ಶಿಕ್ಷಕಿ ಹೆಸರಲ್ಲಿ 10 ಮನೆ; ಇಡಿ ಕಣ್ಣು ಬಿದ್ದ ಮೋನಾಲೀಸಾ ಯಾರು?
ಕೋಲ್ಕತಾ, ಜುಲೈ 24: ಪಶ್ಚಿಮ ಬಂಗಾಳದಲ್ಲಿ ಹಗರಣಗಳ ಬೆನ್ನತ್ತಿರುವ ಕೇಂದ್ರ ತನಿಖಾ ಸಂಸ್ಥೆಗಳು ಅಕ್ರಮಗಳನ್ನು ಬಗೆದು ಬಗೆದು ಹಾಕುತ್ತಿರುವಂತೆ ಕಾಣುತ್ತಿದೆ. ಶಿಕ್ಷಕರ ನೇಮಕಾತಿ ಹಗರಣದಲ್ಲಿ ಶಿಕ್ಷಣ ಸಚಿವ ಪಾರ್ಥ್ ಚಟರ್ಜಿ ಮತ್ತು ನಟಿ ಅರ್ಪಿತಾ ಮುಖರ್ಜಿ ಶನಿವಾರ ಬಂಧನವಾಗಿದ್ದಾರೆ. ಇದೀಗ ಖಾಜಿ ನಜರುಲ್ ಯೂನಿವರ್ಸಿಟಿಯ ಪ್ರೊಫೆಸರ್ ಮೋನಾಲೀಸಾ ದಾಸ್ ಅವರ ಮೇಲೆ ಜಾರಿ ನಿರ್ದೇಶನಾಲಯದ ಕಣ್ಣು ಬಿದ್ದಿದೆ.
ಸಚಿವ ಪಾರ್ಥ್ ಚಟರ್ಜಿ ಬಂಧನವಾಗಿರುವುದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಹೊಡೆತ ಬಿದ್ದಂತಾಗಿದೆ. ಅವರನ್ನು ಎರಡ ದಿನ ಕಾಲ ಇಡಿ ಕಸ್ಟಡಿಗೆ ಕೊಡಲಾಗಿದೆ. ಅರ್ಪಿಯಾ ಮುಖರ್ಜಿಯನ್ನು ಇಂದು ಭಾನುವಾರ ಕೋರ್ಟ್ ಎದುರು ಹಾಜರುಪಡಿಲಾಗುತ್ತಿದ್ದು, ಅವರನ್ನೂ ಇಡಿ ಕಸ್ಟಡಿಗೆ ಪಡೆಯುವ ನಿರೀಕ್ಷೆ ಇದೆ.
ನಟಿ ಅರ್ಪಿತಾ ಮುಖರ್ಜಿ ಅವರ ಮನೆಯಲ್ಲಿ 20 ಕೋಟಿ ರೂ ನಗದು ಹಣ ಪತ್ತೆಯಾಗಿತ್ತು. ಇದರ ಮೂಲ ಬೆನ್ನತ್ತಿದ ಜಾರಿ ನಿರ್ದೇಶನಾಲಯದ ತನಿಖಾಧಿಕಾರಿಗಳಿಗೆ ಅರ್ಪಿತಾ ಜೊತೆ ಆಪ್ತವಾಗಿದ್ದ ಪಾರ್ಥ ಚಟರ್ಜಿಯ ಪಾತ್ರ ಇರುವುದು ತಿಳಿದುಬಂದಿತ್ತು. ಅವರನ್ನು ವಿಚಾರಣೆಗೊಳಪಡಿಸಿದ ಬಳಿಕ ಇಡಿ ಅಧಿಕಾರಿಗಳು ಬಂಧಿಸಿದ್ದರು.
ಇದೇ ಅರ್ಪಿತಾ ವಿಚಾರಣೆ ವೇಳೆ ಸಿಕ್ಕ ಸುಳಿವೊಂದರಲ್ಲಿ ಮೋನಾಲೀಸ ದಾಸ್ ಹೆಸರೂ ಕೇಳಿಬಂದಿದೆ. ಸಚಿವ ಪಾರ್ಥ ಚಟರ್ಜಿಯೊಂದಿಗೆ ಮೋನಾಲೀಸಾ ದಾಸ್ ಸಂಬಂಧ ಇರುವ ಸಂಗತಿಯೂ ಇಡಿಗೆ ತಿಳಿದುಬಂದಿದೆ. ಶಿಕ್ಷಕರ ನೇಮಕಾತಿ ಹಗರಣದಲ್ಲಿ ಮೋನಾಲೀಸಾ ಪಾತ್ರವೂ ಮಹತ್ತರದ್ದಾಗಿದೆ ಎಂಬುದು ಇಡಿ ಅನುಮಾನ. ಇಡಿಯಿಂದ ಇವರ ವಿಚಾರಣೆ ನಡೆಯುವ ನಿರೀಕ್ಷೆ ಇದೆ.

