Karnataka 7th Pay Commission; ವೇತನ ಶ್ರೇಣಿ, ಕನಿಷ್ಟ ವೇತನದ ವಿವರಗಳು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕರ್ನಾಟಕ ರಾಜ್ಯ 7ನೇ ವೇತನ ಆಯೋಗಕ್ಕೆ ಸಲ್ಲಿಕೆ ಮಾಡಿರುವ ಉತ್ತರದಲ್ಲಿ ವೇತನ ಶ್ರೇಣಿ, ಕನಿಷ್ಠ ವೇತನದ ವಿವರಗಳನ್ನು ನೀಡಲಾಗಿದೆ.
ಕರ್ನಾಟಕ ಸರ್ಕಾರ ರಚನೆ ಮಾಡಿರುವ ಸುಧಾಕರ್ ರಾವ್ ಅಧ್ಯಕ್ಷತೆಯ ಕರ್ನಾಟಕ ರಾಜ್ಯ 7ನೇ ವೇತನ ಆಯೋಗದ ಪ್ರಶ್ನಾವಳಿಗೆ ಉತ್ತರಿಸುವ ದಿನಾಂಕವನ್ನು ಫೆಬ್ರವರಿ 28ರ ತನಕ ವಿಸ್ತರಣೆ ಮಾಡಲಾಗಿದೆ. ಆದರೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಈಗಾಗಲೇ ಆಯೋಗಕ್ಕೆ ತನ್ನ ಉತ್ತರವನ್ನು ಸಲ್ಲಿಕೆ ಮಾಡಲಾಗಿದೆ. ಈ ಉತ್ತರದಲ್ಲಿ ಹಲವಾರು ಅಂಶಗಳನ್ನು ಸಂಘ ಪ್ರಸ್ತಾಪ ಮಾಡಿದೆ. ಅಂಕಿ-ಸಂಖ್ಯೆಗಳ ಸಮೇತ ವಿವರಣೆ ನೀಡಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ 7ನೇ ರಾಜ್ಯ ವೇತನ ಆಯೋಗಕ್ಕೆ ನೀಡಿರುವ ಉತ್ತರದ ಪ್ರತಿಯನ್ನು ಮಾಧ್ಯಮಗಳಿಗೆ ನೀಡಿದ್ದಾರೆ. ಆಯೋಗದ ಪ್ರಶ್ನಾವಳಿಗಳಲ್ಲಿ ವೇತನ ಪರಿಷ್ಕರಣೆ, ವೇತನ ಸೌಲಭ್ಯ, ಹೊಸ ವೇತನ ರಚನೆ ಹೀಗೆ ವಿವಿಧ ವಿಚಾರಗಳನ್ನು ಪ್ರಸ್ತಾಪ ಮಾಡಲಾಗಿದೆ.
ಪ್ರಸ್ತುತ ನಾವು ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಮಾತ್ರ ನಿರೀಕ್ಷಿಸುತ್ತಿದ್ದು, 2026ರಲ್ಲಿ ಪರಿಷ್ಕರಿಸಲಿರುವ ಕೇಂದ್ರ ಮಾದರಿಯ ವೇತನ ಹಾಗೂ ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ಆನ್ವಯಗೊಳಿಸಲು ಆಯೋಗವು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಮನವಿ ಮಾಡಲಾಗಿದೆ.
7ನೇ ವೇತನ ಆಯೋಗದ ಶಿಫಾರಸ್ಸಿನಲ್ಲಿ ಕೇರಳ ಮಾದರಿಯ ವೇತನ ಸೌಲಭ್ಯಗಳನ್ನು ನೀಡುವುದು ಎಂದು ಕೇರಳ ಮಾದರಿಯ ಹಲವು ಉದಾಹರಣೆಗಳನ್ನು ನೀಡಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ವೇತನದ ಬಗ್ಗೆ ನೀಡಿರುವ ಉತ್ತರ, ವಿವರಗಳ ಮಾಹಿತಿ ಇಲ್ಲಿದೆ. ವೇತನ ಆಯೋಗ ಯಾವಾಗ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಕೆ ಮಾಡಲಿದೆ? ಎಂದು ನೌಕರರು ನಿರೀಕ್ಷೆ ಮಾಡುತ್ತಿದ್ದಾರೆ.

