Karnataka Assembly Election 2023: ರಾಯಚೂರು ಜಿಲ್ಲೆಯಲ್ಲಿನ ಟಿಕೆಟ್ ಆಕಾಂಕ್ಷಿಗಳು
ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಆಯಾ ಕ್ಷೇತ್ರಗಳಲ್ಲಿ ಸ್ಪರ್ಧಾಕಾಂಕ್ಷಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಹಾಲಿ ಮತ್ತು ಮಾಜಿ ಶಾಸಕರ ಪಾಲಿಗೆ ಸವಾಲಾಗಿದ್ದಾರೆ. ಮತ್ತೊಂದೆಡೆ ಟಿಕೆಟ್ ಹಂಚಿಕೆಗೆ ಸಮೀಕ್ಷೆಯೇ ಆಧಾರ ಎನ್ನುವ ತೂಗುಗತ್ತಿ ಟಿಕೆಟ್ ಆಕಾಂಕ್ಷಿಗಳ ನಿದ್ದೆಗೆಡಿಸಿದೆ.
ಆಡಳಿತರೂಢ ಬಿಜೆಪಿ ಮತ್ತು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಹಂಚಿಕೆಗೆ ಆಯಾ ಕ್ಷೇತ್ರಗಳ ಜನ ಮತಾಭಿಪ್ರಾಯವೇ ಆಧಾರವಾಗಿಸಿಕೊಂಡ ಹಿನ್ನೆಲೆಯಲ್ಲಿ ಕೊನೆಗಳಿಗೆಯಲ್ಲಿ ಯಾರ ಪಾಲಿಗೆ ಟಿಕೆಟ್ ಎನ್ನುವ ವಿಷಯ ಯಕ್ಷ ಪಶ್ನೆಯಾಗಿದೆ.
ಹಾಲಿ, ಮಾಜಿ ಶಾಸಕರು ಸಕ್ರಿಯ ರಾಜಕೀದಲ್ಲಿರುವಾಗಲೇ, ಪ್ರಭಾವಿ ನಾಯಕರನ್ನು ಇತರೆ ಬೇರೆ ಪಕ್ಷಗಳಿಂದ ಕರೆ ತರುವಂತಹ ಪ್ರಕ್ರಿಯೆ, ಹಾಲಿ ಮತ್ತು ಮಾಜಿ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ದೊರೆಯುವಂತೆ ಮಾಡುವಲ್ಲಿ ಸಂಶಯ ಮೂಡುವಂತೆ ಮಾಡಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ಮುಂಬರುವ ವಿಧಾನಸಭಾ ಚುನಾವಣೆ ಭಾರೀ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ.
ಈ ಹಿಂದಿನ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯದ ಕಾರಣ ಪ್ರಸಕ್ತ ವರ್ಷದ ಚುನಾವಣೆಯಲ್ಲಿ ಬಹುಮತದ ಗೆಲುವಿಗಾಗಿ ಪಕ್ಷಗಳು ಭಾರೀ ಸಿದ್ಧತೆ ನಡೆಸಿವೆ. ಪಕ್ಷದ ಸೇವೆ ಮತ್ತು ಹೈಕಮಾಂಡ್ ಉತ್ತಮ ಸಂಪರ್ಕವನ್ನಾಧರಿಸಿ ಟಿಕೆಟ್ ಹಂಚಿಕೆ ಮಾಡುವ ಬದಲು ವಿಧಾನಸಭಾ ಕ್ಷೇತ್ರಗಳಲ್ಲಿ ವ್ಯಕ್ತಿಯ ವರ್ಚಸ್ಸು ಹಾಗೂ ಜನರ ಮತವನ್ನಾಧರಿಸಿ ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ.
ರಾಯಚೂರು ಜಿಲ್ಲೆಯನ ಏಳು ವಿಧಾನಸಭಾ ಕ್ಷೇತ್ರದಲ್ಲಿಯೂ ವಿಧಾನಸಭಾ ಚುನಾವಣಾ ಸಿದ್ಧತೆ ಭರ್ಜರಿಯಾಗಿ ನಡೆಯುತ್ತಿದ್ದು, ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದಿನಕ್ಕೆ ದಿನಕ್ಕೆ ಉದ್ದವಾಗುತ್ತಿದೆ. ಏಳು ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳ ವಿವರ ಇಲ್ಲಿದೆ.

