ಮೈಸೂರು ದಸರಾ ಆರಂಭ ಆಗಿದ್ದು ಯಾವಾಗ ಹಾಗೂ ವಿಶ್ವವಿಖ್ಯಾತಿಗೆ ಕಾರಣಕರ್ತರು ಯಾರು?, ಸಂಪೂರ್ಣ ಮಾಹಿತಿ ಇಲ್ಲಿದೆ

ಮೈಸೂರು, ಅಕ್ಟೋಬರ್‌, 19: ಗತಕಾಲದ ಇತಿಹಾಸದೊಂದಿಗೆ ಸಂಪ್ರದಾಯದ ಲೇಪನದಲ್ಲಿ ಹೊಸತನಕ್ಕೆ ತೆರೆದುಕೊಂಡು, ಕಲೆ, ಸಂಸ್ಕೃತಿಯನ್ನು ಬಿಂಬಿಸುತ್ತಾ ಸಡಗರ ಸಂಭ್ರಮದಲ್ಲಿ ತೇಲುತ್ತಾ ವಿದ್ಯುದ್ದೀಪ ಸುಂದರ ಅಲಂಕಾರದಲ್ಲಿ ಮುಂದಕ್ಕೆ ಸಾಗುತ್ತಾ ಬಂದಿರುವ ಮೈಸೂರು ದಸರಾ ಅವತ್ತು, ಇವತ್ತು, ನಾಳೆ ಎಂದೆಂದಿಗೂ ವಿಶ್ವದಸರವಾಗಿಯೇ ಉಳಿದು ಬಿಡುತ್ತದೆ.

ಇವತ್ತು ಮೈಸೂರು ದಸರಾ ವಿಶ್ವವಿಖ್ಯಾತಿಯಾಗಿದೆ ಎಂದರೆ ಅದಕ್ಕೆ ಸಾಂಸ್ಕೃತಿಕ ಭದ್ರನೆಲೆಗಟ್ಟಿನಲ್ಲಿ ಸಾಗಿ ಬಂದಿರುವುದೇ ಕಾರಣವಾಗಿದೆ. ರಾಜರ ಕಾಲದ ರಾಜ ವೈಭವದಿಂದ ಆರಂಭವಾಗಿ ಇವತ್ತಿನ ಜನಮನದ ದಸರಾ ತನಕದ ಸಡಗರ ಸಂಭ್ರಮವನ್ನು ಉಣಬಡಿಸಿಕೊಂಡು ಬಂದಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

Mysore Dasara 1610 to 2023 History, Origin, Why We Celebrate, Wadiyar Dynasty

ವಿದ್ಯುತ್ ದೀಪಗಳ ಬೆಳಕಿನಲ್ಲಿ ಬೆಳಗುವ ಭವ್ಯ ಅರಮನೆ, ಆ ಅರಮನೆಯಲ್ಲಿ ರಾಜವೈಭವ ನೆನಪಿಸುವ ಖಾಸಗಿ ದರ್ಬಾರ್‌, ಅದರಾಚೆಗೆ ಫೈಲ್ವಾನರ ಕುಸ್ತಿ, ಇಷ್ಟವಾದುದನ್ನು ತಿಂದುಂಡು ಖುಷಿಪಡಲು ಆಹಾರ ಮೇಳ, ಸಾಹಿತ್ಯ ಪ್ರಿಯರಿಗೆ ಪುಸ್ತಕಗಳ ಮೇಳ, ಮಹಿಳೆ ಮಕ್ಕಳಿಗೆ ಮುದ ನೀಡಲು ಮಹಿಳಾ ಮಕ್ಕಳ ದಸರಾವನ್ನು ಆಯೋಜನೆ ಮಾಡಲಾಗುತ್ತದೆ.

ಅಷ್ಟೇ ಅಲ್ಲದೆ ಖರೀದಿ ಮತ್ತು ಆಟವಾಡಲು ವಸ್ತುಪ್ರದರ್ಶನ, ಯುವಕ ಯುವತಿಯರು ಕುಪ್ಪಳಿಸಿ ಕುಣಿಯಲು ಯುವ ದಸರಾ, ಇದೆಲ್ಲವನ್ನು ಮೀರಿ ಗತಕಾಲದ ಇತಿಹಾಸ ನೆನಪಿಸುವ ಜಂಬೂಸವಾರಿ ಹೀಗೆ ಒಂದೇ ಎರಡೇ. ಮೈಸೂರು ದಸರಾವೇ ಹಾಗೆ.. ಇಲ್ಲಿ ಏನಿದೆ? ಏನಿಲ್ಲ ಎಂಬುದನ್ನು ಲೆಕ್ಕ ಹಾಕದೆ ಸಂಭ್ರಮಿಸಬೇಕಷ್ಟೆ.

