ಅಮ್ಮಂದಿರ ದಿನ ವಿಶೇಷ: ಅವ್ವ ಅಂದ್ರೆ ಆಲದ ಮರ
ಅವ್ವ ಎಂದರೆ ಪದವಲ್ಲ
ಪದೇಪದೆ ಸಿಗುವ ವಸ್ತುವಲ್ಲ
ಅವಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ
ದೇವರಿಗಿಂತ ಕಡಿಮೆ ಇಲ್ಲ
ಹುಡುಕಿದರೆ ಬರುವುದಿಲ್ಲ
ಇವಳನ್ನು ಕಳೆದುಕೊಂಡರೆ ಜೀವನವೇ ಇಲ್ಲ
ಹೀಗೆ ಅವ್ವನ ಬಗ್ಗೆ ಕವಿತೆ-ಲೇಖನಗಳನ್ನು ಓದುವಾಗ ನನ್ನ ಕಣ್ಣ ಮುಂದೆ ನನ್ನ ಅವ್ವ ಪ್ರತ್ಯಕ್ಷವಾಗುತ್ತಾಳೆ. ಎದೆಯಲ್ಲಿ ನೂರೆಂಟು ನೋವು-ಕಷ್ಟಗಳಿದ್ದರೂ, ಮುಖದ ಮೇಲೆ ನಗುವಿನ ಮುಖವಾಡ ಹೊತ್ತುಕೊಂಡು ತಿರುಗಾಡುವ ಶಾಂತಿ ಮಾತೆ ನನ್ನವ್ವ. ಅಪ್ಪಟ ದೇವತೆಯಂತೆ ಕಾಣುವ ನನ್ನವ್ವ ಬಡತನದ ಬೆಂಕಿಯಲ್ಲಿ ಬೆಂದರೂ, ಕಷ್ಟದ ಕಣ್ಣೀರಲ್ಲಿ ಕೈ ತೊಳೆದರೂ, ಅವಮಾನದಲ್ಲಿ ಜೀವನ ನಡೆಸುತ್ತಿದ್ದ ನನ್ನವ್ವ ಮಾಡುವ ಕೆಲಸ ಒಂದಲ್ಲ, ಎರಡಲ್ಲ, ನಾಳೆ ಮಾಡುವ ಕೆಲಸಗಳಿಗೆ ರಾತ್ರಿಯೇ ತಾಲೀಮು ನಡೆಸುತ್ತಿದ್ದಳು.
ತನಗಾಗಿ ಬದುಕುವುದನ್ನೇ ಮರೆಯುವ ತ್ಯಾಗಮಯಿ 'ಅಮ್ಮ'
ನಸುಕಿನಲ್ಲಿ ಎದ್ದ ಅವ್ವ ಮನೆಯ ಅಂಗಳದ ಕಸ ಮತ್ತು ಎಮ್ಮೆಯ ಸಗಣಿ ಬಳಿದು, ಕೆಲಸ ಮುಗಿಸಿ ಮಕ್ಕಳಿಗೆ ಅಡುಗೆ ಮಾಡಿ, ಕೊರೆಯುವ ಚಳಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಒಂದು ಸಾರಿ ನನಗೆ ಜ್ವರ ಬಂದಾಗ ನಮ್ಮೂರಿನಿಂದ 3 ಕಿ.