ಬಜೆಟ್ ಮಂಡನೆಯ ವೇಳೆ 'ಪ್ರತಿಪಕ್ಷದ ನಾಯಕನ ಛಾಯೆ' ಆವರಿಸಿಕೊಂಡ ಸಿದ್ದರಾಮಯ್ಯ
ದಾಖಲೆಯ ಹದಿನಾಲ್ಕನೇ ಬಾರಿಗೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮನ್ನವವರು ರಾಜ್ಯ 2023-24ನೇ ಸಾಲಿನ ಆಯವ್ಯಯವನ್ನು ಮಂಡಿಸಿದರು. ಮುಖ್ಯಮಂತ್ರಿಗಳ ಬಜೆಟಿಗೆ ಬಹುತೇಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು, ಸ್ವಾಭಾವಿಕವಾಗಿ, ವಿರೋಧ ಪಕ್ಷದವರು ಬಜೆಟ್ ಅನ್ನು ಟೀಕಿಸುತ್ತಿದ್ದಾರೆ. ಭರ್ಜರಿ ಬಹುಮತದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ, ಈ ಬಜೆಟ್ ಮೇಲೆ ಬಹಳಷ್ಟು ನಿರೀಕ್ಷೆ ಜನಸಾಮಾನ್ಯರಿಗೆ ಇತ್ತು.
ಸುಮಾರು ಮೂರು ತಾಸಿನ ಮ್ಯಾರಥಾನ್ ಬಜೆಟ್ ಮಂಡನೆಯ ವೇಳೆ ಸಿದ್ದರಾಮಯ್ಯ ತಾವು ಅಂದುಕೊಂಡಂತೆ ತಮ್ಮ ಉದ್ದೇಶ ಮತ್ತು ಬದ್ದತೆಯನ್ನು ಸ್ಪಷ್ಟವಾಗಿ ಸಾರುತ್ತಾ, ಪರಿಪರಿಯಾಗಿ ಬಿಜೆಪಿ ವಿರುದ್ದ ಟೀಕಾಪ್ರಹಾರ ನಡೆಸಿದರು. ಇಷ್ಟು ಟೀಕೆಯನ್ನು ಮುಖ್ಯಮಂತ್ರಿಗಳು ಮಾಡುತ್ತಿದ್ದರೂ, ವಿರೋಧ ಪಕ್ಷವಾದ ಬಿಜೆಪಿ ಮುಖಂಡರು ಎಲ್ಲೂ ತಕರಾರು ಎತ್ತದೇ ಗಪ್ ಚುಪ್ ಆಗಿ ಬಜೆಟ್ ಭಾಷಣವನ್ನು ಆಲಿಸಿದರು.

ಬಜೆಟ್ ಅಧಿವೇಶನ ಆರಂಭವಾದಾಗಿನಿಂದ ವಿರೋಧ ಪಕ್ಷದ ನಾಯಕನ ಸ್ಥಾನ ಇನ್ನೂ ಅಂತಿಮವಾಗಿಲ್ಲ ಎಂದು ಬಿಜೆಪಿಯ ಕಾಲೆಳೆಯುತ್ತಲೇ ಬರುತ್ತಿದ್ದ ಮುಖ್ಯಮಂತ್ರಿಗಳು, ಕಳೆದ ರಾಜ್ಯ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರುತ್ತಲೇ ಭಾಷಣವನ್ನು ಮುಂದುವರಿಸುತ್ತಿದ್ದರು. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಮೂರ್ಖತನದ ಕಳೆದ ಬಿಜೆಪಿ ಸರ್ಕಾರ ಹೇಗೆ ಹಾಳು ಮಾಡಿತು ಎಂದು ಹಲವು ಬಾರಿ ಸಿಎಂ ತಮ್ಮ ಬಜೆಟ್ ಭಾಷಣದಲ್ಲಿ ಉಲ್ಲೇಖಿಸಿದರು.
ಕೇಂದ್ರ ಸರ್ಕಾರ ಕೂಡಾ ಸಹಕಾರ ನೀಡುತ್ತಿಲ್ಲ ಎಂದು ಹತ್ತು ಹಲವು ಬಾರಿ ಪ್ರಸ್ತಾವಿಸಿದ ಸಿದ್ದರಾಮಯ್ಯ, ವಿವಿಧ ಯೋಜನೆ, ಅನುದಾನದ ವಿಚಾರದಲ್ಲಿ ಕೇಂದ್ರದ ಅಸಹಕಾರವನ್ನು ಒತ್ತಿಒತ್ತಿ ಹೇಳುತ್ತಿದ್ದರು. ಸಿದ್ದರಾಮಯ್ಯನವರ ಭಾಷಣದ ವೇಳೆ ಇನ್ನೂ ಅವರಲ್ಲಿನ ವಿರೋಧ ಪಕ್ಷದ ನಾಯಕನ ಛಾಯೆ ಕಮ್ಮಿಯಾಗಲಿಲ್ಲವೇ ಎಂದು ಅನಿಸುವಷ್ಟು ಬಿಜೆಪಿಯ ತಪ್ಪನ್ನು ಸದನದ ಮುಂದೆ ಇಡುತ್ತಿದ್ದರು.
ಸಿಎಂ ಭಾಷಣದುದ್ದಕ್ಕೂ ಬಿಜೆಪಿ ಮೌನ
ವಿರೋಧ ಪಕ್ಷದ ನಾಯಕನ ಸ್ಥಾನ ಖಾಲಿಯಿದ್ದರೆ ಪಕ್ಷ ಹೇಗೆ ಮುಜುಗರ ಎದುರಿಸಬೇಕಾದೀತು ಎನ್ನುವುದಕ್ಕೆ ಬಜೆಟ್ ಮಂಡನೆಯ ದಿನ ಬಿಜೆಪಿಗೆ ಒಂದು ಪಾಠದಂತಿತ್ತು. ಸಿದ್ದರಾಮಯ್ಯನವರು ಬಿಜೆಪಿಯ ತಪ್ಪನ್ನು ಉಲ್ಲೇಖಿಸುತ್ತಿದ್ದರೂ, ಕನಿಷ್ಠ ಪಕ್ಷ ಎದ್ದುನಿಂತು ವಿರೋಧಿಸುವ ಧೈರ್ಯವನ್ನು ಬಿಜೆಪಿ ನಾಯಕರು ಸಿಎಂ ಭಾಷಣದುದ್ದಕ್ಕೂ ತೋರಲೇ ಇಲ್ಲ.
ಸುನೀಲ್ ಕುಮಾರ್, ಸಿ.ಸಿ.ಪಾಟೀಲ್, ಬಸವರಾಜ ಬೊಮ್ಮಾಯಿ
ಒಂದು ವೇಳೆ ಬಿಜೆಪಿ ನಾಯಕರು ಪ್ರತಿರೋಧವನ್ನು ತೋರಿದ್ದರೆ, ಸಿಎಂ ಪದೇಪದೇ ಬಿಜೆಪಿ ಟೀಕಿಸುವುದನ್ನು ನಿಲ್ಲಿಸುತ್ತಿದ್ದರೋ ಏನೋ? ಮುಖ್ಯಮಂತ್ರಿಗಳು ತಮ್ಮ ಪಕ್ಷವನ್ನು ಟೀಕಿಸುತ್ತಿದ್ದಾಗ ಸುನೀಲ್ ಕುಮಾರ್, ಸಿ.ಸಿ.ಪಾಟೀಲ್, ಬಸವರಾಜ ಬೊಮ್ಮಾಯಿ ಮುಂತಾದವರು ಅಸಹಾಯಕತೆಯಿಂದ ಕೂತಿದ್ದರು. ಸುಮಾರು 50 ರಿಂದ 55ಬಾರಿ ಮುಖ್ಯಮಂತ್ರಿಗಳು ರಾಜ್ಯ ಮತ್ತು ಕೇಂದ್ರ ಬಿಜೆಪಿ ಆಡಳಿತವನ್ನು ಟೀಕಿಸಿದ್ದರು.