ಮಾನ್ವಿ ವಿಧಾನಸಭಾ ಕ್ಷೇತ್ರ
ಮಾನ್ವಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು
ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಮಾನಪ್ಪ ನಾಯಕ, ಗಂಗಾಧರ್ ನಾಯಕ, ಶಿವನಗೌಡ ನಾಯಕ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಈ ಮೂವರಲ್ಲಿ ಅಥವಾ ಪಕ್ಷದ ಮುಖಂಡರಾದ ಶಿವನಗೌಡ ನಾಯಕ ಸೂಚಿಸಿದ ಅಭ್ಯರ್ಥಿಗೆ ಹೈಕಮಾಂಡ್ ಟಿಕೆಟ್ ನೀಡುವ ಸಾಧ್ಯತೆ ಇದೆ.
ಕಾಂಗ್ರೆಸ್ ಪಕ್ಷದಿಂದ ಹಂಪಯ್ಯ ನಾಯಕ, ಶರಣಯ್ಯ ನಾಯಕ, ರಾಜಾ ವಸಂತ ನಾಯಕ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಸದ್ಯ ಮಾನ್ವಿ ಕ್ಷೇತ್ರ ಜೆಡಿಎಸ್ ವಶದಲ್ಲಿದ್ದು, ಶಾಸಕರಾಗಿರುವ ಶಾಸಕ ರಾಜಾ ವೆಂಕಟಪ್ಪ ನಾಯಕ ಈ ಬಾರಿಯೂ ಜೆಡಿಎಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರ
ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು
ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರ ಈ ಬಾರಿ ಹಲವು ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗಲಿದೆ. ಸದ್ಯ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ವಶದಲ್ಲಿದ್ದು, ಶಾಸಕರಾಗಿರುವ ಬಸನಗೌಡ ದದ್ದಲ್ ಈ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇನ್ನು ಚಂದ್ರಶೇಖರ ನಾಯಕ ಕೂಡ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್, ಶಿವಪ್ಪ ನಾಯಕ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದರೆ, ಜೆಡಿಎಸ್ ಪಕ್ಷದಿಂದ ನಿಯೋಜಿತ ಅಭ್ಯರ್ಥಿ ಸಣ್ಣ ನರಸಿಂಹ ನಾಯಕ ಟಿಕೆಟ್ ಸಿಗುವ ಭರವಸೆಯಲ್ಲಿದ್ದಾರೆ.
ಇನ್ನು ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ರಾಜಾ ರಾಯಪ್ಪ ನಾಯಕ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆಗಳು ಇವೆ. ಹೀಗಾಗಿ ಬಿಜೆಪಿ ಪಕ್ಷದಿಂದ ರಾಯಚೂರು ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಎಂದು ಗುರುತಿಸಿಕೊಂಡಿರುವ ಮಾಜಿ ಶಾಸಕ ತಿಪ್ಪರಾಜು ಅವರಿಗೆ ಹೊಸ ಸವಾಲು ಎದುರಾಗಿದೆ.

ಸಿಂಧನೂರು ವಿಧಾನಸಭಾ ಕ್ಷೇತ್ರ
ಸಿಂಧನೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು
ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಹಂಪನಗೌಡ ಬಾದರ್ಲಿ, ಬಸನಗೌಡ ಬಾದರ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದರೆ, ಬಿಜೆಪಿ ಪಕ್ಷದಿಂದ ಮಾಜಿ ಸಂಸದ ಕೆ.ವಿರುಪಾಕ್ಷಪ್ಪ , ಉದ್ಯಮಿ ರಾಜೇಶ್ ಹಿರೇಮಠ, ಅಮರೇಗೌಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಸದ್ಯ ಜೆಡಿಎಸ್ ಆಡಳಿತ ಇರುವ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಶಾಸಕ ವೆಂಕಟರಾವ್ ಈ ಬಾರಿ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದು, ಗೆಲುವು ಸಾಧಿಸುವ ಭರವಸೆಯಲ್ಲಿದ್ದಾರೆ.

ರಾಯಚೂರು ನಗರ ವಿಧಾನಸಭಾ ಕ್ಷೇತ್ರ
ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು
ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಎನ್.ಎಸ್.ಬೋಸರಾಜು, ರವಿ ಬೋಸರಾಜು, ಸೈಯ್ಯದ್ ಯಾಸೀನ್, ಯಂಕಣ್ಣ ಯಾದವ, ಬಸವರಾಜ ಪಾಟೀಲ ಇಟಿಗಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಸದ್ಯ ಬಿಜೆಪಿ ಆಡಳಿತ ಇರುವ ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್ ಈ ಬಾರಿಯೂ ಬಿಜೆಪಿಯಿಂದ ಸ್ಫರ್ಧಿಸುವ ನಿರೀಕ್ಷೆಯಲ್ಲಿದ್ದಾರೆ. ಇನ್ನು ಜೆಡಿಎಸ್ ಪಕ್ಷದಿಂದ ರಾಮನಗೌಡ ಏಗನೂರು ಹಾಗೂ ವಿನಯಕುಮಾರ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ದೇವದುರ್ಗ ವಿಧಾನಸಭಾ ಕ್ಷೇತ್ರ
ದೇವದುರ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು
ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿ.ವಿ.ನಾಯಕ, ರಾಜಶೇಖರ ನಾಯಕ, ಶ್ರೀದೇವಿ ನಾಯಕ, ರವಿಪಾಟೀಲ್ ಈ ಬಾರಿ ಚುನಾವಣೆಗೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ.
ಸದ್ಯ ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತ ನಡೆಸುತ್ತಿರುವ ಶಿವನಗೌಡ ನಾಯಕ ಮತ್ತೆ ಅಧಿಕಾರಕ್ಕೇರುವ ನಿರೀಕ್ಷೆಯಲ್ಲಿದ್ದು, ಬಿಜೆಪಿ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇನ್ನು ಜೆಡಿಎಸ್ ಪಕ್ಷದಿಂದ ಕರೆಮ್ಮ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಮಸ್ಕಿ ವಿಧಾನಸಭಾ ಕ್ಷೇತ್ರ
ಮಸ್ಕಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು
ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಪ್ರತಾಪಗೌಡ ಪಾಟೀಲ್ ಒಬ್ಬರೇ ಟಿಕೆಟ್ ಆಕಾಂಕ್ಷಿಯಾಗಿದ್ದು, ಅವರಿಗೆ ಹೈಕಮಾಂಡ್ ಟಿಕೆಟ್ ನೀಡುವ ಸಾಧ್ಯತೆ ಇದೆ. ಇನ್ನು ಕಾಂಗ್ರೆಸ್ ಪಕ್ಷದಿಂದ ಆರ್.ಬಸನಗೌಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಜೆಡಿಎಸ್ ಪಕ್ಷದಿಂದ ರಾಘವೇಂದ್ರ ನಾಯಕ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಲಿಂಗಸೂಗೂರು ವಿಧಾನಸಭಾ ಕ್ಷೇತ್ರ
ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು
ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್‌ಗಾಗಿ ಭಾರೀ ಪೈಪೋಟಿ ಇದ್ದು, ಶಾಸಕ ಡಿ.ಎಸ್.ಹುಲಗೇರಿ, ಎಚ್.ಬಿ.ಮುರಾರಿ, ರುದ್ರಯ್ಯ , ಹನುಮಂತಪ್ಪ ಆಲ್ಕೋಡ್, ಪಾಮಯ್ಯ ಮುರಾರಿ, ಆಂಜನೇಯ್ಯ , ವಸಂತಕುಮಾರ ಹಾಗೂ ಕೀರಾಲಿಂಗಪ್ಪ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಬಿಜೆಪಿ ಪಕ್ಷದಿಂದ ಮಾನಪ್ಪ ವಜ್ಜಲ್ ಹಾಗೂ ಡಾ.ಕೆ.ಸುದರ್ಶನ್ ಟಿಕೆಟ್ ಆಕಾಂಕ್ಷಿಯಾಗಿದ್ದರೆ, ಜೆಡಿಎಸ್ ಪಕ್ಷದಿಂದ ನಿಯೋಜಿತ ಅಭ್ಯರ್ಥಿ ಸಿದ್ದು ಬಂಡಿ ಈ ಬಾರಿ ಚುನಾವಣೆಯಲ್ಲಿ ಸ್ಫರ್ಧಿಸಿ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ.












Click it and Unblock the Notifications