ಮೀ. ದೂರದ ಮಾಟುರು ಎಂಬ ಊರಿಗೆ ಬೆಳ್ಳಂಬೆಳಗ್ಗೆ ನನ್ನನ್ನು ತನ್ನ ಸೊಂಟದ ಮೇಲೆ ಎತ್ತಿಕೊಂಡು ಹೋಗಿ ಆರ್‌ಎಂಪಿ ಡಾಕ್ಟರ್ ಶಿವಕುಮಾರ ಹತ್ತಿರ ಸೂಜಿ ಮಾಡಿಸಿಕೊಂಡು ಬಂದು, ನನ್ನನ್ನು ಬಿಟ್ಟು ಕೆಲಸಕ್ಕೆ ಹೋದಾಗ ಆ ಸೋಮಾರಿಯ ಸೂರ್ಯ ಇನ್ನೂ ಮಲಕೊಂಡಿರುತ್ತಿದ್ದ. ಬರಿಗಾಲಲ್ಲಿ ನಡೆಯುವ ಅವ್ವನಿಗೆ ಕಲ್ಲು-ಮುಳ್ಳುಗಳ ಭಯವೇ ಇರುತ್ತಿರಲಿಲ್ಲ. ಗದ್ದೆಯ ಕೆಲಸಕ್ಕೆ ಹೋದಾಗ ಗದ್ದೆಯವರು ಕೊಡುತ್ತಿದ್ದ ಮಿರ್ಚಿ-ಪುರಿಯನ್ನು ತಾನು ತಿನ್ನದೆ ನಮಗಾಗಿ ತಂದು ಕೊಡುತ್ತಿದ್ದಳು. ರಾತ್ರಿ ಅಡುಗೆ ಮಾಡಿ ಮಕ್ಕಳಿಗೆ ತಿನ್ನಿಸಿ, ತಾನು ಉಂಡು ಮಲಗುವ ಹೊತ್ತಿಗೆ ಆ ಗಡಿಯಾರದ ಮುಳ್ಳುಗಳು ನೆತ್ತಿಯ ಮೇಲೆ ಬರುತ್ತಿದ್ದವು.
ನನ್ನ ಅಪ್ಪನ ಸಾವಿನಸುದ್ದಿ:
ಒಂದು ದಿನ ಪಾರ್ಶ್ವದಿಂದ ಬಳಲುತ್ತಿದ್ದ ನನ್ನ ಅಪ್ಪನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿಯ ಮಧ್ಯದಲ್ಲಿಯೇ ಉಸಿರು ಬಿಟ್ಟ. ನನ್ನ ಅಪ್ಪನ ಸಾವಿನಸುದ್ದಿ ನನ್ನವ್ವನಿಗೆ ತಲೆಯ ಮೇಲೆ ಆಕಾಶವೇ ಬಿದ್ದಂತಾಯಿತು. ನಿಂತ ನೆಲವೇ ಬಿರುಕು ಬಿಟ್ಟಂತಾಯಿತು. ಅವ್ವನನ್ನು ಅಪ್ಪ ನಡು ನೀರಿನಲ್ಲಿ ಬಿಟ್ಟು ಹೋದ, ಆಗ ನಾವು ಒಟ್ಟು ನಾಲ್ವರು ಮಕ್ಕಳು. ನಾನು ಆವಾಗ ಒಂದನೇ ತರಗತಿಯಲ್ಲಿ ಓದುತ್ತಿದ್ದೆ. ನಮ್ಮಪ್ಪ ತೀರಿಕೊಂಡ ಮೇಲೆ ಆತನ ಮನೆಯವರು ಅವ್ವನಿಗೆ ಕೊಡಬಾರದ ಕಷ್ಟ ಕೊಟ್ಟರು. ನಮ್ಮಪ್ಪ ಸತ್ತ 3 ದಿನಗಳಲ್ಲಿ ದಿವಸ ಮಾಡಿ, 15 ದಿನಗಳಲ್ಲೇ ನಮ್ಮನ್ನು ಮನೆ ಬಿಟ್ಟು ಹೊರಗೆ ಹಾಕಿದರು. ನಮ್ಮನ್ನು ಹೊರಗೆ ಹಾಕಿದ ದಿನ ಗೌರಮ್ಮನ ಹಬ್ಬವಿತ್ತು. ಆ ದಿನ ಇವತ್ತಿಗೂ ನೆನಪಿದೆ.