1610ರಲ್ಲಿ ಆರಂಭಗೊಂಡ ದಸರಾ

ಮೈಸೂರು ದಸರಾದ ಇತಿಹಾಸವನ್ನು ನೋಡಿದರೆ ವಿಜಯದಶಮಿಯನ್ನು ವಿಜಯನಗರದ ಅರಸರು ಆಚರಿಸಿಕೊಂಡು ಬರುತ್ತಿದ್ದರಂತೆ. ಆದರೆ ಅವರ ಸಾಮ್ರಾಜ್ಯ ಪತನಗೊಂಡ ಬಳಿಕ ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜರಾಗಿದ್ದ ಮೈಸೂರಿನ ಯದುವಂಶಸ್ಥರು ಇದನ್ನು ಮುಂದುವರೆಸಿಕೊಂಡು ಬಂದರು ಎಂದು ಹೇಳಲಾಗುತ್ತಿದೆ.

ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿಸಿಕೊಂಡು ರಾಜ್ಯಭಾರ ಮಾಡುತ್ತಿದ್ದ ರಾಜಒಡೆಯರ್ 1610ರಲ್ಲಿ ವಿಜಯನಗರ ಪರಂಪರೆಯ ಪ್ರತೀಕವಾಗಿದ್ದ ವಿಜಯದಶಮಿ ಆಚರಣೆಯನ್ನು ಮೊದಲ ಬಾರಿಗೆ ಆಚರಿಸಿದರು ಎಂಬುದು ಇತಿಹಾಸದಲ್ಲಿದೆ.

ಆ ನಂತರ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ (1799-1868) ತಮ್ಮ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾಯಿಸಿದಲ್ಲದೆ, ಮೈಸೂರಿನಲ್ಲಿ ದಸರಾ ಆಚರಣೆಯನ್ನು ಮುಂದುವರೆಸಿದರು. ನಂತರದ ಕಾಲಾವಧಿಯಲ್ಲಿ ಇದು ತನ್ನದೇ ಆದ ವೈಭವ ಪಡೆಯುವುದರೊಂದಿಗೆ ವಿಶ್ವವಿಖ್ಯಾತ ಪಡೆಯಿತು.

ಚಾಮುಂಡಿ ಬೆಟ್ಟದಲ್ಲಿ ದಸರಾಕ್ಕೆ ಚಾಲನೆ

ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ವಿಧಿವಿಧಾನದಂತೆ ಪೂಜೆ ಸಲ್ಲಿಸಿ ದಸರಾಕ್ಕೆ ವಿದ್ಯುಕ್ತ ಚಾಲನೆ ನೀಡುವುದು ಸಂಪ್ರದಾಯವಾಗಿದೆ. ಬಳಿಕ ಪ್ರತಿದಿನವೂ ದಸರಾ ಸಂಗೀತೋತ್ಸವ, ದಸರಾ ನಾಟಕೋತ್ಸವ, ದಸರಾ ಜನಪದೋತ್ಸವ, ದಸರಾ ಕವಿಗೋಷ್ಠಿ, ದಸರಾ ಚಲನಚಿತ್ರೋತ್ಸವ, ದಸರಾ ಫಲಪುಷ್ಪಪ್ರದರ್ಶನ, ದಸರಾ ಕುಸ್ತಿ ಪ್ರದರ್ಶನ, ಬೊಂಬೆ ಪ್ರದರ್ಶನ, ದಸರಾ ಆಹಾರ ಮೇಳ, ಯುವದಸರಾ ಹೀಗೆ ವಿವಿಧ ಕಾರ್ಯಕ್ರಮಗಳು ನಡೆದರೆ, ದಸರಾ ಪ್ರಯುಕ್ತ ಕೆಲವು ಸಂಘಟನೆಗಳು ಹಲವು ಕಾರ್ಯಕ್ರಮಗಳನ್ನು ನಡೆಸುತ್ತವೆ.

