ಎರಡನೇ ಕುಂಭಮೇಳಕ್ಕೆ ಸಾಕ್ಷಿಯಾಗಲಿರುವ ಅಂಬಿಗರಹಳ್ಳಿ!
ಇದುವರೆಗೆ ತನ್ನೊಡಲಲ್ಲಿ ನಿಸರ್ಗದ ಸಿರಿಯನ್ನು ತುಂಬಿಕೊಂಡು ಪ್ರಶಾಂತ ತಾಣವಾಗಿದ್ದ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಂಬಿಗರಹಳ್ಳಿ ಇದೀಗ ಭಕ್ತರ ಕೇಂದ್ರಬಿಂದುವಾಗಿ ಗಮನಸೆಳೆಯುತ್ತಿದೆ. ಇದಕ್ಕೆ ಕಾರಣವಾಗಿರುವುದು ಇಲ್ಲಿ ಎರಡನೇ ಬಾರಿಗೆ ನಡೆಯುತ್ತಿರುವ ಕುಂಭಮೇಳ.
ಇದುವರೆಗೆ ಈ ಕ್ಷೇತ್ರಕ್ಕೆ ಭಕ್ತರು ಎನ್ನುವುದಕ್ಕಿಂತ ಪ್ರವಾಸಿಗರು ನಿಸರ್ಗ ಸೌಂದರ್ಯವನ್ನು ಸವಿಯುವ ಸಲುವಾಗಿ ವೀಕೆಂಡ್‌ನಲ್ಲಿ ಹೆಚ್ಚಾಗಿ ಬರುತ್ತಿದ್ದರಾದರೂ ಉಳಿದಂತೆ ಈ ಸ್ಥಳ ಪ್ರಶಾಂತವಾಗಿಯೇ ಜನರಿಂದ ದೂರ ಉಳಿದಿತ್ತು. ಇದೀಗ ಅಕ್ಟೋಬರ್ 13ರಿಂದ 16ರವರೆಗೆ ಕುಂಭಮೇಳ ನಡೆಯುತ್ತಿರುವುದರಿಂದ ಭಕ್ತ ಸಾಗರವೇ ಇಲ್ಲಿಗೆ ಹರಿದು ಬರಲಿದೆ. ಸ್ಥಳದ ಖ್ಯಾತಿ ಎಲ್ಲೆಡೆ ಪಸರಿಸಲಿದೆ.
ಈಗಾಗಲೇ ಕೃಷ್ಣರಾಜಸಾಗರ ಜಲಾಶಯವು ಭರ್ತಿಯಾಗಿದ್ದು, ಹಿನ್ನೀರಿನ ನೋಟ ರಮಣೀಯವಾಗಿದ್ದು, ಈ ಸುಂದರ ದೃಶ್ಯ ಕಣ್ತುಂಬಿ ಬರುತ್ತಿರುವಾಗಲೇ ಕುಂಭಮೇಳ ನಡೆಯುತ್ತಿರುವುದು ಈ ಕ್ಷೇತ್ರದ ಹಿರಿಮೆಯನ್ನು ಇಮ್ಮಡಿಗೊಳಿಸುವಂತೆ ಮಾಡಿದೆ. ಕೃಷ್ಣರಾಜಪೇಟೆ ತಾಲೂಕಿನ ತ್ರಿವಳಿ ಗ್ರಾಮಗಳಾದ ಪುರ- ಅಂಬಿಗರಹಳ್ಳಿ- ಸಂಗಾಪುರ ಗ್ರಾಮಗಳ ಪಕ್ಕದಲ್ಲಿರುವ ಹೇಮಾವತಿ, ಕಾವೇರಿ, ಮತ್ತು ಲಕ್ಷ್ಮಣ ತೀರ್ಥ ನದಿಗಳ ಸಂಗಮ ಕ್ಷೇತ್ರವಾಗಿದೆ.

