ಸೊಳ್ಳೆ ನನಗೆ ಮಾತ್ರ ಕಚ್ಚುತ್ತೆ ಅನ್ನೋರು ಕಾರಣ ತಿಳಿಯಿರಿ
ನಮ್ಮ ಸುತ್ತಲು ನೊಣದಂತಹ ಸಣ್ಣ ಜೀವಿಗಳು ನಿರಂತರವಾಗಿ ಹಾರಾಡುವುದನ್ನು ನಾವೆಲ್ಲರೂ ಕಂಡಿದ್ದೇವೆ. ಕೆಲವೊಮ್ಮೆ ಅವುಗಳ ಕಿರಿಕಿರಿಯನ್ನೂ ಅನುಭವಿಸಿದ್ದೇವೆ. ಅವುಗಳನ್ನು ದೂರವಿಡಲು ಪದೇ ಪದೇ ಪ್ರಯತ್ನಿಸಿದರೂ ಸಹ ಅವುಗಳ ಝೇಂಕಾರ ಹಿಂಸೆಯನ್ನುಂಟು ಮಾಡಿರುವುದಿದೆ. ಸೊಳ್ಳೆಗಳಾಗಿದ್ದರೆ ಅವು ನಮ್ಮ ದೇಹದಿಂದ ರಕ್ತವನ್ನು ಹೀರುತ್ತವೆ. ಕೆಲವೊಮ್ಮೆ ಸೊಳ್ಳೆಯು ಕಚ್ಚುವ ಮೂಲಕ ಅಪಾಯಕಾರಿ ಕಾಯಿಲೆಗಳನ್ನು ತರಬಹುದು. ಇದರಿಂದಾಗಿ ನಮ್ಮ ಸುತ್ತಲು ಹಾರಾಡುವ ಸೊಳ್ಳೆಗಳನ್ನು ಶಪಿಸುತ್ತೇವೆ. ಕೆಲವರಿಗೆ ಇವುಗಳ ಕಾಟ ಅತಿಯಾಗಿರುತ್ತದೆ. ಇದಕ್ಕೆ ಕಾರಣವೇನು? ನಮ್ಮ ಸುತ್ತಲೇ ಯಾಕೆ ಸೊಳ್ಳೆಗಳು ಹಾರಾಡುತ್ತವೆ ಎನ್ನುವ ಪ್ರಶ್ನೆ ಮೂಡಿರಬಹುದು. ಇದಕ್ಕೆ ಉತ್ತರ ಇಲ್ಲಿದೆ ನೋಡಿ.
ಹೊಸ ಸಂಶೋಧನೆಯು ಕೆಲವರ ಸುತ್ತ ಮಾತ್ರ ಯಾಕೆ ಸಣ್ಣ ಜೀವಿಗಳು ಹಾರಾಡುತ್ತವೆ ಎನ್ನುವುದಕ್ಕೆ ಉತ್ತರವನ್ನು ನೀಡಿದೆ. ನಮ್ಮ ದೇಹದಿಂದ ಹೊರಸೂಸುವ ವಿಶಿಷ್ಟವಾದ ವಾಸನೆಯು ಸೊಳ್ಳೆಗಳನ್ನು ಆಕರ್ಷಿಸುತ್ತದೆ. ಹೊಸ ಅಧ್ಯಯನವು, ರಕ್ತದಲ್ಲಿನ ಸಕ್ಕರೆಯ ಮಟ್ಟ, ಬೆಳ್ಳುಳ್ಳಿ ಅಥವಾ ಬಾಳೆಹಣ್ಣುಗಳನ್ನು ಸೇವಿಸುವುದು ಮತ್ತು ಮಹಿಳೆ ಋತುಚಕ್ರದ ಸಮಯ ಎಂಬಿತ್ಯಾದಿ ಹಳೆ ಪುರಾಣದ ಹೇಳಿಕೆಗಳನ್ನು ತಳ್ಳಿಹಾಕಿದೆ.
ಚರ್ಮದಿಂದ ಹೊರಹೊಮ್ಮುವ ಕೊಬ್ಬಿನಾಮ್ಲಗಳು ಸೊಳ್ಳೆಗಳು ವಿರೋಧಿಸಲು ಸಾಧ್ಯವಾಗದ ವಿಶಿಷ್ಟವಾದ ವಾಸನೆಯನ್ನು ಸೃಷ್ಟಿಸುತ್ತವೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಈ ಅಧ್ಯಯನದ ಆವಿಷ್ಕಾರಗಳನ್ನು ಜರ್ನಲ್ ಸೆಲ್‌ನಲ್ಲಿ ಪ್ರಕಟಿಸಲಾಗಿದೆ. ಇದು ಸೊಳ್ಳೆಗಳು ತಮ್ಮ ಚರ್ಮದ ಮೇಲೆ ಹೆಚ್ಚಿನ ಮಟ್ಟದ ಕಾರ್ಬಾಕ್ಸಿಲಿಕ್ ಆಮ್ಲಗಳನ್ನು ಹೊಂದಿರುವ ಜನರತ್ತ ಹೆಚ್ಚು ಆಕರ್ಷಿತವಾಗುತ್ತವೆ ಎಂದು ಹೇಳುತ್ತದೆ.

"ನಿಮ್ಮ ಚರ್ಮದ ಮೇಲೆ ಕೊಬ್ಬಿನಾಮ್ಲಗಳು ದೊಡ್ಡ ಪ್ರಮಾಣದಲ್ಲಿದ್ದರೆ, ಸೊಳ್ಳೆಗಳು ಮ್ಯಾಗ್ನೆಟ್‌ನಂತೆ ನಿಮ್ಮನ್ನು ಆಕರ್ಷಿಸುತ್ತವೆ" ಎಂದು ರಾಕ್‌ಫೆಲ್ಲರ್ಸ್ ಲ್ಯಾಬೋರೇಟರಿ ಆಫ್ ನ್ಯೂರೋಜೆನೆಟಿಕ್ಸ್ ಮತ್ತು ಬಿಹೇವಿಯರ್‌ನ ಮುಖ್ಯಸ್ಥ ಲೆಸ್ಲಿ ವೋಸ್ಶಾಲ್ ಹೇಳುತ್ತಾರೆ. ಮೂರು ವರ್ಷಗಳ ಸುದೀರ್ಘ ಅಧ್ಯಯನದ ಮೂಲಕ ಸಂಶೋಧಕರು ಇದನ್ನು ಕಂಡು ಹಿಡಿದಿದ್ದಾರೆ.












Click it and Unblock the Notifications