ಇದೆಲ್ಲದರ ನಡುವೆ ಅಂಬಾವಿಲಾಸ ಅರಮನೆಯಲ್ಲಿ ನಡೆಯುವ ದಸರಾ ಖಾಸಗಿ ದರ್ಬಾರ್ ಗತದಿನಗಳ ರಾಜವೈಭವವನ್ನು ಮತ್ತೆ ನಮ್ಮ ಕಣ್ಮುಂದೆ ತೆರೆದಿಡುತ್ತದೆ. ನವರಾತ್ರಿಗೆ ಮೊದಲೇ ಅರಮನೆಯ ದರ್ಬಾರ್ ಹಾಲ್‌ನಲ್ಲಿ ರತ್ನಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭವಾಗುತ್ತದೆ. ನವರಾತ್ರಿ ಸಂದರ್ಭ ಅರಮನೆಯ ಸಂಪ್ರದಾಯದಂತೆ ಪೂಜಾಕಾರ್ಯವನ್ನು ನೆರವೇರಿಸಿ ಒಡೆಯರ್ ಮನೆತನದ ರಾಜರಾದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಿಂಹಾಸನವನ್ನು ಅಲಂಕರಿಸುತ್ತಾರೆ.

ಅರಮನೆಯಲ್ಲಿ ವಿವಿಧ ಪೂಜಾ ಕೈಂಕರ್ಯ

ದರ್ಬಾರ್‌ಹಾಲ್‌ಗೆ ಆಗಮಿಸುವ ಒಡೆಯರ್ ಸಿಂಹಾಸನಕ್ಕೆ ಪೂಜೆ ಮಾಡಿ ಬಳಿಕ ರಾಜಗಾಂಭೀರ್ಯದಿಂದ ಸಿಂಹಾಸನವನ್ನೇರಿ ಆ ಸ್ಥಾನಕ್ಕೆ ಬಲಗೈಯಿಂದ ಸೆಲ್ಯೂಟ್ ಹೊಡೆದು ರಾಜಗತ್ತಿನಲ್ಲಿ ಆಸೀನರಾಗುತ್ತಾರೆ. ಈ ಸಂದರ್ಭ ಹೊಗಳು ಭಟರಿಂದ ಬಹುಪರಾಕ್ ಕೇಳಿ ಬರುತ್ತದೆ. ನವರಾತ್ರಿಯ ಮೊದಲ ದಿನ ಅಂದರೆ ಪಾಡ್ಯದಂದು ಬೆಳಿಗ್ಗೆಯಿಂದ ಖಾಸಗಿ ದರ್ಬಾರ್ ನಡೆದರೆ, ಉಳಿದಂತೆ ಸಂಜೆ ವೇಳೆಯಲ್ಲಿ ನಡೆಯುತ್ತದೆ.

ಪ್ರತಿ ದಿನ ಖಾಸಗಿ ದರ್ಬಾರ್ ನಡೆಯುವ ಮುನ್ನ ಕೆಲವು ವಿಧಿವಿಧಾನಗಳು ಕೂಡ ಇಲ್ಲಿ ನಡೆಯುತ್ತದೆ. ಅದರಂತೆ ಪಟ್ಟದ ಆನೆ, ಹಸು, ಕುದುರೆಗಳಿಗೆ ಅಲಂಕಾರ ಮಾಡಿ ಕೋಟೆ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಅರಮನೆಗೆ ಇವುಗಳ ಪ್ರವೇಶವಾಗುತ್ತದೆ ನಂತರ ದರ್ಬಾರ್ ಆರಂಭವಾಗುತ್ತದೆ.