ಅಮ್ಮಂದಿರ ಪ್ರಪಂಚ ಚಿಕ್ಕದು, ಪ್ರೀತಿ ಅಳತೆಗೆ ಸಿಗದು
ಆಡು, ಕುರಿ-ಮರಿಗಳನ್ನು ಕಟ್ಟುವಂತಹ ಕೋಣೆಯಲ್ಲಿ ನಮ್ಮ ಜೀವನ ಬಂಡಿ ಸಾಗಿತು. ಅವ್ವನನ್ನು ಅಪ್ಪ ನಡು ನೀರಿನಲ್ಲಿ ಕೈ ಬಿಟ್ಟು ಹೋದರು. ಆದರೂ ಅವ್ವ ಎದೆಗುಂದಲಿಲ್ಲ. ತನ್ನೆಲ್ಲ ಸುಖ ಶಾಂತಿಯನ್ನು ತ್ಯಾಗ ಮಾಡಿ ವನವಾಸದಲ್ಲಿ ನಿಂತ ಸೀತಾ ಮಾತೆಯಂತೆ ಬದುಕುವ ಛಲವನ್ನು ಹೊತ್ತು ಕಷ್ಟ ಕೊಟ್ಟವರ ಎದುರು ತಲೆ ಎತ್ತಿ ಬಾಳಬೇಕೆಂದು ಹಟ ತೊಟ್ಟಳು, ನಾವು ಇರುವ ಸರ್ಕಾರದ ಜನತಾ ಮನೆಯ ಪಕ್ಕದಲ್ಲಿ ಕಲ್ಲು, ಜಾಲಿ ಇದ್ದ ಕಾರಣ ಹಾವು, ಚೇಳು ಇರುತ್ತಿದ್ದವು. ಮನೆಯ ಹಿಂದೆ ತುಂಬ ಹಳೆಯದಾದ ದೊಡ್ಡ ಬೇವಿನ ಮರ ಇತ್ತು. ಮಳೆ, ಗಾಳಿ ಬಂದರೆ ಎಲ್ಲಿ ಬಿದ್ದುಬಿಡುತ್ತೋ ಅಂತ ಆಕೆಗೆ ರಾತ್ರಿ ಅಲ್ಲ, ಹಗಲೇ ಚಿಂತೆ ಇರುತ್ತಿತ್ತು. ನಾವು ಮಾತ್ರ ನಿಶ್ಚಿಂತೆಯಿಂದ ಮಲಗಿಕೊಂಡು ಇರುತ್ತಿದ್ದೆವು. ಹೀಗೆ ನನ್ನವ್ವ ಅನುಭವಿಸಿದ ಕಷ್ಟಗಳನ್ನು ಪಟ್ಟಿ ಮಾಡುತ್ತ ಹೋದರೆ ಒಂದು ಲೇಖನವಲ್ಲ, ಪುಸ್ತಕವೇ ಆಗುತ್ತದೆ.
ಶಾಲೆಯ ಮುಖವನ್ನು ಕಂಡವಳಲ್ಲ:
ನನ್ನವ್ವ ಒಂದು ದಿನ ಕೂಡ ಶಾಲೆಯ ಮುಖವನ್ನು ಕಂಡವಳಲ್ಲ. ಆದರೆ ತನ್ನ ನಾಲ್ವರು ಮಕ್ಕಳಲ್ಲಿ ಮೂವರು ಮಕ್ಕಳನ್ನು ಕಡುಬಡತನದಲ್ಲಿ ಓದಿಸಿದಳು. ಅದರಲ್ಲೂ ನಾನು ಎಂಎ ಪಡೆದು, ಪೊಲೀಸ್ ಆದೆ. ಆಗ ನನ್ನವ್ವ ಹೇಳಿದಳು, ಇವತ್ತಿಗೆ ನಮ್ಮ ಕಷ್ಟ, ಬಡತನ ದೂರವಾಯಿತು ಎಂದು ಹೇಳಿದಾಗ, ಆ ಒಂದು ಕ್ಷಣ ನನ್ನ ಕಣ್ಣುಗಳಲ್ಲಿ ನೀರು. ಆಗ ನನಗೆ ಅನಿಸಿತು, ನನ್ನವ್ವನಿಗೆ ನಾನು ತಕ್ಕ ಮಗನಲ್ಲ ಅಂತ. ಯಾಕೆಂದರೆ ನನ್ನವ್ವನ ಕಷ್ಟಗಳನ್ನು ಮತ್ತು ನನ್ನವ್ವನನ್ನು ಗುರುತಿಸುವ ಉನ್ನತವಾದ ಕೆಲಸ ಪಡೆಯಬೇಕಿತ್ತು ಅಂತ.
