Maha Kumbh Mela: ಮಹಾ ಶಿವರಾತ್ರಿಯ ಪವಿತ್ರ ಸ್ನಾನಕ್ಕೆ ಮಹಾಕುಂಭ ಮೇಳದಲ್ಲಿ ಏನೆಲ್ಲ ವ್ಯವಸ್ಥೆ?
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜನವರಿ 13ರಂದು ಶುರುವಾದ ಮಹಾಕುಂಭ ಮೇಳವು ಫೆಬ್ರವರಿ 26ರ ಮಹಾಶಿವರಾತ್ರಿಯಂದು ಕೊನೆಗೊಳ್ಳಲಿದೆ. ಈ ಹಿನ್ನೆಲೆ ಮಹಾ ಶಿವರಾತ್ರಿ ಹಬ್ಬಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಾಧ್ಯತೆ ಇರುವುದರಿಂದ ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಡಿಐಜಿ ಕೃಷ್ಣ ಹೇಳಿದ್ದಾರೆ. ಶಿವರಾತ್ರಿ ಹಬ್ಬಕ್ಕೆ ಸಂಪೂರ್ಣ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಮಹಾಕುಂಭ ಮೇಳದ ಪ್ರದೇಶದಲ್ಲಿ ಎಲ್ಲಿಯೂ ಟ್ರಾಫಿಕ್ ಜಾಮ್ ಆಗದಂತೆ ಕ್ರಮ ಕೈಗೊಳ್ಳುತ್ತಿದ್ದೇವೆ. ಎಲ್ಲ ವ್ಯವಸ್ಥೆಗಳು ಸುಗಮವಾಗಿ ನಡೆಯಲಿದ್ದು ಎಷ್ಟೇ ಜನಸಂದಣಿ ಇದ್ದರೂ ಸಂಪೂರ್ಣವಾಗಿ ಸಜ್ಜಾಗಿದ್ದೇವೆ ಎಂದಿದ್ದಾರೆ.
ಭಾನುವಾರ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಕುಂಭಮೇಳ ಶುರುವಾದ ಈವರೆಗೆ ಒಟ್ಟು 620 ಮಿಲಿಯನ್ ಜನರು ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರದ ಮಾಹಿತಿ ಇಲಾಖೆ ಮಾಹಿತಿ ನೀಡಿದೆ.

ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭಮೇಳಕ್ಕೆ 620 ಮಿಲಿಯನ್ ಭಕ್ತರು ಭೇಟಿ ನೀಡಿದ್ದಾರೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೂಡ ಹೇಳಿದ್ದಾರೆ. ಮಹಾಕುಂಭ ಮೇಳವನ್ನು ನಿರ್ವಹಿಸುವ ಅಧಿಕಾರಿಗಳು ಸುಗಮ ನಿರ್ವಹಣೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಯೋಧ್ಯಾ ಧಾಮ್ ರೈಲು ನಿಲ್ದಾಣದಲ್ಲಿ ಜನಸಂದಣಿ ನಿಯಂತ್ರಣ ಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಮುಂಬರುವ ಮಹಾಶಿವರಾತ್ರಿ ಉತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ರೈಲು ಬಂದಾಗ ಮಾತ್ರ ಭಕ್ತರು ಪ್ಲಾಟ್‌ಫಾರ್ಮ್‌ಗೆ ಹೋಗುವ ವ್ಯವಸ್ಥೆ ಮಾಡಲಾಗಿದೆ.
ಸುಳ್ಳು ಮಾಹಿತಿ ಹರಡಿದ 140 ಅಕೌಂಟ್‌ಗಳ ವಿರುದ್ಧ ಎಫ್‌ಐಆರ್
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ತಪ್ಪು ಮಾಹಿತಿ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ 140 ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳ ವಿರುದ್ಧ ಪೊಲೀಸರು 13 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಮಹಾಕುಂಭ ಮೇಳದ ಬಗ್ಗೆ ಈ ಖಾತೆಗಳು ತಪ್ಪು ಸಂದೇಶಗಳನ್ನು ಹಂಚಿಕೊಳ್ಳುತ್ತಿತ್ತು. ಈ ಮೂಲಕ ಭಕ್ತರನ್ನು ತಪ್ಪು ದಾರಿಗೆ ಎಳೆಯುತ್ತಿದ್ದವು ಎಂದು ಪೊಲೀಸ್ ಉಪ ಮಹಾನಿರೀಕ್ಷಕ (ಡಿಐಜಿ) ವೈಭವ್ ಕೃಷ್ಣ ಹೇಳಿದ್ದಾರೆ.
ತಪ್ಪು ಮಾಹಿತಿ ಶೇರ್ ಮಾಡಿದ್ದ 140 ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸುಳ್ಳು ಮಾಹಿತಿ ಹರಡಿದರೂ ಮಹಾಕುಂಭ ಮೇಳದಲ್ಲಿ ಭಾರಿ ಜನಸ್ತೋಮ ಕಂಡು ಬಂದಿದೆ ಎಂದು ಅವರು ಹೇಳಿದ್ದಾರೆ. ಈ ಹಿಂದೆ ರೈಲು ಬೆಂಕಿಗೆ ಸಂಬಂಧಿಸಿದಂತೆ ಸುಳ್ಳು ಹೇಳಿಕೆಗಳನ್ನು ಹರಡಿದ್ದ 34 ಅಕೌಂಟ್‌ಗಳ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದರು.
ಫೆಬ್ರವರಿ 14ರಂದು ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡು 300 ಜನರು ಸಾವನ್ನಪ್ಪಿದ್ದಾರೆ ಎಂಬ ಸುಳ್ಳು ವಿಡಿಯೋ ವೈರಲ್ ಮಾಡಿದ್ದರು. 2022ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಘಟನೆಯ ದೃಶ್ಯಗಳು, ಢಾಕಾ-ಸಿಲ್ಹೆಟ್ ರೈಲು ಮಾರ್ಗದಲ್ಲಿ ಪರ್ಬತ್ ಎಕ್ಸ್‌ಪ್ರೆಸ್ ಬೆಂಕಿ ಬಿದ್ದಿದ್ದ ವಿಡಿಯೋಗಳನ್ನು ಮಹಾಕುಂಭ ಮೇಳದ್ದು ಎಂದು ಬಿಂಬಿಸಿ ಸುಳ್ಳು ಮಾಹಿತಿ ಹರಡಿದ್ದರು ಎನ್ನಲಾಗಿದೆ.












Click it and Unblock the Notifications