ಜಂಬೂ ಸವಾರಿ ಮಾತ್ರ ಅತ್ಯದ್ಭುತ

ವಿಜಯದಶಮಿಯಂದು ನಡೆಯುವ ಜಂಬೂ ಸವಾರಿ ಮಾತ್ರ ಅತ್ಯದ್ಬುತ. ಜಂಬೂ ಸವಾರಿಯ ಪ್ರಮುಖ ಆಕರ್ಷಣೆಯೇ ಚಿನ್ನದ ಅಂಬಾರಿ. ಮೊದಲು ಮಹಾರಾಜರು ಇದರಲ್ಲಿ ಕುಳಿತು ಮೆರವಣಿಗೆಯಲ್ಲಿ ಸಾಗುತ್ತಿದ್ದರೆ ಈಗ ಚಾಮುಂಡೇಶ್ವರಿಯ ವಿಗ್ರಹವನ್ನಿಟ್ಟು ಮೆರವಣಿಗೆ ನಡೆಯುತ್ತದೆ. ದಸರಾ ದಿನದಂದು ನಿಗದಿತ ಮುಹೂರ್ತದಲ್ಲಿ ವಿಧಿ ವಿಧಾನದಂತೆ ಅಂಬಾರಿಯನ್ನು ಅಭಿಮನ್ಯುಗೆ ಹೊರಿಸಲಾಗುತ್ತದೆ. ಇದರೊಂದಿಗೆ ಇತರ ಸಿಂಗಾರಗೊಂಡ ಇತರ 13 ಆನೆಗಳು ಹೆಜ್ಜೆ ಹಾಕುತ್ತವೆ.

ಈ ಸಂದರ್ಭ ನಡೆಯುವ ಜಂಬೂ ಸವಾರಿಯಲ್ಲಿ ರಕ್ಷಣಾ ಪಡೆಗಳ ಕವಾಯತ್, ವಿವಿಧ ಜಾನಪದ ಕಲಾತಂಡಗಳು, ವಿವಿಧ ಇಲಾಖೆಗಳಲ್ಲದೆ, ವಿವಿಧ ಜಿಲ್ಲೆಯ ಸ್ತಬ್ದ ಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಮನಸ್ಸೆಳೆಯುತ್ತವೆ. ಅರಮನೆಯ ಆವರಣದಿಂದ ಆರಂಭವಾಗುವ ಜಂಬೂಸವಾರಿ ಸಯ್ಯಾಜಿರಾವ್ ರಸ್ತೆ ಮೂಲಕ ಸಾಗಿ ಬನ್ನಿಮಂಟಪದಲ್ಲಿ ಬನ್ನಿ ಕಡಿಯುವುದರೊಂದಿಗೆ ಜಂಬೂಸವಾರಿ ಅಂತ್ಯಗೊಳ್ಳುತ್ತದೆ. ಬಳಿಕ ಬನ್ನಿಮಂಟಪದ ಮೈದಾನದಲ್ಲಿ ಅಂದು ರಾತ್ರಿ ನಡೆಯುವ ಪಂಜಿನ ಮೆರವಣಿಗೆ, ಬೈಕ್ ರೇಸ್, ಬಾಣಬಿರುಸು ಪ್ರದರ್ಶನದೊಂದಿಗೆ ದಸರಾಕ್ಕೆ ವಿದಾಯ ಹೇಳಲಾಗುತ್ತದೆ.

ಇದು ಎಂದೆಂದಿಗೂ ವಿಶ್ವದಸರವೇ

ದಸರಾದ ವೇಳೆ ಅರಮನೆಯಲ್ಲಿ ನಡೆಯುವ ದರ್ಬಾರ್, ಜಂಬೂಸವಾರಿಯ ವಿಧಿವಿಧಾನಗಳು ಹತ್ತು ಹಲವು ಇದ್ದು, ಅವುಗಳೆಲ್ಲವೂ ರಾಜಮಹಾರಾಜರ ಕಾಲದಲ್ಲಿ ಹೇಗೆ ನಡೆಯುತ್ತಿತ್ತೋ ಇವತ್ತಿಗೂ ಹಾಗೆಯೇ ನಡೆಯುತ್ತಿದೆ. ಅದರಾಚೆಗೆ ನಡೆಯುವ ಇತರೆ ಕಾರ್ಯಕ್ರಮಗಳಲ್ಲಿ ಹತ್ತು ಹಲವು ಬದಲಾವಣೆ ಕಂಡಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಮೈಸೂರು ದಸರಾ ಎನ್ನುವುದು ಬೇರೆಲ್ಲೂ ನೋಡಲಾಗದ ಮೈಸೂರಿನಲ್ಲಷ್ಟೇ ನೋಡಬಹುದಾದ ಮಹಾಉತ್ಸವವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+