ಆಕೆ ಕೊಟ್ಟ ಉತ್ತರ ಜೀವನದಲ್ಲಿ ಎಂದೂ ಮರೆಯಲಾಗದು
ಋತುಮಾನಗಳು ಬದಲಾದರೂ ಅವ್ವ ಬದಲಾಗಲಿಲ್ಲ. ಸದಾ ಬಾಡಿಗೆ ಎತ್ತಿನಂತೆ ದುಡಿಯುವ ಅವ್ವನಿಗೆ ಯಾವ ರಜೆಯೂ ಇಲ್ಲ, ಯಾವ ಭತ್ಯೆಯೂ ಇಲ್ಲ. ನನ್ನವ್ವನಿಗೆ ಬಿಸಿಲೇ ಬೆಳದಿಂಗಳು, ಆಕೆಗೆ ಯಾವ ಕಾನೂನೂ ಗೊತ್ತಿಲ್ಲ, ಗೊತ್ತಿರುವುದು ದುಡಿಮೆಯ ಕಾನೂನು ಮಾತ್ರ. ಸದಾ ದುಡಿಮೆಯ ಜಪಿಸುವ ಆಕೆ ದುಡಿಯಲೆಂದೇ ಹುಟ್ಟಿದವಳಂತೆ ಕಾಣುತ್ತಾಳೆ.
ನನ್ನವ್ವನ ಛಲ ಎಲ್ಲರನ್ನೂ ಬೆರಗುಗೊಳಿಸುತ್ತದೆ:
ತಂದೆ ಸತ್ತರೆ ಮಕ್ಕಳು ಅರ್ಧ ತಬ್ಬಲಿ, ತಾಯಿ ತೀರಿದರೆ ಮಕ್ಕಳು ಪೂರ್ಣ ಅನಾಥರು. ನಿಜಕ್ಕೂ ನನ್ನವ್ವ ಮರುಭೂಮಿಯಲ್ಲಿನ ಜೀವಜಲ. ತುಂಬ ಸ್ವಾಭಿಮಾನಿ, ಯಾರ ಮುಂದೆ ಕಷ್ಟ ಎಂದು ಕೈ ಚಾಚಿದವಳಲ್ಲ. ನನ್ನವ್ವನ ಛಲ ಎಲ್ಲರನ್ನೂ ಬೆರಗುಗೊಳಿಸುವಂಥಾದ್ದು. ನನ್ನವ್ವ ನಮ್ಮ ಕುಟುಂಬಕ್ಕೆ ವಿಶಾಲವಾದ ಆಲದ ಮರದಂತೆ ನೆರಳಾಗಿದ್ದಾಳೆ.
ನನ್ನವ್ವ ಗಂಜಿ ಕುಡಿದರೂ ಅಪರಂಜಿಯಂತೆ ಬದುಕುತ್ತಿರುವವಳು. ದೇವರೇ ನಿನ್ನಲ್ಲಿ ನನ್ನದೊಂದು ಕೋರಿಕೆ, ನನ್ನವ್ವನಿಗೆ ಬಂದಂತಹ ಕಷ್ಟ, ಬಡತನ,ನೋವುಗಳನ್ನು ಜಗತ್ತಿಗೂ ಯಾವ ಹೆಣ್ಣಿಗೂ ಕೊಡಬೇಡ.
ಕೊನೆಯದಾಗಿ ಒಂದು ಮಾತು, ತನ್ನ ಕುಟುಂಬಕ್ಕಾಗಿ ತನ್ನ ಜೀವನವನ್ನು ತ್ಯಾಗ ಮಾಡುವ ಜಗದ ಎಲ್ಲ ತಾಯಂದಿರಿಗೆ ನನ್ನ ಕೋಟಿ ನಮನಗಳು. ಎಲ್ಲ ಮಾತೆಯರಿಗೂ ತಾಯಂದಿರ ದಿನದ ಶುಭಾಶಯಗಳು.
-ವಿರುಪಾಕ್ಷಗೌಡ, ಬಪ್ಪೂರ,ಸಿಂಧನೂರು ತಾಲೂಕು, ರಾಯಚೂರು ಜಿಲ್ಲೆ.