ಯಾರು ಮೋನಾಲೀಸಾ ದಾಸ್?
ಪಶ್ಚಿಮ ಬಂಗಾಳದ ಬರ್ಧನಾನ್ ಜಿಲ್ಲೆಯ ಆಸನಸೋಲ್ ನಗರದಲ್ಲಿರುವ ಸರಕಾರಿ ಸ್ವಾಮ್ಯದ ಕಾಜಿ ನಜರುಲ್ ವಿಶ್ವವಿದ್ಯಾಲಯದ ಬಂಗಾಳಿ ಭಾಷಾ ವಿಭಾಗದ ಮುಖ್ಯಸ್ಥೆಯಾಗಿದ್ದಾರೆ. ೨೦೧೩ರಲ್ಲಿ ಪಾರ್ಥ ಚಟರ್ಜಿ ಶಿಕ್ಷಣ ಸಚಿವರಾಗಿದ್ದಾಗ ಇವರನ್ನು ನೇರವಾಗಿ ಆ ಸ್ಥಾನಕ್ಕೆ ನೇಮಕ ಮಾಡಿಕೊಳ್ಳಲಾಗಿತ್ತು ಎಂಬುದು ಗಮನಾರ್ಹ.
ಅಸಿಸ್ಟೆಂಟ್ ಪ್ರೊಫೆಸರ್ ಸ್ಥಾನದಿಂದ ಅಸೋಸಿಯೇಟ್ ಪ್ರೊಫೆಸರ್ ಶ್ರೇಣಿಗೆ ನೇರವಾಗಿ ಬಡ್ತಿ ಕೊಟ್ಟು ಇಲಾಖೆಯ ಮುಖ್ಯಸ್ಥ ಸ್ಥಾನಕ್ಕೆ ಮೋನಾಲೀಸಾವರನ್ನು ನೇರವಾಗಿ ನೇಮಕ ಮಾಡಿದ್ದು ಬಹಳಷ್ಟು ಅಚ್ಚರಿ ಉಂಟು ಮಾಡಿತ್ತು.
ಪಾರ್ಥ್ ಚಟರ್ಜಿ ಜೊತೆ ಆಪ್ತವಾಗಿದ್ದ ಕಾರಣಕ್ಕೆ ಮೋನಾಲೀಸಾಗೆ ಈ ಅವಕಾಶ ಸಿಕ್ಕಿದೆ ಎಂದು ಆಗ ಬಹಳ ಜನರು ಮಾತನಾಡಿಕೊಂಡಿದ್ದುಂಟು.

ಹತ್ತಕ್ಕೂ ಹೆಚ್ಚು ಆಸ್ತಿ
ಮೋನಾಲೀಸಾ ದಾಸ್ ಅವರ ಆಸ್ತಿಪಾಸ್ತಿ ಇತ್ಯಾದಿ ಎಲ್ಲವನ್ನೂ ಇಡಿ ಅಧಿಕಾರಿಗಳು ತನಿಖೆ ನಡೆಸಿ ಪತ್ತೆ ಹಚ್ಚಿದ್ದಾರೆ. ಬೀರಭುಮ್ ಜಿಲ್ಲೆಯ ಬೋಲಪುರ್-ಶಾಂತಿನಿಕೇತನ್ ಮೊದಲಾದ ಕಡೆ ಹತ್ತಕ್ಕೂ ಹೆಚ್ಚು ಮನೆಗಳು ಮೋನಾಲೀಸಾ ಹೆಸರಲ್ಲಿ ಇವೆ.
ಈ ಆಸ್ತಿಗಳ ಒಟ್ಟು ಮೌಲ್ಯಕ್ಕೂ ಮೋನಾಲೀಸಾ ದಾಸ್ ಅವರ ಘೋಷಿತ ಆದಾಯಕ್ಕೂ ತಾಳೆಯೇ ಆಗುತ್ತಿಲ್ಲ ಎಂದು ಇಡಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
|
ಬಾಂಗ್ಲಾದೇಶದ ನಂಟು
ಮೋನಾಲೀಸಾ ದಾಸ್ ಸಾಕಷ್ಟು ಬಾರಿ ಬಾಂಗ್ಲಾದೇಶಕ್ಕೆ ಹೋಗಿ ಬಂದಿದ್ದಿದೆ ಎಂದು ಪಶ್ಚಿಮ ಬಂಗಾಳ ನಾಯಕ ದಿಲೀಪ್ ಘೋಷ್ ಆರೋಪ ಮಾಡಿದ್ದಾರೆ.