ಅಂಬಿಗರಹಳ್ಳಿಯಲ್ಲಿ ಕಾವೇರಿ-ಲಕ್ಷ್ಮಣತೀರ್ಥ ಸಂಗಮ
ನಿಸರ್ಗ ರಮಣೀಯ ಮಾತ್ರವಲ್ಲದೆ, ದೈವಿಕ ಕ್ಷೇತ್ರವಾಗಿಯೂ ಗಮನಸೆಳೆಯುತ್ತಾ ಬಂದಿದೆ. ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ಕೊಡಗು, ಮೈಸೂರು, ಹಾಸನಕ್ಕಾಗಿ ಹರಿದು ಅಂಬಿಗರಹಳ್ಳಿಗೆ ಬರುವ ಕಾವೇರಿಗೆ ದಕ್ಷಿಣ ಕೊಡಗಿನ ಬ್ರಹ್ಮಗಿರಿ ಬೆಟ್ಟಶ್ರೇಣಿಯಲ್ಲಿ ಹುಟ್ಟುವ ಲಕ್ಷ್ಮಣತೀರ್ಥ ನದಿ ಇರ್ಪು ಮೂಲಕ ಧುಮುಕಿ ನಾಗರಹೊಳೆ ಅರಣ್ಯಕ್ಕಾಗಿ ಹರಿದು ಮೈಸೂರು ಮೂಲಕ ಹರಿದು ಅಂಬಿಗರಹಳ್ಳಿಯಲ್ಲಿ ಕಾವೇರಿಯನ್ನು ಸಂಗಮವಾಗುತ್ತದೆ.

ಮೂರು ನದಿಗಳು ಸಂಗಮ
ಇದೆರಡು ನದಿಗಳು ಕೊಡಗಿನಲ್ಲಿ ಉತ್ತರ ಮತ್ತು ದಕ್ಷಿಣದಲ್ಲಿ ಹುಟ್ಟಿ ಪ್ರತ್ಯೇಕವಾಗಿ ಹರಿದು ಬಂದು ಇಲ್ಲಿ ಸಂಗಮವಾಗುವುದು ವಿಶೇಷ. ಇನ್ನು ಇದೆರಡು ನದಿಗೆ ಚಿಕ್ಕಮಗಳೂರು ಜಿಲ್ಲೆಯ ಜಾವಳಿಯ ಪಶ್ಚಿಮಘಟ್ಟದ ಶ್ರೇಣಿಯಲ್ಲಿ ಹುಟ್ಟಿ ಹಾಸನ ಜಿಲ್ಲೆಯ ಮೂಲಕ ಹರಿದು ಬರುವ ಹೇಮಾವತಿ ನದಿ ಕೂಡ ಅಂಬಿಗರಹಳ್ಳಿ ಬಳಿಯೇ ಸಂಗಮವಾಗುತ್ತದೆ. ಒಟ್ಟಾರೆ ಈ ಮೂರು ನದಿಗಳು ಸಂಗಮವಾಗುವ ಈ ಕ್ಷೇತ್ರ ಪರಮಪಾವನ ಎಂಬುವುದಕ್ಕೆ ಇಲ್ಲಿ ನಡೆಯುತ್ತಿರುವ ಕುಂಭಮೇಳವೇ ಸಾಕ್ಷಿಯಾಗುತ್ತಿದೆ.

ಬಾಲಕ ಮಹದೇಶ್ವರರು ಬಂದಿದ್ದರು
ಇತರೆ ದಿನಗಳಲ್ಲಿ ಒಂದಷ್ಟು ಭಕ್ತರು ಮತ್ತೊಂದಷ್ಟು ಪ್ರವಾಸಿಗರು ಇಲ್ಲಿಗೆ ಬಂದು ಹೋಗುತ್ತಿದ್ದರು. ಇದೀಗ ಕುಂಭಮೇಳ ಮೇಳ ಆರಂಭವಾಗುತ್ತಿರುವುದರಿಂದ ಲಕ್ಷಾಂತರ ಮಂದಿ ಇಲ್ಲಿಗೆ ಆಗಮಿಸಿ ತೀರ್ಥಸ್ನಾನ ಮಾಡಲಿದ್ದಾರೆ. ಎರಡನೇ ಬಾರಿಗೆ ಕುಂಭ ಮೇಳ ನಡೆಯುತ್ತಿದ್ದು, ಅಂಬಿಗರಹಳ್ಳಿ ಭಕ್ತರ ಸೆಳೆಯಲಿದೆ. ಕಣ್ಣು ಹಾಯಿಸಿದುದ್ದಕ್ಕೂ ಜಲರಾಶಿಯನ್ನು ಹೊಂದಿರುವ ಸಂಗಮಕ್ಷೇತ್ರವು ಪರಮ ಪುಣ್ಯ ಕ್ಷೇತ್ರ ಮಾತ್ರವಲ್ಲದೆ ಮಹದೇಶ್ವರರು ಪವಾಡ ಮೆರೆದ ಸ್ಥಳವಾಗಿದೆ.
