Valet parking: ವ್ಯಾಲೆಟ್ ಪಾರ್ಕಿಂಗ್ ಅಂತ ಕಾರು ಕೀ ಕೊಡೋ ಮುನ್ನ ಹುಷಾರ್
ದೊಡ್ಡ ದೊಡ್ಡ ಸ್ಟಾರ್ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳು ತಮ್ಮ ಗ್ರಾಹಕರಿಗಾಗಿ ವ್ಯಾಲೆಟ್ ಪಾರ್ಕಿಂಗ್ (Valet parking) ಸೇವೆ ನೀಡುತ್ತವೆ. ಹೋಟೆಲ್‌ನವರೇ ತಮ್ಮ ಗ್ರಾಹಕರ ಕಾರ್ ಕೀ ಪಡೆದು ಜೋಪಾನವಾಗಿ ಪಾರ್ಕ್ ಮಾಡುತ್ತಾರೆ. ಇದರಿಂದ ಗ್ರಾಹಕರು ನೇರವಾಗಿ ಹೋಟೆಲ್, ರೆಸ್ಟೋರೆಂಟ್ ಒಳಗೆ ಪ್ರವೇಶಿಸಬಹುದು. ಹಾಗೂ ಪಾರ್ಕಿಂಗ್ ಜಾಗ ಹುಡುಕಿ ಕಾರು ನಿಲ್ಲಿಸುವ ತಲೆನೋವು ಕೂಡ ಇರೋದಿಲ್ಲ. ಹಾಗಾಗಿ ಈ ವ್ಯಾಲೆಟ್ ಪಾರ್ಕಿಂಗ್ ಸೇವೆ ಗ್ರಾಹಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಬೆಂಗಳೂರಿನಲ್ಲೇ ನಡೆದಿರುವ ಘಟನೆಯೊಂದು ವ್ಯಾಲೆಟ್ ಪಾರ್ಕಿಂಗ್ ಅಂದ್ರೆ ಬೆಚ್ಚಿಬೀಳಿಸುವಂತಿದೆ. ಕಾರು ಕೀಯನ್ನ ಹೋಟೆಲ್ ಸಿಬ್ಬಂದಿಗೆ ನೀಡುವವರು ತಪ್ಪದೇ ಈ ಸ್ಟೋರಿ ಓದಲೇಬೇಕು..
ವ್ಯಾಲೆಟ್ ಪಾರ್ಕಿಂಗ್ ಎನ್ನುವುದು ಕೆಲವು ರೆಸ್ಟೋರೆಂಟ್‌ಗಳು, ಇತರ ವ್ಯಾಪಾರ ಮಳಿಗೆಗಳು ನೀಡುವ ಪಾರ್ಕಿಂಗ್ ಸೇವೆಯಾಗಿದೆ. ಗ್ರಾಹಕರು ತಾವೇ ಪಾರ್ಕ್ ಮಾಡುವ ಬದಲಿಗೆ ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿಯನ್ನೇ ನಿಯೋಜಿಸಲಾಗಿರುತ್ತದೆ. ಬೆಂಗಳೂರಿನ ಮಾರತಹಳ್ಳಿಯ ರೆಸ್ಟೋರೆಂಟ್‌ವೊಂದರಲ್ಲಿ ಈ ಸೇವೆಯು ದೊಡ್ಡ ಅವಾಂತರವನ್ನೇ ತಂದಿಟ್ಟಿದೆ. ಮಹಿಳೆಯೊಬ್ಬರು ಈ ರೆಸ್ಟೋರೆಂಟ್‌ಗೆ ಆಹಾರ ಸೇವಿಸಲು ಕಾರಿನಲ್ಲಿ ಬಂದಿದ್ದರು. ಸುಮಾರು ₹1.4 ಕೋಟಿ ಮೌಲ್ಯದ ಮರ್ಸಿಡಿಸ್-ಬೆನ್ಜ್ ಕಾರನ್ನು ವ್ಯಾಲೆಟ್ ಪಾರ್ಕಿಂಗ್‌ಗೆ ನೀಡಿದ್ದರು.

ಆದರೆ, ರೆಸ್ಟೋರೆಂಟ್ ಒಳಗೆ ಹೋಗಿ ಬರುವಷ್ಟರಲ್ಲಿ ಕಾರಿನ ಸ್ವರೂಪವೇ ಬದಲಾಗಿ ಮಹಿಳೆಯ ತಲೆತಿರುಗುವಂತೆ ಮಾಡಿದೆ. ವ್ಯಾಲೆಟ್ ಚಾಲಕರ ಅಜಾಗರೂಕತೆಯಿಂದಾಗಿ ಮಹಿಳೆಯ ಕೋಟಿ ಕೋಟಿ ಬೆಲೆ ಬಾಳುವ ಬೆನ್ಜ್ ಕಾರು ನಾಶವಾಗಿದೆ. ಅಲ್ಲಿನ ಸಿಬ್ಬಂದಿ ಕಾರನ್ನು ಪಾರ್ಕಿಂಗ್ ಮಾಡುವ ಬದಲು ಒಂದು ರೌಂಡ್ ಸುತ್ತಿ ಬರೋಣ ಎಂದು ಜಾಯ್‌ರೈಡ್‌ಗೆ ಹೋಗಿದ್ದಾರೆ. ಬಳಿಕ ಗೋಡೆಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನಾಶವಾಗಿದೆ. ಈ ಘಟನೆ ನಂತರ ಆ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಹೊಣೆಯನ್ನು ಹೊರಬೇಕಿದ್ದ ರೆಸ್ಟೋರೆಂಟ್ ಕೂಡ ನಕಲಿ ಚಾಲಕರ ವಿವರಗಳನ್ನು ನೀಡಿ ಈ ಆಪಾದನೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದೆ. ಕೊನೆಗೆ ಆ ಮಹಿಳೆಯು ಪೊಲೀಸ್ ಠಾಣೆಗೆ ಹೋಗಿ ಅಲ್ಲಿ ದೂರು ಕೊಡಲು ನಿರ್ಧರಿಸಿದ್ದಾರೆ. ಆದರೆ ಅಲ್ಲಿಯೂ ಮಹಿಳೆಯು ಭ್ರಷ್ಟಾಚಾರ ಕಂಡು ಬೇಸರಗೊಂಡಿದ್ದಾರೆ. ಕಾರಿನ ಮಾಲೀಕರಿಗೆ ನ್ಯಾಯ ಕೊಡಿಸಬೇಕಿದ್ದ ಪೊಲೀಸರು ಕಾನೂನು ಕ್ರಮ ಕೈಗೊಳ್ಳುವ ಬದಲಿಗೆ ಎರಡು ಲಕ್ಷ ರೂಪಾಯಿಗೆ ಈ ವಿಚಾರವನ್ನು ಇತ್ಯರ್ಥ ಮಾಡಿಕೊಳ್ಳಿ ಎಂದು ಸೂಚಿಸಿದ್ದಾರೆ.
ಈ ಫಜೀತಿಗೆ ಕಾರಣವಾದ ರೆಸ್ಟೋರೆಂಟ್ ಕೂಡ ಮುಕ್ತವಾಗಿ ಕಾರ್ಯನಿರ್ವಹಿಸುತ್ತಲೇ ಇದೆ. ಅಲ್ಲಿದ್ದ ವ್ಯಾಲೆಟ್ ಚಾಲಕರು ಕಾಣೆಯಾಗಿದ್ದಾರೆ. ಇತ್ತ ನೊಂದ ಮಹಿಳೆ ಏಕಾಂಗಿಯಾಗಿ ಹೋರಾಡುತ್ತಿದ್ದಾರೆ. ಕಾರು ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಅದರ ರಿಪೇರಿಗೆ ₹20 ಲಕ್ಷ ರೂಪಾಯಿ ಖರ್ಚು ಬೀಳಲಿದೆ ಎಂದು ತಿಳಿದು ಕಂಗಾಲಾಗಿದ್ದಾರೆ. ಬೆಂಗಳೂರಿನಲ್ಲಿ 20 ನಿಮಿಷಗಳ ಆಹಾರಕ್ಕಾಗಿ 20 ಲಕ್ಷ ನಷ್ಟ ಎಂದು ಶಾಕ್ ಆಗಿದ್ದಾರೆ. ಈ ಕಾರಿನ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೆಂಗಳೂರಿನಲ್ಲಿರುವ ಆಡಳಿತ ವೈಫಲ್ಯ, ಕಾರ್ಪೊರೇಟ್ ನಿರ್ಲಕ್ಷ್ಯ ಮತ್ತು ಪೊಲೀಸರ ಭ್ರಷ್ಟಾಚಾರಕ್ಕೆ ಇದೊಂದು ಉತ್ತಮ ನಿದರ್ಶನ ಎಂದು ಹೇಳಿದ್ದಾರೆ.
ಈ ಘಟನೆಯು ಬೆಂಗಳೂರಿನಲ್ಲಿ ಕುಸಿಯುತ್ತಿರುವ ಗ್ರಾಹಕ ಹಕ್ಕುಗಳು, ಕಾನೂನು ಜಾರಿ ವೈಫಲ್ಯಗಳನ್ನು ಎತ್ತಿ ತೋರಿಸುತ್ತಿದೆ. ಐಷಾರಾಮಿ ಕಾರಿನ ಕೇಸ್ ಅನ್ನೇ ಅಷ್ಟು ಸುಲಭವಾಗಿ ಮುಚ್ಚಿ ಹಾಕಬಹುದು ಎನ್ನುವುದಾದರೆ, ಸಾಮಾನ್ಯ ಜನರ ಗತಿ ಏನು? ರಾಜ್ಯ ಸರ್ಕಾರವು ಬ್ರ್ಯಾಂಡ್ ಬೆಂಗಳೂರು ಎಂದು ಹೆಮ್ಮೆಪಡುತ್ತದೆ. ಆದರೆ ವಾಸ್ತವದಲ್ಲಿ ನೊಂದವರಿಗೆ ನ್ಯಾಯ ಸಿಗದ ಪರಿಸ್ಥಿತಿ ಇದೆ ಎಂದು ನೆಟ್ಟಿಗರು ಈ ಘಟನೆಯನ್ನ ಖಂಡಿಸಿದ್ದಾರೆ.












Click it and Unblock the Notifications