ವೇತನ ಶ್ರೇಣಿಗಳನ್ನು ಪರಿಗಣಿಸಬೇಕೆ?
7ನೇ ರಾಜ್ಯ ವೇತನ ಆಯೋಗ ಸರ್ಕಾರಿ ನೌಕರರ ವೇತನ ಪರಿಷ್ಕರಣೆಯ ಬಗ್ಗೆ ಶಿಫಾರಸ್ಸು ಮಾಡುವಾಗ ಆಯೋಗವು ನೆರೆ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರದಲ್ಲಿ ಜಾರಿಯಲ್ಲಿರುವ ವೇತನ ಶ್ರೇಣಿಗಳನ್ನು ಪರಿಗಣಿಸಬೇಕೆ? ಎಂದು ಕೇಳಿತ್ತು.
ರಾಜ್ಯ ಸರ್ಕಾರಿ ನೌಕರರ ಸಂಘ ಕರ್ನಾಟಕ ರಾಜ್ಯ 7ನೇ ವೇತನ ಆಯೋಗವು ವೇತನ ಆಯೋಗದ ಶಿಫಾರಸ್ಸಿನ ಸಂದರ್ಭದಲ್ಲಿ ಕೇರಳ ರಾಜ್ಯದ ವೇತನ ಸೌಲಭ್ಯಗಳನ್ನು ಹಾಗೂ ಕೇಂದ್ರ ಸರ್ಕಾರ 2026ರಲ್ಲಿ ಪರಿಷ್ಕರಿಸುವ ಕೇಂದ್ರ ವೇತನ ಆಯೋಗದ ವೇತನ ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ಸಹ ಪರಿಷ್ಕರಿಸುವುದು ಅವಶ್ಯವಾಗಿರುತ್ತದೆ ಎಂದು ತನ್ನ ಉತ್ತರದಲ್ಲಿ ಹೇಳಿದೆ.
ರಾಷ್ಟ್ರದ ಬೇರೆ ಬೇರೆ ರಾಜ್ಯಗಳಲ್ಲಿ ಕುಟುಂಬ ನಿರ್ವಹಣಾ ವೆಚ್ಚಗಳು ಒಂದೇ ಆಗಿರುತ್ತವೆ. ಸಾರಿಗೆ, ವಸತಿ, ಶೈಕ್ಷಣಿಕ, ಆರೋಗ್ಯ ವೆಚ್ಚಗಳು ಏಕರೂಪದಲ್ಲಿರುತ್ತವೆ. ಬ್ಯಾಂಕ್ ಸಾಲ ಸೌಲಭ್ಯಗಳ ಬಡ್ಡಿದರಗಳು ಸಹ ಏಕರೂಪದಲ್ಲಿರುತ್ತವೆ. ರಾಷ್ಟ್ರದ ಬಹುತೇಕ ರಾಜ್ಯಗಳಲ್ಲಿ ಸರ್ಕಾರಿ ನೌಕರರ ಕಾರ್ಯ ವಿಧಾನಗಳು ಭಾಗಶಃ ಏಕರೂಪದಿಂದ ಕೂಡಿರುತ್ತದೆ. ದೇಶದ ಕೆಲವು ರಾಜ್ಯಗಳಲ್ಲಿ ವೇತನ ಹೆಚ್ಚಿದ್ದು, ಕೆಲವು ರಾಜ್ಯಗಳಲ್ಲಿ ಕಡಿಮೆ ಇರುವುದರಿಂದ ನೌಕರರಲ್ಲಿ ಅಸಮಧಾನ ಉಂಟಾಗಿ ಆಡಳಿತದ ಮೇಲೆ ದುಷ್ಪರಿಣಾಮ ಬೀರಲಿದೆ.