ಲೋಕಸಂಚಾರಿಯಾಗಿದ್ದ ಮಹದೇಶ್ವರರು ಬಾಲಕರಾಗಿದ್ದಾಗ ಈ ಕ್ಷೇತ್ರಕ್ಕೆ ಬಂದಿದ್ದರು. ಅಷ್ಟೇ ಅಲ್ಲದೆ ಇಲ್ಲಿ ಪವಾಡ ಮೆರೆದಿದ್ದರು ಎಂಬ ಕಥೆಗಳು ಜನವಲಯದಲ್ಲಿ ಇಂದಿಗೂ ಪ್ರಚಲಿತದಲ್ಲಿದೆ. ಸಾಮಾನ್ಯವಾಗಿ ಮಹದೇಶ್ವರರು ಕಾಲಿಟ್ಟ ಸ್ಥಳಗಳೆಲ್ಲವೂ ಪುಣ್ಯಭೂಮಿಯಾಗಿದೆ. ಅದಕ್ಕೂ ಮೀರಿ ಅವರು ಹೋದೆಡೆ ಪವಾಡ ತೋರಿಸಿ ಹಲವರ ಕಣ್ಣು ತೆರೆಸಿದ್ದಾರೆ.

ವಸ್ತ್ರವನ್ನೇ ತೆಪ್ಪವಾಗಿಸಿ ನದಿದಾಟಿದರು..
ಅಂಥದೊಂದು ಪವಾಡವನ್ನು ಅಂಬಿಗರಹಳ್ಳಿಗೆ ಬಂದಾಗ ಮಹದೇಶ್ವರರು ಮಾಡಿದ್ದರು. ಇಷ್ಟಕ್ಕೂ ಮಹದೇಶ್ವರರು ಮಾಡಿದ ಪವಾಡವೇನು ಎಂಬುದನ್ನು ನೋಡುವುದಾದರೆ ಹಿಂದಿನ ಕಾಲದಲ್ಲಿ ಬಾಲಕ ಮಹದೇಶ್ವರರು ಲೋಕ ಸಂಚಾರ ಹೊರಟು ಅಂಬಿಗರಹಳ್ಳಿಗೆ ಬರುತ್ತಾರೆ. ಅವರಿಗೆ ನದಿಯನ್ನು ದಾಟಿ ಆಚೆಗಿರುವ ಕಪ್ಪಡಿ ಕ್ಷೇತ್ರಕ್ಕೆ ಹೋಗಬೇಕಾಗಿರುತ್ತದೆ. ಆದರೆ ಸುತ್ತಲೂ ಹರಡಿದ್ದ ಜಲರಾಶಿಯನ್ನು ದಾಟಿ ಹೋಗುವುದು ಹೇಗೆಂದು ಆಲೋಚಿಸಿದ ಅವರು, ಅಲ್ಲಿದ್ದ ಅಂಬಿಗರ ಬಳಿ ತೆಪ್ಪದ ಮೂಲಕ ನದಿಯನ್ನು ದಾಟಿಸುವಂತೆ ಕೋರಿಕೆ ಸಲ್ಲಿಸುತ್ತಾರೆ. ಆದರೆ ಅದಕ್ಕೆ ಹಣ ನೀಡುವಂತೆ ಅಂಬಿಗರು ಕೇಳುತ್ತಾರೆ.
