಳಬೇಕೆಂದರೆ, ಮೈಸೂರು ಚಾಮುಂಡಿಬೆಟ್ಟ, ಅರಮನೆ, ಸುಂದರ ಉದ್ಯಾನವನ, ಕೆರೆ, ಪಾರಂಪರಿಕ ಕಟ್ಟಡಗಳಿಂದ ಹಾಗೂ ದೊಡ್ಡ ದೊಡ್ಡ ರಸ್ತೆಗಳಿಂದ ಕೂಡಿದ ಸುಂದರ ನಗರವಾಗಿದೆ. ಇಲ್ಲಿ ಬೃಹತ್ ಕೈಗಾರಿಕೆಗಳು ಇಲ್ಲವಾದರೂ ಉತ್ತಮ ವ್ಯಾಪಾರ ಕೇಂದ್ರವಾಗಿದೆ. ಜೊತೆಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತಹ ಎಲ್ಲಾ ರೀತಿಯ ಕಾಲೇಜುಗಳು ಇಲ್ಲಿವೆ. ಸಮುದ್ರಮಟ್ಟದಿಂದ ಸುಮಾರು 2525 ಅಡಿ ಎತ್ತರದಲ್ಲಿದ್ದು, ಆಹ್ಲಾದಕರ ವಾತಾವರಣದಿಂದ ಕೂಡಿದೆ.

ಪ್ರವಾಸಿಗರ ನೆಚ್ಚಿನ ತಾಣ

ಪ್ರವಾಸಿಗರ ನೆಚ್ಚಿನ ತಾಣ

ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ, ಸುಂದರ ಬೃಂದಾವನದ ಕೃಷ್ಣರಾಜಸಾಗರ ಜಲಾಶಯ, ಮೃಗಾಲಯ, ಚಾಮುಂಡಿಬೆಟ್ಟ, ಸುಂದರ ಕೆರೆಗಳಲ್ಲದೆ, ವಿವಿಧ ಐತಿಹಾಸಿಕ ದೇವಾಲಯಗಳು, ಮಸೀದಿಗಳು, ಚರ್ಚ್‌ಗಳು ಪ್ರವಾಸಿ ತಾಣಗಳಾಗಿವೆ. ಮೈಸೂರಿಗೆ ಸುತ್ತಮುತ್ತ ಹಲವು ಪ್ರವಾಸಿ ತಾಣಗಳಿದ್ದು, ದೂರದಿಂದ ಬರುವ ಪ್ರವಾಸಿಗರಿಗೆ ಸ್ವರ್ಗವಾಗಿದೆ. ಮೈಸೂರು ಮಸಾಲೆ, ಮೈಸೂರು ಪಾಕ, ಮೈಸೂರು ಮಲ್ಲಿಗೆ, ಮೈಸೂರು ಪೇಟ, ಮೈಸೂರು ವೀಳ್ಯದೆಲೆ ಎಲ್ಲವೂ ಮೈಸೂರಿನ ವಿಶೇಷತೆಗೆ ಸಾಕ್ಷಿಯಾಗಿವೆ.

ಐತಿಹಾಸಿಕ ದಸರಾ ಸಾಂಸ್ಕೃತಿಕ ಹಿರಿಮೆಗೆ ಸಾಕ್ಷಿ

ಐತಿಹಾಸಿಕ ದಸರಾ ಸಾಂಸ್ಕೃತಿಕ ಹಿರಿಮೆಗೆ ಸಾಕ್ಷಿ

ಆಳರಸರ ಮಹೋತ್ಸವವಾಗಿ ಮೆರೆದು ಬದಲಾದ ಕಾಲಘಟ್ಟದಲ್ಲಿ ಒಂದಷ್ಟು ಬದಲಾವಣೆಯೊಂದಿಗೆ ನಾಡಹಬ್ಬವಾಗಿ ದೇಶ ವಿದೇಶಗಳ ಜನರನ್ನು ಸೆಳೆಯುತ್ತಿರುವ ಮೈಸೂರು ದಸರಾ ಐತಿಹಾಸಿಕ ಪರಂಪರೆ ಹಾಗೂ ಸಾಂಸ್ಕೃತಿಕ ಹಿರಿಮೆಗೆ ಸಾಕ್ಷಿಯಾಗಿದೆ. ಹಾಗೆಯೇ ಇದು ಭಾರತೀಯ ಸಂಸ್ಕೃತಿಯ ಚರಿತ್ರೆಯಲ್ಲೇ ವಿಶೇಷವಾಗಿದೆ. ಜತೆಗೆ ಇಷ್ಟೊಂದು ಸುದೀರ್ಘ ಕಾಲ ನಡೆದು ಬಂದಿರುವ ಮತ್ತೊಂದು ಹಬ್ಬ ಕಾಣಸಿಗುವುದು ಬಹಳ ಅಪರೂಪ. ಹೀಗಾಗಿಯೇ ಮೈಸೂರು ಮತ್ತು ಮೈಸೂರು ದಸರಾ ವಿಶ್ವವಿಖ್ಯಾತಿ ಪಡೆದಿದೆ ಎಂದರೆ ಅತಿಶಯೋಕ್ತಿ ಎನಿಸದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+