ಅನ್ನಭಾಗ್ಯ, ಜಿಎಸ್ಟಿ ವಿಚಾರ ಪ್ರಸ್ತಾವನೆ
ಅನ್ನಭಾಗ್ಯ, ಜಿಎಸ್ಟಿ ವಿಚಾರ ಪ್ರಸ್ತಾವನೆಯ ವೇಳೆ ಮತ್ತೆ ಕೇಂದ್ರ ಸರ್ಕಾರ ಅಸಹಕಾರ ನೀಡಿತು ಎಂದು ಸಿದ್ದರಾಮಯ್ಯ ಹೇಳಿದರು. ಸಾಮಾನ್ಯವಾಗಿ ಬಜೆಟ್ ಮಂಡನೆಯ ವೇಳೆ ವಿಪಕ್ಷಗಳನ್ನು ಟೀಕಿಸುವ ಪರಿಪಾಠ ಕಮ್ಮಿ, ಆದರೆ, ಸಿದ್ದರಾಮಯ್ಯ ಕಳೆದ ಬಿಜೆಪಿ ಸರ್ಕಾರ ಮತ್ತು ಕೇಂದ್ರದ ಮೋದಿ ಸರ್ಕಾರದ ಆಡಳಿತ/ನೀತಿಗಳನ್ನು ಅಲ್ಲಲ್ಲಿ ವಿಮರ್ಶಿಸುತ್ತಾ, ಟೀಕಿಸುತ್ತಾ ಬಂದಿದ್ದು ವಿಶೇಷ.
ವಿರೋಧ ಪಕ್ಷದ ನಾಯಕನಿಲ್ಲದೇ ಬಡವಾದ ಬಿಜೆಪಿ
ನಿರುದ್ಯೋಗ, ಅನುದಾನ ಬಿಡುಗಡೆ ವಿಚಾರದ ಸಂದರ್ಭದಲ್ಲಿ ಬಿಜೆಪಿಯನ್ನು ಟೀಕಿಸುತ್ತಾ ಪಕ್ಷದ ಬದ್ದತೆಯನ್ನು ತೋರಿದರು. ವಿಪಕ್ಷದ ನಾಯಕರಿಗೆ ಸಿಎಂ ಭಾಷಣ ತೀರಾ ಅನಿರೀಕ್ಷಿತ ಎಂಬಂತೆ ಕಸಿವಿಸಿ ಎದುರಿಸಿದರು. ಬೊಮ್ಮಾಯಿ ಸಾವಧಾನವಾಗಿ ಭಾಷಣವನ್ನು ಆಲಿಸುತ್ತಿದ್ದರೆ, ಕೆಲವರು ಓಡಾಡಿಕೊಂಡಿದ್ದರು. ಸುರೇಶ್ ಕುಮಾರ್, ಯತ್ನಾಳ್ ಅವರ ಮುಖದಲ್ಲಿ ಬೇಸರ ಎದ್ದು ಕಾಣುತ್ತಿದ್ದರೂ, ಎದ್ದು ನಿಂತು ಪ್ರತಿಭಟಿಸಲು ಮುಂದಾಗಲಿಲ್ಲ. ಒಟ್ಟಿನಲ್ಲಿ ವಿರೋಧ ಪಕ್ಷದ ನಾಯಕನಿಲ್ಲದೇ ಇದ್ದದ್ದು ಬಿಜೆಪಿಗೆ ಕೊರತೆಯಾಗಿ ಕಾಣಿಸಿಕೊಂಡಿತು.












Click it and Unblock the Notifications