ಮೇಲಿನ ಅಂಶಗಳ ಹಿನ್ನಲೆಯಲ್ಲಿ ಆಯೋಗದ ಶಿಫಾರಸ್ಸಿನಲ್ಲಿ ಕೇರಳ ಮಾದರಿಯ ವೇತನ ಸೌಲಭ್ಯಗಳನ್ನು ನೀಡುವುದು ಹಾಗೂ ಕೇಂದ್ರ ಸರ್ಕಾರವು 2026ರಲ್ಲಿ ಪರಿಷ್ಕರಿಸಲಿರುವ ವೇತನ ಶ್ರೇಣಿ ಹಾಗೂ ಭತ್ಯೆಗಳನ್ನು ರಾಜ್ಯ ಸರ್ಕಾರಿ ಅನ್ವಯಗೊಳಿಸಲು ಆಯೋಗವು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು ಎಂದು ಹೇಳಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹುದ್ದೆಗಳ ಸಮಾನತೆ
ವೇತನ ಆಯೋಗ ಸರ್ಕಾರಿ ನೌಕರರಿಗೆ ಹೊಸ ವೇತನ ರಚನೆಯನ್ನು ಶಿಫಾರಸ್ಸು ಮಾಡುವಾಗ ಆಯೋಗವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಹುದ್ದೆಗಳ ಸಮಾನತೆಯನ್ನು ನಿರ್ಧರಿಸುವ ಮೂಲಕ ಕೇಂದ್ರ ಸರ್ಕಾರದ ವೇತನ ರಚನೆಯನ್ನು ಅಳವಡಿಸಿಕೊಳ್ಳುವ ಕಾರ್ಯಸಾಧ್ಯತೆಯನ್ನು ಪರಿಶೀಲಿಸುವ ಅಗತ್ಯವಿದೆ. ಅಂತಹ ಸಮಾನತೆಯ ಸಾಧ್ಯತೆ ಮತ್ತು ಸಮಂಜಸವೆನಿಸಬಹುದಾದ ಹುದ್ದೆಗಳ ಪ್ರವರ್ಗಗಳ ಕುರಿತು ದಯವಿಟ್ಟು ಸಲಹೆಗಳನ್ನು ಸಮರ್ಥನೆಯೊಂದಿಗೆ ಒದಗಿಸುವುದು ಎಂದು ಕೇಳಿತ್ತು.
ಸರ್ಕಾರಿ ನೌಕರರ ಸಂಘ ಪ್ರಸ್ತುತ ನಾವು ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಮಾತ್ರ ನಿರೀಕ್ಷಿಸುತ್ತಿದ್ದು, 2026ರಲ್ಲಿ ಪರಿಷ್ಕರಿಸಲಿರುವ ಕೇಂದ್ರ ಮಾದರಿಯ ವೇತನ ಹಾಗೂ ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ಆನ್ವಯಗೊಳಿಸಲು ಆಯೋಗವು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು. ರಾಜ್ಯ 7ನೇ ವೇತನ ಆಯೋಗದ ಪ್ರಶ್ನಾವಳಿಯಲ್ಲಿ ನೀಡಿರುವ ಅನುಪಾತವು ಮೂಲವೇತನವನ್ನು ಮಾತ್ರ ಪರಿಗಣಿಸಿರುತ್ತದೆ. 7ನೇ ವೇತನ ಆಯೋಗವು ಪರಿಷ್ಕರಿಸಲಿರುವ ವೇತನ ಶ್ರೇಣಿಗಳಲ್ಲಿನ ಕನಿಷ್ಠ ಹಾಗೂ ಗರಿಷ್ಠ ವೇತನದ ನಡುವಿನ ಅನುಪಾತ 1:8.86 ಕ್ಕೆ ನಿಗದಿಪಡಿಸಿ ಶಿಫಾರಸ್ಸು ಮಾಡುವುದು ಎಂದು ಹೇಳಿದೆ.

25 ಮಾಸ್ಟರ್ ವೇತನ ಶ್ರೇಣಿ
ಸರ್ಕಾರವು ದಿನಾಂಕ 1/7/2017ರಿಂದ ಜಾರಿಗೊಳಿಸಿರುವ ಮುಖ್ಯ ವೇತನ ಶ್ರೇಣಿ ಬಗ್ಗೆ ಹಾಗೂ ಈ ಮುಖ್ಯ ವೇತನ ಶ್ರೇಣಿಯನ್ನು 25 ಪ್ರತ್ಯೇಕ ವೇತನ ಶ್ರೇಣಿಗಳಾಗಿ ವಿಭಾಗಿಸಿರುವ ಬಗ್ಗೆ ಅಭಿಪ್ರಾಯವೇನು?. ನಿಮ್ಮ ಅಭಿಪ್ರಾಯದಲ್ಲಿ ಇದು ಸೂಕ್ತವೆ?. ಈ ಬಗ್ಗೆ ನಿಮ್ಮ ಯಾವುದೇ ಅಭಿಪ್ರಾಯ ಮತ್ತು ಸಲಹೆಗಳಿದ್ದಲ್ಲಿ ನೀಡುವುದು ಎಂದು ಆಯೋಗ ಕೇಳಿತ್ತು.
ಉತ್ತರದಲ್ಲಿ 1993ರ ಕರ್ನಾಟಕ 4ನೇ ವೇತನ ಆಯೋಗದ ಮುಖ್ಯ ಶ್ರೇಣಿಗಳು ಮತ್ತು ಫಿಟ್‌ಮೆಂಟ್ ಸೂತ್ರ ಸ್ವೀಕಾರ್ಹವಾಗಿವೆ. 1970ರಲ್ಲಿ ನಿವೃತ್ತ ನ್ಯಾಯಾಧೀಶರಾದ ಶ್ರೀ ತುಕೂಳ್ ವೇತನ ಆಯೋಗವು 104 ರಿಂದ 27 ವೇತನ ಶ್ರೇಣಿಗಳಿಗೆ ಸರಳೀಕರಿಸಿತ್ತು. ನಂತರದ ಆಯೋಗಗಳು ಶಿಫಾರಸ್ಸು ಮಾಡಿದ್ದ 27 ವೇತನ ಶ್ರೇಣಿಗಳನ್ನು ಕ್ರಮೇಣ 21 ವೇತನ ಶ್ರೇಣಿಗಳಿಗೆ ಇಳಿಸಲಾಯಿತು. ಕರ್ನಾಟಕ 5ನೇ ವೇತನ ಆಯೋಗದ ವರದಿ ಆಧಾರದ ಮೇಲೆ 25 ವೇತನ ಶ್ರೇಣಿಗಳನ್ನು ಅನುಷ್ಠಾನಗೊಳಿಸಲಾಗಿದ್ದು, ಇವು ಸಮಂಜಸವಾಗಿರುತ್ತವೆ. ಪ್ರಸ್ತುತ ಇರುವ 25 ಮಾಸ್ಟರ್ ವೇತನ ಶ್ರೇಣಿ ಹಾಗೂ 92 ವೇತನ ಹಂತಗಳನ್ನು ಮುಂದುವರೆಸುವುದು ಎಂದು ನೌಕರರ ಸಂಘ ಹೇಳಿದೆ.

ವೇತನ ಶ್ರೇಣಿಯ ಕನಿಷ್ಟ ವೇತನ
ಆಯೋಗ ಈಗ ಅತ್ಯಂತ ಕೆಳಗಿನ ವೇತನ ಶ್ರೇಣಿಯ ಕನಿಷ್ಟ ವೇತನ ಮತ್ತು ಅತ್ಯಂತ ಮೇಲಿನ ವೇತನ ಶ್ರೇಣಿಯ ಗರಿಷ್ಟ ವೇತನ ಇವುಗಳ ನಡುವಿನ ಅನುಪಾತ 1:8.86 ರಷ್ಟಿದ್ದು, ಅತ್ಯಂತ ಕೆಳಗಿನ ವೇತನ ಶ್ರೇಣಿಯ ಗರಿಷ್ಟ ವೇತನ ಮತ್ತು ಅತ್ಯಂತ ಮೇಲಿನ ವೇತನ ಶ್ರೇಣಿಯ ಗರಿಷ್ಟ ವೇತನ ಇವುಗಳ ನಡುವಿನ ಅನುಪಾತ 1:5.20 ರಷ್ಟಿದೆ. ಈ ಅನುಪಾತಗಳನ್ನು ಪುನರ್ ಪರಿಶೀಲಿಸಬೇಕು/ ಮಾರ್ಪಡಿಸಬೇಕೆ? ಎಂದು ಕೇಳಿತ್ತು.
ಪ್ರಶ್ನಾವಳಿಯಲ್ಲಿ ನೀಡಿರುವ ಅನುಪಾತವು ಮೂಲವೇತನವನ್ನು ಮಾತ್ರ ಪರಿಗಣಿಸಿರುತ್ತದೆ. 7ನೇ ವೇತನ ಆಯೋಗವು ಪರಿಷ್ಕರಿಸಲಿರುವ ವೇತನ ಶ್ರೇಣಿಗಳಲ್ಲಿನ ಕನಿಷ್ಠ ಹಾಗೂ ಗರಿಷ್ಠ ವೇತನದ ನಡುವಿನ ಅನುಪಾತ 1:8.86 ಕ್ಕೆ ನಿಗದಿಪಡಿಸಿ ಶಿಫಾರಸ್ಸು ಮಾಡುವುದು.
ಕೇಂದ್ರದ ಏಳನೇ ಆಯೋಗವು ಕೇಂದ್ರ ಸರ್ಕಾರಿ ನೌಕರರಿಗೆ 15ನೇ ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ನೀಡಿರುವ ಕನಿಷ್ಠ ವೇತನವನ್ನು ಕಂಡುಹಿಡಿಯಲು ಆಕ್ರಾಯ್ಡ್ ಸೂತ್ರವನ್ನು ಅಳವಡಿಸಿ ಪ್ರತಿ ಮಾಹೆ ಕನಿಷ್ಠ ಮೂಲ ವೇತನ ರೂ.18,000 ಗರಿಷ್ಠ ಮೂಲ ವೇತನ ರೂ.2,25,000 ನಿಗದಿಪಡಿಸಿದೆ.
ನೌಕರರು ಅವರ ಪೂರ್ಣ ಸೇವಾಧಿಯಲ್ಲಿ ಯಾವುದೇ ರೀತಿಯ ಸ್ಥಗಿತ ಇಲ್ಲದಂತೆ ವೇತನ ಶ್ರೇಣಿಗಳನ್ನು ರೂಪಿಸಬೇಕು. ಯಾಕೆಂದರೆ ಅನೇಕ ನೌಕರರಲ್ಲಿ 33ವರ್ಷಗಳಿಗಿಂತ ಅಧಿಕವಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ. ಅಗತ್ಯತೆಗೆ ಅನುಗುಣವಾದ ಕನಿಷ್ಠ ವೇತನವನ್ನು 15ನೇ ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಕನಿಷ್ಠ ವೇತನದ ಆಕ್ರಾಯ್ಡ್ ಸೂತ್ರವನ್ನು ಅಳವಡಿಸಿ ಹೊಸ ವೇತನ ಶ್ರೇಣಿಗಳನ್ನು 2022ನೇ ಸಾಲಿನ 12 ತಿಂಗಳ ಸರಾಸರಿ AICAPI ದರದ ಗರಿಷ್ಠ ಮಟ್ಟದ ಸೂಚ್ಯಾಂಕದ ಆಧಾರದ ಮೇಲೆ ನಿಗದಿಪಡಿಸುವುದು ಎಂದು ಹೇಳಿದೆ.

ವಿವಿಧ ವೇತನ ಶ್ರೇಣಿಗಳ ನಡುವೆ ಈಗ ಇರುವ ಹೋಲಿಕೆಯು
ವಿವಿಧ ವೇತನ ಶ್ರೇಣಿಗಳ ನಡುವೆ ಈಗ ಇರುವ ಹೋಲಿಕೆಯು, ವಿವಿಧ ಹಂತಗಳಿಗೆ ಅನ್ವಯಿಸುವ ಜವಾಬ್ದಾರಿಗಳಿಗೆ ಅನುಗುಣವಾಗಿದೆಯೇ? ಎಂದು ಆಯೋಗ ಕೇಳಿತ್ತು. ನಾಗರಿಕ ಸೇವಾ ಕಾರ್ಯಕ್ಷಮತೆ, ಉತ್ತಮ ಆಡಳಿತ, ಪಾರದರ್ಶಕ ನೇಮಕಾತಿ ಮತ್ತು ಗುಣಮಟ್ಟದ ತರಬೇತಿ ಹಾಗೂ ಜವಾಬ್ದಾರಿಗಳಿಂದ ಕೂಡಿದ ವ್ಯವಸ್ಥೆಯನ್ನು ಜಾರಿಗೆ ತರುವುದು ಅವಶ್ಯವಾಗಿದೆ ಎಂದು ಹೇಳಿತ್ತು.
ಉತ್ತರ ನೀಡುವಾಗ ಪ್ರಸ್ತುತ ವಿವಿಧ ವೇತನಗಳ ಮಧ್ಯೆ ಇರುವ ಸಾಪೇಕ್ಷತೆಯನ್ನು (Relativity) ಆಯಾ ವೇತನಗಳಿಗೆ ನೀಡಿರುವ ಹೊಣೆಗಾರಿಕೆಗಳ ಮೇಲೆ ನಿರ್ಧರಿಸಿರುವುದನ್ನು ಆಯೋಗದ ವಿವೇಚನೆಗೆ ಬಿಡಲಾಗಿದೆ ಹಾಗೂ ಈ ಹಿಂದೆ ನಡೆದುಕೊಂಡು ಬಂದಿರುವ ವೇತನ ಶ್ರೇಣಿಗಳ ನಡುವಿನ ಸಾಪೇಕ್ಷೆಗಳನ್ನು (Relativity) ಸಾಧ್ಯವಾದಷ್ಟುಮಟ್ಟಿಗೆ ಹಾಗೆಯೇ ಮುಂದುವರಿಸುವುದು ಸಮಂಜಸವೆಂದು ಸಂಘದ ಚಿಂತನೆಯಾಗಿದೆ.
ಹಲವಾರು ಬಲವಾದ ಅಂಶಗಳು ಮತ್ತು ಬದಲಾದ ಸಂದರ್ಭಗಳು ಮತ್ತು ತಾಂತ್ರಿಕತೆಯ ಸಮರ್ಥನೆಯ ಕಾರಣಗಳಿಂದಾಗಿ ಅನೇಕ ವೃಂದದ ಹುದ್ದೆಗಳ ವೇತನ ಶ್ರೇಣಿಗಳಲ್ಲಿ ಬದಲಾವಣೆಯಾಗಬೇಕಾದಲ್ಲಿ ಅಂತಹ ಬದಲಾವಣೆಗಳನ್ನು ಪರಿಗಣಿಸಿ ಆಯೋಗವು ಸೂಕ್ತ ಶಿಫಾರಸ್ಸು ಮಾಡುವುದು ಎಂದು ಉತ್ತರ ನೀಡಲಾಗಿದೆ.












Click it and Unblock the Notifications