ಈ ವೇಳೆ ಮಹದೇಶ್ವರರು ನನ್ನ ಬಳಿ ಯಾವುದೇ ರೀತಿಯ ಹಣವಿಲ್ಲವೆಂದು ಹೇಳುತ್ತಾರೆ. ಆಗ ಅಂಬಿಗರು ಹಣ ನೀಡದಿದ್ದರೆ ತೆಪ್ಪದಲ್ಲಿ ನದಿ ದಾಟಿಸಲು ಸಾಧ‍್ಯವಿಲ್ಲವೆಂದು ಹೇಳುತ್ತಾರೆ. ಆಗ ಅಂಬಿಗರಿಗೆ ಶಾಪ ನೀಡಿದ ಬಾಲಕ ಮಹದೇಶ್ವರರು ತಾವು ಹೊದ್ದಿದ್ದ ಕೆಂಪುವಸ್ತ್ರವನ್ನೇ ನೀರ ಮೇಲೆ ಹಾಸಿ ತೆಪ್ಪ ಮಾಡಿಕೊಂಡು ನದಿ ದಾಟುತ್ತಾರೆ. ಅವರ ಪವಾಡ ಕಂಡ ಅಂಬಿಗರಿಗೆ ತಮ್ಮ ತಪ್ಪಿನ ಅರಿವಾಗಿ ಕ್ಷಮಿಸುವಂತೆ ಕೋರಿದಾಗ ಮಹದೇಶ್ವರರು ಅವರ ತಪ್ಪನ್ನು ಕ್ಷಮಿಸಿದರಂತೆ. ಮಹದೇಶ್ವರರು ಪವಾಡ ಮೆರೆದ ಇಲ್ಲಿ ಮಹದೇಶ್ವರರ ದೇವಾಲಯವೂ ಇದೆ.

ಭಕ್ತರು ಆಗಮಿಸುವಂತೆ ಮಾಡಬೇಕಿದೆ
ಪ್ರಾಕೃತಿಕವಾಗಿ, ಸುಂದರ ತಾಣವಾಗಿಯೂ, ದೈವಿಕವಾಗಿ ಪುಣ್ಯ ಕ್ಷೇತ್ರವಾಗಿಯೂ ಗಮನಸೆಳೆಯುವ ಸಂಗಮಕ್ಷೇತ್ರವಾಗಿರುವ ಅಂಬಿಗರಹಳ್ಳಿಯಲ್ಲೀಗ ಕುಂಭಮೇಳ ನಡೆಯುತ್ತಿರುವುದರಿಂದ ಸರ್ಕಾರ ಇತ್ತ ಗಮನಹರಿಸಿದೆ. ಆದರೆ ಇಲ್ಲಿಗೆ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ಈ ಹಿಂದಿನಿಂದಲೂ ಒತ್ತಾಯ ಮಾಡಿಕೊಂಡು ಬರಲಾಗುತ್ತಿದೆ.
ಈ ಹಿಂದೆ ಆದಿಚುಂಚನಗಿರಿ ಕ್ಷೇತ್ರದ ಬಾಲಗಂಗಾಧರನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಕುಂಭಮೇಳ ನಡೆಸಲಾಗಿತ್ತು. ಇದೀಗ ಹನ್ನೆರಡು ವರ್ಷಗಳ ಬಳಿಕ ಕುಂಭಮೇಳವನ್ನು ನಡೆಸಲಾಗುತ್ತಿದೆ. ಕುಂಭಮೇಳ ಕಳೆದ ನಂತರವಾದರೂ ಇಲ್ಲಿಗೆ ಶಾಶ್ವತವಾದ ಮೂಲಸೌಲಭ್ಯಗಳಾದ. ರಸ್ತೆ, ಕುಡಿಯುವ ನೀರು, ಸಾರಿಗೆ ಸೌಲಭ್ಯ, ಯಾತ್ರಿಭವನವನ್ನು ಕಲ್ಪಿಸಿ ವರ್ಷಪೂರ್ತಿ ಭಕ್ತರು ಇಲ್ಲಿಗೆ ಆಗಮಿಸುವಂತೆ ಸರ್ಕಾರ ಮಾಡಬೇಕಾಗಿದೆ. ಅದು ಸಾಧ್ಯವಾಗುತ್ತದೆಯಾ? ಸರ್ಕಾರ ಕುಂಭಮೇಳದ ತನಕ ಮಾತ್ರ ಚಿತ್ತಹರಿಸಿ ಮತ್ತೆ ಮರೆತು ಬಿಡುತ್ತದೆಯಾ? ಕಾದು ನೋಡಬೇಕಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications