ರಾಜಕೀಯ ವಿಶೇಷ; ಮತದಾರರ ಓಲೈಕೆಗೆ ರಾಜಕಾರಣಿಗಳ ತಂತ್ರ!
ಮೈಸೂರು, ಮಾರ್ಚ್ 22: ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ ಒಂದು ವರ್ಷವಷ್ಟೆ ಬಾಕಿಯಿದೆ. ಹೀಗಾಗಿ ರಾಜಕೀಯ ಪಕ್ಷಗಳ ನಾಯಕರು ಪ್ರತಿಯೊಂದು ವಿಚಾರವನ್ನು ರಾಜಕೀಯವಾಗಿ ನೋಡುತ್ತಿದ್ದಾರೆ. ಜತೆಗೆ ಸಂಘಟನೆ, ಪ್ರಚಾರ, ಅಭಿವೃದ್ಧಿಗಿಂತಲೂ ಭಾವನಾತ್ಮಕ, ಧಾರ್ಮಿಕ ಘಟನೆ, ಗಿಮಿಕ್ ಹೀಗೆ ಹಲವು ವಿಚಾರಗಳು ಚುನಾವಣೆಗಳಲ್ಲಿ ಪ್ರಮುಖ ಪ್ರಾತ್ರವಹಿಸುತ್ತವೆ. ಅದರಾಚೆಗೆ ಮತದಾರರನ್ನು ವಾಮಮಾರ್ಗದಲ್ಲಿ ಓಲೈಸುವ ಕಾರ್ಯವೂ ಸದ್ದಿಲ್ಲದೆ ನಡೆಯುತ್ತದೆ.
ಇತ್ತೀಚೆಗಿನ ವರ್ಷಗಳಲ್ಲಿ ಚುನಾವಣೆ ಮೊದಲಿನಂತಿಲ್ಲ. ಕೊನೆ ಗಳಿಗೆಯಲ್ಲಿ ಒಬ್ಬ ಅಭ್ಯರ್ಥಿಯ ಗೆಲುವಿಗೆ ಆತನ ವರ್ಚಸ್ಸು, ಮಾಡಿದ ಅಭಿವೃದ್ಧಿ ಕೆಲಸವೆಲ್ಲವೂ ಮೀರಿ ಇನ್ಯಾವುದೋ ಒಂದು ವಿಚಾರ ಗೆಲುವು ತಂದುಕೊಟ್ಟರೂ ಅಚ್ಚರಿ ಪಡಬೇಕಾಗಿಲ್ಲ. ಹೀಗಾಗಿಯೇ ರಾಜಕಾರಣಿಗಳು ಚಿಕ್ಕ ಚಿಕ್ಕ ವಿಚಾರಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ದೊಡ್ಡ ದೊಡ್ಡ ಸುದ್ದಿಗಳನ್ನಾಗಿ ಮಾಡಿ, ಅವುಗಳನ್ನು ಮುಂದಿಟ್ಟುಕೊಂಡೇ ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲಸದಲ್ಲಿ ಯಾವ ರಾಜಕಾರಣಿಗಳು ಹಿಂದೆ ಬೀಳುವುದಿಲ್ಲ.

ಭಾವನಾತ್ಮಕ ವಿಚಾರಗಳು ಹೆಚ್ಚು ಕೆಲಸ ಮಾಡುತ್ತವೆ
ಬಹಳಷ್ಟು ಸಂದರ್ಭಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗಿಂತ ಭಾವನಾತ್ಮಕ ವಿಚಾರಗಳು ಹೆಚ್ಚು ಕೆಲಸ ಮಾಡುತ್ತವೆ ಹೀಗಾಗಿ ಇಂತಹ ವಿಚಾರಗಳಲ್ಲಿ ರಾಜಕೀಯ ನಾಯಕರು ನಾಲಿಗೆ ಹರಿಬಿಟ್ಟು ವಿವಾದವೆಬ್ಬಿಸಿ ಬಿಡುತ್ತಾರೆ. ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರು. ಆದರೂ ಗೆಲುವು ಸಾಧಿಸಲಾಗಲಿಲ್ಲವೆಂದು ಸ್ವತಃ ಸಿದ್ದರಾಮಯ್ಯ ಅವರೇ ಅವಲತ್ತುಕೊಂಡಿದ್ದರು.

ರಾಜಕೀಯ ಆಟದಲ್ಲಿ ಉರುಳಿ ಬಿತ್ತು
ಕಳೆದ ಚುನಾವಣೆ(2018)ಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದಾದ ಬಳಿಕ ಆಪರೇಷನ್ ಕಮಲದ ಮೂಲಕ ಬಿಜೆಪಿ ಪಕ್ಷ ಅಧಿಕಾರ ಹಿಡಿಯಿತು. ಜೆಡಿಎಸ್ ಕಿಂಗ್ ಮೇಕರ್ ಆಗಿ ಅಧಿಕಾರ ಪಡೆದರೂ ರಾಜಕೀಯ ಆಟದಲ್ಲಿ ಉರುಳಿ ಬಿತ್ತು. ಹಿಂದೊಮ್ಮೆ ಬಿಜೆಪಿಯೊಂದಿಗೆ ಸರ್ಕಾರ ರಚಿಸಿದ ಜೆಡಿಎಸ್ ನಾಯಕ ಕುಮಾರಸ್ವಾಮಿಗೆ ಎರಡನೇ ಬಾರಿಗೆ ಕಾಂಗ್ರೆಸ್‌ನೊಂದಿಗೆ ಪೂರ್ಣಾವಧಿಯ ಅಧಿಕಾರ ನಡೆಸುವುದು ಸಾಧ್ಯವಾಗಲಿಲ್ಲ.
ಆ ನಂತರ ಸರ್ಕಾರ ಬಿದ್ದ ಬಳಿಕ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನವರ ವಿರುದ್ಧ ಯಾವ ರೀತಿಯಲ್ಲೆಲ್ಲ ಹರಿಹಾಯ್ದರು. ಅದಕ್ಕೆ ಪ್ರತ್ಯುತ್ತರವನ್ನು ಸಿದ್ದರಾಮಯ್ಯ ಅವರು ನೀಡಿದರು. ಸಮ್ಮಿಶ್ರ ಸರ್ಕಾರದಲ್ಲಿ ಒಂದಾಗಿದ್ದವರು ಒಬ್ಬರನೊಬ್ಬರು ಕಿತ್ತಾಡಿಕೊಂಡಿದ್ದನ್ನು ರಾಜ್ಯದ ಜನತೆ ನೋಡಿದ್ದಾರೆ. ಆಪರೇಷನ್ ಕಮಲದಿಂದ ಸುಮಾರು ಹತ್ತು ತಿಂಗಳ ಕಾಲ ಆಡಳಿತ ನಡೆಸಿದ ಎರಡು ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಕೊಳ್ಳಬೇಕಾಯಿತು. ಅದಕ್ಕಿಂತ ಹೆಚ್ಚಾಗಿ ಅವೆರಡು ಪಕ್ಷಗಳು ಒಟ್ಟಾಗಿ ಆಡಳಿತ ಪಕ್ಷವನ್ನು ಹಣಿಯಬೇಕಾಗಿತ್ತು. ಆದರೆ ಅದ್ಯಾವುದು ಆಗಲೇ ಇಲ್ಲ. ಅವರೇ ಕಿತ್ತಾಡಿಕೊಂಡರು. ಇದರ ಲಾಭ ಆಡಳಿತ ಪಕ್ಷ ಬಿಜೆಪಿಗಾಯಿತು.

ಸಂಘಟನೆಯತ್ತ ಮುಖ ಮಾಡಿದ ಪಕ್ಷಗಳು
ಕಳೆದ ಮೂರು ವರ್ಷಗಳಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದು, ಸರ್ಕಾರದ ವಿರುದ್ಧ ಹೇಳಿಕೊಳ್ಳುವಂತಹ ಯಾವುದೇ ಹೋರಾಟ ಮಾಡಿಲ್ಲ. ಮೇಕೆದಾಟು ಪಾದಯಾತ್ರೆ, ಸದನದಲ್ಲಿ ಆಹೋರಾತ್ರಿ ಧರಣಿಯಿಂದ ಪಕ್ಷಕ್ಕೆ ಹೇಳಿಕೊಳ್ಳುವಂತಹ ಪ್ರಯೋಜನವೇನು ಆದಂತೆ ಕಾಣುತ್ತಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಪ್ರವಾಹ, ಅದಾದ ಬಳಿಕ ಕೊರೊನಾ ಇದರ ನಡುವೆ ಇದೀಗ ಎರಡು ತಿಂಗಳಿಂದ ಜನ ಜೀವನ ಯಥಾಸ್ಥಿತಿಗೆ ಮರಳುತ್ತಿದೆ. ಹೀಗಾಗಿ ಎಚ್ಚೆತ್ತುಕೊಂಡಿರುವ ರಾಜಕೀಯ ಪಕ್ಷಗಳು ನಿಧಾನವಾಗಿ ಸಂಘಟನೆಯತ್ತ ಮುಖ ಮಾಡಿವೆ.

ರಾಜಕೀಯ ಪಕ್ಷಗಳಲ್ಲಿ ಒಂದಷ್ಟು ಸಂಚಲನ
ಆಡಳಿತ ಪಕ್ಷ ಬಿಜೆಪಿ ಮುಂದಿನ ಚುನಾವಣೆಗೆ ಬೇಕಾದ ತಯಾರಿಗಳನ್ನು ಮಾಡಿಕೊಳ್ಳಲು ಆರಂಭಿಸಿದೆ. ಅದರ ಜತೆಗೆ ಹೈಕಮಾಂಡ್ ರಾಜಕೀಯವಾಗಿ ಲಾಭ ತರಲು ಏನೇನು ಮಾಡಬೇಕೋ ಅದೆಲ್ಲವನ್ನು ಮಾಡಲು ತಯಾರಿ ನಡೆಸಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಒಂದಷ್ಟು ನಾಯಕರು ಅಧಿವೇಶನದ ನಂತರ ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುವ ತೀರ್ಮಾನ ಕೈಗೊಂಡಿದ್ದಾರೆ.
ಯುಗಾದಿ ಹಬ್ಬದ ಬಳಿಕ ರಾಜಕೀಯ ಪಕ್ಷಗಳಲ್ಲಿ ಒಂದಷ್ಟು ಸಂಚಲನವಾಗುವ ಸಾಧ್ಯತೆಗಳಿವೆ. ಮುಂದೆ ರಾಜಕೀಯ ವಲಯಗಳಲ್ಲಿ ಯಾವ ರೀತಿಯ ಬೆಳವಣಿಗೆಗಳು ಆಗಬಹುದು ಎಂಬುದನ್ನು ಕಾದು ನೋಡಬೇಕಾಗಿದೆ.











Click it and Unblock the Notifications