"ಬಂಗಾಳದ ಎಸ್‌ಎಸ್‌ಸಿ ಹಗರಣ ಬಹಳ ಆಳವಾಗಿದೆ. ಭ್ರಷ್ಟಾಚಾರದಿಂದ ಲೂಟಿ ಮಾಡಿದ ಹಣ ಜಿಹಾದಿಗಳಿಗೆ ಹರಿದುಹೋದರೆ, ಅಥವಾ ಹವಾಲಾ ಮೂಲಕ ಬಾಂಗ್ಲಾದೇಶಕ್ಕೆ ಸಾಗಿಹೋಗಿದ್ದರೆ ಅಚ್ಚರಿಯಂತೂ ಅಲ್ಲ" ಎಂದು ದಿಲೀಪ್ ಘೋಷ್ ಟ್ವೀಟ್ ಮಾಡಿದ್ದಾರೆ.

ಮೋನಾಲೀನಾ ಸ್ಪಷ್ಟನೆ
ಮಾಜಿ ಸಚಿವ ಪಾರ್ಥ ಚಟರ್ಜಿ ಅವರೊಂದಿಗೆ ತನಗೆ ಸಂಬಂಧ ಇದೆ ಎಂಬ ಆರೋಪವನ್ನು ಮೋನಾಲೀಸಾ ದಾಸ್ ತಳ್ಳಿಹಾಕಿದ್ದಾರೆ.
"ಆಗ ಶಿಕ್ಷಣ ಸಚಿವರಾಗಿದ್ದ ಕಾರಣ ಪಾರ್ಥ ಚಟರ್ಜಿಯನ್ನು ನಾನೊಬ್ಬ ಶಿಕ್ಷಕಿಯಾಗಿ ಬಲ್ಲೆ. ಅವರು ನನಗೆ ಒಂದು ರೀತಿಯಲ್ಲಿ ಅವರು ಗಾರ್ಡಿಯನ್ ಇದ್ದಂತೆ" ಎಂದು ಮೋನಾಲೀಸಾ ಸ್ಪಷ್ಟಪಡಿಸಿದ್ದಾರೆ.

ಮಮತಾ ಬಂಟ ಪಾರ್ಥ
ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಬಂಧನವಾಗಿರುವುದು ಸಿಎಂ ಮಮತಾ ಬ್ಯಾನರ್ಜಿಗೆ ಮುಜುಗರದ ಸಂಗತಿಯಾಗಿದೆ. 69 ವರ್ಷದ ಪಾರ್ಥ ಅವರು ಟಿಎಂಸಿಯ ಸವಾಲಿನ ದಿನಗಳಲ್ಲಿ ಮಮತಾ ಪರವಾಗಿ ನಿಂತು ಪರಿಸ್ಥಿತಿ ನಿಭಾಯಿಸಿದ ನಾಯಕರಲ್ಲಿ ಒಬ್ಬರು.
ಕಷ್ಟ ಬಂದಾಗ ಮಮತಾ ದೃಷ್ಟಿ ಮೊದಲು ಹರಿಯುತ್ತಿದ್ದ ನಾಯಕರಲ್ಲಿ ಪಾರ್ಥ ಚಟರ್ಜಿಯೂ ಒಬ್ಬರು. ಬಹಳ ಏರುಗತಿಯಲ್ಲಿ ವೃತ್ತಿಜೀವನದಲ್ಲಿ ಬೆಳೆದ ಪಾರ್ಥ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇವರು ಶಿಕ್ಷಣ ಸಚಿವರಾಗಿದ್ದಾಗ ಶಿಕ್ಷಕ ನೇಮಕಾತಿ ಹಗರಣ ನಡೆದಿದೆ. 2019ರಲ್ಲಿ ಈ ಹಗರಣ ಬೆಳಕಿಗೆ ಬಂದಿತ್ತು. ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಯ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಲಂಚ ಪಡೆದು ನೇಮಕಾತಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತು.
ಆದರೆ, ಈ ಆರೋಪಗಳಿಗೆ ಟಿಎಂಸಿ ಹೆಚ್ಚು ಕಿಮ್ಮತ್ತು ಕೊಡಲಿಲ್ಲ. ಆದರೆ, ಕಲ್ಕತ್ತಾ ಹೈಕೋರ್ಟ್ ಮಧ್ಯಪ್ರವೇಶದ ಬಳಿಕ ಸರಕಾರ ಎಚ್ಚೆತ್ತುಕೊಂಡಿತು. ಪಾರ್ಥ ಅವರನ್ನು ಮಂತ್ರಿಮಂಡಲದಿಂದ ಕೈಬಿಡಲಾಯಿತು.
ಇದೇ ವೇಳೆ, ಮಮತಾ ಬ್ಯಾನರ್ಜಿ ನೇತೃತ್ವದ ಬಂಗಾಳ ಸರಕಾರಕ್ಕೆ ಕೆಲ ಹಗರಣಗಳ ಉರುಳು ಸುತ್ತಿಕೊಂಡಿದೆ. ಶಾರದಾ ಹಗರಣ, ನಾರದ ಟೇಪ್ಸ್ ಸೋರಿಕೆ ಹಗರಣ ಮತ್ತು ಈಗ ಶಿಕ್ಷಕರ ಹಗರಣ ತಲೆದೋರಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications